top of page

ಅಣ್ಣಾ ಸೆಂಟಿನರಿ ಲೈಬ್ರರಿ ಎಂಬ ಪುಸ್ತಕಪ್ರೇಮಿಗಳ ಸ್ವರ್ಗ!

ಏಷ್ಯಾದ ಅತಿ ದೊಡ್ಡ ಗ್ರಂಥಾಲಯ....ಪುಸ್ತಕಪ್ರೇಮಿಗಳ ಸ್ವರ್ಗ: ಚೆನ್ನೈನಲ್ಲಿ ನೀಗಿಸಿಕೊಳ್ಳಿ ಜ್ಞಾನದಾಹ :-

ಪರಿಚಯ:

ಒಂಬತ್ತು ಮಹಡಿಗಳ ಹವಾನಿಯಂತ್ರಿತ ಪರಿಸರ ಸ್ನೇಹಿ ‘ಗ್ರೀನ್ ಬಿಲ್ಡಿಂಗ್’ ದರ್ಜೆಯದೆಂಬ ಖ್ಯಾತಿಯ ಬೃಹತ್ ಕಟ್ಟಡ!...ಸಂಪೂರ್ಣವಾಗಿ ಕಂಪ್ಯೂಟರುಗಳಲ್ಲಿ ಪುಸ್ತಕಗಳ ದಾಖಲೆಯನ್ನು ‘ಹುಡುಕಬಲ್ಲ’ (ಸರ್ಚಬಲ್) ಡೇಟಾ ಬೇಸ್!...ಐದೂವರೆ ಲಕ್ಷ ವೈವಿಧ್ಯಮಯ ಪುಸ್ತಕಗಳ ಅದ್ವಿತೀಯ ಭಂಡಾರ!...ಎಲ್ಲ ಬಗೆಯ ಸಾರ್ವಜನಿಕ ಸೌಲಭ್ಯಗಳು!...

ಯಾವುದೋ ಸಿಂಗಾಪೂರ್, ಚೀನಾ ದೇಶದ ಪ್ರಖ್ಯಾತ ಗ್ರಂಥಾಲಯದ ಬಗ್ಗೆ ಹೇಳುತ್ತಿದ್ದೇನೆಂದುಕೊಂಡಿರಾ?

ಅಲ್ಲ, ನಾನು ಪ್ರಸ್ತಾಪಿಸುತ್ತಿರುವುದು ಚೆನ್ನೈ ನಗರದ ತಮಿಳ್ನಾಡು ಸರಕಾರದ ಅಣ್ಣಾ ಸೆಂಟಿನರಿ ಲೈಬ್ರರಿ ಬಗ್ಗೆ.

