top of page

ನಾಪತ್ತೆಯಾದ ಪತ್ತೇದಾರಿ ಸಾಹಿತ್ಯ

ಪೀಠಿಕೆ:~~~~ಕನ್ನಡದಲ್ಲಿ ಪತ್ತೇದಾರಿ ಕಾದಂಬರಿಗಳೂ ತಮ್ಮ ಕೀರ್ತಿಯ ದಿನಗಳನ್ನು ಮೆರೆದ, ಜನಪ್ರಿಯ ಸಾಹಿತ್ಯದ ಪ್ರಕಾರವಾಗಿದ್ದ ಕಾಲವೂ ಒಂದಿತ್ತು ಎಂದು ಈಗ ಕನ್ನಡ ಓದುಗರು ನಂಬುವುದೇ ಕಷ್ಟ. ಏಕೆಂದರೆ ಸದಾ “ಬಿ” ವರ್ಗದ ಸಾಹಿತ್ಯ ಎಂದೇ ಹಣೆಪಟ್ಟಿಯಿಂದ ಮೂಲೆಗುಂಪಾಗಿಸಿದ್ದ ಈ ಧಾಟಿಯ ಕಾದಂಬರಿಗಳು `ಗಂಭೀರ ಸಾಹಿತ್ಯವಲ್ಲ ‘, `ಸದಭಿರುಚಿಯ ಪ್ರತೀಕವಲ್ಲ ‘ ಎಂದೆಲ್ಲಾ ಮಧ್ಯಮವರ್ಗದ ಬಹಳಷ್ಟು ಓದುಗರು ತಿರಸ್ಕರಿಸಿದ್ದು ವಾಸ್ತವವೂ ಹೌದು. ಮುಖ್ಯವಾಹಿನಿಯ ಲೇಖಕರು ಈ ವರ್ಗದ ಕಥಾವಸ್ತುವನ್ನು ಕಡೆಗಣಿಸಿದ್ದೂ ಉಂಟು. ಹಾಗಾಗಿಯೇ ಅಗ್ಗದ ಬೆಲೆಯಲ್ಲಿ ಪಡ್ಡೆಹುಡುಗರಿಗಾಗಿಯೋ, ‘ಚೀಪ್ ಥ್ರಿಲ್ ’ ಅರಸುವವರಿಗಾಗಿಯೊ ಬಸ್ ಸ್ಟ್ಯಾಂಡ್, ರೈಲ್ವೇ ನಿಲ್ದಾಣ ಇಲ್ಲವೇ ಬೆಂಗಳೂರಿನ ಬಳೇಪೇಟೆಯ ಗಲ್ಲಿಯಲ್ಲಿ ಮಾರಾಟವಾಗುವ ‘ಜಂಕ್ ’ ಪುಸ್ತಕಗಳ ಅಪಖ್ಯಾತಿಗೆ ಪತ್ತೇದಾರಿ ಪುಸ್ತಕಗಳು ಇಳಿದು ಬಿಟ್ಟಿವೆ. ಅಲ್ಲಿಯೂ ಈಗ ಪತ್ತೇದಾರಿ ಪುಸ್ತಕಗಳನ್ನು ಭೂತಗನ್ನಡಿಯಿಟ್ಟು ಹುಡುಕಿ ’ಪತ್ತೆ’ ಹಚ್ಚಬೇಕಾಗಿರುವ ದುಃಸ್ಥಿತಿ ಇದೆ.

ಕನ್ನಡ ಪುಸ್ತಕಗಳಿಗೆ ಓದುಗರ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಲು ಯಾವ ಪತ್ತೇದಾರನ ಅಗತ್ಯವಿಲ್ಲ. ಮುಖ್ಯವಾಗಿ ಅವರನ್ನು ಓದಿನ ಜಗತ್ತಿಗೆ ಆಕರ್ಷಿಸುವ ಜನಪ್ರಿಯ ಸಾಹಿತ್ಯದ ಕೊರತೆ ಇದಕ್ಕೆ ಕಾರಣ. ಮುಖ್ಯವಾಹಿನಿಯ ಲೇಖಕರು ಮತ್ತು ಓದುಗರು ಪತ್ತೇದಾರಿ ಸಾಹಿತ್ಯವನ್ನೂ, ಸಾಹಿತಿಗಳನ್ನೂ ಒಂದು ಕಾಲದಲ್ಲಿ ಅಸ್ಪೃಶ್ಯರಂತೆ ಕಂಡರು. ಇಂತಾ ಸ್ವಜನ ವಿರೋಧದ ವಾತಾವರಣದಲ್ಲಿಯೂ ಆರ್ಥಿಕ ಮುಗ್ಗಟ್ಟಿನಲ್ಲಿ ತೊಳಲುತ್ತಿದ್ದ ಬಡ ಪತ್ತೇದಾರಿ ಕತೆಗಾರರು ಆಗ ಈ ಚಿಕ್ಕ ಮಾರ್ಕೆಟ್‌ಗಾಗಿ ಬರೆಯುತ್ತಲೇ ಹೋದರು… ಕೇವಲ ಆ ಬಗೆಯ ಕಥಾವಸ್ತುವಿನ ಪ್ರೇಮದಿಂದ, ಬದ್ಧತೆಯಿಂದ.

ಇಂದಾದರೋ ಕನ್ನಡ ತರುಣ ಓದುಗರು ಓದುವುದಕ್ಕಾಗಿ ಇಂಗ್ಲಿಷ್ ಪುಸ್ತಕಗಳ ಮೊರೆ ಹೋಗುತ್ತಿದ್ದಾರೆ.ಇಂದಿಗೂ ಇಂಗ್ಲಿಷ್ನಲ್ಲಿ ಹ್ಯಾರಿ ಪಾಟರ್ನಂತಹ ಫ್ಯಾಂಟಸಿ-ಸಾಹಸದ ಕೃತಿಗಳು ಲಕ್ಷಾಂತರ ಮುದ್ರಣವಾಗುತ್ತಿವೆ, ಮಾರಾಟವಾಗುತ್ತವೆ.. ಆದರೆ ಕನ್ನಡದಲ್ಲಿ ಒಂದು ಜನಪ್ರಿಯ ಪತ್ತೇದಾರಿ ಪುಸ್ತಕದ ಸಾವಿರ ಪ್ರತಿ ಮುದ್ರಣ ಮಾಡೋಣವೆಂದರೂ ಅದಕ್ಕೆ ಬೇಡಿಕೆಯಿಲ್ಲ ಎನ್ನುತ್ತಾರೆ ಹತಾಶ ಕನ್ನಡ ಪ್ರಕಾಶಕರು.

