top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -9




ಸಂಚಿಕೆ 9:

ನಲಂದಾ ವಿಶ್ವವಿದ್ಯಾಲಯದ ದುಃಖದ ದಾಸ್ತಾನು ಮತ್ತು ರಾಜ್ ಗಿರ್ ಬೆಟ್ಟದ ಸ್ಮಾರಕ:


ರಾಜ್ ಗಿರ್ ಎಂಬ ಬಿಹಾರದ ಚಿಕ್ಕ ಊರು ಒಂದು ಕಾಲದಲ್ಲಿ ಮಗಧ ರಾಜ್ಯದ ಮೊದಲ ರಾಜಧಾನಿಯಾಗಿತ್ತಂತೆ. ಅದುವೇ ಬೆಳೆದು ಕಾಲಾನುಕಾಲದಲ್ಲಿ ಮೌರ್ಯ ಸಾಮ್ರಾಜ್ಯವಾಯಿತಂತೆ.

ಈ ಊರಿಗೆ ಬಂದಿಳಿದಾಗ ಅಂತಹ ವಿಶೇಷಗಳ ಅರಿವಾಗುವುದಿಲ್ಲ. ಇದೂ ಒಂದು ಗಮನ ಸೆಳೆಯದ ‘ಟೌನ್’ ಎನ್ನಿಸುತ್ತದೆ.

ಆದರೆ ಅಲ್ಲಿಗೆ ನಾವು ಗಯಾದಿಂದ ಹೊರಟು ಬಸ್ಸಿನಲ್ಲಿ ತಲುಪುವ ಸ್ವಲ್ಪ ಮೊದಲೇ ಹಗಲಿನ ಸಮಯದಲ್ಲಿ ನಲಂದಾ ಪ್ರಾಚೀನ ವಿಶ್ವವಿದ್ಯಾಲಯದ ಪಳೆಯುಳಿಕೆಗಳ ಭೇಟಿಯೂ ಆಗುತ್ತದೆ.

ಬಿಹಾರವನ್ನು ಆಕ್ರಮಿಸಲು ಬಂದ ಭಕ್ತಿಯಾರ್ ಖಲ್ಜಿ ಎಂಬ ಧೂರ್ತ ಆಡಳಿತಗಾರನ ಮತೀಯ ಅಸಹನೆಗೆ ಸಿಕ್ಕು ಸರ್ವನಾಶವಾಗಿ ಹೋದ್ದುದರ ಈ ಸಾಕ್ಷಿ ನಮಗೆ ಗೋಚರಿಸುತ್ತದೆ.

ಆಗಿನ ಕಾಲದ ಏಷ್ಯಾದ ಅದ್ವಿತೀಯ ವಿದ್ಯೆ ಮತ್ತು ಜ್ಞಾನದ ಕಣ್ಮಣಿಯಂತೆ ಹಿಂದೂ, ಬೌದ್ಧ ಮತ್ತು ಜೈನ ಮತೀಯ ಸೌಹಾರ್ದ, ಸಹಬಾಳ್ವೆಯ ಮತ್ತು ಪ್ರಗತಿಯ ಜ್ವಲಂತ ಪ್ರತೀಕದಂತಿದ್ದ ನಲಂದಾ ಎಂಬ ಬೃಹತ್ ವಿದ್ಯಾರ್ಜನೆ ಮತ್ತು ಸಂಶೋಧನೆಯ ಕೇಂದ್ರ ದುರ್ದೈವದಿಂದ ಮತೀಯ ಧ್ವೇಷದ ಬೆಂಕಿಗೆ ಆಹುತಿಯಾಯಿತಂತೆ .

ಇದೀಗ ಬಿಹಾರದ ಒಂದು ಪಳೆಯುಳಿಕೆ (ಹೆರಿಟೇಜ್ ಸೈಟ್) ಎಂದು ನಮಗೆ ಕಾಣಸಿಗುತ್ತದೆ.