ಇದನ್ನು ಸ್ಥಾಪಿಸಲು ಮನಸ್ಸು ಮಾಡಿ ೧೭೦ ಕೋಟಿ ರೂ. ಸರಕಾರಿ ಬಜೆಟ್ಟಿನಲ್ಲಿ ೮ ಎಕರೆ ಜಮೀನನ್ನು ನಗರದ ಹೃದ್ಯಭಾಗದ ಕೊಟ್ಟೂರುಪುರಂ ಅಣ್ಣಾ ವಿಶ್ವವಿದ್ಯಾಲಯದ ಕಾಲೇಜು ಕ್ಯಾಂಪಸ್ಸಿನ ಪಕ್ಕದಲ್ಲೇ ಒಂದು ಅಭೂತಪೂರ್ವ ಕನಸಿನ ಮಹಲನ್ನು ನನಸಾಗಿಸಿ ಸಾರ್ವಜನಿಕರಿಗೆ ಧಾರೆಯಿತ್ತವರು ದ್ರಾವಿಡ ಸಿದ್ಧಾಂತವನ್ನೇ ಜೀವನದುದ್ದಕ್ಕೂ ಪ್ರತಿಪಾದಿಸಿದ ಡಿ.ಎಂ.ಕೆ ಪಕ್ಷದ ನಾಯಕ ಆಗಿನ ಮುಖ್ಯಮಂತ್ರಿ ದಿ|| ಡಾ. ಎಂ. ಕರುಣಾನಿಧಿ. ಸ್ವತಃ ತಮಿಳಿನ ಅಗ್ರಗಣ್ಯ ಸಾಹಿತಿ, ಕವಿ, ಚಿತ್ರಕತೆಗಾರ, ಪತ್ರಕರ್ತರಾಗಿದ್ದ ಶ್ರೀಯುತರು ಇವರು ತಮ್ಮ ರಾಜಕೀಯ ಜೀವನದಲ್ಲಿ ಸಾಹಿತ್ಯವನ್ನು ಹಾಸುಹೊಕ್ಕಾಗಿ ಮೆರೆಸಿದವರು. ೨೦೦೮ ರಲ್ಲಿ ಶಂಕುಸ್ಥಾಪನೆಯಾಗಿ ಎರಡೇ ವರ್ಷದಲ್ಲಿ ಈ ಕಟ್ಟಡವನ್ನು ದಾಖಲೆ ಅವಧಿಯಲ್ಲಿ ಮುಗಿಸಿ ೨೦ ಸೆಪ್ಟೆಂಬರ್ ೨೦೧೦ ರಂದು ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ತೆರೆಯಲಾಯಿತು.  ಕರುಣಾನಿಧಿಯವರು ತಮ್ಮ ಗುರು ಮತ್ತು ದ್ರಾವಿಡ ಚಳುವಳಿಯ ನಾಯಕ ಅಣ್ಣಾದೊರೈ ಸಾಮಾಜಿಕ ನ್ಯಾಯ, ಮೂಢನಂಬಿಕೆ ವಿರೋಧ, ಓದು ಮತ್ತು ಜ್ಞಾನವರ್ಧನೆಗೆ ಹೆಚ್ಚು ಒತ್ತು ಕೊಟ್ಟವರಾದ್ದರಿಂದ ಅವರ ಹೆಸರನ್ನೇ ಗ್ರಂಥಾಲಯಕ್ಕೆ ಸೂಕ್ತವೆಂದು ಇಟ್ಟಿದ್ದಾರೆ.


ಕಟ್ಟಡ ವಿನ್ಯಾಸ:

ಈ ವಿಶಾಲ ಭವನದ ವಿನ್ಯಾಸವನ್ನು ರೂಪಿಸಿದವರು ಕರ್ನಾಟಕ ಮೂಲದ ಚೆನ್ನೈನ ಪ್ರಖ್ಯಾತ ಕನ್ಸಲ್ಟೆಂಟ್ಸ್ ಆದ ಸಿ ಆರ್ ನಾರಾಯಣರಾವ್ ಅವರ ಪುತ್ರ ರಾಘವೇಂದ್ರನ್.  ಇದು ೩,೩೩,೧೪೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾದ ನೆಲಮಹಡಿ ಮತ್ತು ಎಂಟು ಮಹಡಿಗಳ ನೂತನ ವಿನ್ಯಾಸದ ಬೃಹತ್ ಭವನ. ಕಾಂಪೌಂಡ್ ಒಳಗೇ ದ್ವಿಚಕ್ರ ಮತ್ತು ನಾಲ್ಕು ಚಕ್ರವಾಹನಗಳಿಗೆ ಅವಶ್ಯಕತೆಗೆ ಮತ್ತು ವಿನ್ಯಾಸಕ್ಕೆ ತಕ್ಕ  ಪಾರ್ಕಿಂಗ್ ವ್ಯವಸ್ಥೆಯಿದೆ. ಇದರ ಹಿತ್ತಲಲ್ಲಿ ಸದ್ಯಕ್ಕೆ ಒಂದು ಕ್ಯಾಂಟೀನ್ ಸಿದ್ಧವಾಗಿದೆ. ಚಪಾತಿ, ಬಿರ್ಯಾನಿ, ಮೊಸರನ್ನ ಇತ್ಯಾದಿ ದೊರೆಯುತ್ತದೆ.