ಮೊದಲಿನಿಂದಲೂ ಆಂಗ್ಲ ಸಾಹಿತ್ಯದಲ್ಲಿ ಅಗಾಥಾ ಕ್ರಿಸ್ಟೀ, ಆರ್ಥರ್ ಕಾನನ್ ಡಾಯ್ಲ್, ರೇಮಂಡ್ ಚಾಂಡ್ಲರ್, ಜೇಮ್ಸ್ ಹ್ಯಾಡ್ಲೀ ಚೇಸ್, ಇಯಾನ್ ಫ಼್ಲೆಮಿಂಗ್, ಆಲಿಸ್ಟೆರ್ ಮ್ಯಾಕ್ಲೀನ್ ರಂತಾ ಅತಿರಥ ಮಹಾರಥರು ಇಂಗ್ಲೀಷ್ ಸಾಹಿತ್ಯದಲ್ಲಿ ಪತ್ತೇದಾರಿ ಮತ್ತು ಗೂಡಚಾರಿ ಕತೆಗಳ ಒಂದು ದೊಡ್ಡ ಸಂಸ್ಕೃತಿಯನ್ನೆ ಹುಟ್ಟುಹಾಕಿ ಅದಕ್ಕೆ ಗೌರವಾನ್ವಿತ ಸ್ಥಾನ ತಂದು ಕೊಟ್ಟಿದ್ದಾರೆ . ಇಂದಿಗೂ ಥ್ರಿಲ್ಲರ್ ಕಾದಂಬರಿಗಳು ಸದಾ ಅಂತರ ರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಪುಸ್ತಕಗಳ ಪಟ್ಟಿಗಳಲ್ಲಿ ಮೇಲ್ಪಂಕ್ತಿಯಲ್ಲಿರುತ್ತವೆ.ಅಂತದರಲ್ಲೂ ಈ ಕನ್ನಡ ಪತ್ತೇದಾರಿ ಕತೆ- ಕಾದಂಬರಿಗಳ ಸುವರ್ಣಯುಗವೂ ಒಂದಿತ್ತು. ೧೯೬೦ ರಿಂದ ೧೯೮೦ರವರೆಗಿನ ಎರಡು ದಶಕಗಳಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಮುಖ ಜನಪ್ರಿಯ ಕೃತಿಗಳ ಜತೆಗೆ ಭುಜಕ್ಕೆ ಭುಜ ಉಜ್ಜುವಂತಾ ಗೌರವದ ಸ್ಥಿತಿಯಲ್ಲಿ ಪತ್ತೇದಾರಿ ಕಾದಂಬರಿಗಳೂ ಇದ್ದವು. ಜನಮನವನ್ನು ಸೂರೆಗೊಂಡ ಹಲವು ರಹಸ್ಯಮಯ ಕಾದಂಬರಿಗಳು ಉಚ್ಚ್ರಾಯ ಸ್ಥಿತಿಯನ್ನು ಕಂಡಿದ್ದವು, ಅದರ ಕರ್ತೃಗಳೂ ಕೂಡಾ ಜನಮನ್ನಣೆ ಪಡೆದಿದ್ದರು. ಆ ಯುಗದ ಸಿಂಹಾವಲೋಕನ ಮಾಡುವ ಚಿಕ್ಕ ಪ್ರಯತ್ನವಿದು.

ಇದರ ಚರಿತ್ರೆಯನ್ನು ನಾವು ಪುನರಾವಲೋಕನ ಮಾಡುವುದಾದರೆ:

ದಿ|| ಎಂ. ರಾಮಮೂರ್ತಿ

೧೯೫೦ರಲ್ಲಿ ಕನ್ನಡ ಚಳವಳಿಯ ದಿನಗಳಲ್ಲಿ ಅದರ ಒಬ್ಬ ಪ್ರಮುಖ ರೂವಾರಿಯಾದ ಮ.ರಾಮಮೂರ್ತಿಯವರು ಕನ್ನಡದ ಸಾಹಿತ್ಯದ ಕಂಪನ್ನು ಎಲ್ಲೆಲ್ಲಿಯೂ ದಿಟ್ಟತನದಿಂದ ಪ್ರಚಾರ ಮಾಡುವ ಸಮಯದಲ್ಲಿ ,ಮೊತ್ತಮೊದಲು ಪತ್ತೇದಾರಿ ಕಾದಂಬರಿಗಳ ಅಡಿಪಾಯವನ್ನು ಕಟ್ಟಿದರು.

ಕನ್ನಡ ಚಳವಳಿಯ ದಿಗ್ಗಜರಾದ ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ. ರಾಮಮೂರ್ತಿಯವರು ಹುಟ್ಟಿದ್ದು ೧೯೧೮ರ ಮಾಚ್೧೧ರಂದು ನಂಜನಗೂಡಿನಲ್ಲಿ. ತಂದೆ ವೀರಕೇಸರಿ ಸೀತಾರಾಮಶಾಸ್ತ್ರಿ. ತಾಯಿ ಸುಬ್ಬಮ್ಮ. ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಯಲ್ಲಿ ತೊಡಗಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯ ಕಾರ್ಯದಲ್ಲಿ ಕಾರ್ಯಮುಖರಾದರು.

ನಾಡಿನಲ್ಲಿ ಅನ್ಯ ಭಾಷಿಕರ ಪ್ರಭಾವ ಹೆಚ್ಚಾಗಿ ನಮ್ಮ ಭಾಷೆ ಅಪಾಯದ ಸ್ಥಿತಿಯಲ್ಲಿದ್ದಾಗ ಕನ್ನಡಿಗರಲ್ಲಿ ಅರಿವು ಮತ್ತು ಆಸಕ್ತಿ ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲ ಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಅರಿತು ಇವರು ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. ಇವರು ಬರೆದ ಆಸಕ್ತಿ ಕೆರಳಿಸಿ ಓದುಗರನ್ನು ಜಾದೂ ಮಾಡಿದಂತೆ ಕೌತುಕ ಲೋಕಕ್ಕೆ ಕೊಂಡೊಯ್ದ ಕೃತಿಗಳೆಂದರೆ: ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು, ಪಾಕಿಸ್ಥಾನದ ರಹಸ್ಯಪತ್ರ, ರಾಜರಹಸ್ಯ, ತಪ್ಪಿ ಹೋಗಿದ್ದ ಪ್ರಿಯತಮ, ವಿಚಿತ್ರವಾದ ಭಾವಚಿತ್ರ ಇತ್ಯಾದಿ .

ಮ. ರಾಮಮೂರ್ತಿಯವರು ಒಟ್ಟಿನಲ್ಲಿ ೧೫೦ ಕ್ಕೂ ಹೆಚ್ಚು ಥ್ರಿಲ್ಲರ್ ಕಾದಂಬರಿಗಳನ್ನು ರಚಿಸಿದರು. “ಪುಸ್ತಕ ಜಗತ್ತು” ಬ್ಲಾಗ್ನಲ್ಲಿ ವಿಮರ್ಶಕರೊಬ್ಬರು ವರ್ಣಿಸಿರುವಂತೆ : “ಕಾಲುವೆಮನೆ’ಯ ಸದ್ದುಗದ್ದಲವಿಲ್ಲದ ಕೊಲೆಗಳು; ‘ರಾಜರಹಸ್ಯ’ದ ತಾಂತ್ರಿಕ ವಿಶೇಷಗಳು – ಆಕಸ್ಮಿಕಗಳು; ‘ಜುಲೇಕ’’ ಕಾದಂಬರಿಯ ರಸಭರಿತ ಆಗುಹೋಗುಗಳು, ತಣ್ಣಗೆ ಜರುಗುವ ಬಿಸಿಬಿಸಿ ಘಟನೆಗಳು – ಇವನ್ನೆಲ್ಲ ಈ ಕಾದಂಬರಿಗಳನ್ನು ಓದಿಯೇ ಅನುಭವಿಸಬೇಕು. ಸುಲಲಿತ ಶೈಲಿ, ಅತಿ ಸಹಜ ಪಾತ್ರಗಳು, ಪೋಲೀಸ್ ಪತ್ತೇದಾರ ಚರ್ಚೆ, ಕಾನೂನಿನ ಚೌಕಟ್ಟಿಗೊಳಪಟ್ಟ ಪೋಲೀಸ್ ನಡವಳಿಕೆ – ಪತ್ತೇದಾರಿ ಲೇಪದ ಕಾದಂಬರಿಗಳ ಹಾಗೆ ಇವು ಮನಸೆಳೆಯುಯುತ್ತವೆ”.