ಭಕ್ತಿಯಾರ್ ಖಲ್ಜಿ ಎಂಬ ಟರ್ಕಿಷ್ ಮತಾಂಧ ದುರಾತ್ಮ 1193ನೆ ಇಸವಿಯಲ್ಲಿ ಅಹಿಂಸಾಪರ ಮತ್ತು ನಿರಾಯುಧರಾದ ಮೂರೂ ಮತಗಳ (ಆದರೆ ಪ್ರಮುಖವಾಗಿ ಭೌದ್ಧರ ‘ವಿಹಾರ’ದಲ್ಲಿ (ಮೊನಾಸ್ಟರಿ) ಕಟ್ಟಿದ್ದ) ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಸಾಮೂಹಿಕ ಹತ್ಯೆ ಮಾಡಿ ಅಂದಾಜಿಗೆ 14 ಹೆಕ್ಟೇರ್ ವಿಸ್ತೀರ್ಣದಲ್ಲಿದ್ದ ಹಲವಾರು ವಿಭಾಗಗಳ ಸಂಶೋಧಕ ಕೇಂದ್ರಗಳು, ಪಾಠಶಾಲೆಗಳು, ಭೋಜನ ಶಾಲೆ, ಗ್ರಂಥಾಲಯ, ವಿದ್ಯಾರ್ಥಿಗಳ ಹಾಸ್ಟೆಲ್ಸ್ ಎಲ್ಲವನ್ನು ಒಂದನ್ನೂ ಬಿಡದೇ ನೆಲಕ್ಕುರುಳಿಸುತ್ತಾನೆ. ಇಲ್ಲಿನ ತಾಳೆಗರಿ- ಓಲೆಗರಿ- ಹಸ್ತಪ್ರತಿ ಮುಂತಾದ ಅಮೂಲ್ಯ ಪಾಂಡಿತ್ಯಪೂರ್ಣ ಗ್ರಂಥಗಳನ್ನು ಮೂರು ತಿಂಗಳ ಕಾಲ ಒಂದೇ ಸಮನೆ ನೆಲದ ಮೇಲೆ ಬಿಸಾಕಿ ಬೆಂಕಿ ಹಚ್ಚಿ ಸುಟ್ಟನಂತೆ. ಹೀಗೆ ಭಗ್ನವಾದ ದಗ್ಧವಾದ ಮಾಹಿತಿಗಳು ನಮ್ಮ ಹಲವು ಪೀಳಿಗೆಗಳ ಜ್ಞಾನದ ಭಂಡಾರವನ್ನೇ ಅಳಿಸಿಹಾಕಿತು ಎನ್ನುತ್ತಾರೆ. ಇದೊಂದು ಮರೆಯಲಾಗದ ಚಾರಿತ್ರಿಕ ದುರಂತವೇ ಎನ್ನಬಹುದು. ಈ ದೇಶದ ಜನರ ಸಂಸ್ಕೃತಿ ಮತ್ತು ಪ್ರಗತಿಗಿಟ್ಟ ಕೊಳ್ಳಿ ಏಕೆಂದರೆ, ನಮಗೆ ಇಂದು ಆ ಮಾಹಿತಿ ದಾಖಲೆ ಯಾವುದೂ ಮತ್ತೆ ಲಭಿಸಲಾರದು.

ಈಗಲೂ ಆ ಕಟ್ಟಡಗಳ ಪಾಳುಗೋಡೆಗಳು, ಮುರಿದ ದ್ವಾರಗಳು, ಮತ್ತು ವಿಶಾಲವಾದ ಅಂಗಳವನ್ನು ನೋಡಿದಾಗ ಅಲ್ಲಿದ್ದ ಅದ್ಭುತ ಕಲಾಕಾರಿಕೆಯ ಮತ್ತು ವಾಸ್ತುಶಿಲ್ಪದ ವಿನ್ಯಾಸದ ಅಂದಾಜು ನಮಗೆ ಸಿಗುತ್ತದೆ.