ಇನ್ನು ಪ್ರವೇಶದಲ್ಲೇ ಸೆಕ್ಯುರಿಟಿಯವರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿಸಿಕೊಂಡು ಮತ್ತು ಮೆಟಲ್ ಡಿಟೆಕ್ಟರ್‌ನಲ್ಲಿ ಪರೀಕ್ಷಿಸಿ ಒಳಗೆ ಕಳಿಸುತ್ತಾರೆ. ಅಲ್ಲೇ ನಾವು ನಮ್ಮ ಟ್ಯಾಬ್ಲೆಟ್ ಪಿಸಿ, ಲ್ಯಾಪ್ಟಾಪ್ ಗಣಕಯಂತ್ರಗಳನ್ನು ದಾಖಲೆ ನೀಡಿ ಟೋಕನ್ ಸಮೇತ ಒಳಗೆ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮೊಬೈಲ್ ಫೋನುಗಳಿಗೆ ಅಂತಾ ಕಾನೂನೇನೂ ಇಲ್ಲ. ಎಲ್ಲಾ ಮಹಡಿಗಳಲ್ಲೂ ಲ್ಯಾಪ್‌ಟಾಪ್, ಮೊಬೈಲ್  ಚಾರ್ಜ್ ಹಾಕಿಕೊಳ್ಳಲು ಸಾಕಷ್ಟು ವಿದ್ಯುತ್ ವ್ಯವಸ್ಥೆಯನ್ನು ಆಸನಗಳ ಪಕ್ಕದಲ್ಲೇ ಮಾಡಿದ್ದಾರೆ. ಟೋಕನ್ ಇಲ್ಲದೇ ಯಾರೂ ಅವನ್ನು ಹೊರತರುವಂತಿಲ್ಲ. ಹಾಗಾಗಿ ನಾವು ಅಲ್ಪವಿರಾಮಕ್ಕೆಂದು ಅವನ್ನು ಆಸನದಲ್ಲೇ ಬಿಟ್ಟು ಹೋಗಿದ್ದರೂ ಕಳೆದುಕೊಳ್ಳುವ ಸಾಧ್ಯತೆಗಳಿಲ್ಲ.

ಯಾವ್ಯಾವ ಮಹಡಿಗಳಲ್ಲಿ ಏನೇನು?

ಗ್ರಂಥಾಲಯದ ಒಳಗೂ, ಹೊರಗೆ ಲಿಫ್ಟ್ ಬಳಿಯೂ ಯಾವ ಯಾವ ಮಹಡಿಯಲ್ಲಿ ಯಾವ ವಿಷಯಗಳ ಪುಸ್ತಕಗಳು ಸಿಗುತ್ತವೆ ಎಂಬ ವಿವರಣಾ ಬೋರ್ಡ್ಸ್ ಇವೆ.

ನೆಲಮಹಡಿಯಲ್ಲಿ ವಿಶಾಲ ಎಂಟ್ರೆನ್ಸ್ ಲಾಬಿಯಲ್ಲಿ ಅತಿಥಿಗಳು ಕಾಯಲು ಆಸನ ವ್ಯವಸ್ಥೆಯಿದೆ, ಮುಂದೆ ಸಭೆ ನಡೆಸಲು ಚಿಕ್ಕ ಮೀಟಿಂಗ್ ಹಾಲುಗಳೂ, ೧೧೦೦ ಸೀಟುಗಳುಳ್ಳ ನೂತನ ಸೌಂಡ್ ಸಿಸ್ಟೆಮ್ ಅಳವಡಿಸಿದ ಒಂದು ದೊಡ್ಡ ಆಡಿಟೋರಿಯಂ ಸಹಾ ಪ್ರಾಯೋಜಿತ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧವಿವೆ. ಇದು ಪೂರ್ತಿ ಸೆಂಟ್ರಲ್ ಹವಾನಿಯಂತ್ರಣ ವ್ಯವಸ್ಥೆಯುಳ್ಳ ಕಟ್ಟಡವಾದ್ದರಿಂದ ಚೆನ್ನೈ ನಗರದ ವಿಪರೀತ ತಾಪಮಾನ ತಡೆದುಕೊಂಡು ಧೀರ್ಘ ಕಾಲ ಕುಳಿತಿರಲು ಅತ್ಯವಶ್ಯಕ ಸೌಲಭ್ಯ. ನಾನು ನೋಡಿದಂತೆ ಸದಾಕಾಲ, ಯಾವುದೇ ವ್ಯತ್ಯಯವಿಲ್ಲದೇ ಈ ವ್ಯವಸ್ಥೆ ತಂಪಾದ ವಾತಾವರಣವನ್ನು ನಿರ್ಮಿಸಿರುತ್ತದೆ.