ಇವರು ಬರೆದ ಪುಸ್ತಕಗಳು ಇನ್ನೂ ಕೆಲವು ಮುದ್ರಣದಲ್ಲಿವೆ, ಕೆಲವು ಆನ್ಲೈನ್ ವೆಬ್ ತಾಣಗಳಲ್ಲಿ ಮಾರಾಟಕ್ಕಿವೆ. ಇದರ ಕೊಂಡಿಯೊಂದು ಇಲ್ಲಿದೆ:

ದಿ||ಎನ್. ನರಸಿಂಹಯ್ಯ:

ಸುಮಾರು ೪೫೦ಕ್ಕೂ ಹೆಚ್ಚಿನ ರೋಚಕ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟು, ಪತ್ತೇದಾರಿ ಕಾದಂಬರಿಗಳ ಅನಭಿಷಿಕ್ತ ಸಾರ್ವಭೌಮರಾಗಿ ಮೆರೆದು ೨೦೧೧ರಲ್ಲಿ ತೀರಿಕೊಂಡ ದಿ. ಎನ್. ನರಸಿಂಹಯ್ಯನವರದು ಈ ನಿಟ್ಟಿನಲ್ಲಿ ಅಭೂತಪೂರ್ವ ಸಾಧನೆ. ಕನ್ನಡ ಪುಸ್ತಕಗಳನ್ನು ಕೊಂಡು ಓದಲು ಜನ ಹಿಂಜರಿಯುತ್ತಿದ್ದ ಕಾಲದಲ್ಲಿ, ಈಗಿನ ಟಿ ವಿ ಮಾಧ್ಯಮ, ಅಂತರ್ಜಾಲದ ವ್ಯವಸ್ಥೆ ಯಾವುದೂ ಇಲ್ಲದ ೫೦-೬೦ರ ದಶಕಗಳಲ್ಲಿ ಮನರಂಜನೆಗಾಗಿ ಕನ್ನಡ ಓದುಗರಲ್ಲಿ ಕುತೂಹಲ ಕೆರಳಿಸಿದ ಇವರ ಪತ್ತೇದಾರಿ ಕೃತಿಗಳು ಬಿಸಿ ದೋಸೆಗಳಂತೆ ಮಾರಲ್ಪಡುತ್ತಿದ್ದವು. ಇವರು ಬರೆದ ಸರಣಿ ಪತ್ತೇದಾರ ಪಾತ್ರಗಳಾದ ಪುರುಷೋತ್ತಮ, ಮಧುಸೂಧನ , ಅರಿಂಜಯ ಮತ್ತು ಗಾಳಿರಾಯನ ಹೆಸರುಗಳು ಜನಜನಿತವಾಗಿದ್ದವು.

ಕೇವಲ ನಾಲ್ಕನೆ ತರಗತಿಯಷ್ಟೇ ಓದಿದ್ದ ನರಸಿಂಹಯ್ಯನವರದು ಉದ್ದಕ್ಕೂ ಕಷ್ಟ ಕಾರ್ಪಣ್ಯದ ಜೀವನ… ದಲಿತ ಕುಟುಂಬದಲ್ಲಿ ಹುಟ್ಟಿ, ಕಡು ಬಡತನದಲ್ಲಿ ಬೆಳೆದ ನರಸಿಂಹಯ್ಯನವರು. ಜೀವನಾಧಾರಕ್ಕಾಗಿ- ಪ್ರೆಸ್ನಲ್ಲಿ ಕಂಪೋಸಿಟರ್ ಆಗಿ, ಹಾಗೆಯೇ ಬ್ಯಾಗಿನಲ್ಲಿ ಪುಸ್ತಕ ತುಂಬಿಕೊಂಡು ಅದರ ಮಾರಾಟ ಮಾಡುತ್ತಲೂ, ಆಮೇಲೆ ಕಾಫಿ ತೋಟದಲ್ಲಿ ದುಡಿಯುತ್ತಲೂ, ಇದು ಸಾಕೆನಿಸದ ನಂತರ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಮತ್ತು ಕಂಡಕ್ಟರ್… ಹೀಗೆ ಹಲವು ವೃತ್ತಿಗಳಲ್ಲಿಯೂ ದುಡಿಯುತ್ತಲೇ ಬರೆಯುವುದನ್ನೂ ರೂಢಿಸಿಕೊಂಡರು. ಅವರು ಕಾದಂಬರಿಗಾರನಾಗಿ ನೆಲೆ ನಿಲ್ಲಲು ಪ್ರೆಸ್ ನಲ್ಲಿ ಅವರಿಗಿದ್ದ ಮೊಳೆ ಜೋಡಿಸುವ ಕೆಲಸದ ಅನುಭವವೇ ಮುಖ್ಯ ಅರ್ಹತೆ.

ಸರಳವಾದ ನೇರ ಬರವಣಿಗೆ ತಂತ್ರದಿಂದ ಆ ಕಾಲದ ಸಾಮಾಜಿಕ ಸ್ಥಿತಿಗತಿಗೆ ತಕ್ಕಂತಾ ಸದುಣ ಸಂಪನ್ನರಾದ ಪತ್ತೇದಾರರ ಸಾಹಸಗಳನ್ನು ದಿನಕ್ಕೊಂದರಂತೆ ಬರೆಯಬಲ್ಲ ನೈಪುಣ್ಯತೆ ಇವರದಾಗಿತ್ತು. ಕೇವಲ ಕೊಲೆ ತನಿಖೆ ಅಲ್ಲದೇ ಮಾಟ ಮಂತ್ರ, ವಾಮಾಚಾರದ ಕೌತುಕಮಯ ಘಟನೆಗಳನ್ನೂ ಸುಲಲಿತವಾಗಿ ರೂಪಿಸಬಲ್ಲವರಾದ ನರಸಿಂಹಯ್ಯನವರ ಕಾದಂಬರಿಗಳು ತಮ್ಮದೇ ಆದ ಹೆಸರು ಮತ್ತು ಸ್ಥಾನವನ್ನು ಜನಮನದಲ್ಲಿ ಕಂಡುಕೊಂಡಿದ್ದೂ ಆಶ್ಚರ್ಯವೇನಿಲ್ಲ. ಇವರ ಜನಪ್ರಿಯ ಕೃತಿಗಳೆಂದರೆ:‘ಪುರುಷೋತ್ತಮನ ನೂರು ಸಾಹಸಗಳು’, “ಮಧುಸೂದನನ ನೂರು ಸಾಹಸಗಳು’, “ಕೆರಳಿದ ಕೇಸರಿ’, , ಕನ್ನಡಿಯ ಮುಂದೆ, ಹೊಸಲು ದಾಟದ ಗಂಡು, ಸಾವಿನ ಸೋಲು, ಮಿತ್ರದ್ರೋಹಿ, ರಾಣಿವಾಸದ ರಹಸ್ಯ, ಸಂಶಯದ ಸುಳಿಯಲ್ಲಿ, ಸೇಡಿನ ಸರ್ಪ, ಗಿಣಿಕಚ್ಚಿದ ಹಣ್ಣು, ಬೀದಿಯ ಪಾರಿವಾಳ, ಎರಡು ತಲೆ ಹಾವು, ‘ಭಯಂಕರ ಬೈರಾಗಿ’ ಭೂಪತಿರಂಗ, ಮಸಣದಿಂದ ಮನೆಗೆ, ಪ್ರೇಮರಹಸ್ಯ, ಮೂಕರ್ಜಿ ಪತ್ರಗಳು ಇತ್ಯಾದಿ ನೂರಾರು. ಆದರೆ ಆಗಿನ ಕಾಲದಲ್ಲಿ ಕನ್ನಡ ಲೇಖಕನಿಗೆ ಸಲ್ಲುತ್ತಿದ್ದ ಸಂಭಾವನೆ ಎಂದರೆ ಕೇವಲ ೨೫ ರಿಂದ ೫೦.ರೂ.ಗಳು ಮಾತ್ರ. ಗಿನ್ನೆಸ್ ದಾಖಲೆ ನಿರ್ಮಿಸುವಷ್ಟು ಕಾದಂಬರಿಗಳನ್ನೂ ಬರೆದಿದ್ದರೂ ಇವರ ಯಾವೊಂದು ಕತೆಯೂ ಕನ್ನಡ ಚಲನಚಿತ್ರ ನಿರ್ಮಾಪಕರ ಕಣ್ಣಿಗೆ ಬೀಳದಿರುವುದೇ ನಿರಾಶಾದಾಯಕ. ಇವರಿಗೆ ಕೊನೆಗೂ ಸಾರ್ವಜನಿಕವಾಗಿ ಗೌರವ ಪ್ರಧಾನವಾಗಿದ್ದೆಂದರೆ: ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (೧೯೯೨), ರಾಜ್ಯೋತ್ಸವ ಪ್ರಶಸ್ತಿ (೧೯೯೭), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೨೦೦೬)ಇವರ ಪುಸ್ತಕಗಳೂ ಇನ್ನೂ ಮುದ್ರಣದಲ್ಲಿವೆ, ಕೊಳ್ಳಲು ಕೆಳಕಂಡ ಕೊಂಡಿಯನ್ನು ಉಪಯೋಗಿಸಬಹುದು:

