ಸಂಚಿಕೆ-4
ಶ್ರೀರಾಮ ವನವಾಸ ಆರಂಭಿಸಿದ ಚಿತ್ರಕೂಟದತ್ತ...
ಫೈಜಾಬಾದಿನ ಹೋಟೆಲ್ ಶಾನೆ ಅವಧ್ ಬಿಟ್ಟು ಹೊರಗೆ ಹೊರಟಾಗ ಬೆಳಿಗ್ಗೆ 6-7 ಗಂಟೆ ಇರಬಹುದು. ಎಂದಿನಂತೆ ಸ್ನಾನ ತಿಂಡಿ ಎಲ್ಲಾ ಮುಗಿದಿತ್ತು. ಅವತ್ತು ತಿಂಡಿಗೆ ಅವಲಕ್ಕಿ ಒಗ್ಗರಣೆ ಮತ್ತು ಅವಲಕ್ಕಿ ಹಾಲು ಬೆಲ್ಲ ಇತ್ತು ಎಂದು ನೆನಪಿದೆ. ನನಗೆ ಆರೋಗ್ಯ ಸ್ವಲ್ಪ ಸುಧಾರಿಸಿದಂತೆ ಭಾಸವಾಯಿತು.
ಅಯೋಧ್ಯೆಯಲ್ಲಿ ಇದೀಗ ಲತಾ ಮಂಗೇಶ್ಕರ್ ಚೌಕ ಎಂದು ನಾಲ್ಕು ರಸ್ತೆಯ ನಡುವಿನಲ್ಲಿ ಹೊಸದಾಗಿ ಉದ್ಘಾಟಿಸಿದ್ದಾರೆ. ನಮ್ಮ ದೇಶದ ಆ ಮಹಾನ್ ಗಾಯಕಿಯ ನೆನೆಪಿನಲ್ಲಿ ಬೃಹತ್ತಾದ ವೀಣೆಯ ಪ್ರತಿಮೆಯನ್ನು ಅಲ್ಲಿ ಸರಸ್ವತಿಯ ದ್ಯೋತಕದಂತೆ ಸ್ಥಾಪಿಸಿದ್ದಾರೆ. ಅದನ್ನು ಹೋಗುವಾಗ ಕಂಡೆವು.
ಮತ್ತೆ ನಮ್ಮ ಮ್ಯಾನೇಜರ್ ಮೋಹನ್ ಪ್ರಭು ಮೈಕ್ ಕೈಗೆತ್ತಿಕೊಂಡು ಬಸ್ ಹೊರಟಾಗ ಚಿತ್ರಕೂಟದ ವಿವರಣೆಗೆ ಶುರು ಹಚ್ಚಿಕೊಂಡರು. ನಾವು ಕುಳಿತಲ್ಲೇ ಕೇಳುತ್ತಾ ಹೋಗುವ ಧ್ವನಿವರ್ಧಕ ವ್ಯವಸ್ಥೆಯಿದೆ.
ಅದರ ಸಾರಾಂಶ:
"ಚಿತ್ರಕೂಟ ಈಗ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಮಧ್ಯೆಯ ಸೀಮಾರೇಖೆಯಲ್ಲಿದೆ. ಇತ್ತ ಉ. ಪ್ರ. ದವರು ಅದರ ಬದಿಯನ್ನು ಚಿತ್ರಕೂಟ ಜಿಲ್ಲೆ ಎಂದು ನಾಮಕರಣ ಮಾಡಿದ್ದರೂ ಅಲ್ಲಿ ಕಡಿಮೆ ಪುಣ್ಯ ಕ್ಷೇತ್ರವಿದೆಯೆಂದೂ ತಮ್ಮ ಸತನಾ ಜಿಲ್ಲೆಯ ಭಾಗದಲ್ಲಿಯೇ ಹೆಚ್ಚಿನ ತೀರ್ಥಸ್ಥಳಗಳಿವೆಯೆಂದು ಮ. ಪ್ರ. ದವರು ಹೆಮ್ಮೆ ಪಡುತ್ತಾರೆ.
ಹೇಗೂ ನಾವು ಮಧ್ಯಪ್ರದೇಶದ ರಿವರ್ ಫ್ರಂಟ್ ಎಂಬ ರೆಸಾರ್ಟಿನಲ್ಲಿ ಇಳಿದುಕೊಳ್ಳುವುದಾಗಿಯೂ ಅದು ಸುಂದರ ಹಾಗೂ ಸೌಕರ್ಯಕರವಾಗಿದೆ ಎಂದೂ ಹೇಳಿದರು.