ಅಲ್ಲಿನ ಮೊದಲ ಮಹಡಿಯ ವಿಶಾಲವಾದ ಓನ್ ಬುಕ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ತಂಪಾದ ಆಶ್ರಯದಲ್ಲಿ ಓದು ಬರಹದಲ್ಲಿ ಮಗ್ನರಾಗುತ್ತಾರೆ.  ಇಲ್ಲಿ ಅವರಿಗೆ ಸುಸಜ್ಜಿತವಾದ ಮೇಜು ಕುರ್ಚಿ ಮತ್ತು ದೀಪಗಳ ವ್ಯವಸ್ಥೆಯಿದೆ. ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ವಾರದ ಏಳೂ ದಿನ ಗ್ರಂಥಾಲಯ ತೆರೆದಿರುತ್ತದೆ.

ಅಂಧರಿಗೆ ವಿದ್ಯಾಭ್ಯಾಸದ ಈ ಏರ್ಪಾಡಿನಲ್ಲಿ ಸಮಾನ ಅವಕಾಶ ಕೊಡಲೆಂದೇ ಬ್ರೈಲ್ ಲಿಪಿಯ ವಿಶೇಷ ವಿಭಾಗವೂ ಇದೆ. ೧೫೦೦ ಕ್ಕೂ ಹೆಚ್ಚು ಬ್ರೈಲ್ ಲಿಪಿಯ ರೀಡರ್ ಮತ್ತು ಆಡಿಯೋ ಪುಸ್ತಕ ಸಂಗ್ರಹವೂ ಇದೆ.

ಮೊದಲನೆ ಮಹಡಿಗೆ ಹೋಗಲು ಮತ್ತು ಇಳಿಯಲು ಒಂದು ಎಸ್ಕಲೇಟರ್ ಸೌಲಭ್ಯವೂ ಇದೆ. ಮಿಕ್ಕ ಮಹಡಿಗಳಿಗೆ ಹೋಗಿಬರಲು ೪ ಲಿಫ಼್ಟ್ಸ್ ಇವೆ. ಇದೇ ನೆಲಮಹಡಿಯಲ್ಲಿ ಆವಿನ್ (ಸರಕಾರಿ) ಡೈರಿಯ ಹಾಲಿನ ಸ್ಟಾಲ್ ಇದೆ. ಇಲ್ಲಿ ಓದುಗರ ಹಸಿವು ದಾಹ ತಣಿಸಲು ಸುಲಭ ಬೆಲೆಯಲ್ಲಿ ಬಾದಾಮಿ ಹಾಲು, ಸಿಹಿ ತಿಂಡಿಗಳು, ಮಿಲ್ಕ್ ಶೇಕ್, ಐಸ್ ಕ್ರೀಮ್ ಇತ್ಯಾದಿ ದೊರೆಯುತ್ತದೆ.