ದಿ|| ಸುದರ್ಶನ ದೇಸಾಯಿ

ಧಾರವಾಡದ ಶ್ರೇಷ್ಟ ಸಾಹಿತಿಗಳ ಸಾಲಿನಲ್ಲಿ ಬಂದ ಸುದರ್ಶನ ದೇಸಾಯಿ ಕನ್ನಡದ ಮಾಡರ್ನ್ ಪತ್ತೇದಾರಿ ಸಾಹಿತ್ಯದ ಪ್ರಮುಖ ಹರಿಕಾರರು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಂಗ್ಲ ಕಾದಂಬರಿಗಳನ್ನು ಹೋಲುವ ಇವರ ಪತ್ತೇದಾರಿ ರಹಸ್ಯಮಯ ಕಾದಂಬರಿಗಳಲ್ಲಿ ಸಣ್ಣ ಸಣ್ಣ ವಾಕ್ಯಸರಣಿ, ಮೊನಚಾದ ಪದಗಳು, ಲಯಬದ್ಧವಾದ ಮಾತುಗಳು, ಓದುಗರು ಹೀಗೇ ಆಗುತ್ತದೆಂದು ಭಾವಿಸುತ್ತಿದ್ದಂತೆ ಬರುವ ಅನಿರೀಕ್ಷಿತ ತಿರುವುಗಳು , ಉಸಿರು ಬಿಗಿಹಿಡಿದು ಪುಟತಿರುಗಿಸುವಂತಾ ಸನ್ನಿವೇಶಗಳು…ಇವೆಲ್ಲಾ ಸುದರ್ಶನ ದೇಸಾಯಿಯವರ ಯಶಸ್ವಿ ಕೃತಿಗಳ ಗುರುತಿನ ಮುದ್ರೆಗಳಾಗಿದ್ದವು. ನಾಡಿನ ಪ್ರಮುಖ ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿ ಇವರ ಹಲವಾರು ಮನರಂಜನೀಯ ಕಾದಂಬರಿಗಳು ಪ್ರಕಟವಾಗಿವೆ, ಇವಲ್ಲಿ ಪ್ರಮುಖ ಪತ್ತೇದಾರಿ ಕಾದಂಬರಿಗಳೆಂದರೆ : ’ಕೆಂಪು ಜೇಡ’, ‘ಹಳದಿ ಚೇಳು ’, ‘ಕೆರಳಿದ ಸರ್ಪ’, ‘ಚೋರಾಗ್ರ ಸೇನ’, ‘ಹಾವಿನ ಕಣ್ಣು’, ‘ವೈಪರ್’, ‘ಐರಾವತ’, ‘ಹೊಲಿದ ತುಟಿಗಳು’, ‘ಕೆಲ್ಲಿ’, ರಿಂಗೊ’, ‘ಬ್ರೌನ್ಷುಗರ್’, ‘ಬಣ್ಣದ ಬೆಕ್ಕು’ ,’ನೀಲಿ ಕಣ್ಣುಗಳು ’, ‘ಆರನೆ ವ್ಯಕ್ತಿ ’,‘ ಬೆಂಕಿ ಮಡಿಲಲ್ಲಿ ಮೇಜರ್ ಹೇಮಂತ’ ಇತ್ಯಾದಿ. ಇವರ ಮನೋವೈಜ್ಞಾನಿಕ ಕೃತಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಹಲವು ಕಾದಂಬರಿಗಳು – ಶರವೇಗದ ಸರದಾರ, ಕೆರಳಿದ ಸರ್ಪ, ಎಂಟೆದೆಯ ಭಂಟ, ಮೃತ್ಯು ಬಂಧನ – ಕನ್ನಡ ಚಲನಚಿತ್ರಗಳಾಗಿ ಜನಪ್ರಿಯವಾದವು.ಪತ್ತೇದಾರಿ ಕೃತಿಗಳಲ್ಲಿ ಅವಶ್ಯವಾದ ಕ್ರೌರ್ಯ, ಗ್ಲಾಮರ್, ರೊಮಾನ್ಸ್, ಭಾವನಾತ್ಮಕ ತಳಮಳ ಎಲ್ಲವನ್ನೂ ಹೇರಳವಾಗಿ ಅಡಕಗೊಳಿಸಿ, ಸರಿಯಾದ ಪ್ರಮಾಣದಲ್ಲಿ ಬೆರೆಸಿ ರೋಮಾಂಚಕಾರಿ ಕತೆಗಳನ್ನು ಕನ್ನಡ ಓದುಗರ ಕೈಗಿತ್ತರು ದೇಸಾಯಿ.ಕೇವಲ ಪತ್ತೇದಾರಿ ಕತೆಗಳಲ್ಲದೇ ಹಲವಾರು ಸಾಮಾಜಿಕ, ಮನೋವೈಜ್ಞಾನಿಕ ಕತೆಗಳಲ್ಲೂ ಜನಪ್ರಿಯತೆ ಮೆರೆದ ಲೇಖಕರು ಪ್ರಬಂಧ, ಕಥಾ ಸಂಕಲನ, ನಾಟಕಗಳಲ್ಲಿಯೂ ತಮ್ಮ ವೈವಿಧ್ಯತೆಯನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಪತ್ತೇದಾರಿ ಸಾಹಿತ್ಯಕ್ಕೆ ಅರ್ಹ ಮನ್ನಣೆ ಇಲ್ಲವೆಂಬ ಕೊರಗಿನಿಂದ ‘ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ’ ಎಂಬ ಉತ್ತಮ ಮಾಹಿತಿ ಭರಿತ ಸಂಶೋಧನಾತ್ಮಕ ಗ್ರಂಥವನ್ನು ಬರೆದ ದೇಸಾಯಿ ೧೯೮೫ರಲ್ಲಿ ಪತ್ತೇದಾರಿ ಕಾದಂಬರಿ ಲೇಖಕರ ಪ್ರಥಮ ಸಮ್ಮೇಳನವನ್ನು ಧಾರವಾಡದಲ್ಲಿ ತಾವೇ ಏರ್ಪಡಿಸಿದಾಗ ಟಿ.ಕೆ.ರಾಮರಾಯರು ಅದರ ಅಧ್ಯಕ್ಷತೆ ವಹಿಸಿದ್ದರು.

ಇವಲ್ಲದೇ ಪತ್ತೇದಾರಿ ಕ್ಷೇತ್ರಕ್ಕೆ ತಮ್ಮ ಬದ್ಧತೆಯನ್ನು ಸದಾ ತೋರಿಸಿದ ದೇಸಾಯಿ ೧೯೮೮ರಲ್ಲಿ ನಡೆಸಿದ ಅಪರಾಧ ಶಾಸ್ತ್ರಗೋಷ್ಠಿ, ೧೯೯೦ರಲ್ಲಿ ನಡೆಸಿದ ಪತ್ತೇದಾರಿ ಕಾದಂಬರಿ ಸ್ಪರ್ಧೆ, ೧೯೯೨ರಲ್ಲಿ ಧಾರವಾಡದಲ್ಲಿ ಮತ್ತು ೧೯೯೭ರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳು ಮುಂತಾದವುಗಳ ರೂವಾರಿಯಾಗಿದ್ದರು ಕೂಡಾ. ಪ್ರತಿಭಾವಂತರೂ , ಜನಪ್ರಿಯರೂ ಆದ ಇವರಿಗೆ ಶ್ರೀ ೧೯೯೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೨ರಲ್ಲಿ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೩ರಲ್ಲಿ ಮುಂಬೈ ಕರ್ನಾಟಕ ಸಂಘದಿಂದ ಸನ್ಮಾನ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸುದರ್ಶನ ದೇಸಾಯಿ ಕಾಲನಿ ನಾಮಕರಣ, ೧೯೯೪ರಲ್ಲಿ ಮದರಾಸು ಕರ್ನಾಟಕ ಸಂಘದಿಂದ ಸನ್ಮಾನ- ಹೀಗೆ ಹತ್ತು ಹಲವಾರು ಸಾರ್ವಜನಿಕ ಸಂಘಸಂಸ್ಥೆಗಳ ಆದರದ ಪ್ರಶಸ್ತಿಗಳು ಸಂದಿವೆ.

