ಮಡಿದ ಮಡದಿ - ಅಮೆರಿಕನ್ ಪತ್ತೇದಾರಿ ಕಥೆ ಅನುವಾದ
- Nagesh Kumar
- Feb 9
- 10 min read

ರಾಬರ್ಟ್ ಲೆಸ್ಲಿ ಬೆಲ್ಲೆಮ್ ಅವರ ಇಂಗ್ಲೀಷ್ ಮೂಲ : ದಿ ಸ್ಟಾರ್ ಚೇಂಬರ್, 1942
ಕನ್ನಡಕ್ಕೆ : ನಾಗೇಶ್ ಕುಮಾರ್ ಸಿ.ಎಸ್.
ಹಾಲಿವುಡ್ ಬಳಿಯ ಸಾಂಟಾ ಆನಿಟಾದಲ್ಲಿ ಅಂದು ರೇಸ್ ಸೀಸನ್‌ನ ಕೊನೆ ದಿನ. ಗ್ರ್ಯಾಂಡ್‌ಸ್ಟ್ಯಾಂಡ್ ಜನರಿಂದ ತುಂಬಿಕೊಂಡಿತ್ತು—ಕೊನೆಯ ರೇಸ್, ಅತಿಶಯದ ಗದ್ದಲ. ನಾನು ರೇಲಿಂಗ್‌ಗೆ ಆಧಾರವಾಗಿ ನಿಂತು, ನನ್ನ ಜೋಡಿ ದೂರದರ್ಶಕಗಳಿಂದ ಕುದುರೆಗಳನ್ನು ನೋಡುತ್ತಿರುವಾಗ, ಯಾರೋ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದರು. ಒಂದೇ ಸಾರಿ ಬಿದ್ದೇಬಿಟ್ಟೆನೆನಿಸಿತು.
ನನ್ನ ಲೈನ್‌ನಲ್ಲಿ, ಅನಿರೀಕ್ಷಿತ ಕ್ಷಣದಲ್ಲಿ ಕಷ್ಟ ಬರುವುದನ್ನು ಎದುರು ನೋಡಲೇಬೇಕು. ನಾನು ತಕ್ಷಣ ತಿರುಗಿ ನಿಂತೆ. ಭುಜದೊಳಗಿನ ಹೊಲ್ಸ್ಟರ್‌ನಲ್ಲಿದ್ದ ನನ್ನ .32 ಪಿಸ್ಟಲ್ ಕಡೆಗೆ ಕೈ ಹೋಗತೊಡಗಿತ್ತು.
ಆದರೆ ಕ್ಷಣಕಾಲದಲ್ಲೇ ಆ ಒತ್ತಡ ಇಳಿಯಿತು. ನನ್ನನ್ನು ತಳ್ಳಿದ್ದು ಯಾರೋ ಒಬ್ಬ ಯುವತಿ.
ಕಂದು-ಬಂಗಾರದ ಕೂದಲಿನ, ಮುದ್ದಾದ ಮೈಕಟ್ಟು, ನೇರಳೆ ಬಣ್ಣದ ಕಣ್ಣುಗಳು, ಜೇನು ಲೇಪಿಸಿದಂತೆ ತೋರುವ ತುಟಿಗಳು, ಮಿಲಿಯನ್ ಡಾಲರ್ ಶರೀರ—ಅವಳು ಅಷ್ಟು ಸುಂದರಿ. ಅವಳ ಟ್ವೀಡ್ ಸ್ಪೋರ್ಟ್ಸ್ ಉಡುಪು ಮೈಗೆ ಅಂಟಿಕೊಂಡಂತಿತ್ತು; ನಾನು ಕಣ್ಣು ಕೆಕ್ಕರಿಸಿ ನೋಡುವುದನ್ನು ಹೇಗೋ ತಡೆದುಕೊಂಡೆ.
ಅವಳು ಜೋರಾಗಿ, “ಕ್ಷಮಿಸಿ… ನಾನು ತಪ್ಪು ಮಾಡಿದೆ,” ಅಂದಳು. ಆದರೆ ತಕ್ಷಣವೇ ಉಸಿರು ತಗ್ಗಿಸಿ, ಪಿಸುಗುಟ್ಟಿದಳು,
“ನೀವು ಡ್ಯಾನ್ ಟರ್ನರ್ ಅಲ್ಲವಾ? ಖಾಸಗಿ ಪತ್ತೇದಾರ?”
ನಾನು ಬಾಯಿ ಬಿಟ್ಟೆ. “ಜನ ಹೇಳ್ತಾರೆ ಹಾಗೆ. ಮತ್ತು ನೀವು ಫಾಲಿ ಹೆಂಪ್‌ಸ್ಟೆಡ್—ಕಾಸ್ಮೋಟೋನ್ ಸಿನೆಮಾ ಸ್ಟಾರ್?”
ಅವಳು ಮುಖವೇ ಫಕ್ಕನೆ ಬಿಳಿಚಿಕೊಂಡಿತು, ಭಯವಿಹ್ವಲವಾದಂತೆ. “ಶ್ಹ್… ಶಾಂತವಾಗಿ!” ಅಂತ ತಕ್ಷಣ ಮುಲುಗಿದವಳು ಅತ್ತಿತ್ತ ನೋಡಿ ಒಮ್ಮೆಲೆ ನನ್ನ ಕೈಯಲ್ಲಿ ಒದ್ದೆಯಾದ ಮಡಿಚಿದ ಕಾಗದದ ತುಂಡನ್ನು ಒತ್ತಿದಳು.
“ಇವತ್ತು ರಾತ್ರಿ ಎಂಟುಗಂಟೆಗೆ ಹಾಲಿವುಡ್‌ನ ಗೇಲ್ಸ್‌ವರ್ತಿ ಹೋಟೆಲ್, ರೂಮ್ 513ಕ್ಕೆ ಬರ್ತೀರಾ? ದಯವಿಟ್ಟು ತಪ್ಪದೆ ಬನ್ನಿ. ಆದರೆ, ಯಾರಿಗೂ ಹೇಳಬೇಡಿ.”
ಇದು ನನಗೆ ಅಚ್ಚರಿಯಾಗಿತ್ತು ಯಾಕೆಂದರೆ—ಹೀಗೆಲ್ಲ ಒಂದು ಸುಂದರ ಹೆಣ್ಣು ಹೋಟೆಲ್ ರೂಮ್‌ಗೆ ಆಹ್ವಾನ ಕೊಡ್ತಾಳಾ? ಇಂತಹ ರೂಪಸಿ ಕರೆದರೆ ಯಾವು ಗಂಡಸೂ "ಇಲ್ಲ" ಎನ್ನಲಾರ!
ಆದರೆ ಅವಳು ನನ್ನ ಯೋಚನೆಯನ್ನು ಓದಿದಳು ಎಂದು ತೋರಿತು. ಅವಳು ಸಿಟ್ಟಾಗಿ, ಗಂಭೀರವಾಗಿ ಹೇಳಿದಳು:
“ಇದು ಅಂಥದ್ದೇನೂ ಅಲ್ಲ, ಮಿಸ್ಟರ್ ಟರ್ನರ್… ಇದು ಜೀವನ್ಮರಣದ ವಿಷಯ!”
ಅಷ್ಟು ಮಾತ್ರ ಹೇಳಿ ಜನಜಂಗುಳಿಯೊಳಗೆ ಜಾರಿ ಕಣ್ಮರೆ ಆಗಿಹೋದಳು. ಅದನ್ನು ನಾನು ಕಣ್ಣು ಕೆಕ್ಕರಿಸಿ ನೋಡುತ್ತಿದ್ದೆ!
ಅವಳು ಹೋದ ಮೇಲೆ ನಾನು ಯಾವ ಕುದುರೆ ಗೆದ್ದಿತು ಎನ್ನುವುದನ್ನೂ ಗಮನಿಸಲಿಲ್ಲ. ಬದಲು, ಆ ಮಡಿಚಿದ ಕಾಗದದ ತುಂಡನ್ನು ತೆರೆದೆ.
ಅದು— ಐದು ನೂರು ಡಾಲರ್ ನೋಟಾಗಿತ್ತು! ಒಮ್ಮೆಲೆ ಅದೃಷ್ಟಲಕ್ಷ್ಮಿ ಒಲಿದಳೆ ನನಗೆ?
ಇದು ದೊಡ್ಡ ವಿಷಯ ಎಂದೇ ಆಯಿತು. ಹಾಗಾದರೆ ಅವಳು ನನಗೆ ಕೆಲಸ ಕೊಡುವವಳಿದ್ದಳು, ರೊಮಾನ್ಸಿಗಲ್ಲ!. ಇಷ್ಟು ಹಣ ಯಾರೂ ವ್ಯರ್ಥವಾಗಿ ಕೊಡುವುದಿಲ್ಲ. ಮತ್ತು ಅವಳು ಯಾವುದೋ ಅವ್ಯಕ್ತ ಭಯದಲ್ಲಿದ್ದಳು.
ಈ ಚೆಲುವೆ- ಫಾಲಿ ಬಗ್ಗೆ ನನಗಿರೋ ಮಾಹಿತಿಯನ್ನು ಮನಸ್ಸಿನಲ್ಲೇ ಅಳೆದು ಸುರಿದು ನೋಡಿದೆ. ಅವಳು ಕಾಸ್ಮೋಟೋನ್ ಸ್ಟುಡಿಯೋ ಅಧ್ಯಕ್ಷ ಸೈರಸ್ ಹೇಂಪ್‌ಸ್ಟೆಡ್ ಅವರ ಒಬ್ಬಳೇ ಮಗಳು. ಆದರೆ ಪ್ರತಿಭಾವಂತೆ! ತನ್ನದೇ ಕಲೆಯ ಮೂಲಕ ಇತ್ತೀಚಿನ ಕೆಲವು ಚಿತ್ರಗಳಿಂದ ಸೂಪರ್‌ಸ್ಟಾರ್ ಸಹ ಆಗಿದ್ದಳು. ಚಿತ್ರರಸಿಕರು ಅವಳನ್ನು ನಿಜಕ್ಕೂ ಮೆಚ್ಚುತಿದ್ದರು.