ಒಂದನೆ ಮಹಡಿ: ಮಕ್ಕಳ ವಿಭಾಗ: ನಿಜಕ್ಕೂ ಕಲಾತ್ಮಕವಾಗಿಯು, ವಿನೂತನವಾಗಿ ಮಕ್ಕಳ ಮನರಂಜನೆ ಮತ್ತು ವಿಕಾಸದ ಎರಡೂ ದೃಷ್ಟಿಯಿಂದ ವಿನ್ಯಾಸ ಮಾಡಿರುವ ಒಂದು ಆಲದ ಮರದ ನೆರಳಿನಲ್ಲಿರುವಂತೆ ನಿರ್ಮಿಸಿರುವ ೧೫,೦೦೦ ಚದರಡಿ ಮಹಡಿಯಲ್ಲಿ ೬೦,೦೦೦ ಪುಸ್ತಕಗಳ ದೊಡ್ಡ ಸಂಗ್ರಹವನ್ನು ಕಲೆಹಾಕಿದ್ದಾರೆ. ಇಲ್ಲಿನ ೨೨ ಕಂಪ್ಯೂಟರುಗಳಲ್ಲಿ ಮಲ್ಟಿ ಮೀಡಿಯಾ ಪುಸ್ತಕಗಳೂ ಇವೆ. ಅದರ ಪಕ್ಕದಲ್ಲಿ ನಿಯತಕಾಲಿಕ ಪತ್ರಿಕೆಗಳು, ದಿನ ಪತ್ರಿಕೆಗಳೂ ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ವಿಭಾಗವೂ ಇದೆ

ಎರಡನೇ ಮಹಡಿ: ತಮಿಳು ಭಾಷೆಗೆ ಮೀಸಲಾದ ‘ಸೆಮ್ಮೊಳಿ’  ವಿಭಾಗದಲ್ಲಿ ಹಳೆ ತಮಿಳು ಗ್ರಂಥಗಳು, ಲೇಖನ , ಕತೆ- ಕಾದಂಬರಿಗಳು, ಕವನ, ನಾಟಕ, ಜಾನಪದ, ಸಾಮಾಜಿಕ ಸಿದ್ಧಾಂತ, ವಿಜ್ಞಾನ, ಪತ್ರಿಕೋದ್ಯಮ ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳ ೧ ಲಕ್ಷಕ್ಕೂ ಹೆಚ್ಚಿನ ಅಮೂಲ್ಯ ಪುಸ್ತಕಗಳಿವೆ. ಇದು ತಮಿಳು ಭಾಷಾಪ್ರೇಮಿಯಾಗಿದ್ದು ಅದರ ಪ್ರಾಮುಖ್ಯತೆಯನ್ನು ಬಲವಾಗಿ ಸಮರ್ಥಿಸುತ್ತಿದ್ದ ಕರುಣಾನಿಧಿಯವರ ವೈಯಕ್ತಿಕ ಆಸಕ್ತಿಯ ಫಲ ಎಂದು ಹೇಳಲಾಗುತ್ತದೆ.

ಮೂರನೇ ಮಹಡಿ: ಇಲ್ಲಿ ಗಣಕ ತಂತ್ರಜ್ಞಾನ, ವೇದಾಂತ, ತತ್ವ, ಧರ್ಮ, ಸಮಾಜ ಶಾಸ್ತ್ರ, ರಾಜಕಾರಣ, ಸ್ಟ್ಯಾಟಿಸ್ಟಿಕ್ಸ್ ಮುಂತಾದ ಹಲವಾರು ವಿಚಾರಗಳ ದೇಶ ವಿದೇಶಿ ಲೇಖಕರ ದುಬಾರಿ/ ಅಮೂಲ್ಯ ಪುಸ್ತಕಗಳನ್ನು ನಾನು ಖುದ್ದಾಗಿ ಕಂಡು ಬೆರಗಾಗಿದ್ದೇನೆ...