ದಿ|| ಟಿ ಕೆ ರಾಮರಾವ್ :

ಕರ್ನಾಟಕದ ಮೇರು ಕಾದಂಬರಿಕಾರ ಬಂಗಾರದ ಮನುಶ್ಯದ ಕರ್ತೃ ಟಿ ಕೆ.ರಾಮರಾಯರನ್ನು ಬಲ್ಲದವರಾರು? ಅವರು ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳನ್ನಲ್ಲದೇ, ಹಲವಾರು ಕುತೂಹಲ ಕೆರಳಿಸಿ ಕೊನೆಯ ಪುಟದವರೆಗೂ ಬಿಡದೇ ಓದುವಂತಾ ರಹಸ್ಯಭರಿತ ಪತ್ತೇದಾರಿ ಥ್ರಿಲ್ಲರ್ಗಳನ್ನು ಬರೆಯುವುದನ್ನು ಕರಗತ ಮಾಡಿಕೊಂಡಿದ್ದ ಕನ್ನಡದ ಸರ್ವಕಾಲಿಕ ಬೆಸ್ಟ್ ಸೆಲ್ಲಿಂಗ್ ಲೇಖಕರು ಕೂಡಾ. ವೈವಿಧ್ಯಮಯ ಕ್ರೈಂ ಸನ್ನಿವೇಶಗಳನ್ನು ತಮ್ಮ ಪರಿಚಯಸ್ಥ ಪೋಲಿಸ್ ಮೂಲಗಳಿಂದ ನೈಜರೀತಿಯಲ್ಲಿ ಅರಿತು, ‘ಇಡೀ ಕತೆಯನ್ನು ತಮ್ಮ ಮೆದುಳಿನಲ್ಲಿ ಕೆಲಕಾಲ “ ಚರ್ನ್ ಔಟ್” ( ಮೆಲುಕು) ಮಾಡಿ ಕೊನೆಗೆ ಅದನ್ನು ಲಿಖಿತ ರೂಪದಲ್ಲಿ ಭಟ್ಟಿ ಇಳಿಸುವ ತಂತ್ರ ತಮ್ಮದು ’ ಎಂದು ಅವರು ಹೇಳಿಕೊಂಡಿದ್ದನ್ನು “ಚಿರಂಜೀವಿ” ಯವರು ಅವರ ಕೃತಿಗಳ ಪುನರ್ಮುದ್ರಣದ ತಮ್ಮ ಮುನ್ನುಡಿಯಲ್ಲಿ ಇತ್ತೀಚೆಗೆ ಸ್ಮರಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ರಹಸ್ಯಮಯ ‘ಕತೆಗಳನ್ನು ಬರೆಯುವಾಗ ಮಧ್ಯದ ಅಧ್ಯಾಯದಲ್ಲಿ ನಿಲ್ಲಿಸಿ , ಕೊನೆಯ ಅಧ್ಯಾಯದಿಂದ ಪ್ರಾರಂಭಿಸಿ ಹಿಂದಕ್ಕೆ ಬರೆಯುತ್ತಾ ನಡುವಿನಲ್ಲಿ ಕೊಂಡಿ ಹಾಕುತ್ತಿದ್ದುದು’ ಅವರ ಯಶಸ್ವೀ ವಿಧಾನವಂತೆ… ಅತ್ಯಂತ ಹೆಚ್ಚು ಬೇಡಿಕೆಯುಳ್ಳ ಕಾದಂಬರಿ ಲೇಖಕರಾಗಿದ್ದು, ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಟಿ ಕೆ ರಾಮರಾಯರನ್ನು ಬೇಟಿಯಾಗಲು ಕನ್ನಡ ಪುಸ್ತಕ ಪ್ರಕಾಶಕರು ಅವರ ಮನೆಗೆ ಎಡತಾಕಿ ಮುಂಗಡ ಹಣವಿತ್ತು ಕಾದಂಬರಿಗಳ ಹಕ್ಕುಗಳನ್ನು ಮೊದಲೇ ಪಡೆಯುತ್ತಿದ್ದುದು ಇವರ ಕೀರ್ತಿಯ ಕುರುಹು. ಅಲ್ಲದೇ ಅವರ ಜನಪ್ರಿಯ ಕಾದಂಬರಿಗಳಾದ ವರ್ಣಚಕ್ರ, ಮರಳು ಸರಪಣಿ, ಮಣ್ಣಿನ ದೋಣಿ, ಲಂಗರು, ಕೆಂಪು ಮಣ್ಣು, ಪಯಣದ ಕೊನೆ , ಹಿಮಪಾತ ಮುಂತಾದವು ಕನ್ನಡದ ಪ್ರಮುಖ ಪತ್ರಿಕೆಗಳಾದ ಸುಧಾ, ಮಯೂರ, ತರಂಗ ಅಲ್ಲದೇ ಕನ್ನಡಪ್ರಭ ಮುಂತಾದ ದೈನಿಕಗಳಲ್ಲಿಯೂ ಧಾರಾವಾಹಿಯಾಗಿ ಹರಿದು ಬಂದು ಕಾತರದಿಂದ ಕಾಯುತ್ತಿದ್ದ ಕನ್ನಡ ಓದುಗರ ಮನ ಸೂರೆಗೊಳ್ಳುತ್ತಿದ್ದವು.ಅಪರಾಧಶಾಸ್ತ್ರ, ವಿಷವೈದ್ಯಶಾಸ್ತ್ರ, ನ್ಯಾಯಶಾಸ್ತ್ರ, ಮನೋವೈದ್ಯಕೀಯ ಶಾಸ್ತ್ರ ಮೊದಲಾದವುಗಳನ್ನು ಅಭ್ಯಸಿಸಿ ಪರಿಣಿತಿ ಪಡೆದು ರಾಮರಾಯರು ಕೊಲೆ, ಡ್ರಗ್ಸ್, ಸ್ಮಗಲಿಂಗ್, ಮಾಫ಼ಿಯಾ ಮುಂತಾದ ಪಾತಕ ಲೋಕದ ಹಲವು ಅಪರಾಧಗಳ ಮೈ ನವಿರೇಳಿಸುವಂತಾ ಕಥಾವಸ್ತುವನ್ನು ಕಣ್ಣಿಗೆ ಕಟ್ಟುವಂತೆ ಹೇಳಬಲ್ಲ ಮಾಂತ್ರಿಕರಾಗಿದ್ದರು. ರಾಯರ ಇತರ ಜನಪ್ರಿಯ ಕೃತಿಗಳೆಂದರೆ: ಡೊಂಕು ಮರ, ದಿಬ್ಬದ ಬಂಗಲೆ, ಬಣ್ಣದ ಹುಳು, ಸರ್ಪದಂಡೆ, ಸೀಳು ನಕ್ಷತ್ರ, ತೋರು ಬೆರಳು, ಕಹಳೆ ಬಂಡೆ, ತ್ರಿಕೋನದ ಮನೆ, ನಕ್ಷತ್ರ ಮೀನು ಇತ್ಯಾದಿ. ಇದಲ್ಲದೇ ಇವರು ಸಾಮಾಜಿಕ ಕಾದಂಬರಿಗಳಾದ ದೂರ ಗಗನ, ಸೀಮಾ ರೇಖೆ, ಕೋವಿ ಕುಂಚ, ಆಕಾಶ ದೀಪ ಅಲ್ಲದೇ ಗೋಲದ ಮೇಲೊಂದು ಸುತ್ತು ಎಂಬ ಪ್ರವಾಸಕಥನವನ್ನೂ ಬರೆದಿದ್ದಾರೆ. ೧೯೮೪ರಲ್ಲಿ ಕರ್ನಾಟಕ ಸರಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತ್ತು.