ಅವಳು ಕೆಲ ಕಾಲ ಚಿತ್ರಕಥೆ ಲೇಖಕ ಫೆನಿಮೋರ್ ಬ್ರೇ ಜೊತೆ ಮದುವೆಯಾಗಿದ್ದಳು. ಆದರೆ ಆ ಮದುವೆ ಯಶಸ್ವಿಯಾಗದೆ, ಆರು ತಿಂಗಳ ಹಿಂದೆ ರೆನೋನಲ್ಲಿ ವಿಚ್ಛೇದನ ಆದಂತಿತ್ತು. ಈಗ ಹಳದಿ ಮಾಧ್ಯಮದ ಗಾಸಿಪ್ ಪೇಪರುಗಳು ಅವಳು ಸ್ಟುಡಿಯೋದ ಹಿಂದಿನ ಪ್ರೊಡಕ್ಷನ್ ಹೆಡ್ - ಮ್ಯಾಕ್ ಮಾರ್ಟಿನ್ ಜೊತೆ ಇತ್ತೀಚೆಗೆ ಎಲ್ಲೆಲ್ಲೂ ಓಡಾಡುತ್ತಿದ್ದಾಳೆ ಎಂದು ವರದಿ ಮಾಡಿದ್ದವು.
ಆದರೆ ಈ ಎಲ್ಲದಕ್ಕೂ ನನಗೂ ಏನು ಸಂಬಂಧ?
ಅವಳಿಗೆ ಡಿಟೆಕ್ಟಿವ್ ಬೇಕಾಗಿದ್ದಾದರೂ ಯಾಕೆ?
ನಾನು ಗ್ಯಾಂಡ್‌ಸ್ಟ್ಯಾಂಡ್ ಕೆಳಗಿನ ಬಾರ್‌ಗೆ ಹೋಗಿ, ಒಂದು ಪೆಗ್ ವ್ಯಾಟ್ 69 ಕುಡಿದೆ. ಗಾಜಿನ ಕ್ಯಾಬಿನ್ ಪಕ್ಕದಲ್ಲಿದ್ದ ಇಬ್ಬರನ್ನು ನೋಡಿದಾಗ— ನನ್ನ ಕೈಯಿಂದ ಗ್ಲಾಸ್ ಜಾರಿ ಬೀಳುವುದು ಬಾಕಿ, ಅಷ್ಟು ಆಘಾತವಾಯಿತು. ಯಾಕೆಂದರೆ-
ಒಬ್ಬ — ಫೆನಿಮೋರ್ ಬ್ರೇ, ಫಾಲಿಯ ಮಾಜಿ ಪತಿ.
ಇನ್ನೊಬ್ಬ — ಮ್ಯಾಕ್ ಮಾರ್ಟಿನ್, ಗಾಳಿಸುದ್ದಿಗಳ ಪ್ರಕಾರ ಅವಳ ಈಗಿನ ಪ್ರಿಯತಮ.
ಇಬ್ಬರೂ ಸೇರಿ ಕುಡಿಯುತ್ತಾ, ನಗುತ್ತಾ ಕೂತಿದ್ದರು. ಬ್ರೇ ಮಾತಾಡಿದ್ದನ್ನು, ಮಾರ್ಟಿನ್ ತನ್ನ ಕೃತಕ ಕಿವಿ ಯಂತ್ರದ ಮುಖಾಂತರ ಕೇಳಿಕೊಳ್ಳುತ್ತಲಿದ್ದ.
ಆಗ ಮಾರ್ಟಿನ್ ನನ್ನನ್ನು ನೋಡಿ, ಕೈಬೀಸಿ, “ಹಾಯ್ ಶೆರ್ಲಾಕ್! ಇಲ್ಲಿ ಬಾ, ಒಂದು ಡ್ರಿಂಕ್ ಗೆ ಸೇರಿಕೋ” ಎಂದು ಕೂಗಿದ.
ಕುತೂಹಲದಿಂದಲೇ ಅಲ್ಲಿಗೆ ಹೋದೆ.
ಮಾರ್ಟಿನ್ ಹೇಳಿದ: “ಡ್ಯಾನ್, ಇವರು ಫೆನಿಮೋರ್ ಬ್ರೇ... ಬ್ರೇ—ಇವರು ಡ್ಯಾನ್ ಟರ್ನರ್, ಅತ್ಯುತ್ತಮ ಡಿಟೆಕ್ಟಿವ್ - ಜಗತ್ತಿಗೇ ದೇವರ ಕೊಡುಗೆ!” ಎಂದು ಮುಖವುಬ್ಬಿಸಿದ.
ಬ್ರೇ ಕೊಟ್ಟ ಹಸ್ತಲಾಘವದಿಂದ ನನ್ನ ಕೈ ಮುರಿಯದೇ ಉಳಿದಿದ್ದು ಆಶ್ಚರ್ಯ! ಅಷ್ಟು ಗಟ್ಟಿ.
ಅವನು ನುಡಿದ,
“ನಿಮ್ಮನ್ನು ನೋಡಿದ್ದು ಖುಷಿಯಾಯಿತು. ನನಗೆ ಒಬ್ಬ ಖಾಸಗಿ ಡಿಟೆಕ್ಟಿವ್ ಬೇಕು. ಇವತ್ತು ರಾತ್ರಿ—ಎಂಟು ಗಂಟೆಗೆ—ಬರಕ್ಕಾಗುತ್ತಾ?”
ನಾನು ಬೆರಗಾದೆ, “ಆಗಲ್ಲ ಅನಿಸುತ್ತದೆ, ಈಗಾಗಲೇ ಒಂದು ಡೇಟ್ ಇದೆ,” ಎಂದೆ. ಅವನು ಸ್ವಲ್ಪ ನಿರಾಶನಾದ, “ಸರಿ ಹಾಗಾದರೆ!”
________________________________________
ವಾಪಸು ಹಾಲಿವುಡ್ ಕಡೆ ಹೋಗುತ್ತಾ, ಯೋಚಿಸಿದೆ ‘ಇದೇನು ಬ್ರೇಗೂ ಅದೇ ಸಮಯಕ್ಕೆ ನಾನು ಬೇಕಾಗಿತ್ತು? ಫಾಲಿಯನ್ನೂ ಅದೇ ಸಮಯಕ್ಕೆ ನನ್ನನ್ನು ನೋಡಬೇಕು ಅಲ್ಲವೆ?. ಇಬ್ಬರಿಗೂ ಒಂದೇ ಸಮಯ- 8 ಗಂಟೆ — ಇದು ಕಾಕತಾಳೀಯ ಮಾತ್ರವೋ?’
ಊಟ ಮಾಡಿ, 8ಕ್ಕೆ ಗೇಲ್ಸ್‌ವರ್ತಿ ಹೋಟೆಲ್‌ಗೆ ಹೋದೆ. ಅಲ್ಲಿಗೆ ಪ್ರವೇಶಿಸುತ್ತಿದ್ದಂತೆಯೇ—ಒಬ್ಬ ಚೀನಿ ಹುಡುಗಿ ಅಲ್ಲಿ ಓಡುತ್ತಾ ಬಂದಳು. ಅವಳ ಸಿಲ್ಕ್ ಹೊರಗೌನ್ ಹರಿದಿತ್ತು, ಕೈ ಅಡ್ಡ ಹಿಡಿದು ಗಾಬರಿ ಹೊತ್ತ ಮುಖದಲ್ಲಿ ಒಂದೇ ಸವನೆ ಆ ಗಲ್ಲಿಯ ಮುಂಭಾಗದಲ್ಲಿ ನಿಂತಿದ್ದ ಒಂದು ಕ್ಯಾಬ್ ಬಳಿಗೆ ಓಡಿ ತಲುಪಿದಳು. ತಕ್ಷಣ ಡ್ರೈವರಿಗೆ ಅಡ್ರೆಸ್ ಹೇಳಿದಳೇನೋ, ಕೂಡಲೇ ಕ್ಯಾಬ್ ವೇಗವಾಗಿ ಹೊರಟುಹೋಯಿತು.
ನನಗೇಕೋ ಸಂಶಯ ಬಂದಿತು. ರೂಮ್ 513ಕ್ಕೆ ಧಾವಿಸಿ ಹೋದೆ. ಅದರ ಬಾಗಿಲು ತೆರೆದಿತ್ತು. ದೀಪ ಬೆಳಗಿತ್ತು.
ನನಗೆ ಉಸಿರೇ ನಿಂತಂತಾಯಿತು!.
ಅಲ್ಲಿ... ನನ್ನನ್ನು ಆಹ್ವಾನಿಸಿದ್ದ ಫಾಲಿ ಹೆಂಪ್‌ಸ್ಟೆಡ್—ಅರ್ಧ ಉಡುಪಿನಲ್ಲಿ—ಹಾಸಿಗೆಯ ಮೇಲೆ ಅಂಗಾತ ಬಿದ್ದಿದಳು.
ಅವಳ ಮುಖ ನೀಲಿಗಟ್ಟಿತ್ತು, ಕುತ್ತಿಗೆಯ ಮೇಲೆ ಕೈ ಬೆರಳುಗಳ ಮುದ್ರೆ ಬಿದ್ದಿತ್ತು. ಕಣ್ಣುಗಳು ಗಾಜಿನ ಗೋಲಿಗಳಂತೆ ತಾರಸಿ ನೋಡುತ್ತಿದ್ದವು, ನಾಲಗೆ ಬಾಯಿಯ ಆಚೆ ಚಾಚಿತ್ತು!
ಅಂದರೆ ... ಅವಳನ್ನು ಯಾರೋ ಕೊಲೆ ಮಾಡಿಬಿಟ್ಟಿದ್ದರು.
ನಾನು ತಕ್ಷಣ ಹಾಸಿಗೆಯ ಕಡೆ ಜಿಗಿದೆ. ಅವಳ ಎದೆ ಕೆಳಗಡೆ ಬೆರಳು ಹಾಕಿ ಸ್ಪರ್ಶಿಸಿದೆ—ಚರ್ಮ ಇನ್ನೂ ಬಿಸಿಯಾಗಿತ್ತು, ಆದರೆ ಎದೆಬಡಿತ—ಶೂನ್ಯ. ಅವಳ ಭುಜಗಳು, ಕೈಗಳು, ತೊಡೆಗಳು—ಎಲ್ಲೆಲ್ಲೂ ಮೂಕ ಪೆಟ್ಟಿನಂತೆ ಗುರುತುಗಳು!. ಯಾರೋ ಕೊನೆಯ ಕ್ಷಣದವರೆಗೆ ಅವಳನ್ನು ಥಳಿಸಿ ಹಿಂಸಿಸಿ—ಕೊನೆಗೆ ಕುತ್ತಿಗೆಯನ್ನೇ ಮುರಿದಿದ್ದರು. ಅಂದರೆ ನನ್ನ ಅಂದಾಜಿನ ಪ್ರಕಾರ ಹಲ್ಲೆ ಮಾಡಿದ್ದವನು ಭಯಂಕರ ಬಲಿಷ್ಠನಾಗಿರಬೇಕು.