"ಚಿತ್ರಕೂಟ ರಾಮಾಯಣದ ಅತಿ ಮಹತ್ವದ ಸ್ಥಳ- ತಮ್ಮ ವನವಾಸದ 14 ವರ್ಷಗಳಲ್ಲಿ ಶ್ರೀ ರಾಮ ಲಕ್ಷಣ ಜಾನಕಿಯರು ಸುಮಾರು 12 ವರ್ಷ ಧೀರ್ಘ ಕಾಲ ಇಲ್ಲಿಯೇ ಕಳೆದರೆಂದು ಉಲ್ಲೇಖವಿದೆ.
ಇದು ಮೊದಲಿಂದಲೂ ಋಷಿಮುನಿಗಳ ನಾಡು. ಅಲ್ಲಿ ಆಗೆಲ್ಲಾ ಹೆಚ್ಚಾಗಿ ರಕ್ಕಸರ ಕಾಟ. ಅಲ್ಲಿ ಸತತವಾಗಿ ತಪಸ್ಸು ಯಜ್ಞ ಮುಂತಾದ ಲೋಕ ಕಲ್ಯಾಣ ಕಾರ್ಯಗಳಲ್ಲಿ ತೊಡಗಿದ್ದ ಋಷಿಗಳನ್ನು ಕೊಂದು ಇಲ್ಲವೇ ಹಿಂಸಿಸಿ ಪೀಡಿಸುತ್ತಾ ವಿಘ್ನಗಳನ್ನು ಮಾಡುತ್ತಿದ್ದ ಆ ರಾಕ್ಷಸರನ್ನು ಕೊಲ್ಲಲು ದಾನವ ಸಂಹಾರಿಯ ಪಾತ್ರ ವಹಿಸಲು ರಾಮನೇ ಬಂದನೆಂದು ಹೇಳುತ್ತಾರೆ. ಶಿಷ್ಟ ರಕ್ಷಕ , ದುಷ್ಟ ಶಿಕ್ಷಕನಲ್ಲವೇ ಅವತಾರಿ ರಾಮ?
ಅಯೋಧ್ಯೆಯಿಂದ 275 ಕಿಮೀ ದೂರದಲ್ಲಿರುವ ಬೆಟ್ಟದ ತಪ್ಪಲಿನ ಸುಂದರ ದಟ್ಟ ಅರಣ್ಯವನ್ನು ಆರಿಸಿಕೊಂಡಿದ್ದ ಶ್ರೀರಾಮ. ಆಗಿನ ಕಾಲದಲ್ಲಿ ಬಹಳ ದೊಡ್ಡ ಅಂತರವೇ ಇದು. ರಾಜಧಾನಿಯ ನೆರಳು ಕೂಡಾ ಬೀಳದಿರಲೆಂದು ಇರಬೇಕು. ಅಲ್ಲಿಗೆ ಸಹಾ ವಾಲ್ಮೀಕಿ ಮಹರ್ಷಿಗಳ ಸೂಚನೆಯ ಮೇರೆಗೇ ಬಂದಿದ್ದರಂತೆ. ನಾರುಮುಡಿ ಉಟ್ಟ ಘನಶ್ಯಾಮ ಆಜಾನುಬಾಹು ರಾಮನೇ ನಾರಾಯಣ, ಆದಿಶೇಷನಾಗಿದ್ದವ ಈಗ ಸಹೋದರ ಲಕ್ಷ್ಮಣ ಮತ್ತು ಮಹಾಲಕ್ಷ್ಮಿ ಅವತಾರಿ ಸೀತೆ. ಇವರ ಸರಳ ಕುಟೀರ ಇಲ್ಲಿತ್ತು. ಅಲ್ಲಿ ವಾಸವಿದ್ದ ಸಕಲ ಋಷಿಮುನಿಗಳ ಆರಾಧ್ಯದೈವ ರಾಮ.