ಜಿಂದೆ ನಂಜುಂಡಸ್ವಾಮಿ:

ಎನ್. ನರಸಿಂಹಯ್ಯನವರ ಸಮಕಾಲೀನರಾದ ೬೦-೭೦ ದಶಕದ ಲೇಖಕ ಜಿಂದೆ ನಂಜುಂಡಸ್ವಾಮಿಯವರ ರೋಮಾಂಚಕ ಪತ್ತೇದಾರಿ ಕತೆಗಳಲ್ಲಿಯೂ ಓರ್ವ ಸರಣಿ ಪತ್ತೇದಾರ ಜೋಡಿ ಮೃತ್ಯುಂಜಯ ಮತ್ತು ಕುಮಾರ್ ತಮ್ಮ ಸಾಹಸವನ್ನೂ, ತನಿಖಾ ಕೌಶಲ್ಯವನ್ನೂ ಮೆರೆಯುತ್ತಿದ್ದರು.ಇವರ ಜನಪ್ರಿಯ ಕಾದಂಬರಿಗಳೆಂದರೆ: ಓಡಿಹೋದ ಗೂಢಚಾರ, ಚಾಣಕ್ಯರ ಸಂಘ, ಜಂಟಿ ಪ್ರೇಯಸಿ, ನಾನೇ ಕೊಲೆಗಾರ, ಮೃತ್ಯುಪಂಜರದಲ್ಲಿ ಮೃತ್ಯುಂಜಯ, ರಕ್ತದಾಹದ ರಣಹದ್ದು, ಕಾಸಿಲ್ಲದ ಕೇಸು, ಕೊಲ್ಲಬೇಡ ನಿಲ್ಲು, ಪೀತವರ್ಣದ ಪಿಶಾಚಿ ಇತ್ಯಾದಿ. ಈ ಜೋಡಿಯು ಸಾಧಾರಣ ಕೊಲೆ ಕೇಸ್ಗಳಲ್ಲದೇ ಅಂತರರಾಷ್ಟ್ರೀಯ ವಿದ್ವಂಸಕ ದುಷ್ಟರನ್ನೂ ಸದೆಬಡಿಯುವ ಸಾಹಸಮಯ ಪ್ರವೃತ್ತಿಯವರು. ಇವರ ಕಾದಂಬರಿಗಳಲ್ಲಿ ಚೀನಾ ಮುಂತಾದ ದೇಶಗಳ ಬೇಹುಗಾರಿಕೆ ಜಾಲದ ಬಗ್ಗೆಯೂ ಕಥಾವಸ್ತುವಿದ್ದು ಚಿತ್ರಹಿಂಸೆ, ಅತಿ ರಂಜನೀಯ ಪ್ರಣಯ ದೃಶ್ಯಗಳೂ ಮಿಳಿತವಾಗಿ ಓದುಗರಿಗೆ ಕಚಗುಳಿ ಇಡುತ್ತಿದ್ದುದು ಇವರ ಜನಪ್ರಿಯತೆಗೆ ಮುಖ್ಯ ಕಾರಣವಾಗಿತ್ತು.

ಕೌಂಡಿನ್ಯ

ಎಂಬ ಕಾವ್ಯನಾಮದಲ್ಲಿ ವೈ ಎನ್ ನಾಗೇಶ್ರವರೂ ೮೦ರ ದಶಕದಲ್ಲಿ ಹಲವು ಥ್ರಿಲ್ಲರ್ ವರ್ಗದ ಪತ್ತೇದಾರಿ ಕತೆ ಕಾದಂಬರಿಗಳನ್ನು ರಚಿಸಿದ್ದರು. ಸೂಪರ್ ಸುಬ್ಬ, ಮಾನ್ಯ ಮತದಾರರೇ , ಅಂಕದ ಪರದೆ, ವ್ಯೂಹ, ಶುಭಗಳಿಗೆ ಮುಂತಾದ ಜನಪ್ರಿಯ ಕತೆಗಳು ಹೆಸರಾಂತ ಮಾಸಿಕಗಳಲ್ಲೂ ,ದೈನಿಕಗಳಲ್ಲಿಯೂ ಪ್ರಕಟವಾಗಿ ಮಾರುಕಟ್ಟೆಯಲ್ಲಿ ಕಿರು ಕಾದಂಬರಿಗಳಾಗಿಯೂ ದೊರೆಯುತ್ತಿದ್ದವು. ಜನಪ್ರಿಯ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ರಚಿಸುತ್ತಿದ್ದ ಹೊಳೆನರಸೀಪುರದ ಮೂಲದ ಇವರಿಗೆ ೨೦೧೪ರಲ್ಲಿ ಅಲ್ಲಿನ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಗೌರವವೂ ದೊರೆತಿತು.

ದಿ|| ವಿಜಯ ಸಾಸನೂರ:

ಐ.ಪಿ.ಎಸ್. ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿ ದೆಹಲಿ ಇಂಟೆಲಿಜೆನ್ಸ್ ಬ್ಯೂರೋದ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯ ಸಾಸನೂರ ಕೂಡ ತಮ್ಮ ವೃತ್ತಿ ಜೀವನದ ಅನುಭವಗಳ ಸಾರವನ್ನು ಧಾರೆಯೆರೆದು ಹಲವು ಜನಪ್ರಿಯ ರೋಮಾಂಚಕ ಕಾದಂಬರಿಗಳನ್ನು ನೀಡಿದ್ದರು. ‘ವಿಗ್ರಹ ಚೋರರು ’ ಎಂಬ ಕಾದಂಬರಿಯಿಂದ ಆರಂಭಿಸಿದ ಇವರ ಕೃತಿಗಳ ಮಾಲೆಯಲ್ಲಿ ಅಜಿತ್, ಸಾಮ್ರಾಟ್, ಗೀತಸಂಗೀತ, ಯುದ್ಧ, ಮಾಯಾ, ಜ್ವಾಲಾಮುಖಿ, ಅಪರಂಜಿ, ಶಿವತಾಂಡವ, ಇಂದ್ರಜಾಲ ಮತ್ತು ನಿರಂಜನ ಇತ್ಯಾದಿ ಒಂದಾದರ ಮೇಲೆ ಒಂದು ರಹಸ್ಯಮಯ ಕತೆಗಳು ಸೇರುತ್ತಾ ಹೋಗಿ, ನಾಡಿನ ಓದುಗರೆಲ್ಲ ಇವರ ಕತೆಗಳನ್ನು ತವಕದಿಂದ ನಿರೀಕ್ಷಿಸುವಂತಾಗಿತ್ತು. ಧ್ರುವತಾರೆ, ಜ್ವಾಲಾಮುಖಿ, ಶಬ್ದವೇಧಿ, ಸವ್ಯಸಾಚಿ ಮೊದಲಾದ ಇವರ ಪ್ರಮುಖ ಕೃತಿಗಳು ಚಲನಚಿತ್ರವಾಗಿವೆ.

ದಿ|| ಎಚ್ ಕೆ ಅನಂತರಾವ್

ಹೈದರಾಬಾದ್ ನಿವಾಸಿ ಅನಂತರಾವ್ ರಚಿಸಿದ ಒಬ್ಬ ಸೇಡು ತೀರಿಸಿಕೊಳ್ಳುವ ಪೋಲಿಸ್ ಇನ್ಸ್ಪೆಕ್ಟರನ ಜೀವನದ ಸುತ್ತ ಹೆಣೆದ ಕ್ರೈಮ್ ಕಾದಂಬರಿ ‘ಅಂತ’ – ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಜನಪ್ರಿಯತೆಯ ಶಿಖರ ತಲುಪಿತು.ಆ ನಂತರ ಇದೇ ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಗಿ.ಅಂಬರೀಶ್ ನಾಯಕರಾಗಿ ಅಭಿನಯಿಸಿ ತುಂಬಾ ಖ್ಯಾತರಾದರು.ಇವರ ಪ್ರಖ್ಯಾತ ಕಾದಂಬರಿಗಳ ಪಟ್ಟಿಯಲ್ಲಿ ಸೇರಿವೆ: ಜಾಲ, ಶೋಧನೆ, ಸೆಳೆತ, ಅಂತ, ಅಂಜಿಕೆ, ಓಟ, ಜನಜನಕ ,ಸುಶೀಲ್, ಶಾಂತಿ ಶೋಧ ,ಅಂತ-೨, ಅಪೂರ್ವ, ಕಿರಾತಕರು, ಅನಾವರಣ, ಸಾವಿನ ಸೀಳು,ಮನೋಮಯ, ಡಾಟ್ಕಾಮ್, ಮತ್ತೊಂದು ಆಯಾಮ, ಕೆಂಪು ಹಿಮ.