ಅವಳ ಮೇಲುಡುಗೆ— ಕೋಣೆಯಲ್ಲಿ ಹರಕಲಾಗಿ ಬಿದ್ದಿತ್ತು. ಕೊಲೆಗೈದವನು ಬಲು ಕ್ರೂರಿಯಾಗಿದ್ದಿರಬೇಕು ಎನಿಸಿತು. ಗೋಡೆಯಲ್ಲಿದ್ದ ಲ್ಯಾಂಡ್‌ಲೈನ್ ಫೋನ್ ಕಡೆ ಓಡಿದೆ. ರಿಸೀವರ್ ಎತ್ತಿ, ಪೊಲೀಸ್ ಹೆಡ್‌ಕ್ವಾರ್ಟರ್ಸ್‌ಗೆ ಕಾಲ್ ಮಾಡಿದೆ.
“ಡೇವ್ ಡೊನಾಲ್ಡ್ಸನ್ ಸಂಪರ್ಕಿಸಿ,” ಎಂದೆ. ಅವನು ನರಹತ್ಯೆ ವಿಭಾಗದ ನನ್ನ ಮಿತ್ರ.
ಅವನು ಆ ಕಡೆ ಬಂದೊಡನೆ, “ ನಾನು ಡ್ಯಾನ್. ಇಲ್ಲಿ ಒಂದು ಮರ್ಡರ್ ಸೀನ್ ಕಾಣಿಸುತ್ತಿದೆ, ಬೇಗ ಬಾ,” ಎಂದು ಹೇಳಿದೆ.
ಅವನು “ಅಯ್ಯೋ ದೇವರೆ! ಅದೇನು ನೀನಿದ್ದ ಕಡೆಯೆ ಹೀಗೆಲ್ಲ? ಇವತ್ತು ಯಾರು ಸತ್ತಿದ್ದಾರೆ ಮತ್ತು ಏಕೆ?” ಎಂದು ಗುಡುಗಿದ.
ನಾನು ಹೋಟೆಲ್ ಹೆಸರು, ರೂಮ್ ನಂಬರ್ ಕೊಟ್ಟೆ. ರಿಸೀವರ್ ಇಟ್ಟು, ಒಂದು ಸಿಗರೇಟು ಹಚ್ಚಿ ಕಾಯುತ್ತಿದ್ದೆ.
ಹತ್ತು ನಿಮಿಷವೂ ಆಗಿರಲಿಲ್ಲ—ಅವನು ಬಿರುಗಾಳಿಯಂತೆ ಒಳ ನುಗ್ಗಿದ.
ಫಾಲಿಯ ಶವವನ್ನು ನೋಡಿದ ಕ್ಷಣವೇ ಅವನ ಮುಖ ಬಿಳಿಚಿಕೊಂಡಿತು
“ಅಬ್ಬಾ, ಛೇ!” ಎಂದು ಉದ್ಗರಿಸಿದನು.
“ಹೌದು—ಹಾಗೇ ಅನಿಸಿತು,” ನಾನು ನುಡಿದೆ.
“ಕಥೆ ಏನು?”
ನಾನು ವಿವರಿಸಿದೆ:
“ರೇಸ್‌ಟ್ರ್ಯಾಕ್‌ನಲ್ಲಿ ಉಪಹಾರ ಸಮಯಕ್ಕೆ ಇವಳು ನನ್ನನ್ನು ಭೇಟಿಯಾಗಿದ್ದಳು. 500 ಡಾಲರ್ ಕೊಟ್ಟು ರಾತ್ರಿ 8ಕ್ಕೆ ಇಲ್ಲಿಗೆ ಬಾ ಅಂತ ಹೇಳಿದ್ದಳು. ಭಯಪಟ್ಟವಳಂತೆ ಅಲ್ಲಿಂದ ಜಾಗ ಖಾಲಿ ಮಾಡಿದಳು. ನಾನು ಈಗ ಬರ್ತಾ ಇದ್ದಂತೆ— ಇದನ್ನೇ ಕಂಡೆ.”
“ಅವಳು ಏನನ್ನಾದರೂ ಹೇಳಿದ್ಲಾ?”
“ಇಲ್ಲ.”
“ನೀನು ಯಾರಿಗಾದರೂ ಹೇಳಿದೆಯಾ?”
“ಇಲ್ಲ.”
ಡೇವ್ ಗಾಢವಾಗಿ ಯೋಚಿಸಿದ.
“ಅರೆ, ಹಾಗಾದರೆ… ಮತ್ತೆ ಯಾರಿಗೆ ತಾನೇ ಗೊತ್ತಾಯಿತು? ಯಾರು ಅವಳನ್ನು ಇಲ್ಲಿ ಒಂಟಿಯಾಗಿರುವಾಗ ಬಂದು ಕೊಂದರು? ನಿನ್ನನ್ನು ಮಾತಾಡಿಸುವಾಗ ಅಲ್ಲಿ ಯಾರೋ ವಿಷಯ ಕೇಳಿಸಿಕೊಂಡಿದ್ದಾರೆ. ಅಥವಾ ಅವಳೇ ಯಾರಿಗೋ ಹೇಳಿದಳೋ?”
“ಅದಂತೂ ಸಾಧ್ಯವಿಲ್ಲ,” ಎಂದೆ. “ಅವಳು ನನ್ನ ಕಿವಿಗೆ ಮಾತ್ರ ಹೇಳಿ ಓಡಿದ್ದಳು.”
ಡೇವ್ ತಲೆ ತಗ್ಗಿಸಿ ನುಡಿದ,
“ಸರಿ… ಈಗ ಅವಳು ಏನು ಹೇಳಬೇಕಾಗಿತ್ತೋ, ಸತ್ತ ಒಡನೆ ಅದೂ ಮುಚ್ಚಿ ಹೋಯಿತು. ನಿನಗೋ 500 ಡಾಲರ್ ಸಿಕ್ಕಿವೆ. ನನಗಂತೂ ಇನ್ನೊಂದು ಮರ್ಡರ್ ತನಿಖೆ ಸಿಕ್ಕಿದೆ ಅಷ್ಟೆ!.”
ಅಲ್ಲಿ ನಿಂತು ನಾನು ಹೆಚ್ಚಿನ ಸಹಾಯ ಮಾಡಲಾಗಲಿಲ್ಲ.
“ಸರಿ, ಡೇವ್. ನಾನು ಮನೆಗೆ ಹೋಗ್ತೀನಿ. ಬೇಕಾದರೆ ಕರೆ ಮಾಡು,” ಎಂದು ಹೇಳಿ ಕಾರ್ ಬಳಿ ಕಾಲು ಹಾಕಿದೆ.
ನನ್ನ ಅಪಾರ್ಟ್ಮೆಂಟ್ ಬ್ಲಾಕ್‌ಗೆ ಹೋದಾಗ—ಬಾಗಿಲಿನ ಬಳಿ ಕೀ ಹಾಕುವಷ್ಟರಲ್ಲಿ—ಯಾರೋ ಬೆನ್ನಿಗೆ ಟ್ಯಾಪ್ ಮಾಡಿದರು. ನಾನು ಗಕ್ಕನೆ ತಿರುಗಿ ನಿಂತೆ— ನೋಡಿದರೆ,
ಫೆನಿಮೋರ್ ಬ್ರೇ! ಫಾಲಿಯ ಮಾಜಿ ಪತಿ.
ಅವನು ಚಿಂತೆಯಲ್ಲಿ ಮುಳುಗಿದವನಂತೆ ಕಂಡ.
“ಟರ್ನರ್… ನಾನು ನಿನ್ನ ಜೊತೆ ಈಗಲೇ ಮಾತನಾಡಬೇಕು. ನಾಳೆ ಅನ್ನಬೇಡ!”
“ಸರಿ. ಒಳಗೆ ಬಾ.” ಎಂದೆ.
ಅವನು ಒಳಗೆ ಬಂದೊಡನೆ ಶತಪಥ ತುಳಿದ:
“ಫಾಲಿ ತೊಂದರೆಗೆ ಸಿಕ್ಕಿದ್ದಾಳೆ—ಅವಳನ್ನು ನೀನು ಕಾಪಾಡಬೇಕು,” ಎಂದು ಬೇಡಿಕೆಯಿಟ್ಟ..
ನಾನು ಅದನ್ನು ಕೇಳಿ ಚಳಿಯಾದಂತೆ ನಡುಗಿದೆ. ಅಂದರೆ -ಅವನಿಗೆ ಇನ್ನೂ ಫಾಲಿ ಸತ್ತು ಹೋದ ಸುದ್ದಿ ಬಂದಿರಲಿಲ್ಲ. ಸಂಜೆಯ ಪತ್ರಿಕೆಗಳು ಇನ್ನೂ ಹೊರ ಬಂದಿರಲಿಲ್ಲ.
“ಯಾವ ತೊಂದರೆ?” ನಾನು ಶಾಂತವಾಗಿ ಕೇಳಿದೆ.
ಅವನು ಕಣ್ಣು ಮರೆಸಿಕೊಂಡ.
“ಗೊತ್ತಿಲ್ಲ, ನೀನು ನಗ್ತೀಯೋ ಏನೋ ಎಂದು. ನನಗೆ ವಿಚ್ಛೇದನ ಆಗಿದ್ದರೂ—ನಾನು ಇಂದಿಗೂ ಅವಳನ್ನು ಪ್ರೀತಿಸ್ತೀನಿ. ಅವಳು ಹಾಳಾಗಿ ಹೋಗ್ತಿದ್ದಾಳೆ…”
“ಏನು ಹಾಗಂದರೆ?
“ಅವಳು… ಡ್ರಗ್ಸ್ ಬಳಕೆ ಮಾಡ್ತಿದ್ದಾಳೆ,” ಎಂದ.
ನಾನು ಶಾಕ್ ತೋರಿಸದಿರಲು ಮುಖವನ್ನು ಸಿಗರೇಟು ಹಚ್ಚಿ ಮರೆ ಮಾಡಿದೆ.
“ಅಫೀಮು?”
“ಹೌದು. ಯಾರೋ ಕಚಡಾ ಸ್ನೇಹಿತ ಅವಳಿಗೆ ‘ಅಫೀಮು ಪೈಪ್’ ಪರಿಚಯಿಸಿದ್ದಾನೆ. ಅವಳು ನಾಶವಾಗುತ್ತಾ ಇದಾಳೆ. ನೀವು ಹುಡುಕಿ—ಅವಳು ಯಾವುದೋ ಚೀನೀಯರ ಕ್ಲಬ್ಬಿಗೆ ಹೋಗುತ್ತಾಳೆ—ಅದನ್ನು ಪತ್ತೆ ಮಾಡಿದ ನಂತರ ಪೋಲೀಸರಿಗೆ ಸುಳಿವು ಕೊಟ್ಟುಬಿಡು.”