ನಾಲ್ಕನೇ ಮಹಡಿ: ಇಲ್ಲಿ ಕಾನೂನು, ವಾಣಿಜ್ಯ, ಆಂಗ್ಲ ಸಾಹಿತ್ಯ ಪ್ರಕಾರಗಳಾದ ಕತೆ, ಕವನ, ನಾಟಕ ಸಂಶೋಧನಾತ್ಮಕ ಪುಸ್ತಕಗಳನ್ನು ಬ್ರಿಟಿಷ್ ಮತ್ತು ಅಮೆರಿಕನ್ ಎಂಬ ಪ್ರತ್ಯೇಕ ಬಡುವುಗಳಲ್ಲಿ ಸುವ್ಯವಸ್ಥಿತವಾಗಿ ಹುಡುಕಲು ಸುಲಭವಾಗುವಂತೆ ಜೋಡಿಸಿದ್ದಾರೆ. ಅನ್ಯ ವಿದೇಶಿ ಭಾಷೆಯ ಪುಸ್ತಕಗಳೂ ಇವೆ. ಅದಲ್ಲದೇ ಪ್ರತಿ ಮಹಡಿಯಂತೆ ಇಲ್ಲಿಯೂ ಸಾರ್ವಜನಿಕ ಕಂಪ್ಯೂಟರಿನಲ್ಲಿ ನಾವೇ ಇಲ್ಲಿರಬಹುದಾದ ಪುಸ್ತಕಗಳ ಹೆಸರು, ಲೇಖಕ ಇತ್ಯಾದಿ ವಿವರ ತುಂಬಿಸಿ ಹುಡುಕಿ ಕಂಡುಹಿಡಿಯಬಹುದು.  ಇಲ್ಲಿಯೂ ನಾವು ನಮ್ಮದೇ ಆದ ಲ್ಯಾಪ್ಟಾಪುಗಳನ್ನು ಆನ್ ಮಾಡಿಕೊಂಡು ನಮ್ಮದೇ ಆದ ಓದು ಬರಹ ಮತ್ತು ವೈಯಕ್ತಿಕ ಕೆಲಸದಲ್ಲಿಯೂ ಮಗ್ನರಾಗಬಹುದು, ಯಾವುದೇ ನಿರ್ಬಂಧವನ್ನು ಇಲ್ಲಿನ ಸಿಬ್ಬಂದಿ ಹೇರುವುದಿಲ್ಲ. ಉಚಿತ ವೈ ಫ಼ೈ ಲಭ್ಯವಿಲ್ಲ, ನಮ್ಮದೇ ವ್ಯವಸ್ಥೆಯನ್ನು ತರಬಹುದು...

ನನ್ನಂತಾ ಲೇಖಕ-ಓದುಗರಿಗೆ ಇದು ದಿನವಿಡೀ ಆಶ್ರಯತಾಣ ಎಂದರೆ ಅತಿಶಯೋಕ್ತಿಯಲ್ಲ. ಎಲ್ಲಾ ಮಹಡಿಯಲ್ಲಿಯೂ ವಿದ್ಯುತ್ ಪ್ಲಗ್ಸ್ ಸೌಲಭ್ಯ ಕೊಟ್ಟಿರುತ್ತಾರೆ. ಕೆಲವರು ಅವುಗಳಲ್ಲಿ ಚಲನಚಿತ್ರ, ವಿಡಿಯೋಗಳನ್ನೂ ಕದ್ದು ಮುಚ್ಚಿ ನೋಡುತ್ತಿದುದೂ ಕಂಡಿದ್ದೇನೆ. ಇದು ನಂನಮ್ಮ ಜವಾಬ್ದಾರಿಯುತ ವೈಯಕ್ತಿಕ ವರ್ತನೆಯ ಮೇಲೆ ಅವಲಂಬಿಸಿದೆ ಅಷ್ಟೇ.

ಐದನೆಯ ಮಹಡಿಯಲ್ಲಿ ವಿಜ್ಞಾನ, ಗಣಿತ, ವೈದ್ಯಕೀಯ ವಿಷಯಗಳ ಅನನ್ಯ ಸಂಗ್ರಹವಿದೆ. ಸಾಮಾನ್ಯರಿಗೆ ಕೊಳ್ಳಲು ದುಸ್ಸಾಧ್ಯವಾದ ಹಲವು ದುಬಾರಿ ವಿದೇಶಿ ರೆಫ಼ರೆನ್ಸ್ ಪುಸ್ತಕಗಳೂ ಇಲ್ಲಿ ಲಭ್ಯವಿದೆ.

ಆರನೇ ಮಹಡಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಬೇಕಾದ ಎಲ್ಲಾ ವಿಭಾಗಗಳ ಪುಸ್ತಕಗಳಲ್ಲದೇ, ಕಾಮರ್ಸ್, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವಶ್ಯವಾದ ಭಾರೀ ಸಂಗ್ರಹ ಎದುರಾಗುತ್ತದೆ.