ಇತ್ತ ಅಯೋಧ್ಯೆಯಲ್ಲಿ ತನ್ನ ಅಣ್ಣ ಅತ್ತಿಗೆ ಮತ್ತು ಸಹೋದರ ವನವಾಸಿಗಳಾದರೆಂದೂ ತಾಯಿ ಕೈಕೇಯಿ ಕೃತ್ರಿಮದಿಂದ ಹೀಗೆ ಅಪ್ಪನಿಂದ ವಚನ ಪಡೆದಳೆಂದೂ ಭರತನಿಗೆ ತಿಳಿದೊಡನೇ ತಾಯಿಯ ವರ್ತನೆಯನ್ನು ತೀವ್ರವಾಗಿ ವಿರೋಧಿಸಿ ರಾಮನನ್ನು ನಾವು ಹಿಂತಿರುಗಿ ಕರೆಸಿಕೊಳ್ಳಬೇಕೆಂದೂ, ಅವನಿಗೇ ಪಟ್ಟ ಕಟ್ಟಬೇಕೆಂದು ರಾಜಮನೆತನದವರೂ, ಸೈನಿಕರ ಸಮೇತ ಅರ್ಧ ಅಯೋಧ್ಯೆಯನ್ನೇ ಕರೆತರುತ್ತಾನೆ ಭರತ ಇಲ್ಲಿಗೆ.
ಅವರ ಈ ದೊಡ್ಡ ಮೆರವಣಿಗೆ ಕಂಡು ಲಕ್ಷ್ಮಣ ಸಹಾ "ಇದೇನು. ಭರತ ಸೈನ್ಯ ಸಮೇತ ನಮ್ಮ ಮೇಲೆ ಯುದ್ಧಕ್ಕೆ ಬರುತ್ತಿದ್ದಾನೆ"ಎಂದು ಅಪಾರ್ಥ ಮಾಡಿಕೊಂಡು ಶಸ್ತ್ರವನ್ನೆತ್ತಲು ಅಣ್ಣನ ಅನುಮತಿ ಕೇಳುತ್ತಾನೆ . ಆಗ ಶಾಂತ ಸಮಚಿತ್ತದ ಶ್ರೀರಾಮ "ಇಲ್ಲ, ನಾನು ಭರತನನ್ನು ಬಲ್ಲೆ, ಹಾಗೆ ಅವನ ಮನಸ್ಸಿನಲ್ಲಿರಲು ಸಾಧ್ಯವಿಲ್ಲ. ನೋಡು ನಮ್ಮ ಕುಟುಂಬದವರು, ಮಾತೆಯರು, ಗುರು ಹಿರಿಯರು ಎಲ್ಲರೂ ಅವನ ಜೊತೆ ಇದ್ದಾರೆ. ಅವನು ಇಲ್ಲಿಗೆ ಬರಲಿ" ಎಂದು ಪ್ರಸನ್ನ ಚಿತ್ತನಾಗಿ ಕುಳಿತೇ ಇದ್ದನಂತೆ. ಪರಮಾತ್ಮನಿಗೆ ತಿಳಿಯದ ಗುಟ್ಟೇ ಇದು?
ಈ ಚಿತ್ರಕೂಟದಲ್ಲಿ ರಾಮ ಭರತರ ಮಿಲನ, ರಾಮ ಅಯೋಧ್ಯೆಗೆ ವಾಪಸ್ಸು ಬರಲು ನಿರಾಕರಿಸುವುದು ಎಲ್ಲಾ ನಡೆದಿದ್ದು. ಪಿತೃ ವಾಕ್ಯ ಪರಿಪಾಲಕನಾಗಿ ನನ್ನ ವನವಾಸ ಕಳೆಯುವವರೆಗೂ ನೀನೇ ರಾಜ್ಯಭಾರವನ್ನು ಮಾಡಬೇಕೆಂದು ಭರತನಿಗೆ ಶ್ರೀರಾಮ ಅಪ್ಪಣೆ ಮಾಡುತ್ತಾನೆ. ತಂದೆಯ ದೇಹಾಂತ್ಯವಾದದ್ದನ್ನು ಮನಗಂಡ ನಾಲ್ವರು ಸಹೋದರರೂ ಅಲ್ಲಿ ಹರಿಯುವ ಪವಿತ್ರ ನದಿ ಮಂದಾಕಿನಿಯಲ್ಲಿ ಅಪ್ಪನ ಶ್ರಾದ್ದವನ್ನೂ ಮಾಡುತ್ತಾರೆ. ಅನಂತರ ರಾಮನ ಪಾದುಕೆಯನ್ನೇ ರಾಜ ಚಿನ್ಹೆಯಾಗಿ ತೆಗೆದುಕೊಂಡು ಹೋಗಿ ಭರತನೂ ಅಯೋಧ್ಯೆಯ ಬಳಿಯ ಕಾಡಿನಲ್ಲೇ ಕುಟೀರ ಮಾಡಿಕೊಂಡು ಅಲ್ಲಿಂದಲೇ ರಾಜ್ಯವನ್ನಾಳಿದನಂತೆ. ಅರಮನೆಗೆ ಅಣ್ಣ ಅತ್ತಿಗೆ ಬಂದ ನಂತರವೇ ತಾನೂ ಬರುವೆ ಎಂದು ನಿರ್ಧರಿಸಿದ್ದನಂತೆ.