“ಚೈನೀಸ್ ಡ್ರಗ್ ಡೆನ್?” ಅವನು ಹಾಗಂದಮಾತ್ರಕ್ಕೆ ನನಗೆ ಮೈ ನವಿರೇಳಿತು.
“ಅಯ್ಯೋ, ನಾನೆಂತಹ ಪೆದ್ದ!” ಎಂದು ಏನೋ ಹೊಳೆದು ತಟಕ್ಕನೆ ಉದ್ಗರಿಸ್ದಿ ಎದ್ದೆ. ಮನೆಯಿಂದ ಬ್ರೇಯನ್ನು ಹೊರಕ್ಕೆ ತಳ್ಳಿದೆ.
“ಹೋಗುತ್ತಾ ಇರು ಮನೆಗೆ! ನನಗೆ ಈಗಲೇ ಕೆಲಸ ಶುರುವಾಯ್ತು!” ಎಂದೆ.
ಕಾರನ್ನು ಹೊರತೆಗೆದು ಗೇಲ್ಸ್‌ವರ್ತಿ ಹೋಟೆಲ್‌ಗೆ ಧಾವಿಸಿದೆ. ಅಂದು ಈ ಮುಂಚೆ ಚೀನೀ ಯುವತಿ ತಪ್ಪಿಸಿಕೊಂಡಿದ್ದ ಅದೇ ಕ್ಯಾಬ್ ಅಲ್ಲಿನ ಸ್ಟ್ಯಾಂಡ್‌ನಲ್ಲಿ ನಿಂತಿತ್ತು. ಅದೇ ನಂಬರ್!.
ಕ್ಯಾಬ್ ಚಾಲಕನನ್ನು ಮಾತಾಡಿಸಿದೆ: ”ಒಂದು ಪ್ರಶ್ನೆ!”
“ಏನ್ ಬೇಕು, ಡಿಟೆಕ್ಟಿವ್?”
“ಒಂದು ಗಂಟೆ ಹಿಂದೆ ಇಲ್ಲಿ ಒಬ್ಬ ಚೀನೀ ಹುಡುಗಿ ಬಂದು ಕ್ಯಾಬ್ ಹತ್ತಿದಳು. ಉಡುಪೂ ಹರಿದಿತ್ತು. ಅವಳನ್ನು ಎಲ್ಲಿಗೆ ಕರೆದೊಯ್ದೆ?”
ಅವನು ಸುಲಭವಾಗಿ ನೆನೆಪಿಸಿಕೊಂಡು ಒಂದು ವಿಳಾಸ ಹೇಳಿದ—ಕರ್ಸನ್ ಸ್ಟ್ರೀಟ್‌ನ ಬಂಗಲೆ.
ಅವನಿಗೆ ಧನ್ಯವಾದ ಹೇಳಿ, ಅಲ್ಲಿಗೆ ವೇಗವಾಗಿ ಹೋದೆ.
ಮುಂಭಾಗದ ಕೊಠಡಿಯಲ್ಲಿ ಬೆಳಕು ಹೊಳೆಯುತ್ತಿತ್ತು. ಬಾಗಿಲು ತಟ್ಟಿದೊಡನೆ—ಬೆಳಕು ಆಫ್! ಆಯಿತು. ಯಾರೂ ಬಾಗಿಲಿಗೆ ಬರಲಿಲ್ಲ. ಬಾಗಿಲಿಗೆ ಭಾರ ಹಾಕಿದೆ.—ಸಾದಾ ಮರದ ಬಾಗಿಲು. ಒಮ್ಮೆಲೆ ಒಡೆಯಿತು. ನಾನು ನುಗ್ಗಿ, ಟಾರ್ಚ್ ಮತ್ತು ಪಿಸ್ತೂಲು ತೆಗೆದು ಒಳನಡೆದೆ—
ಸೊಯ್ಯ್! ಎಂದು ಒಂದು ಚಾಕು ನೇರವಾಗಿ ನನ್ನತ್ತ ಗಾಳಿಯಲ್ಲಿ ಹಾರಿಬಂತು. ಚಕ್ಕನೆ ಪಕ್ಕಕ್ಕೆ ಸರಿದೆ, ನನ್ನ ಹಿಂದಿನ ಮರಕ್ಕೆ ಬಡಿಯಿತು,
ನಾನು ಒಳಕ್ಕೆ ಲೈಟ್ ತಿರುಗಿಸಿದಾಗ—
ಅದೇ ಚೀನೀ ಹುಡುಗಿ! ಪೈಜಾಮಾ ಹಾಕಿದ್ದವಳು, ಕೋಣೆಯಲ್ಲಿ ಮುದುರಿ ಕುಳಿತಿದ್ದಳು. ಅವಳು ಮುಲುಗುತ್ತಿದ್ದಳು. ಅವಳಿಗೆ ಡಿಕ್ಕಿ ಹೊಡೆದೆ. ಅವಳ ಕಣ್ಣಿಗೆ ಟಾರ್ಚ್ ಬೆಳಕು ಚುಚ್ಚಿದ್ದರಿಂದ ನಾನ್ಯಾರೆಂದು ಕಾಣಿಸಲಿಲ್ಲ.
ನಾನು ಅವಳನ್ನು ಹಿಡಿದು ಹಾಸಿಗೆಯ ಮೇಲೆ ಒತ್ತಿ ಹಿಡಿದೆ. ಆತಂಕದಿಂದ ಒದ್ದಾಡುತ್ತಿದ್ದಳು. ಅವಳ ನೀಳ ದೇಹ ನನ್ನ ಭಾರಕ್ಕೆ ಅಪ್ಪಚ್ಚಿಯಾಯಿತು
“ಚಾಕು ಎಸೀತೀಯಾ, ಹೆಣ್ಣೆ?” ಎಂದು ಎರಡು ಸಲ ಕೆನ್ನೆಗೆ ಹೊಡೆದೆ.
ಅವಳು ನೋವಿನಿಂದ ಮುಲುಗಿ, ಮತ್ತೆ ತಕ್ಷಣವೇ ನನ್ನನ್ನು ಕತ್ತಿನ ಸುತ್ತಲೂ ಅಪ್ಪಿಕೊಂಡು ಬೇಡಿಕೊಂಡಳು:
“ದಮ್ಮಯ್ಯ! ಕಿಲ್ ಮಾಡಬೇಡಿ! ನೀವು… ಏನು ಬೇಕಾದರೂ ಕೇಳಿ… ಮಾಡ್ತೀನಿ…!”
ಹೀಗೆ ಹೇಳುತ್ತಲೇ ನನ್ನ ತುಟಿಗಳ ಮೇಲೆ ನೇರವಾಗಿ ಚುಂಬಿಸಿದ್ದಳು.
ಅವಳ ಸ್ಪರ್ಶ ಮತ್ತು ಹಿತಕ್ಕೆ ನಾನು ಒಮ್ಮೆಲೇ ಮಾರುಹೋದೆ ಎಂಬುದು ಸುಳ್ಳಲ್ಲ. ನನಗೆ ಯಾಕೆ ಬಂದೆ ಎಂಬುದೇ ಮರೆತು ಹೋಗುವಂತೆ!—
ಕೆಲ ಕ್ಷಣದ ನಂತರ, ನನಗೆ ಜವಾಬ್ದಾರಿ ನೆನಪಾಯಿತು.
“ಯಾಕೆ ನನಗೆ ಚಾಕು ಎಸೆದೆ?” ಎಂದು ಅವಳನ್ನು ಅಲುಗಾಡಿಸಿ ಕೇಳಿದೆ.
“ ಮತ್ತೆ – ನೀವು ಮಿಸೆಸ್ ಹ್ಯಾಂಪ್‌ಸ್ಟೇಡ್ ಅವರನ್ನು ಕೊಂದಂತೆ ನನ್ನನ್ನೂ ಕೊಲ್ಲುತೀರಿ ಎಂದು ಊಹಿಸಿ...”
“ಅವಳು ಸತ್ತಳು ಎಂದು ನಿನಗೆ ಹೇಗೆ ಗೊತ್ತು? ಮತ್ತೆ- ನಾನು ಯಾರು ಅಂತ ನೀನು ಅಂದುಕೊಂಡಿದ್ದೆ?” ರೂಮಿನ ಬೆಳಕು ಹಾಕಿ, ಪಿಸ್ತೂಲನ್ನು ಅವಳ ಹೊಟ್ಟೆಗೆ ದೂಡಿದೆ.
ಅವಳು ಬೆಚ್ಚಿಬಿದ್ದು ಎವೆಯಿಕ್ಕದೇ ನೋಡಿ:
“ನೀವಾ ಡಿಟೆಕ್ಟಿವ್?… ಡ್ಯಾನ್ ಟರ್ನರ್?”
“ಹೌದು. ಮಾತಾಡುತ್ತಾ ಹೋಗು, ಬೇಬಿ.”
ಅವಳು ಈಗ ಸಲೀಸಾಗಿ ನುಡಿದಳು:
“ಫಾಲಿ ನನ್ನನ್ನು ಗೇಲ್ಸ್‌ವರ್ತಿ ಹೋಟೆಲ್‌ಗೆ ಕರೆದುಕೊಂಡು ಬಂದಿದ್ದಳು… ನಾನು ನಿಮಗೆ ಒಂದು ಗುಪ್ತ ಮಾಹಿತಿ ಹೇಳುವುದಿತ್ತು. ಏಕೆಂದರೆ ಆ ಅಫೀಮು ಕ್ಲಬ್ಬಿನಲ್ಲಿ ಮೊದಲು-ನಾನು ಮತ್ತು ಲೈಸ್ಟ್ರಾ ಲಾʼಸೇಲ್ ಮತ್ತಿತರರು ದುಡಿಯುತ್ತಿದ್ದೆವು.. ನಾವು ಇಬ್ಬರೂ ರೂಮ್ 513ರಲ್ಲಿ ನಿಮಗಾಗಿ ಕಾಯುತ್ತಿದ್ದೆವು. ಆಗ—ಒಬ್ಬ ಮುಸುಕು ಧರಿಸಿದ ಮನುಷ್ಯ ಒಳ ಬಂದ. ಅವನು ದಾಳಿ ಮಾಡಿ ನನ್ನ ಉಡುಪನ್ನು ಹರಿದ. ಫಾಲಿಯನ್ನು ಮುಷ್ಟಿಗಳಿಂದ ಹೊಡೆದು ಬೀಳಿಸಿ… ಕುತ್ತಿಗೆ ಹಿಸುಗುತ್ತಿದ್ದ. ನಾನು ಆಗ ಹೇಗೋ ಕಿಟಕಿಯಿಂದ ಜಿಗಿದು ಓಡಿದೆ. ನಿಮ್ಮನ್ನು ನೋಡಿ ಅವನೇ ನೀವು- ಎಂದುಕೊಂಡೆ”
ಅವಳು ಹೇಳುತ್ತಿದ್ದಂತೆ—
ಅಕಸ್ಮಿಕವಾಗಿ ನನ್ನ ಹಿಂದಿದ್ದ ಕಿಟಕಿಯತ್ತ ನೋಡಿ— ಭೀತಿಯಿಂದ ಚೀರಿದಳು—
ನಾನು ನೆಲಕ್ಕೆ ಜಿಗಿದೆ, ಅವಳನ್ನೂ ಕೆಳಗೆ ಎಳೆಯಲು ಯತ್ನಿಸಿದೆ—
ಡಂ ಡಂ ಡಂ!