ಅದುವೇ ನಾವು ನೋಡಿದ ದುಃಖದ ದಾಸ್ತಾನು!

ಅಲ್ಲಿನ ಬಿಹಾರ್ ಟೂರಿಸಮ್ ನೌಕರಿಯ ಗೈಡ್ ಇದನ್ನೆಲ್ಲಾ ಹೇಳಲು ಅನುಮಾನಿಸುತ್ತಿದ್ದ; ಏನೋ ಹೇಳಲು ಹೋಗಿ ಅಲ್ಲಲ್ಲೇ ಮಾತು ನುಂಗಿಕೊಳ್ಳುತ್ತಿದ್ದ. ಸರಕಾರಿ ಕೆಲಸದಲ್ಲಿರುವ ಗೈಡ್, ಅವನು ’ಜಾತ್ಯಾತೀತ’ವಾದದ ಸರಕಾರದ ನಿಲುವನ್ನು ಪ್ರತಿಪಾದಿಸುತ್ತಿದ್ದನೋ, ಅಥವಾ ಮೇಲಧಿಕಾರಿಗಳು ಯಾವುದೇ ವಿವಾದವಾಗದಂತಿರು ಎಂದು ಅವನಿಗೆ ಸೂಕ್ಷ್ಮವಾಗಿ ಹೇಳಿದ್ದರೋ ಗೊತ್ತಿಲ್ಲ.

ಆದರೆ ನಾನು ಆಗಿನ ಕಾಲದಲ್ಲಿ ಇಲ್ಲಿ ಏನಾಯಿತೆಂಬ ಪೂರ್ತಿ ಕಥೆ ಹೇಳಲೇ ಬೇಕು ಎಂದು ಪಟ್ಟು ಹಿಡಿದಾಗ ಅವನೇ ಹೇಳಿದ್ದು ಈ ಹಿನ್ನೆಲೆಯ ಕಥೆ:


ಭಕ್ತಿಯಾರ್ ಖಲ್ಜಿ ಆಗಲೇ ಬಂಗಾಳವನ್ನು ಗೆದ್ದು ಅಲ್ಲಿ ಆಡಳಿತ ಮಾಡುತ್ತಿದ್ದ. ಅವನು ಗುಲಾಮ ವಂಶದ ಆಗಿನ ದೆಹಲಿಯ ಸುಲ್ತಾನನ ಸೇನಾಧಿಪತಿ ಆಗಿದ್ದನಂತೆ. ಖಲ್ಜಿ ಪಕ್ಕದ ಬಿಹಾರದ ಮೇಲೆ ಆಕ್ರಮಣ ಮಾಡಿ ಗೆಲ್ಲಲು ಮೊದಲಿಂದಲೂ ಹವಣಿಸುತ್ತಲೇ ಇದ್ದ, ಆದರೆ ಅದೇಕೋ ಮುಂದೂಡಿದ್ದನಂತೆ.