ಈ ಕ್ಷೇತ್ರದಲ್ಲಿಯೇ ಅತ್ರಿ ಮುನಿ ಮತ್ತು ಸತಿ ಅನಸೂಯಾ ವಾಸಿಸುತ್ತಿದ್ದರು. ಶ್ರೀರಾಮನ ತ್ರೇತಾಯುಗದಲ್ಲಿ ಪರ್ವತಗಳು ಜೀವಂತವಿದ್ದು ಮಾತಾಡುತ್ತಿದ್ದವಂತೆ. ಚಿತ್ರಕೂಟ ಬೆಟ್ಟವು ಶ್ರೀರಾಮನ ಪಾದಸ್ಪರ್ಷದಿಂದ ತಾನು ಪುನೀತನಾದೆ ಎಂದು ದಿನವೂ ಹರ್ಷಿಸುವುದಂತೆ. ಅದಕ್ಕೆ ಮೊದಲು ಪೂಜಿಸಿ ಅನಂತರ ಅದರ ಮೇಲೆ ತನ್ನ ಕಾಲಿಟ್ಟನಂತೆ ಮರ್ಯಾದಾ ಪುರುಷೋತ್ತಮ ಶ್ರೀರಾಮ..."
ಇದೆಲ್ಲಾ ವಾರ್ತೆಗಳನ್ನು ಕೇಳಿ ನಾವೆಲ್ಲಾ ಪ್ರಯಾಣಿಕರು ಬಹಳ ಉತ್ಸಾಹ ಹಾಗೂ ಭಕ್ತಿಭಾವದಿಂದ ತುಂಬಿದ್ದೆವು.
ಇನ್ನುಅಲ್ಲಿಗೆ ರಸ್ತೆಯಲ್ಲಿ ಹೋಗುವಾಗ ನಮಗೆ ತುಂಬಿ ಹರಿಯುತ್ತಿದ್ದ ಗೋಮತಿ ನದಿಯ ಮೇಲಿನ ಸೇತುವೆಯ ದರ್ಶನವಾಗಿತ್ತು ( ಚಿತ್ರ ಇದೆ). ಅದು ಈಗಿನ ಉ.ಪ್ರ.ರಾಜ್ಯದ ಸುಲ್ತಾನಪುರ್ ಎಂಬ ಕ್ಷೇತ್ರದಲ್ಲಿದೆ. ಇದರ ಮೊದಲ ಹೆಸರು ಕುಶಾಪುರ ಆಗಿತ್ತೆಂದೂ ಶ್ರೀರಾಮನ ಮಗ ಕುಶನ ಊರು ಎಂಬ ಸ್ಥಳ ಪುರಾಣವೂ ಇದೆ. ಆದರೆ ಇದನ್ನು ಯುದ್ಧದಲ್ಲಿ ಗೆದ್ದ ಭಕ್ತಿಯಾರ್ ಖಿಲ್ಜಿ ಎಂಬ ಮುಸ್ಲಿಂ ಸೇನಾಧಿಪತಿ ಆಗ ಸುಲ್ತಾನಪುರ್ ಎಂದು ಬದಲಿಸಿದನಂತೆ.
ಈಗ ಇದರ ಸಂಸದ ಬಿ.ಜೆ.ಪಿ.ಯ ಮನೇಕಾ ಗಾಂಧಿ ಆಗಿದ್ದಾರೆ. ರಾಯ್ ಬರೇಲಿ, ಅಮೇಠಿಯಿಂದ ಹಿಡಿದು ಇಲ್ಲಿಯವರೆಗೆ ನೆಹರೂ ಕುಟುಂಬಸ್ತರ ಚುನಾವಣೆಯಲ್ಲಿ ಇವೆಲ್ಲಾ ಪ್ರತಿಷ್ಟಿತ ಭದ್ರ ಕೋಟೆಗಳಾಗಿದ್ದವಂತೆ...