ಅಲ್ಲಿಂದ ಮೂರು ಗುಂಡುಗಳು ಹೊರಟವು.
ಒಂದನೆಯದು—ನೇರವಾಗಿ ಅವಳ ಎದೆಯನ್ನು ಹೊಕ್ಕಿತು.
ಎರಡನೆಯದು—ಲೈಟ್‌ಗೆ ಬಿದ್ದಿತು.
ಮೂರನೆಯದು—ನನಗೇ ಬರುವುದಿತ್ತೇನೋ—ಅವಳ ದೇಹ ಅದಕ್ಕೆ ಅಡ್ಡವಿದ್ದು ತಡೆದಿತ್ತು.
ಅವಳು ನನ್ನ ಮೇಲೆಯೇ ಸತ್ತು ಕುಸಿದಳು.
ನಾನು ಕುಪಿತನಾಗಿ ಶಪಿಸುತ್ತ, ಆ ಚಿಕ್ಕ ಚೀನಿ ಹುಡುಗಿಯ ಶವದ ಕೆಳಗಿಂದ ಹೊರಕ್ಕೆ ನುಸುಳಲು ಪ್ರಯತ್ನಿಸಿದೆ. ಆದರೆ—ಕಿಟಕಿಯ ಬಳಿಯಲ್ಲಿದ್ದ ಅನಾಮಧೇಯ ಗನ್‌ಮನ್ ಮಿಂಚಿನಂತೆ ಮಾಯವಾಗಿದ್ದ.
ಹೊರಗೆ—ಕತ್ತಲೆ ಮಾತ್ರ!.
ಮುಂಭಾಗದ ಕೊಠಡಿಗೆ ಓಡಿ, ಅಲ್ಲಿದ್ದ ಫೋನ್ ಹಿಡಿದು, ‘ಡೇವ್ ಡೊನಾಲ್ಡ್ಸನ್’ ಅನ್ನು ಕರೆದೆ.
“ಡೇವ್, ಇನ್ನೊಂದು ಹತ್ಯೆ. ತಕ್ಷಣವೇ ಬಾರಯ್ಯ!.” ಎಂದು ವಿವರಿಸಿ, ಮರಳಿ ನನ್ನ ಕಾರಿನ ಕಡೆ ಹೊರಟೆ.
ಆದರೆ ಯಾರೋ ನನ್ನ ಕಾರಿನ ಚಕ್ರದ ಗಾಳಿ ತೆಗೆದಿದ್ದರು. ಛೆ! ಎಂದುಕೊಂಡು, ಸ್ಟೆಪ್ನಿ ಹಾಕಿ ಮುಗಿಸಲು ಐದು ನಿಮಿಷ ವ್ಯಯವಾಯಿತು.
ಉರಿಯುತ್ತಿದ್ದ ಕ್ರೋಧದಲ್ಲಿ ಕಾರು ಚಲಾಯಿಸುತ್ತಾ, ನನ್ನ ತಲೆ ಚಿಂತೆಯ ಚದುರಿದ ಜೇನುಗೂಡಾಗಿತ್ತು. ಹಾಗೂ ಎಲ್ಲ ವಿಚಾರಗಳನ್ನು ಜೋಡಿಸಿ ನೋಡುತ್ತಿದ್ದೆ.
ಫಾಲಿ—ನನ್ನ ಬಳಿ ಅಫೀಮು-ಡೆನ್ ಬಗ್ಗೆ ಹೇಳಬೇಕಾಗಿತ್ತು.
ಬ್ರೇ—ಅವನಿಗೂ ಪತ್ನಿಯ ಬಗ್ಗೆ ಅದೇ ವಿಷಯ ಗೊತ್ತು.
ಚೀನಿ ಹುಡುಗಿ—ಅವಳಿಗೂ ಅಫೀಮು ಕ್ಲಬ್ಬಿನ ಬಗ್ಗೆ ಮಹತ್ವದ ಮಾಹಿತಿ ಇತ್ತು.
ಫಾಲಿ—ಯಾರಿಗೂ ಹೇಳದೆ ನನ್ನನ್ನು 8 ಗಂಟೆಗೆ ಕರೆಸಿಕೊಂಡಿದ್ದಳು. ಚೀನಿ ಯುವತಿಗೂ ಹೇಳದೆ.
ಆದರೂ—ಕೊಲೆಗೈದವನು 8 ಗಂಟೆ ವೇಳೆಗೆ ನೇರವಾಗಿ ಅಲ್ಲಿಗೆ ಬಂದು ಫಾಲಿಯನ್ನು ಕೊಂದಿದ್ದ! ಮತ್ತು ಈಗ ಇವಳನ್ನೂ!
ಹಾಗಾದರೆ—ಅವನಿಗೆ ಈ ಮಾಹಿತಿ ಯಾರು ಕೊಟ್ಟರು?
ಇದಕ್ಕೆ ಉತ್ತರ ಪಡೆಯದೇ ಇದ್ದರೆ ಕೊಲೆಗಾರ ಪತ್ತೆಯಾಗುವುದೇ ಇಲ್ಲ! ಎಂದನಿಸಿತು.
ಆ ಚೈನೀಸ್ ಹುಡುಗಿ ಹೇಳಿದ್ದು ಒಂದು ಸುಳಿವು ನೆನಪಾಯಿತು:
“ ನಾನು ಮತ್ತು…ಲೈಸ್ಟ್ರಾ ಲಾʼಸೇಲ್… ಮತ್ತಿತರರು…” ಎಂದು.
ಈ ಲೈಸ್ಟ್ರಾ ಲಾʼಸೇಲ್ ಎಂಬ ಹೆಣ್ಣು—ಕಾಸ್ಮೋಟೋನ್ ಸ್ಟುಡಿಯೋದ ಮೊದಲ ಶ್ರೇಣಿಯ ನಟಿ. ಹಳೆಯ ದಿನಗಳಲ್ಲಿ ಅವಳೊಂದಿಗೆ ಎರಡು-ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದೆ. ಆದರೆ ಈಗಿನ ದಿನಗಳಲ್ಲಿ ಅವಳನ್ನು ನೋಡಿರಲಿಲ್ಲ— ಬೆಳ್ಳಿತೆರೆಯಲ್ಲಿ ಹೊರತುಪಡಿಸಿ.
ಆಕೆಯೂ ಅಫೀಮು ವ್ಯಸನಿಗಳಲ್ಲಿ ಇದ್ದಿರಬಹುದಾ? — ಅವಳಿಂದ ಕೆಲವು ಸುಳಿವು ಸಿಗಬಹುದು.
ಫೋನ್ ಇಲ್ಲದ ಜಾಗದಲ್ಲಿ ಈಗ ನನ್ನ ಕಾರು ಹೋಗುತ್ತಿತ್ತು. ಆಗ ಅಕಸ್ಮಾತ್ತಾಗಿ—
ಮ್ಯಾಕ್ ಮಾರ್ಟಿನ್ ಮನೆ ಹತ್ತಿರವೇ ಇದ್ದುದೇ ನೆನಪಾಯ್ತು.
ಅವನು ಕಾಸ್ಮೋಟೋನ್‌ನ ಎಕ್ಸೆಕ್ಯೂಟಿವ್ ಆಗಿದ್ದ. ಲೈಸ್ಟ್ರಾಳ ವಿಳಾಸ ತಿಳಿದಿರಬಹುದೇನೋ?.
ಅವನ ಮನೆಗೆ ಕಾರು ತಿರುಗಿಸಿದೆ. ಬಾಗಿಲು ತಟ್ಟಿದೆ.
ಅವನೇ ಬಾಗಿಲು ತೆರೆದ, “ಹಲೋ ಷೈಲಾಕ್” ಎಂದ. ಅವನೀಗ ಕಿವಿಯಂತ್ರ ಧರಿಸಿರಲಿಲ್ಲ
“ಲೈಸ್ಟ್ರಾ ಲಾʼಸೇಲ್‌ರ ವಿಳಾಸ ಬೇಕು,” ಎಂದೆ ನಿಧಾನವಾಗಿ.
ಅವನು ನನ್ನ ತುಟಿಗಳನ್ನು ಓದಿ, ಕ್ರೆನ್‌ಶಾ ಮುಖ್ಯರಸ್ತೆಯ ಒಂದು ವಿಳಾಸ ಕೊಟ್ಟ.
“ಲೈಸ್ಟ್ರಾಗೆ ಯಾವುದಾದರೂ ತೊಂದರೆಯಾಗಿದೆಯೆ?” ಎಂದು ಕೇಳಿದ. ಅವನಿಗೆ ಯಾವ ಕೊಲೆಯ ವಿಷಯವನ್ನೂ ಹೇಳುವುದು ನನಗಾಗ ಬೇಡವಾಗಿತ್ತು.
“ನಂತರ ಹೇಳ್ತೀನಿ,” ಎಂದಷ್ಟೇ ಹೇಳಿ, ಕಾರಿಗೆ ಹಾರಿ, ಕ್ರೆನ್‌ಶಾ ಬೂಲೆವಾರ್ಡ್ ಕಡೆ ಹೊರಟೆ.
ಅವಳ ಮನೆ- ಎರಡು ಮಹಡಿಯ ಬೃಹತ್ ಮ್ಯಾನ್ಷನ್. ಮನೆ ಮುಂಭಾಗದ ಡ್ರೈವ್‌ವೇಯಿಂದ ಒಂದು ಕಪ್ಪು ಸೆಡಾನ್ ಹೊರಹೋಗುತ್ತಿತ್ತು. ಡ್ರೈವರ್ ಮುಖ ನೋಡಿದೊಡನೆ—
ಎದೆ ಝಲ್ಲೆಂದಿತು. ಅವನು—ಫೆನಿಮೋರ್ ಬ್ರೇ!