ಬಿ ಎಚ್ ಸಂಜೀವಮೂರ್ತಿ :

೭೦-೮೦ ರದಶಕದಲ್ಲಿ ಜನಪ್ರಿಯರಾಗಿದ್ದ ಬಿ ಎಚ್ ಸಂಜೀವ ಮೂರ್ತಿಯವರೂ ಹಲವು ರೋಚಕ ಸೆಕ್ಸ್ ಮತ್ತು ಕ್ರೈಮ್ ಮಿಶ್ರಿತ ಪತ್ತೇದಾರಿ ಕಾದಂಬರಿಗಳನ್ನೂ ಬರೆಯುತ್ತಿದ್ದರು. ಅವರ ಮುಖ್ಯ ಕೃತಿಗಳೆಂದರೆ: ಆ ರಹಸ್ಯವೇನು?, ಇಂಡಿಯನ್ ಜೇಮ್ಸ್, ಒಲವಿನ ಸೇಡು, ಜಂಗಲ್ ಗರ್ಲ್, ದರೋಡೆಯ ರಾಣಿ, ಮಿಸ್ಟರ್ ಶ್ರೀ, ಲವ್ಫೇಮ್, ಸೇಡಿನ ಕಿಡಿ. ಆದರೆ ಇವೂ ಕಾಲಗರ್ಭದಲ್ಲಿ ಮರೆಯಾಗಿ ಮತ್ತೆ ಮುದ್ರಣ ಪಡೆದಂತೆ ಕಾಣುತ್ತಿಲ್ಲ. ಕೆಲವು ನಗರ ಕೇಂದ್ರ ಗ್ರಂಥಾಲಯಗಳ ಶೆಲ್ಫ್ಗೆ ಮಾತ್ರವೇ ಸೀಮಿತವಾಗಿದ್ದವು

ಬಿ ವಿ ಅನಂತರಾಮ್:

ನೂರಾರು ಗೂಢಚಾರಿ ಕತೆಗಳನ್ನು ರಚಿಸಿದ ಅನಂತರಾಂ ೯೦ರ ದಶಕದಲ್ಲಿ “ಜಿಂಕೆ” ಯ ಅಸೈನ್ಮೆಂಟ್ಸ್ ಎಂಬ ಸಾಹಸಿಯ ಸರಣಿಯನ್ನು ರಚಿಸಿದ್ದರು. ಇಂಗ್ಲೀಷ್ ಕಾದಂಬರಿಗಳ ವಾತಾವರಣವನ್ನು ಕನ್ನಡದಲ್ಲಿ ಸೃಷ್ಟಿಸಿ ಅದೇ ಭಾಷೆಯಲ್ಲೇ ಸಂಭಾಷಣೆಯನ್ನೂ ಬರೆಯುತ್ತಿದ್ದುದು ಗಮನಾರ್ಹ ಸಂಗತಿ. ಟೆರರಿಸ್ಟ್ ಜಿಂಕೆ, ಟಚ್ ಮಿ ನಾಟ್, ಡೆತ್ ಚೇಸ್, ಡೆಸರ್ಟ್ ಸ್ಟಾರ್ಮ್, ಫ಼ೈನಲ್ ಅಸ್ಸಾಲ್ಟ್, ಜರ್ನಿ ಟು ಹೆಲ್ ಇತ್ಯಾದಿ ಇವರ ಕಾದಂಬರಿಗಳು.

ಆರ್ ವಿ ಕಟ್ಟೀಮನಿ:

ಇರ್ವಿಂಗ್ ವ್ಯಾಲೇಸರ ಜನಪ್ರಿಯ ಇಂಗ್ಲೀಷ್ ಕಾದಂಬರಿ ದಿ ಸೆಕೆಂಡ್ ಲೇಡಿ ಯ ಆಧಾರಿತವಾದ ಇವರ ಪ್ರೊಜೆಕ್ಟ್ ಎಕ್ಸ್ ಎಂಬ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿ ಮೂಡಿಬಂದ ನಂತರ ಅದೇ ಛಾಪಿನಲ್ಲಿ ಕಟ್ಟೀಮನಿಯವರು ಬ್ಲ್ಯಾಕ್ ಮಾಂಬ, ಸಂಮೋಹನಾಸ್ತ್ರ, ಶೃಂಗಾರಪುರ ೧ ಕಿಮೀ, ಇತ್ಯಾದಿ ಯಶಸ್ವಿ ಪತ್ತೇದಾರಿ ಶೈಲಿಯ ಕಾದಂಬರಿಗಳನ್ನು ಇತ್ತರು.ಕ್ಯಾತ್ಸಂದ್ರ ಚಂದ್ರಶೇಖರ್ ರವರೂ ೧೯೮೦-೯೦ರಲ್ಲಿ ಗೂಡಚಾರ – ಪತ್ತೇದಾರ ಕಥಾವರ್ಗದಲ್ಲಿ ಹಲವು ಕಾದಂಬರಿಗಳನ್ನಿತ್ತು ಮರೆಯಾದರು. ಇವರ ಕೃತಿಗಳು: ಅರ್ಧರಾತ್ರಿ, ಅಪಾಯ ಚಾಣಕ್ಯರ ತಂತ್ರ, ಅಪಾಯದ ಅಡಿಯಲ್ಲಿ ಗೂಢಚಾರ, ತೆರೆಯ ಮರೆಯಲ್ಲಿ, ಪ್ರೇತದ ಹಿಂದೆ ಮೃತ್ಯು ಇತ್ಯಾದಿ. ಹಲವಾರು ಕಾದಂಬರಿಗಳನ್ನು ಇತ್ತೂ ಅಲ್ಪಕಾಲದ ಖ್ಯಾತಿಯನ್ನು ಪಡೆದು ನಂತರ ಕಣ್ಮರೆಯಾದ ಕನ್ನಡ ಪತ್ತೇದಾರಿ ಕಾದಂಬರಿಕಾರರು ಹಲವರು: ಕುಂದಾನಿ ಸತ್ಯನ್, ಬಿ.ಕೆ. ಸುಂದರರಾಜು, ಎಂ. ಜೀವನ್, ಮಾಭೀಶೇ, ಎನ್ ಗುಂಡಾಶಾಸ್ತ್ರಿ, ಪಿ. ರಾಜು, ಕಾಕೋಳು ರಾಮಯ್ಯ, ಪುಲಕೇಶಿ, ಸಾಸ್ಕಾಮೂರ್ತಿ, ಚೈತನ್ಯ (ಮಾಧವ ಕುಲಕರ್ಣಿ), ಎಚ್. ಜಿ. ಶಿವಶಂಕರ, ಸದಾನಂದ, ಸಾ. ಕೃ. ಪ್ರಕಾಶ್, ಶಿವಾಜಿ ರಾವ್ ಅಂತವರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಇವರ ಕಾದಂಬರಿಗಳ ಪ್ರತಿಗಳು ಇಂದು ಲಭಿಸುವುದೂ ಕಷ್ಟಸಾಧ್ಯವೇ. ತಮ್ಮದೇ ಆದ ಕೊಡುಗೆಯನ್ನಿತ್ತು ಇಬ್ಬರು ಮಹಿಳಾ ಕಾದಂಬರಿಕಾರರೂ ಕೂಡಾ ಪತ್ತೇದಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು’; ಶ್ರೀಮತಿ ಸರಿತಾ ಜ್ಞಾನಾನಂದ ಮತ್ತು ಕೆ ಆರ್ ಪದ್ಮಜೆ.