ಅಲ್ಲಿಯೇ ಹತ್ತಿರದ ಧಾಭಾ ಒಂದರಲ್ಲಿ ಮತ್ತೆ ಹೊರಗೆ ಆಸನಗಳ ವ್ಯವಸ್ಥೆ ಮಾಡಿ ನಮಗೆ ಬೆಳಿಗ್ಗೆ ಹೊರಡುವಾಗಲೇ ಕಟ್ಟಿಕೊಂಡು ತಂದಿದ್ದ ಅಡಿಗೆಯನ್ನು ಬಡಿಸಿದರು. ಅವತ್ತು ಸಹಾ ತರಕಾರಿ ಪುಲಾವ್, ಸಲಾದ್, ಹಪ್ಪಳ, ಅನ್ನ, ಸಾರು, ಮೊಸರು ಮಜ್ಜಿಗೆ ಇತ್ತೆಂದು ನೆನಪು. ಇಂತಾ ಭೋಜನ ಸಮಯ ಸಮಯಕ್ಕೆ ಯಾವುದೋ ರಾಜ್ಯದ ಮೂಲೆಯಲ್ಲಿ ಸರಿಯಾಗಿ ಸಿಗುವುದೆಂದರೆ ನಮ್ಮ ಪುಣ್ಯ ತಾನೆ?. ನಾವೆಲ್ಲರೂ ಆ ಅಡಿಗೆ ಹುಡುಗರ ಜೊತೆ ಸ್ನೇಹ ವಿಶ್ವಾಸದಿಂದ ವರ್ತಿಸಿ ಮಾತಾಡಿಸುತ್ತಿದ್ದೆವು. ಬೆಳಿಗ್ಗೆ ಆರಕ್ಕೆ ತಿಂಡಿ ಕಾಫಿ ಟೀ ಜೊತೆಗೆ ಪಾರ್ಸೆಲ್ ಊಟ ಮಾಡಿರಬೇಕಾದರೆ ಅವರು ರಾತ್ರಿ ಪಾತ್ರೆ ತೊಳೆದು ಮಲಗಿ ಬೆಳಗಿನ ಜಾವ 3ಕ್ಕೆಲ್ಲಾ ಎದ್ದಿರಬೇಕು. ಎಂತಹಾ ಕಠಿಣ ಪರಿಶ್ರಮಿಗಳು. ನಮಗೆ ಅದೆಲ್ಲಾ ತಿನ್ನಲು ಸಹಾ ಕಷ್ಟವಾಗುತ್ತಲ್ಲಾ ಎಂತಹ ವಿಪರ್ಯಾಸ ಎನಿಸಿತು. ಹಾಗೂ ಸರಿಯಾಗಿ ತಿನ್ನುತ್ತಲೂ ಇದ್ದೆವು ಅನ್ನಿ!! ಅಲ್ಲದೇ ಒಂದೆರಡು ಗಂಟೆ ಮುಂಚೆ ಕೆಲವೊಮ್ಮೆ ಜೂಸ್ ಅಥವಾ ಬಿಸ್ಕೆಟ್ಸ್ ಇತ್ಯಾದಿ ಸ್ವಾಹಾ ಮಾಡಲೂ ಕೊಡುತ್ತಿದ್ದರು. ಇದಲ್ಲದೇ ಪ್ರಯಾಣಿಕರು ಮಲಗಿಯೋ, ಅಥವಾ ಮಂತ್ರ, ವೇದ ಹೇಳುತ್ತಲೂ ಕಾಲ ಕಳೆಯಬಹುದು. ನಾವು ಕುಟುಂಬಸ್ತರು 4 ಜನ ಹಾಗೆ ಮಾಡುತ್ತಿದ್ದೆವು. ಮಧ್ಯೆ ಮಧ್ಯೆ ನಿದ್ದೆ ಸಹಾ.
ಬಸ್ಸು ಉತ್ತರ ಪ್ರದೇಶ ದಾಟಿ ಮಧ್ಯ ಪ್ರದೇಶಕ್ಕೆ ಬಂದಿದ್ದು ಗೊತ್ತಾಗಲೇ ಇಲ್ಲ, ಊರು ತಡೆಯಿಲ್ಲದೇ ಬೆಳೆದಿದೆ. ಬೋರ್ಡುಗಳಲ್ಲಿ ಯು.ಪಿ ಇದ್ದುದ್ದು ಈಗ ಎಂ.ಪಿ ಆಗಿದ್ದರಿಂದ ಮಾತ್ರ ನಮಗೆ ಗೊತ್ತಾಗುವಂತಿತ್ತು.