ಅವನು ಲೈಸ್ಟ್ರಾ ಮನೆಗೆ ಏಕೆ ಬಂದಿದ್ದ?
ನಾನು ಬಾಗಿಲು ತಟ್ಟಿ ಒಳಹೋದೆ.
ಅವಳು ಮಿರ್ರರ್ ಮುಂದೆ ಕೂತಿದ್ದಳು—ಕಪ್ಪು ಕೂದಲು ಬದಿಗೆ ತೂಗಿದ್ದಳು, ಬಿಳಿ ಚರ್ಮಕ್ಕೆ ತೀವ್ರ ವ್ಯತ್ಯಾಸದಂತೆ. ಹಳೆಯ ಕಾಲದ ಸೌಂದರ್ಯ ಇನ್ನೂ ಇತ್ತು, ಆದರೆ ಕಣ್ಣುಗಳ ಕೆಳಗೆ ಕಪ್ಪು ವಲಯಗಳು—ಆದರೂ ಮೋಸವಿಲ್ಲ.
ನನ್ನನ್ನು ನೋಡುತ್ತಿದ್ದಂತೆ—ಅವಳ ಮೊಗ ಅರಳಿತು. ಅಚ್ಚರಿ, ಬಳಿಕ ನಗು:
“ಡ್ಯಾನ್ ಟರ್ನರ್! ಬಹಳ ದಿನ ಆಯ್ತು!”
“ನಿಜ. ಮಾತಾಡೋಣವೇ, ನನ್ನನ್ನು ಮರೆತಿಲ್ಲದಿದ್ದರೆ?” ಎಂದು ಮುಗುಳ್ನಕ್ಕೆ. ಅವಳದೂ ನನ್ನದು ಸ್ವಲ್ಪ ಹಳೆಯ ಪ್ರಣಯ, ಇನ್ನೂ ನೆನೆಪಿದ್ದೀತು!
“ನಿನ್ನ ಜೊತೆ ಸಲಿಗೆ ತಾನೆ?” ಎಂದು ಬಂದವಳೇ ಸೀದಾ ಅಪ್ಪಿಕೊಂಡಳು. ಅವಳು ಬೇಗ ಬಿಡವೊಲ್ಲಳು, ಹಾಗೂ ಬಿಡಿಸಿಕೊಂಡೆ ಅನ್ನಿ.
“ಹೇಳು- ನಿನಗೇನು ಬೇಕು?” ಕೇಳಿದಳು.
ನಾನು ತಗ್ಗಿ, ನಿಧಾನವಾಗಿ:
“‘ಅಫೀಮು ಸ್ಮೋಕ್ ಬೇಕು.”
ಅವಳು ಬೆಚ್ಚಿದವಳಂತೆ:
“ನೀನು ಕೂಡ ಆ…?”
“ಹೌದು. ನನ್ನ ಚೈನೀಸ್ ಡೆನ್ನನ್ನು ಪೋಲೀಸ್ ರೈಡ್ ಮಾಡಿದ್ದಾರೆ. ಹೊಸ ಜಾಗ ಹುಡುಕಬೇಕು.”
“ಇದು ಒಳ್ಳೆಯ ಸಂಯೋಗ, ಈಗ ತಾನೆ ಫೆನಿಮೋರ್ ಬ್ರೇ ಬಂದು ಅದನ್ನೇ ಕೇಳುತ್ತಿದ್ದ,” ಎಂದಳು.
ಮೈಯೆಲ್ಲ ಕಿವಿಯಾಯಿತು, “ಏನಂತೆ? ಎಂದು ಅಚ್ಚರಿಯಿಂದ ಕೇಳಿದೆ.
“ಅವನ ಮಾಜಿ ಹೆಂಡತಿ ಫಾಲಿ ಎಲ್ಲಿಗೆ ಹೋಗುತ್ತಾಳೆ, ಅಫೀಮು ಕುಡಿಯಲು ಎಂದ... ನಾ ಹೇಳಲಿಲ್ಲ.”
“ಓಹ್!”
“ನಿನಗೆ ನಿಜವಾಗಿಯೂ ಅಂತಹ ಪೈಪ್ ಬೇಕು ಅಂದ್ರೆ—ನಿನ್ನನ್ನು ಕರೆದೊಯ್ಯುತ್ತೇನೆ,” ಎಂದಳು.
ಅವಳು ತಕ್ಷಣ ಗೌನ್ ಧರಿಸಿಕೊಂಡು, ಜೊತೆಗೆ ಬರಲು ಸಿದ್ಧಳಾದಳು. ನನ್ನ ಕಾರಿನಲ್ಲಿ ಸನ್ಸೆಟ್ ಬೂಲೇವಾರ್ಡ್ ಪ್ರದೇಶಕ್ಕೆ ಹೋದೆವು, ಒಂದು ಹಳೆಯ ಬಿಳಿ ಮನೆ ಮುಂದೆ ನಿಲ್ಲಿಸಿದೆವು.
ಅವಳು ಬಾಗಿಲು ತಟ್ಟಿದಳು.
ಒಬ್ಬ ಚೈನೀಸ್ ಮೇಡ್ ಬಂದಳು:
“ಹೀಗೆ ಬನ್ನಿ, ಮಿಸ್ ಲಾ ಸೇಲ್.”
ಒಳಕ್ಕೆ ಹೋದೆವು.
ಆ ಮನೆಯೊಳಗಿನ ವಾತಾವರಣ—ಅಫೀಮು ಹೊಗೆ ವಾಸನೆಯಿಂದ ತುಂಬಿತ್ತು. ಕಷ್ಟಪಟ್ಟು ಸಹಿಸಿಕೊಂಡೆ.
ಒಂದು ಕೊಠಡಿಯೊಳಗೆ—ಸೋಫಾಗಳ ಮೇಲೆ ಕೆಲವು ನಟರು, ನಟಿಯರು—ಹಾಲಿವುಡ್ ಮಹಾಶಯರು—ಎಲ್ಲರೂ ಅಫೀಮು ಸೇದಿ ಅಮಲಿನ ಕನಸು ಕಾಣುತ್ತಿದ್ದರು.
ಮತ್ತೊಂದು ದ್ವಾರ ತೆರೆದಿತ್ತು.
ಮೇಡ್: “ಇಲ್ಲಿ, ಮ್ಯಾಡಂ.” ಎಂದಳು
ಒಂದು ಲೋಹದ ಮಿಂಚು ಕಂಡೆ. ಕ್ಷಣಾರ್ಧದಲ್ಲಿ,
ಲೈಸ್ಟ್ರಾ ಹಾ! ಎನ್ನುತ್ತಾ ಕುಸಿದು ಧರಾಶಾಯಿಯಾದಳು. ಯಾರೋ ಅವಳ ತಲೆಗೆ ಹೊಡೆದಿದ್ದರು. ಬಲವಾದ ರಕ್ತಸ್ರಾವವಾದ ಪೆಟ್ಟು.
ನನ್ನ ಮುಂದೊಂದು ಗನ್ ಕಂಡಿತು!
ಅವನು ಮುಚ್ಚಿದ ಮುಸುಕಿನ ಮುಖದ ಬಲಶಾಲಿ ಕೈಗಳ ಮನುಷ್ಯ.
“ಸ್ವಾಗತ, ಟರ್ನರ್. ನನ್ನ ‘ಸ್ಟಾರ್-ಚೇಂಬರ್’ಗೆ—ತಾರೆಯರು ಕನಸು ಕಾಣುವ ಕೊಠಡಿಗೆ, ಆದರೆ ಡಿಟೆಕ್ಟಿವ್‌ಗಳು ಸಾಯುವ ಜಾಗಕ್ಕೆ” ಎಂದ. ಸ್ಟಾರ್ ಚೇಂಬರ್- ಆ ದರಿದ್ರ ಮಾದಕ ದ್ರವ್ಯ ಸೇವನೆಯ ಅಡ್ಡಾಗೆ ಇಟ್ಟ ಹೆಸರು.
ನನಗೆ ತಿಳಿದಿತ್ತು—ಇಲ್ಲಿ ನಾನು ಒಂದು ತಪ್ಪು ಹೆಜ್ಜೆ ಹಾಕಿದರೆ ಸಾಕು. ನನಗೆ ಶಾಶ್ವತ ನಿದ್ರೆ ಮಾಡಲು ಕಳಿಸುತ್ತಾನೆ!
ಅವನ ಗನ್ ನೇರವಾಗಿ ನನ್ನ ಹೃದಯಕ್ಕೆ.
ನನಗೆ ಒಂದು ಮಾತ್ರ ಅವಕಾಶ—ಅವನು ಗುಂಡು ಹಾರಿಸದೇ ಇರಬಹುದು, ಸದ್ದಾದರೆ ತಪ್ಪಿಸಿಕೊಳ್ಳಲಾರ!
ಅವನು ಬಹುಶಃ, ನನ್ನನ್ನೂ ಲೈಸ್ಟ್ರಾ ಹಾಗೆ ತಲೆಗೆ ಬಡಿದು ಬೀಳಿಸಲು ಯತ್ನಿಸಬಹುದಿತ್ತು.
ನಾನು ಒಂದು ಕೊನೆ ಯತ್ನ ಮಾಡಿದೆ:
“ನನ್ನನ್ನು ಕೊಲ್ಲೋದು ಏಕೆ, ಮಿಸ್ಟರ್?” ಎಂದೆ.
“ನಿನಗೆ ತುಂಬಾ ರಹಸ್ಯ ಗೊತ್ತಾಗಿಬಿಟ್ಟಿದೆ!”
“ಹೌದು! ನಾನು ಎಲ್ಲ ಅರಿತುಕೊಂಡೆ, ಮಿಸ್ಟರ್ ಫೆನಿಮೋರ್ ಬ್ರೇ!! ನಿನ್ನ ಮಾಜಿ ಹೆಂಡತಿ ಫಾಲಿಯನ್ನೂ ನೀನೇ ಕೊಂದಿದ್ದೀಯೆ. ಅವಳು ನಿನ್ನ ಅಫೀಮು ಕ್ಲಬ್ಬಿನ ರಹಸ್ಯ ಹೇಳೋಕೆ ಬಂದಿದ್ದಳು. ನೀನೇ ಅವಳ ಕತ್ತು ಹಿಸುಗಿದೆ.” ಎಂದು ಬ್ಲಫ್ ಹೊಡೆದೆ.
ಅವನಿಗೆ ಆ ಹೆಸರು ಕೇಳಿ ಖಂಡಿತಾ ಶಾಕ್ ಆಯ್ತು.
“ಏನು—?”