ಏಳನೇ ಮಹಡಿಯಲ್ಲಿ ಚರಿತ್ರೆ, ಇತಿಹಾಸ, ಖನಿಜ ಶಾಸ್ತ್ರ, ಪ್ರವಾಸ ಮತ್ತು ಆತ್ಮ ಚರಿತ್ರೆ ಸಂಬಂಧಿತ ಪುಸ್ತಕಗಳ ದೊಡ್ಡ ಪೂರವೇ ಇದೆ.

ಎಂಟನೇ ಮಹಡಿಯಲ್ಲಿ ಗ್ರಂಥಾಲಯದ ಸಿಬ್ಬಂದಿಯ ಆಡಳಿತ ವರ್ಗದ ಕಚೇರಿಯಿದೆ.


ಗ್ರಂಥಾಲಯದ ಭವಿಷ್ಯ ಮತ್ತು ನಿಯಮ ಪಾಲನೆ:

ಈಗಾಗಲೇ ಐದೂವರೆ ಲಕ್ಷ ಮುದ್ರಿತ ಪುಸ್ತಕ ಸಂಗ್ರಹವಲ್ಲದೇ ಡಿಜಿಟಲ್ ಲೈಬ್ರೆರಿಯಲ್ಲಿ ಅಂತರ್ಜಾಲದ ಚಂದಾ ಇರುವ ಹಲವಾರು ವಿಚಾರಗಳ ಇ-ಪುಸ್ತಕಾಲಯವೂ ವ್ಯವಸ್ಥೆಯಾಗುತ್ತಿದೆ. ಇನ್ನೂ ಒಟ್ಟು ಐದು ಲಕ್ಷ ಪುಸ್ತಕಗಳನ್ನು ಸಂಗ್ರಹಿಸಲು ಸ್ಥಳವೂ ಆಯಾ ಮಹಡಿಯಲ್ಲಿ ಯೋಜಿತವಾಗಿ ಲಭ್ಯವಿದೆ. ಇಲ್ಲಿ ಇನ್ನೂ ಕನ್ನಡ ಪುಸ್ತಕಗಳಿಲ್ಲ, ಮಕ್ಕಳ ಸರಕಾರಿ ಪಠ್ಯಪುಸ್ತಕಗಳು ಮಾತ್ರ ಇವೆಯಂತೆ. ಈ ಬಗ್ಗೆ ನಮ್ಮ ಸರಾಕರದ ಕಡೆಯಿಂದ ತಿಳಿದವರು ಶಿಫಾರಸು ಮಾಡಬೇಕಾದೀತು.

ಇಲ್ಲಿನ ಓದುಗರು ಕೆಲವು ಶಿಸ್ತನ್ನು ತಾವಾಗಿಯೇ ಪಾಲಿಸುತ್ತಾರೆ. ಉದಾಹರಣೆಗೆ,  ತಮ್ಮ ಮೊಬೈಲ್ ಫೋನುಗಳ ರಿಂಗ್ ಟೋನ್ ಕನಿಷ್ಟ ಅಥವಾ ಶಾಂತವಾಗಿಡುವುದು, ಅಲ್ಲೆ ಕುಳಿತು ಮಾತನಾಡಿದರೆ ಪಿಸುಗುಟ್ಟಬೇಕು, ಇಲ್ಲವಾದರೆ ಪ್ರಶಾಂತವಾದ ಹಾಲಿನಲ್ಲಿ ಅವರಿಗೇ ಸಂಕೋಚವೆನಿಸುವಂತಾ ವಾತಾವರಣ ಉಂಟಾಗುತ್ತದೆ. ಇವು ಸಹ-ಓದುಗರಿಗೆ ಗದ್ದಲ ಮಾಡದಂತೆ ನಾವು ತೋರಿಸಬೇಕಾದ ಸಹಜ ಸೌಜನ್ಯ. ವಿದ್ಯಾರ್ಥಿಗಳು ಒಟ್ಟಿಗೇ ಕುಳಿತಾಗ ಹೆಚ್ಚು ಸದ್ದು ಮಾಡದೇ ಪಿಸುಗುಟ್ಟಬೇಕೆಂಬ ನಿಯಮವಿದೆ. ಹಾಗೆ ಪಾಲಿಸದಿದ್ದರೆ ನಾವು ಸಿಬ್ಬಂದಿಗೆ ದೂರು ಕೊಟ್ಟರೆ ಅವರು ಅಂತವರನ್ನು ಎಚ್ಚರಿಸುತ್ತಾರೆ.