ಮುಖ್ಯವಾಗಿ ಏಕೆಂದರೆ ಆ ಸಮಯದಲ್ಲಿ ಅವನಿಗೆ ಕ್ಷಯರೋಗ ತಗುಲಿತಂತೆ. ಅವನ ಬಳಿಯಿದ್ದ ಯಾವುದೇ ವೈದ್ಯರಿಂದ ಅದನ್ನು ಗುಣಪಡಿಸಲು ಆಗದಿದ್ದಾಗ ಅವನ ಕಡೆಯವರೇ ನಲಂದಾ ವಿವಿಯ ವೈದ್ಯಕೀಯ ಪ್ರಾಧ್ಯಾಪಕರು ಪರಿಣಿತರನ್ನು ಕರೆಸುವುದೇ ಸರಿ ಎಂದು ಸಲಹೆ ಕೊಟ್ಟಿದ್ದನ್ನು ಒಪ್ಪಿ ಅವರನ್ನು ಕರೆಸಿಕೊಂಡನಂತೆ. ಅವನ ದಿನಚರಿಯನ್ನು ಕೇಳಿ ಪರೀಕ್ಷಿಸಿದ ಆ ಹಿಂದೂ ವೈದ್ಯಕೀಯ ಪಂಡಿತರು (.ಆ ವಿಶ್ವವಿದ್ಯಾಲಯದಲ್ಲಿ ಎಲ್ಲ ಮತದ ಪರಿಣಿತರೂ ಇದ್ದರು) ಅವನಿಗೆ ದವಾ ಕೊಡಲು ಮುಂದಾದಾಗ ಕಟ್ಟರ್ ಮುಸಲ್ಮಾನನಾದ ಖಲ್ಜಿ ‘ನಾನು ನಿಮ್ಮ ಹಿಂದೂ ಔಷಧಿ ಮುಟ್ಟಲಾರೆ ಆದರೆ ನೀವು ನನ್ನನ್ನು ಹಾಗೇ ಗುಣ ಮಾಡಬೇಕು’ ಎಂಬ ಸವಾಲಿಟ್ಟನಂತೆ. ನೋಡಿ ರೋಗಿಯಾಗಿದ್ದರೂ ಅವನ ದಾರ್ಷ್ಟ್ಯ!

ಆಗ ಅವನು ದಿನಾಲೂ ಓದುವ ಕುರಾನ್ ನಾಮಾ ಪುಸ್ತಕವನ್ನು ಕೇಳಿ ಪಡೆದ ವೈದ್ಯರು ‘ಅದನ್ನು ಈಗ ಓದು’ ಎನ್ನುತ್ತಾರೆ. ಕೆಲವು ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಅವರು ತಮ್ಮನ್ನು ಏಕಾಂತದಲ್ಲಿ ಬಿಡುವಂತೆ ಹೇಳಿ ಒಂದು ಕೋಣೆಯ ಒಳಗೆ ಹೋಗುತ್ತಾರೆ. ಆಮೇಲೆ ಆ ಪುಸ್ತಕವನ್ನು ವಾಪಸ್ ಕೊಟ್ಟು ‘ಸರಿ ನೀನು ಇದನ್ನೇ ಓದುತ್ತಿರು, ಹಾಗೇ ರೋಗ ಗುಣವಾಗುತ್ತದೆ’ ಎಂದು ಬೇರೇನೂ ವಿವರ ಹೇಳದೇ ವೈದ್ಯರು ಹೊರಟುಬಿಡುತ್ತಾರೆ.ಆಶ್ಚರ್ಯಚಕಿತನಾದರೂ ಸದ್ಯ ತಾನು ಅವರ ಔಷದಿ ತೆಗೆದುಕೊಳ್ಳಲಿಲ್ಲವಲ್ಲಾ? ಎಂದು ಅವನು ತನ್ನ ದಿನಚರಿ ಯಥಾಪ್ರಕಾರ ಪಾಲಿಸುತ್ತಾ ಇದ್ದನಂತೆ. ಪವಾಡಸದೃಶವಾಗಿ ಅವನ ರೋಗ ವಾಸಿಯಾಗಿ ಹೋಯಿತಂತೆ. ಅವನು ಬೆರಗಾಗಿ ಆ ವೈದ್ಯರ ಬಳಿಗೆ ಹೋಗಿ ವಿಚಾರಿಸಲು, ಅವರು ತಾವು ಮಾಡಿದ ಟ್ರಿಕ್ ಹೇಳಿದರಂತೆ:

ನೀನು ಕುರಾನ್ ಪುಸ್ತಕದ ಹಾಳೆ ಮಗುಚುವಾಗ ಬೆರಳಿಂದ ಎಂಜಲು ಮಾಡಿ ಮತ್ತೆ ಪುಟವನ್ನು ಮುಟ್ಟಿ ತೆರೆಯುತ್ತಿದ್ದೆ, ನಾನು ಹಾಗಾಗಿ ಎಲ್ಲಾ ಪುಟಗಳಿಗೂ ಮದ್ದು ಹಚ್ಚಿಬಿಟ್ಟೆ. ಅದನ್ನು ತಿಳಿಯದೆಯೇ ನೀನು ದಿನಾಲೂ ಬಾಯಿಗೆ ಬೆರಳಿಂದ ದವಾ ಸೇವಿಸುತ್ತಾ ಹೋದೆ, ಹಾಗೇ ಗುಣವಾಯಿತು ಎಂದು.