ಅವನು ಜೋರಾಗಿ ಬೈದು—ಗನ್ ತಿರುಗಿಸಿ ಬುರುಡೆಗೆ ಹೊಡೆಯಲು ಮುಂದಾದ.
ಅದೇ ನನಗೆ ಬೇಕಾಗಿದ್ದ ಅರೆಕ್ಷಣ!
ನಾನು ಪಕ್ಕಕ್ಕೆ ಜಿಗಿದು ಎದುರಿನ ಗಾಜಿನ ಕಿಟಕಿ ಒಡೆದು—
ಹೊರಗೆ ಕತ್ತಲಲ್ಲಿ ದೊಪ್ಪನೆ ಬಿದ್ದೆ!
ಗಾಜು, ಚೌಕಟ್ಟು—ಎಲ್ಲವೂ ಚೂರುಚೂರಾದವು!
---------------
ನಾನು ಬೆನ್ನಿನ ಮೇಲೆ ಬಿದ್ದು—ಒಂದು ಹಿತ್ತಲಲ್ಲಿ ಒದ್ದಾಡುತ್ತಿದ್ದೆ.
ನೋವಿನಿಂದ ಮುಖ ಸಿಂಡರಿಸಿ ಎದ್ದೇಬಿಟ್ಟೆ.
ಅಲ್ಲಿ ಚಿಕ್ಕ ಗೇಟ್ ಇತ್ತು—ಆ ಕಟ್ಟೆಯನ್ನು ದಾಟಿ, ಕತ್ತಲೆಯ ಗಲ್ಲಿಯೊಳಗೆ ಓಡಿದೆ.
ಅಲ್ಲಿ ಹತ್ತಿರದಲ್ಲಿ ಯಾವುದೋ ಡ್ರಗ್‌ಸ್ಟೋರ್ ಇತ್ತು.
ನಾನು ಒಳಗೆ ನುಗ್ಗಿ, ಫೋನ್‌ಬೂತ್‌ಗೆ ಹಾರಿ—ಒಂದು ನಾಣ್ಯ ಹಾಕಿ, ಡೇವ್ ಡೊನಾಲ್ಡ್ಸನ್‌ಗೆ ಕರೆ ಮಾಡಿದೆ:
“ಡೇವ್! ತಕ್ಷಣ—ಸನ್‌ಸೆಟ್ ಮತ್ತು ಮಾಲ್ಟ್‌ಮನ್‌ಗೆ ಬಾ! ವೇಗವಾಗಿ! ನಾವು ದೊಡ್ಡ ಕೆಲಸ ಮಾಡಬೇಕಿದೆ!”
ಸುಮಾರು ಹನ್ನೆರಡು ನಿಮಿಷಗಳಲ್ಲಿ ಅವನು ಬಂದುಬಿಟ್ಟ.
ಅವನ ಕಾರು ಸಂಪೂರ್ಣ ನಿಲ್ಲುವ ಮೊದಲೇ—ಅದರೊಳಗೆ ನುಗ್ಗಿ ಕುಳಿತೆ.
ಅವನು ಗಾಡಿ ಚಾಲನೆ ಮಾಡುತ್ತಿದ್ದಾಗ— ನಾನು ಆಗಲೇ ಫೆನಿಮೋರ್ ಬ್ರೇಯ ವಿಳಾಸವನ್ನು ಫೋನ್ ಡೈರೆಕ್ಟರಿ ನೋಡಿ ತೆಗೆದುಕೊಂಡಿದ್ದೆ.
“ಡೇವ್—ಬ್ರೇಕ್ ಒತ್ತಬೇಡ, ದೇವರೇ ದಿಕ್ಕು, ಓಡಿಸು!” ಎಂದೆ.
ಅವನು ಮಾತೇ ಇಲ್ಲದೆ ಗಾಡಿಯನ್ನು ರಾಕೆಟ್ಟಿನಂತೆ ಓಡಿಸಿದ. ಸಿಗ್ನಲ್ ಎಲ್ಲವನ್ನೂ ಜಂಪ್ ಮಾಡಿದ.
________________________________________
ಕೇವಲ ಕೆಲವು ನಿಮಿಷಗಳಲ್ಲಿ—ನಾವು ಬ್ರೇನ ಮನೆ ಮುಂದೆ ನಿಲ್ಲಿಸಿದ್ದೆವು.
ಅದರ ಮೊದಲು—ಮತ್ತೊಂದು ಕಾರು ಅಲ್ಲಿ ನಿಂತಿತ್ತು.
“ಬಾ!” ಎಂದು ಡೇವ್ ಕೈ ಹಿಡಿದು, ಓಡಿದೆ..
ಮುಂಭಾಗಕ್ಕೆ ಓಡುತ್ತಿದ್ದಷ್ಟರಲ್ಲಿ—ಒಂದು ಗುಂಡಿನ ಸದ್ದು!
ಡಿಶ್ಕ್ಯೂ!
ಬಾಗಿಲು ಜೋರಾಗಿ ಒಡೆದು ಒಳಗೆ ನುಗ್ಗಿದೆವು. ಬೆಡ್‌ರೂಮ್ ಬಾಗಿಲು ತೆರೆಯಿತು.
ಬ್ರೇ—ಹಾಸಿಗೆಯ ಮೇಲೆ—ವಕ್ರವಾಗಿ ಸತ್ತು ಬಿದ್ದಿದ್ದ!.
ಹಾಗಾದರೆ ಅಲ್ಲಿದ್ದ ಅವನು?
ಬ್ರೇ ತಲೆಗೆ ಗುಂಡು ಬಿದ್ದಿದೆ. ಗನ್ ಅವನ ಕೈ ಹತ್ತಿರ. ಪಕ್ಕದಲ್ಲಿ—ಕಪ್ಪು ಹುಡ್ ಮಾಸ್ಕ್.
ಡೇವ್ ಬೆಚ್ಚಿ:
“ಅಯ್ಯೋ! ಆತ್ಮಹತ್ಯೆ! ಹಾಗಾದರೆ ನಿಮಗೆ ಗೊತ್ತೇ—ಅವನೇ ಪತ್ನಿಯ ಕೊಲೆಗಾರ!”
“ಛೆ-ಛೇ, ಖಂಡಿತಾ ಅಲ್ಲ!” ಎಂದು ನಾನು ಕೂಗಿ, ಬಾತ್‌ರೂಮ್ ಕಡೆ ಓಡಿದೆ.
ಅಲ್ಲಿ—ಒಬ್ಬ ವ್ಯಕ್ತಿ ಕಿಟಕಿಯಿಂದ ಹೊರಹೋಗಲು ಯತ್ನಿಸುತ್ತಿದ್ದ.
ಡೇವ್ ಒಡನೆಯೆ ತನ್ನ .38 ರಿವಾಲ್ವರ್ ತೆಗೆದು—ಎರಡು ಶಾಟ್ ಹಾರಿಸಿದ.
ಆ ಮನುಷ್ಯ ಉಸ್ಸ್ ಎಂದು ಹಿಂದಕ್ಕೆ ಬಿದ್ದ, ರಕ್ತ ಕಾರುತ್ತಾ.
ಅವನು—ಮ್ಯಾಕ್ ಮಾರ್ಟಿನ್!
________________________________________
ನಾನು ಅವನ ಕಡೆ ನೋಡುತ್ತಾ: “ನಿನ್ನ ಆಟ ಮುಗಿತು, ಮಾರ್ಟಿನ್.”
ಅವನು ನರಳುತ್ತಾ,
“ಡ್ಯಾಮ್… ಯೂ…” ಎಂದುಸುರಿದ. ಡೇವ್ ಹೊಡೆದ ಬುಲೆಟ್ಸ್ ಅವನ ಶ್ವಾಸಕೋಶವನ್ನು ಛೇದ ಮಾಡಿತ್ತು.
ನಾನು ಮುಂದುವರಿಸಿದೆ:
“ಹೇಂಪ್‌ಸ್ಟೆಡ್ ಸ್ಟುಡಿಯೋದಿಂದ ನಿನ್ನನ್ನು ತೆಗೆದುಹಾಕಿದಾಗ—ನೀನು ಪ್ರತೀಕಾರಕ್ಕಾಗಿ ಹಾತೊರೆದೆ, ಹೌದಾ?”
ಅವನು ಉತ್ತರಿಸಲು ಬಾಯಿ ತೆರೆದ, ಆದರೆ ರಕ್ತ ಕಕ್ಕಿದ.
“...ನೀನು ಗುಪ್ತವಾಗಿ ಆ ಹೊಸ ಅಫೀಮು ಅಡ್ಡಾ - ಸ್ಟಾರ್ ಚೇಂಬರ್ ಆರಂಭಿಸಿದೆ. ಕಾಸ್ಮೋಟೋನ್ ಸಂಸ್ಥೆಯ ನಟ–ನಟಿಯರನ್ನು—ಸ್ಟಾರ್‌ಗಳನ್ನೆಲ್ಲ—ಡ್ರಗ್ ವ್ಯಸನಿಗಳನ್ನಾಗಿ ಮಾಡಿಬಿಟ್ಟೆ, ದುಷ್ಟ! ಅವರ ವೃತ್ತಿ ನಾಶವಾಗಿ ಎಲ್ಲ ಕಳಂಕ ಬರಲಿ ಅನ್ನೋ ದುರಾಲೋಚನೆ! ಮತ್ತು ನೀನು—ಫಾಲಿಯ ಜೊತೆ ಪ್ರೀತಿಯ ನಾಟಕವಾಡುತ್ತಾ—ಅವಳಿಗೂ ‘ಮಾದಕ ವ್ಯಸನ’ದ ಗೀಳು ಹತ್ತಿಸಿದೆ. ಅದು ನಿನ್ನ ದೊಡ್ಡ ಪ್ರತೀಕಾರ—ತಂದೆ ಹೇಂಪ್‌ಸ್ಟೆಡ್‌ರ ವಿರುದ್ಧ!”
ಡೇವ್, “ಅಯ್ಯೋ ಹಾಳಾದವನೆ!” ಎಂದ ಅವನತ್ತ.
ನಾನೆಂದೆ: “ಹೌದು. ಫಾಲಿಗೆ ಯಾವಾಗಲೋ ನಿನ್ನ ಈ ಧೂರ್ತ ಕೆಲಸಗಳೆಲ್ಲ ಗೊತ್ತಾಯಿತು. ಅವಳು ನಿನ್ನ ಆಟ ಬಯಲು ಮಾಡಲೆಂದು—ನನ್ನ ಜೊತೆ ರಹಸ್ಯ ಭೇಟಿ ಯೋಜಿಸಿದಳು...