ನಾವು ನೆಲ+1 ಮಹಡಿ ಇದ್ದ ಆಧುನಿಕ ರಿವರ್ ಫ್ರಂಟ್ ರೆಸಾರ್ಟ್ ಮುಂದೆಯೇ ಸಂಜೆ 4-5ರ ನಡುವೆ ನಿಲ್ಲಿಸಿದೆವು, ಸಾಮಾನೆಲ್ಲಾ ಇಳಿಸಿಕೊಂಡು ರೂಮಿಗೆ ತೆರಳಿದೆವು. ಹೊರಗಿನ ಗಾರ್ಡನ್ ಎಲ್ಲಾ ಬಹಳ ಸುಂದರವಾಗಿ ಇಟ್ಟುಕೊಂಡಿದ್ದಾರೆ, ಪ್ರಶಾಂತವಾದ ಕ್ಲೀನ್ ರೆಸಾರ್ಟ್, ಅದೂ ಈ ಊರಿನಲ್ಲಿ!
ರೂಮ್ ಬಹಳವೇ ಚೆನ್ನಾಗಿತ್ತು, ಎಲ್ಲಾ ಸೌಕರ್ಯಗಳೂ ರೆಸಾರ್ಟ್ ಹೆಸರಿಗೆ ತಕ್ಕುದೇ ಆಗಿದ್ದವು. ಬಹಳ ಆಯಾಸವಾಗಿದ್ದರಿಂದ ಏ/ಸಿ ಹಾಕಿಕೊಂಡು ನಾನಂತೂ ಚೆನ್ನಾಗಿ ಮಲಗಿಬಿಟ್ಟೆ.‘ಸಂಜೆ ಮಂದಾಕಿನಿ ನದಿಯಲ್ಲಿ ಆರತಿ ಇದೆ, ನದಿಯಲ್ಲಿ ದೋಣಿಯಲ್ಲಿ ಹೋಗಿ ನೋಡುವುದು’ ಎಂದರು. ‘ಅದೊಂದೇ ಪ್ರೋಗ್ರಾಮ್, ಬರುವವರು ಬನ್ನಿ’ ಎಂದರು. ನನಗೇಕೋ ಮತ್ತೆ ಮೈಕೈ ನೋವು ಇತ್ತು, ನಾಳೆಯೆಲ್ಲಾ ಬಹಳ ಬಿಝಿ ಇರುತ್ತದೆ, ಓಡಾಟವಿದೆ ಎಂದು ಬಸ್ಸಿನಲ್ಲೇ ಹೇಳಿದ್ದರು, ಹಾಗಾಗಿ ನಾನು ಹೊರಡಲಿಲ್ಲ. ಇನ್ನು ಶ್ರೀಮತಿ ಮತ್ತು ಶಡ್ಗ ನಾದಿನಿ ಜೊತೆಗೆ ಮಿಕ್ಕ ಪ್ರಯಾಣಿಕರಲ್ಲಿ ಕೆಲವರು ಆರತಿ ನೋಡಲು ಹೋಗಿ ಬಂದರು. ನನ್ನಾಕೆ ಮಾಡಿದ್ದ ಎರಡು ವಿಡಿಯೋ, ಚಿತ್ರಗಳು ನಾನು ರೂಮಿನಲ್ಲೇ ಇದ್ದು ನೋಡಿ ಆನಂದಿಸಿದೆ.
ಕೆಲವೊಮ್ಮೆ ಹೀಗೆ ಬೇಕೆನಿಸಿದಾಗ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮುಂದೆ ಮುಖ್ಯವಾದದನ್ನು ಮಿಸ್ ಮಾಡದೇ ನೋಡಲು ಶಕ್ತಿ, ಆರೋಗ್ಯವನ್ನೂ ಉಳಿಸಿಕೊಳ್ಳಬೇಕು ಎಂಬುದು ನನ್ನ ಸ್ವಾನುಭವದ ಸಲಹೆ.
ಮುಂದಿನ ದಿನ ನಾವು ಚಿತ್ರಕೂಟದ ಪುಣ್ಯಸ್ಥಳಗಳ ವೀಕ್ಷಣೆಗೆ ಹೊರಟೆವು.