ತಂಪಾದ ಹಾಲಿನಲ್ಲಿ ಕುಳಿತು ದೊಡ್ಡ ಗ್ರಂಥವನ್ನು ಕೈಯಲ್ಲಿ ಹಿಡಿದರೆ ಹಾಗೆ ಜೋಂಪು ನಿದ್ದೆ ಹತ್ತುವುದು ಮನುಷ್ಯ ಸಹಜವೇ. ಅದನ್ನು ಕಂಡರೆ ಮಾತ್ರ ಸಿಬ್ಬಂದಿಯವರು “ಇಲ್ಲಿ ನಿದ್ದೆ ಮಾಡುವಂತಿಲ್ಲ” ಎಂದು ಎಚ್ಚರಿಸುವುದೂ ಉಂಟು. (ಅವರ ಪಾಲಿನ ಕಚೇರಿಯಲ್ಲಿ ನಾವು ನಿದ್ದೆ ಮಾಡಿದರೆ ಹೇಗೆ?). ಯಾವ ಪುಸ್ತಕದ ಹಾಳೆಗಳನ್ನೂ ಹರಿಯಬಾರದು, ಗೀಚಬಾರದು ಎಂಬ ಕಾನೂನಿದೆ. ಇದನ್ನು ಮುರಿದಂತೆ ನನಗಂತೂ ಎಂದೂ ಗೋಚರವಾಗಿಲ್ಲ, ಇದು ಶ್ಲಾಘನೀಯ ವರ್ತನೆಯ ಪ್ರತೀಕ.

ಪುಸ್ತಕ ಪ್ರೇಮವನ್ನೂ, ಸಾಹಿತ್ಯಸೇವೆಯನ್ನೂ ಬರಿಮಾತಲ್ಲಿ ಹೇಳುವುದೇ ಈಗೀಗ ಸರಕಾರ ಮತ್ತು ರಾಜಕಾರಣಿಗಳ ಅಭ್ಯಾಸವಾಗಿರುವ ಕಾಲದಲ್ಲಿ ಅಣ್ಣಾ ಸೆಂಟಿನೆರಿ ಲೈಬ್ರರಿ ಒಂದು ಭಿನ್ನವಾದ ಉದಾಹರಣೆ. ಒಬ್ಬ ದೂರದೃಷ್ಟಿಯುಳ್ಳ ನಾಯಕನ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಪ್ರಯತ್ನವನ್ನು ಕಾರ್ಯಗತ ಮಾಡಿ ತೋರಿಸಿರುವ ಯಶಸ್ಸಿನ ದ್ಯೋತಕ. ಇದನ್ನು ಹೀಗೆಯೇ ಉಳಿಸುವುದರಲ್ಲಿ ಅಲ್ಲಿ ಯಾವುದೇ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದರೂ ಹಿಂದೇಟು ಹೊಡೆಯಬಾರದು. ಮಿಕ್ಕ ರಾಜ್ಯಗಳೂ ಈ ಅಮೂಲ್ಯ ಉದಾಹರಣೆಯನ್ನು ಮಾದರಿಯಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೂ, ಓದುಗರಿಗೂ ಒಂದು ಅವಶ್ಯಕ ಸೌಕರ್ಯವೆಂಬಂತೆ ಒದಗಿಸಲು ಮುಂದಾಗಬೇಕು.

 

 
 
 

Comments


© 2020 by Nagesh Kumar CS . Proudly created with Wix.com

bottom of page