ಇಲ್ಲೇ ಇರುವುದು ಆ ಪಂಡಿತರ ಭೋಳೆತನ ನೋಡಿ: ಅವರಿಗೆ ಖಲ್ಜಿಯ ಕುತ್ಸಿತ ಬುದ್ದಿಯ ಅರಿವಿರಲಿಲ್ಲ

ಆಗ ಖಲ್ಜಿ ಯೋಚಿಸಿದನಂತೆ - ಇವರೆಲ್ಲಾ ನಮಗಿಂತ ಬಹಳ ಬುದ್ದಿವಂತರು, ನಮ್ಮನ್ನು ಒಂದಲ್ಲಾ ಒಂದು ದಿನ ಬುದ್ದಿಯಿಂದಲೇ ಸೋಲಿಸಿಬಿಡುತ್ತಾರೆ. ಇವರನ್ನೆಲ್ಲಾ ನಾನು ಮುಸ್ಲಿಮ್ ಮತಾಂತರ ಮಾಡಿಬಿಟ್ಟರೆ ಆಗ ನಮಗೆ ಯಾರೂ ಶತ್ರುಗಳೇ ಇರುವುದಿಲ್ಲ ಎಂದು ಅರಿತು ನಲಂದದ ಎಲ್ಲಾ ಪಂಡಿತರು ಬೌದ್ಧ ಬಿಕ್ಕುಗಳು, ಜೈನ ಮುನಿಗಳನ್ನೂ ನೀವು ಇಸ್ಲಾಮ್ ಗೆ ಮತಾಂತರವಾಗಿ ಎಂದು ಒಂದೇ ಸಮನೆ ಬಲವಂತ ಮಾಡುತ್ತಾನೆ. ಅದಕ್ಕೆ ಒಪ್ಪದ ಆ ಧರ್ಮಾತ್ಮರಾದ ನಿರಾಯುಧ ಜ್ಞಾನಿಗಳನ್ನು ದಂಡೆತ್ತಿ ಬಂದು ಸಾಮೂಹಿಕ ಹತ್ಯೆ ಮಾಡುತ್ತಾನೆ, ವಿಶ್ವವಿದ್ಯಾಲಯವನ್ನೇ ಧೂಳೀಪಟ ಮಾಡುತ್ತಾನೆ.

ಇದು ಆಗಿನ ಕಾಲದ ದಾಖಲೆಗಳಲ್ಲಿಯೂ ಇದೆ.

ಈ ಕಥೆಯನ್ನು ನಾನು ಆ ಗೈಡ್ ಬಾಯಿಂದ ಕೇಳಿದಂತೇ ಹೇಳಿದ್ದೇನೆ. ಇಂದು ಮತಾಂಧ ದಾಳಿಕೋರರ ಅಟ್ಟಹಾಸಕ್ಕೆ ಸಿಕ್ಕಿ ನಲಂದ ನಶಿಸಿ ನಿಂತಿದೆ. ಇದೇ ಹೆಸರಿನ ಹೊಸ ಸಂಶೋಧಕ ಕೇಂದ್ರ/ ವಿಶ್ವವಿದ್ಯಾಲಯವೊಂದನ್ನು ಸನಿಹದಲ್ಲೇ ಸರಕಾರ ಕಟ್ಟಿಯೂ ಇದ್ದಾರೆ.

ಆದರೆ ಆಗ ಕಳೆದುಕೊಂಡಿದ್ದು ಮತ್ತೆ ದೊರಕಲಾರದು!