“...ಅದಕ್ಕಿಂತ ಮೊದಲು ನೀನೇ ಹೋಟೆಲಿಗೆ ಬಂದು ಅವಳನ್ನೇ ಮೊತ್ತಮೊದಲಿಗೆ ಕೊಂದುಬಿಟ್ಟೆ. ಇನ್ನು ಆ ಚೈನೀಸ್ ಹುಡುಗಿ ಓಡಿಬಿಟ್ಟಳು— ಅವಳೆಲ್ಲಿ ಸತ್ಯ ಹೇಳುತ್ತಾಳೋ ಎಂದು ಎಂದು ಅವಳನ್ನು ಕೊಲ್ಲಬೇಕಿತ್ತು...ಅವಳು ಕೊನೆಯ ಕ್ಷಣದಲ್ಲಿ ನಿನ್ನ ಬಗ್ಗೆ ನನಗೆ ಹೇಳುತ್ತಿರುವಷ್ಟರಲ್ಲಿ— ನೀನು ಕಿಟಕಿಯಿಂದ ಗುಂಡು ಹಾರಿಸಿದೆ....”
ಮಾರ್ಟಿನ್ ತನ್ನ ಗುಟ್ಟು ರಟ್ಟಾಯಿತೆಂದು “ನೀನು... ಒಬ್ಬ...” ಎಂದೇನೋ ಶಪಿಸಿದ.
“ಮತ್ತೆ—ಆ ಲೈಸ್ಟ್ರಾ ಲಾʼಸೇಲ್—ಅದು ನನ್ನ ತಪ್ಪು. ನೀನೆಂದು ತಿಳಿಯದೇ ಅವಳ ವಿಳಾಸವನ್ನು ನಿನ್ನ ಬಳಿಯೇ ಕೇಳಿದ್ದೆ. ಅವಳು ನಿನ್ನ ಅಫೀಮು ಜಾಯಿಂಟ್‌ಗೆ ನನ್ನನ್ನು ತೆಗೆದುಕೊಂಡು ಹೋಗಬಹುದು ಅಂತ ಭಾವಿಸಿ—ಅಲ್ಲೇ ಕಾದಿದ್ದು ಅವಳನ್ನೂ ನೀನು ಹೊಡೆದು ಬೀಳಿಸಿದೆ!”
________________________________________
ಡೇವ್ ಶಾಕ್ ಆಗಿ “ಇಷ್ಟೆಲ್ಲಾ… ಇವನೇ ಮಾಡಿದ್ದಾ?”
ನಾನು ವಿಷಾದದಿಂದ ತಲೆಯಾಡಿಸಿದೆ.
“ಹೌದು. ಆಗ ನನ್ನ ಬುದ್ದಿ ಓಡಿತು... ನಾನು ಇವನಿಗೆ ಟ್ರ್ಯಾಪ್ ಹಾಕಿದೆ.
ನಾನು ತಪ್ಪಾಗಿ ಬೇಕಂತಲೇ ಬ್ರೇ ಹೆಸರಿಡಿದು ಕೂಗಿ ಅವನ ಮೇಲೆ ಶಂಕೆ ಇದ್ದಂತೆ ನಾಟಕ ಮಾಡಿ ತಪ್ಪಿಸಿಕೊಂಡು ಬಂದೆ... ಇವನು ಗೊಂದಲದಲ್ಲಿ ಸಿಕ್ಕಿಬಿದ್ದ. ನಾನಲ್ಲಿಂದ ತಪ್ಪಿಸಿಕೊಂಡಾಕ್ಷಣ—ಇವನಿಗೆ ಗೊತ್ತಾಗಿತ್ತು:
ಬ್ರೇನನ್ನು ಕೊಂದು—ಗನ್, ಮಾಸ್ಕ್ ಎಲ್ಲ ಸಾಕ್ಷ್ಯವನ್ನೂ ಪಕ್ಕದಲ್ಲಿ ಬಿಟ್ಟು ಅದನ್ನು ಆತ್ಮಹತ್ಯೆ ಎಂದು ರೂಪಿಸಲು ನೋಡಿದ. ಆದರೆ ನಾವು ಬರಲು ಸ್ವಲ್ಪ ತಡವಾದೆವು. ಇಲ್ಲದಿದರೆ ಇಲ್ಲಿ ಬ್ರೇನನ್ನು ಬದುಕಿಸಬಹುದಾಗಿತ್ತು,. ಈಗ ನೀನಂತೂ ಸತ್ತೇ ಸಾಯುತ್ತೀಯೆ, ಮಾರ್ಟಿನ್!.. ಅಷ್ಟು ಶಿಕ್ಷೆ ಸಾಕು ನಿನಗೆ, ನೀಚ!...”.
ಮಾರ್ಟೀನ್ ಕಂಗಳು ಮುಚ್ಚಿದ್ದವು.
“ಡೇವ್, ನಿನಗೆ ಗೊತ್ತೆ?” ಎಂದು ಅವನತ್ತ ತಿರುಗಿದೆ. “ಇವನು ಅರೆ ಕಿವುಡ, ಯಂತ್ರ ಹಾಕುತ್ತಿದ್ದ... ಆದರೆ ತುಟಿ ಚಲನೆ ಓದಬಲ್ಲ. ಇವನು ಅಲ್ಲಿ ರೇಸ್ ಟ್ರ್ಯಾಕಿನಲ್ಲಿ ಬೈನಾಕ್ಯುಲರ್ ಇಟ್ಟುಕೊಂಡು ಫಾಲಿ ನನ್ನ ಜೊತೆ ಮಾತಾಡುವುದನ್ನು ನೋಡಿರಬೇಕು. ಅದನ್ನು ಅರಿತುಕೊಂಡು, ಆ ಹೋಟೆಲಿಗೆ ನನಗೂ ಮುಂಚೆ ತಲುಪಿ, ಕೊಲೆ ಮಾಡಿಬಿಟ್ಟ ಅನಿಸುತ್ತದೆ... ಅಲ್ಲವೆ?”
ಆದರೆ ಉತ್ತರ ಕೊಡುವ ಸ್ಥಿತಿಯಲ್ಲಿ ಮಾರ್ಟೀನ್ ಇರಲಿಲ್ಲ, ಕುಟುಕು ಜೀವವಾಗಿತ್ತು.
ನಾವು ಅತ್ತ ಹಾಸಿಗೆಯತ್ತ ನೋಡಿದೆವು.
ಮಾಜಿ ಪತಿ ಬ್ರೇ—ಶಾಂತವಾಗಿ, ಜೀವವಿಲ್ಲದೆ ಮಲಗಿದ್ದ.
ಅವನು ನಿಜಕ್ಕೂ ಫಾಲಿಯನ್ನು ಪ್ರೀತಿಸುತ್ತಿದ್ದ.
ಕೊನೆಯಲ್ಲಿ—ಅವನ ಮೇಲೆಯೇ ತಪ್ಪು ಅಪರಾಧ ಹೊರೆಸಲು ಪ್ರಯತ್ನ ಮಾಡಿದ್ದ ಆಕೆಯ ಈ ಹೊಸ ಪ್ರೇಮಿ - ಮಾರ್ಟಿನ್.
ಮಾರ್ಟಿನ್ ಸಹ ಕೆಲ ಕ್ಷಣಗಳಲ್ಲಿ ಹೋರಾಟ ಮರೆತು ತನ್ನ ವಿಧಿಯನ್ನು ಒಪ್ಪಿಕೊಂಡ, ಅಥವಾ ಅದೇ ಅವನನ್ನು ಅಪ್ಪಿಕೊಂಡಿತು ಎನ್ನಬಹುದು.
ಡೇವ್ ಆಗ ಶವವಾಹನ, ವೈದ್ಯರ ವ್ಯವಸ್ಥೆ ಮಾಡಲು ಹೊರಟು ನಿಂತ.
ನನಗೆ ನೆನಪು ಬಂದು ಕೂಗು ಹಾಕಿದೆ. “ಡೇವ್, ಒಬ್ಬ ವೈದ್ಯರನ್ನು ಲೈಸ್ಟ್ರಾ ಬಿದ್ದಿದ್ದಾಳಲ್ಲ, ಅಲ್ಲಿಗೂ ಕಳಿಸು. ಹೇಗೋ ಅವಳಾದರೂ ಉಳಿದುಕೊಂಡಾಳು!”
________________________________________
ಡೇವ್ ಅದೆಲ್ಲ ವ್ಯವಸ್ಥೆ ಮಾಡಿ ಬಂದು ಮೆಲ್ಲಗೆ ಹೇಳಿದ:
“ನಾನು ಈ ಎಲ್ಲದರ ವರದಿ ಬರೆಯಬೇಕು. ಕಾಸ್ಮೋಟೋನ್ ಜನರಿಗೆ, ಪತ್ರಿಕೆಗೆ, ಪೊಲೀಸರಿಗೆ, ಜನರಿಗೆ—ನಿಜವಾದ ಕಥೆ ಬೇಕು.”
ನಾನು ಅವನ ಭುಜಕ್ಕೆ ಕೈ ಹಾಕಿದೆ:
“ಹೇಗಾದರೂ ಸರಿ—ಎಲ್ಲರೂ ತಿಳಿಯೋದು ಒಳ್ಳೆಯದು. ಹಾಲಿವುಡ್‌ನ ಹೊಳಪಿನ ಹಿಂದೆ ಇರುವ ಕತ್ತಲೆಯನ್ನೂ ಜನ ಕಾಣಬೇಕು.”
ನಾನು ಬಾಗಿಲು ಹತ್ತಿರ ನಿಂತು—
ಕೊನೆಯ ಬಾರಿ ಮಾರ್ಟಿನ್‌ನ ದೇಹದತ್ತ ನೋಡಿದೆ.
ಅಮಾಯಕ ಪತಿ, ಅವನ ಮಡಿದ ಮಡದಿ, ಚೀನೀ ಸಹಾಯಕಿ...
ಈ ಎಲ್ಲರ ಜೀವವನ್ನೂ ತೆಗೆದು ತಾನೂ ಸೇಡಿನ ಬೆಂಕಿಯಲ್ಲಿ ದಹಿಸಿಹೋಗಿದ್ದ.
ಈ ಬೆಳ್ಳಿತೆರೆಯ ನಗರದ ಜಗಮಗಿಸುವ ದೀಪಗಳ ಹಿಂದೆ— ಇದೆ...
ಕತ್ತಲೆಯ ಸ್ಟಾರ್-ಚೇಂಬರ್.
ನಾನು ಹಾಲಿವುಡ್‌ನ ಕತ್ತಲೆ ರಾತ್ರಿಯಲ್ಲಿ ಮನೆಯತ್ತ ಹೊರಟೆ.
(ಮುಗಿಯಿತು)






Comments