ಕಾಮದ್ಗಿರಿ ಎಂಬ ಬೆಟ್ಟದ ತಪ್ಪಲು:
ಮಾನವ ಅವತಾರಿಯಾದ ಮೇಲೆ ಶ್ರೀರಾಮ ಗುರುಹಿರಿಯರ ಸಲೆಹೆಯಿಲ್ಲದೇ ಎಲ್ಲಿಗೂ ಹೋಗುತ್ತಿರಲಿಲ್ಲ. ಅವನು ವನವಾಸಕ್ಕೆ ಮೊದಲು ಭಾರದ್ವಾಜರನ್ನು ಸಂಧಿಸಿ ‘ನಾನು ಎಲ್ಲಿರಬೇಕು ಹೇಳಿ’ ಎನ್ನುತ್ತಾನಂತೆ. ಆಗ ಆಶ್ಚರ್ಯಭರಿತರಾದ ಮುನಿಗಳು ‘ಸ್ವಯಂ ನಾರಾಯಣನೇ ಆದ ನೀನು ಎಲ್ಲಿಲ್ಲ ಎಂಬುದನ್ನು ಹೇಳು, ನಾನು ಆ ಜಾಗವನ್ನು ತೋರಿಸುವೆ’ ಎಂದು ಸವಾಲು ಹಾಕಿದರಂತೆ. ಆಗ ರಾಮನು ವಿನಯದಿಂದ ‘ಮನುಷ್ಯನಾಗಿ ಹುಟ್ಟಿದ ಮೇಲೆ ಗುರು ಅಪ್ಪಣೆಯಿಲ್ಲದೇ ನಾವೇ ನಿರ್ಧಾರ ಮಾಡುವುದು ಸರಿಯಲ್ಲ, ನೀವು ನಮಗೆ ದಾರಿ ತೋರಿಸಬೇಕು’ ಎನ್ನುತಾನೆ. ಇದಲ್ಲವೆ ಯಾವ ರೀತಿ ಗುರು ಹಿರಿಯರ ಮಾರ್ಗದರ್ಶನಕ್ಕೆ ಗೌರವ ಕೊಡಬೇಕೆಂಬ ಆದರ್ಶದ ನಿದರ್ಶನ?
ಒಂದು ರೀತಿಯಲ್ಲಿ ಶ್ರೀರಾಮನ ಜೀವನವೇ ಒಂದು ಆದರ್ಶ ಪಾಠ. ಕೊನೆಗೆ, ಭಾರದ್ವಾಜ ಋಷಿ ಶ್ರೀರಾಮನಿಗೆ ‘ನೀನು ವನವಾಸಕ್ಕೆ ಇಲ್ಲಿರು’ ಎಂದು ಹಲವು ಮಹಾ ಮುನಿಗಳು ನಿವಾಸಿಗಳಿಗಿರುವ ಈ ಪವಿತ್ರ ಚಿತ್ರಕೂಟ ಬೆಟ್ಟಗಳನ್ನು ತೋರಿದ ಮೇಲೆ ಅವನು ಪತ್ನಿ ಮತ್ತು ಸೋದರನೊಂದಿಗೆ ಇಲ್ಲಿನ ಮೊದಲ ಬೆಟ್ಟ ಕಾಮದ್ಗಿರಿ ಎಂಬ ಬೆಟ್ಟದ ಮೇಲೆ ಹತ್ತಲು ಆರಂಭಿಸಿದನಂತೆ.
ಅದಕ್ಕೂ ಮುನ್ನ ಆ ಬೆಟ್ಟವೇ ಅವನನ್ನು ಮಾತನಾಡಿಸಿ (ತ್ರೇತಾಯುಗದ ಪವಾಡಗಳು!) ‘ ಬಾ, ನಿನ್ನ ಪಾದಸ್ಪರ್ಷದಿಂದ ನಾನು ಪಾವನನಾಗುವೆನು. ಅಹಲ್ಯೆಯನ್ನು ಕಲ್ಲಿನಿಂದ ವಿಮೋಚನೆ ಮಾಡಿದೆಯಲ್ಲವೆ?’ ಎನ್ನಲು ಮೊದಲಿಗೆ ರಾಮನೇ ಆ ಬೆಟ್ಟವನ್ನು ಪೂಜಿಸಿ ಅನಂತರವೇ ಅದರ ಮೇಲೆ ಕಾಲಿಟ್ಟು ಆಶೀರ್ವದಿಸಿದನಂತೆ. ಜೀವಂತ ಪ್ರಾಣಿಯೆಂದು ಬೆಟ್ಟವನ್ನೂ ಗುರುತಿಸಿದ್ದ ರಾಮನ ಗುಣ ಕಾಣಿರಿ! ನಾವು ಈಗಲೂ ಬೆಟ್ಟಗಳನ್ನು ದೇವರೆಂದು ಆರಾಧಿಸುವುದು ಇದೇ ಐತಿಹ್ಯಕ್ಕಂತೆ (ಉದಾ. ತಿರುಪತಿ, ಕೈಲಾಸ) .