ಅಲ್ಲಿ ನೀವು ಹೋದರೆ ಆ ದುರಂತದ ಪರಿಮಾಣದ ಅರಿವಾದೀತು.











ಅಲ್ಲಿಂದ ನಾವು ನಮಗಾಗಿ ಮುಂಗಡ ಬುಕ್ ಆಗಿದ್ದ ಸಿದ್ಧಾರ್ಥ್ ಎಂಬ ಹೊಟೆಲಿಗೆ ಹೋಗಿ ತಂಗಿದೆವು.

ಮುಂದಿನ ದಿನ ನಾವು ರಾಜ್ ಗಿರ್ ನಲ್ಲಿರುವ ಇನ್ನೊಂದು ಬುದ್ಧ ಸ್ತೂಪಕ್ಕೆ ಹೊರಟುನಿಂತೆವು. ಅಲ್ಲಿ ಒಬ್ಬ ಜಪಾನಿ ಲಕ್ಷಾಧಿಪತಿ ಬೌದ್ಧ ಧರ್ಮೀಯ ಭಕ್ತ ದೊಡ್ಡ ಗುಡ್ಡವೊಂದರ ಮೇಲೆ ಬುದ್ಧನ ಶಿಲೆ ಮತ್ತು ಶಾಂತಿ ಸ್ತೂಪವನ್ನು ತನ್ನ ಖರ್ಚಿನಲ್ಲೇ ಕಟ್ಟಿದ್ದನೆಂದು ನಮ್ಮ ಮ್ಯಾನೇಜರ್ ತಿಳಿಸಿದರು.

ಶಾಂತಿ ಸ್ಥೂಪವನ್ನು‌ ಬೆಟ್ಟದ ಮೇಲೆ ಕಟ್ಟಿದ್ದರಿಂದ ಅಲ್ಲಿಗೆ ತಲುಪಲು ಬಿಹಾರ್ ಟೂರಿಸಂ ಕೆಳಗಿನಿಂದ ಕೇಬಲ್ ಕಾರ್ ವ್ಯವಸ್ಥೆ ಮಾಡಿದ್ದಾರೆ. ಸುಂದರ ದೃಶ್ಯಾವಳಿ ಕಾಣಸಿಗುತ್ತದೆ‌ ಏರಿ ಇಳಿಯುವಾಗ...ನಮಗೆ ಇದು ಧಾರ್ಮಿಕ ಕಾರ್ಯ ಅಂತೂ ಅಲ್ಲ. ಪ್ರವಾಸಿ ತಾಣ!

ನಮ್ಮ ಅದೃಷ್ಟಕ್ಕೆ ಮಧ್ಯ ದಾರಿಯಲ್ಲಿ ವಿದ್ಯುತ್ ಅಡಚಣೆಯಾಗಿ 10 ನಿಮಿಷ ಕೇಬಲ್ ಕಾರಿನಲ್ಲಿ ಸುಮ್ಮನೆ ಕಾದು ಕುಳಿತು ಕಳೆದೆವು. ಆದರೂ ಭಯವೇನಾಗಲಿಲ್ಲ. ಸುತ್ತಲೂ ನೋಡುತ್ತಾ ಮಾತನಾಡಿಕೊಂಡು ಹೋಗಬಹುದು.

ಅಲ್ಲಿ ಕೋತಿಗಳ ಹಿಂಡು ಹಿಂಡು ಇವೆ. ಕೆಲವು ಯುವಕ ಯುವತಿಯರು ಅವಕ್ಕಿಂತಾ ಹೆಚ್ಚು ಮಂಗಾಟ ಮಾಡಿ ಅವನ್ನು ರೇಗಿಸುತ್ತಿದ್ದರು.

ಹ್ಮ್! ನಾನಾ ತರಹದ ಜನ, ಇವೆಲ್ಲಾ ಪಿಕ್ನಿಕ್ ಸ್ಪಾಟ್ ತರಹ, ಧಾರ್ಮಿಕ ಪೂಜಾಸ್ಥಳಗಳಲ್ಲ.