ಸರಿತಾ ಜ್ಞಾನಾನಂದರವರು ತೆಲುಗಿನಿಂದ ಹಲವಾರು ವಾಮಾಚಾರ ಮತ್ತು ವೈಜ್ಞಾನಿಕ ವರ್ಗದ ಕಾದಂಬರಿಗಳನ್ನು ಅನುವಾದಿಸಿಯೂ ಇದ್ದರು. ಮರಣ ಮೃದಂಗ, ಸ್ಪರ್ಶ ರೇಖೆಗಳು, ಸುವರ್ಣ ಮಾಲಿ, ಸ್ಮಶಾನ ಭೈರವಿ ಮುಂತಾದವು ಇವರು ರಚಿಸಿದ ಕಾದಂಬರಿಗಳು

ನಂತರ ೮೦ರಿಂದ ಒಂದೂವರೆ ದಶಕಗಳ ಕಾಲ ತೆಲುಗಿನ ಪ್ರಖ್ಯಾತ ಲೇಖಕರಾದ ಯಂಡಮೂರಿ ವೀರೇಂದ್ರನಾಥ್ ಎಂಬುವರ ಅನುವಾದಿತ ರಹಸ್ಯಮಯ ಮನೋವೈಜ್ಞಾನಿಕ, ಮಾಟಮಂತ್ರ, ನಾನಾವೇಶಧಾರಿ ಮುಂತಾದ ವೈವಿಧ್ಯಮಯ ಕಥಾವಸ್ತುವಿನ ಕಾದಂಬರಿಗಳು ಎಲ್ಲೆಲ್ಲೂ ಕರ್ನಾಟಕದಲ್ಲಿ ರಾರಾಜಿಸುತ್ತಿದ್ದವು. ಇವನ್ನು ಕನ್ನಡಕ್ಕೆ ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್, ರಾಜಾ ಚೆಂಡೂರ್ ಮುಂತಾದವರು ಅನುವಾದಿಸುತ್ತಲೂ ಇದ್ದರು..ಬಹಳ ಶೀಘ್ರದಲ್ಲೇ ಜನಪ್ರಿಯವಾಗಿ ಜನಮನವನ್ನು ಗೆದ್ದು ಎಲ್ಲರೂ ಮುಗಿಬಿದ್ದು ಕೊಳ್ಳುತ್ತಿದ್ದ ಇವರ ಕೃತಿಗಳಲ್ಲಿ ಮುಖ್ಯವಾದವು : ತುಳಸಿ ,ತುಳಸಿದಳ, ಅಷ್ಟಾವಕ್ರ, ಪ್ರೇಯಸಿಯ ಕರೆ , ಅಂತಿಮ ಹೋರಾಟ, ಅನೈತಿಕ, ಕಪ್ಪಂಚು ಬಿಳಿ ಸೀರೆ, ಹದ್ದಿನ ರೆಕ್ಕೆ ಸದ್ದು, ಅಂಧಕಾರದಲ್ಲಿ ಸೂರ್ಯ ಇತ್ಯಾದಿ.

ಮುಖ್ಯವಾಹಿನಿ ಕನ್ನಡ ಲೇಖಕರಲ್ಲಿ ಎಂ ಕೆ ಇಂದಿರಾರವರ ನೂರೊಂದು ಬಾಗಿಲು ಮತ್ತು ಅಶ್ವಿನಿಯವರ ಕಪ್ಪುಕೊಳ ಕೂಡಾ ಪತ್ತೇದಾರಿ/ಕೌತುಕಮಯ ಕಾದಂಬರಿಗಳ ಪಟ್ಟಿಗೆ ಅಪರೂಪದ ಸೇರ್ಪಡೆಯಾಗಿವೆ. ಒಟ್ಟಾರೆ ಪತ್ತೇದಾರಿ ಎಂಬ ಹಣೆಪಟ್ಟಿ ಹೊತ್ತ ಒಂದು ವರ್ಗದ ಸಹಸ್ರಾರು ಕೃತಿಗಳು ಅಲ್ಪಕಾಲಿಕ ರಂಜನೆಯೆಂಬ ಅಭಿಪ್ರಾಯಕ್ಕೆ ಸಿಕ್ಕು, ಮರು ಮುದ್ರಣ ಕಾಣದೇ ಕನ್ನಡ ಸಾಹಿತ್ಯಲೋಕದಿಂದ ಕಣ್ಮರೆಯಾಗಿರುವುದು, ಕೊಂಡು ಓದುವ ಸಂಪ್ರದಾಯವೇ ಇಲ್ಲದ ಕನ್ನಡ ಓದುಗರ ನಿರಭಿಮಾನದ ಪ್ರತೀಕವೇ ಆಗಿದೆ. ಆದರೆ, ನಾಣ್ಯದ ಇನ್ನೊಂದು ಮುಖವೆಂದರೆ ಸಾಧಾರಣ ಕೊಲೆ- ಸುಲಿಗೆಗಳ ತನಿಖೆಯ ಕಥಾವಸ್ತುವಿನ ಏಕತಾನತೆಯನ್ನು ಮೀರಿ ಬರೆಯಬೇಕಾದುದು ಪತ್ತೇದಾರಿ ಲೇಖಕರಿಗೂ ಇಂದು ಅವಶ್ಯವಿದೆ. ಕೇವಲ ಪಿಸ್ತೂಲ್ ಹಿಡಿಯುವ ಪಾತ್ರಗಳನ್ನು ಓದುಗರು ಅಷ್ಟಾಗಿ ಇಷ್ಟಪಡುವುದಿಲ್ಲ. ಬದಲಾದ ಸಾಮಾಜಿಕ ಪರಿಸ್ಥಿತಿಗೆ ಹೊಂದುವಂತಾ ಕತೆಗಳ ಅಭಾವವೂ ಪತ್ತೇದಾರಿ ಸಾಹಿತ್ಯದ ಅಸ್ತಮಾನಕ್ಕೆ ಕಾರಣವಾಗಿವೆ. ಆಧುನಿಕ ಗ್ಯಾಜೆಟ್, ಅಂತರ್ಜಾಲ ತಂತ್ರಜ್ಞಾನ ಬಳಸಿ ಸಸ್ಪೆನ್ಸ್( ಅನಿಶ್ಚಿತತೆ) ಜತೆಗೆ ಅಡ್ವೆಂಚರ್( ಸಾಹಸ) ವನ್ನೂ ಬೆರೆಸಿ ಅಂತರರಾಷ್ಟ್ರೀಯ ಸಂಚು, ಕುತಂತ್ರ ಮತ್ತು ವಿಸ್ಮಯಕಾರಕ ಸನ್ನಿವೇಶಗಳನ್ನು ಹೊಸದಾಗಿ ಕನ್ನಡ ಓದುಗರಿಗೆ ಪರಿಚಯ ಮಾಡಿಕೊಡಲು ಲೇಖಕರು ತಾವೂ ಸ್ವಲ್ಪ ಸಂಶೋಧನೆ ಮತ್ತು ಪ್ರಯೋಗ ಮಾಡುವ ಅಗತ್ಯವಿದೆ.

ವೈವಿಧ್ಯಮಯ ಸಾಮಯಿಕ ಕಥಾವಸ್ತುವನ್ನಿಟ್ಟುಕೊಂಡು ಬರೆದು ಪತ್ತೇದಾರಿ ಸಾಹಿತ್ಯಕ್ಕೆ ಪುನರ್ಜನ್ಮ ನೀಡಿದಲ್ಲಿ, ಆಕರ್ಷಕ ವಿನ್ಯಾಸದಿಂದ ಕೂಡಿದ ನೂತನ ಪತ್ತೇದಾರಿ ಕೃತಿಗಳನ್ನು ತಯಾರಿಸಲು ಪ್ರಕಾಶಕ ವರ್ಗ ಸಿದ್ಧವಿದೆ. ಆಗ ರಂಜನೀಯ ಸಾಹಿತ್ಯದ ಮುಖ್ಯ ಪ್ರಕಾರವಾದ ಪತ್ತೇದಾರಿ ಕತೆ ಕಾದಂಬರಿಗಳನ್ನು ಕನ್ನಡ ಓದುಗರು ಮತ್ತೆ ಸ್ವಾಗತಿಸಬಹುದೆಂಬ ಆಶಾಭಾವನೆಯೂ ಇದರೊಂದಿಗೆ ಅಡಕವಾಗಿದೆ.

ನಾಗೇಶ್ ಕುಮಾರ್. ಸಿ.ಎಸ್


 
 
 

Comments


© 2020 by Nagesh Kumar CS . Proudly created with Wix.com

bottom of page