ಅಲ್ಲಿಂದ ಕೆಳಗಿಳಿದ ಮೇಲೆ...

ನಮ್ಮ 12 ದಿನಗಳ ಯಾತ್ರೆ ಇಲ್ಲಿಗೆ ಸಮಾಪ್ತಿಯಾಯಿತೆಂದು ಮ್ಯಾನೇಜರ್ ಘೋಷಿಸಿದರು. ಆಗ ನಾವೆಲ್ಲಾ ಸ್ವಲ್ಪ ಭಾವುಕರಾದೆವು. ಎಷ್ಟೋ ತರಹದ ವೈವಿಧ್ಯಮಯ ಅನುಭವಗಳನ್ನು ಹಂಚಿಕೊಂಡು ಆತ್ಮೀಯರಾಗಿಬಿಟ್ಟಿದ್ದೆವು. ನಮ್ನಮ್ಮ ಮೊಬೈಲ್ ನಂಬರನ್ನು ಹಂಚಿಕೊಂಡೆವು ಮುಂದೆಯೂ ಸಂಪರ್ಕದಲ್ಲಿರಲು...

ಇನ್ನು ನಮ್ಮ ಕಾರ್ಯಕ್ರಮದ ಪ್ರಕಾರ ಅಲ್ಲಿಂದ ನೇರವಾಗಿ ಪಟನಾ ನಗರಕ್ಕೆ ತೆರಳಿ ಅಲ್ಲಿಂದ ಕೆಲವರು ನಾವು ಊರಿಗೆ ವಿಮಾನದಲ್ಲಿ ಹಿಂತಿರುಗಬೇಕಿತ್ತು. ಮಿಕ್ಕವರು ಮತ್ತೆ ರೈಲಿನಲ್ಲಿ ಹೊರಡುವವರಿದ್ದರು.

ನಮ್ಮ ಮ್ಯಾನೇಜರ್, ಡ್ರೈವರ್ ಮತ್ತು ಅಡಿಗೆ ಸಿಬ್ಬಂದಿಗೆಲ್ಲಾ ನಾವು ಊಟಕ್ಕೆ ಅಂದು ಇಳಿದ ಕಡೆ ಒಟ್ಟಾಗಿ ನಿಲ್ಲಿಸಿ ಧನ್ಯವಾದಗಳನ್ನು ಹೇಳಿ ಚಪ್ಪಾಳೆ ಹೊಡೆದು ನಮ್ಮ ಕಡೆಯಿಂದ ಸಂಗ್ರಹಿಸಿದ್ದ ಚಿಕ್ಕ ಮೊತ್ತವನ್ನು ಒಬ್ಬೊಬ್ಬರಿಗೂ ಕಾಣಿಕೆಯಂತೆ ನೀಡಿದೆವು.

ಅಷ್ಟೂ ದಿನ ಯಾವುದೇ ತೊಂದರೆ, ಬಿಕ್ಕಟ್ಟು ಉಂಟುಮಾಡದೇ ಉದ್ದಕ್ಕೂ ಸಹಾಯಕವಾಗಿ ಶಾಂತಿಯಿಂದ ನಡೆಸಿಕೊಟ್ಟಿದ್ದು ಆ ಟೀಮಿನ ಸಾಮರ್ಥ್ಯ ಮತ್ತು ಯಶಸ್ಸು ಅನ್ನಲೇಬೇಕು.

ನಾವು ನಾಲ್ಕು ಜನ ಕುಟುಂಬಸ್ತರು ಮಿಕ್ಕ ಪ್ರಯಾಣಿಕರೊಂದಿಗೆ ಬಿಹಾರ ರಾಜಧಾನಿ ಪಟನಾದ ಜಯಪ್ರಕಾಶ ನಾರಾಯಣ ವಿಮಾನ ನಿಲ್ದಾಣದಲ್ಲಿ ಬಸ್ಸಿಂದ ಇಳಿದೆವು. ಪಟ್ನಾ ನಗರದ ಕೆಲವು ರಸ್ತೆಗಳನ್ನಷ್ಟೆ ಅಲ್ಲಿಗೆ ಬರುವಾಗ ನೋಡಿದ್ದೆವು. ಯಾವುದೇ ಆಧುನಿಕ ನಗರದಂತಿದೆ ಎನಿಸಿತು. ಆ ರಾಜ್ಯದ ಗ್ರಾಮೀಣ ಪ್ರದೇಶಗಳ ಹೋಲಿಕೆಯಲ್ಲಿ ಇದು ಅಜಗಜಾಂತರ ವ್ಯತ್ಯಾಸವೇ!

ಆ ವಿಮಾನ ನಿಲ್ದಾಣ ನಮ್ಮ ಬೆಂಗಳೂರಿನ ಏರ್ ಪೋರ್ಟಿಗೆ ಹೋಲಿಸಿದರೆ ಬಹಳ ಚಿಕ್ಕದು ಮತ್ತು ಅಂತಹಾ ಹೇಳಿಕೊಳ್ಳುವಂತಾ ಸೌಕರ್ಯಗಳು ಇಲ್ಲ. ಸ್ವಚ್ಚವಾಗಿದೆ ಅಷ್ಟೆ. ಆ ಸಮಯದಲ್ಲಿ ಅಂದು ಭಾರತ ಮತ್ತು ಪಾಕಿಸ್ತಾನ ನಡುವೆ ಟಿ 20 ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ಅದನ್ನು ಅಲ್ಲಿನ ಲಾಬಿಯ ಟಿ.ವಿ.ಯಲ್ಲಿ ನಾವೆಲ್ಲಾ ನಿಂತು ನೋಡಿ ಭಾರತ ಗೆದ್ದಾಗ ಹೋ ಎಂದು ಚಪ್ಪಾಳೆ ಹೊಡೆದು, ಹರ್ಷೋದ್ಗಾರ ಮಾಡಿದ್ದು ನೆನೆಪಿದೆ.

ಸಂಜೆ 6.30ಕ್ಕೆ ಅಲ್ಲಿಂದ ಹೊರಟ ನಮ್ಮ ಇಂಡಿಗೋ ವಿಮಾನ 9.30ರ ಸಮಯದಲ್ಲಿ ಬೆಂಗಳೂರಿಗೆ ಬಂದಿಳಿಯಿತು. ಆಗಲೇ ನಮಗೆಲ್ಲಾ ಗಂಟಲು ಕಟ್ಟಿರುವುದು, ಕೆಮ್ಮು, ಮೈ ಕೈ ನೋವು ಎಲ್ಲಾ ದೈಹಿಕ ಶ್ರಮದ ಅನುಭವಗಳೂ ವೇದ್ಯವಾಗುತ್ತಿದ್ದವು.

ಮನೆಗೆ ಹೋಗಿ ರೆಸ್ಟ್ ತೆಗೆದುಕೊಳ್ಳುವುದು ಮಾತ್ರ ಬಾಕಿಯಿತ್ತು.

ಇಲ್ಲಿಗೆ ನನ್ನ ಯಾತ್ರಾ ಕಥನ ಸಹಾ ಮುಗಿಯಿತು. 9 ಸಂಚಿಕೆಗಳಲ್ಲಿ ನಿಧಾನವಾಗಿ ಓದುತ್ತಾ ಬಂದ ಸಹೃದಯ ಓದುಗರಿಗೆಲ್ಲ ಅನಂತ ಧನ್ಯವಾದಗಳು ಮತ್ತು ಶುಭಾಶಯಗಳು.

ಈ ಪ್ರವಾಸ ಕಥನವನ್ನು ಪುಸ್ತಕ ರೂಪದಲ್ಲಿಯೂ ಹೊರತರುವ ಉದ್ದೇಶವಿದೆ.

29 views0 comments
bottom of page