ಇಲ್ಲಿಗೆ ಬಂದವರ ಇಷ್ಟಾರ್ಥಗಳೂ ಮನೋಕಾಮನೆಗಳೂ ಪೂರೈಸುವುವೆಂದು ಅಲ್ಲಿನ ಸ್ಥಳ ಪುರಾಣವಿದೆ. ಹಾಗಾಗಿ ಅಲ್ಲಿ ಮನೋಕಾಮನಾ ದೇವಿ ಎಂಬ ದೇವಿಯ ಗುಡಿಯೂ ಪಕ್ಕದಲ್ಲಿದೆ. ಅಲ್ಲಿ ಶ್ರೀರಾಮನು ಕಾಲಿಟ್ಟದ್ದಕ್ಕೆ ಒಂದು ಕಲ್ಲಿನಲ್ಲಿ ಹೆಜ್ಜೆ ಗುರುತಿದೆ. ಅದು ದೊಡ್ಡದು, ಏಕೆಂದರೆ ಶ್ರೀರಾಮನು ಆಜಾನುಬಾಹು ಅಲ್ಲವೆ? (ಆ ಯುಗದಲ್ಲಿ 10 ಅಡಿ ಎತ್ತರ ಸಾಮಾನ್ಯವಿದ್ದರೂ ಶ್ರೀರಾಮನು ಅದಕ್ಕೂ ಎರಡು ಪಟ್ಟು ಎತ್ತರವಿದ್ದನೆಂದು ಕೆಲವು ಕಡೆ ಓದಿದ್ದೇನೆ- ಉದಾ. ವಿಕಿಪೀಡಿಯಾ. ಇದನ್ನು ನೀವು ಓದಿ ಪರಿಶೀಲಿಸಿಬಹುದು. Rama was a giant ಎನ್ನುತ್ತಾರೆ). ಈ ಬೆಟ್ಟ ಮಾತ್ರ ಯು.ಪಿ ಭಾಗಕ್ಕೆ ಸೇರಿದೆ. ನಾನು ಹೇಳಿದಂತೆ ಈ ಊರಿನ ನಡುವೆ ಯು.ಪಿ ಮತ್ತು ಎಂ.ಪಿ ಗಡಿ ಹಾದುಹೋಗುತ್ತದೆ.
ಕಾಮದ್ಗಿರು ಬೆಟ್ಟ ಮತ್ತು ಶ್ರೀರಾಮ
ಸತಿ ಅನಸೂಯಾ ಆಶ್ರಮ:
ಇದೇ ಸ್ಥಳದ ಹೆಸರು ಸಹಾ.
ಅಲ್ಲಿಂದ ನಾವು ಅತ್ರಿ ಮುನಿ ಮತ್ತು ಅವರ ಸತಿ ಅನಸೂಯಾ ನೆಲೆಸಿದ್ದ ಆಶ್ರಮಕ್ಕೆ ಬಸ್ಸಿನಲ್ಲಿ ಹೋದೆವು. ಮತ್ತೆ ಆ ಭಾಗ ಮಧ್ಯಪ್ರದೇಶದಲ್ಲಿದೆ. ಅಲ್ಲಿಯೂ ಈಗ ದೇವಸ್ಥಾನವಾಗಿದೆ, ಅದು ಮಂದಾಕಿನಿ ನದಿಯ ದಡದಲ್ಲಿದೆ. ಸತಿ ಅನಸೂಯಾ ತನ್ನ ತಪಸ್ಸಿನಿಂದ ಭೂಮಿಗೆ ಬರ ಪೀಡಿತವಾಗಿದ್ದ ಆ ಸ್ಥಳಕ್ಕೆ ಮಂದಾಕಿನಿ ನದಿಯನ್ನು ತಂದಳೆಂದು ಹೇಳುತ್ತಾರೆ. ಅಲ್ಲಿಯೂ ನಾವು ತಲೆಯ ಮೇಲೆ ಜಲ ಪ್ರೋಕ್ಷಣೆ ಮಾಡಿಕೊಂಡೆವು. ಬಹಳ ನಿರ್ಮಲವಾದ ನೀರು, ಕಲುಷಿತವಾಗಿಲ್ಲ.
ಸತಿ ಅನಸೂಯಾ ಕಥೆ ನೀವು ಕೇಳಿರಬಹುದು- ಎಲ್ಲಾ ಪತಿವ್ರತ ಸ್ತ್ರೀಯರಲ್ಲಿಯೂ ಅದ್ವಿತೀಯಳೆಂದು ಪುರಾಣಕಥೆಗಳಲ್ಲಿ ಹೇಳಿದೆ. ಒಮ್ಮೆ ತಪ್ಪು ಭಿಕ್ಷೆ ಕೇಳಿದ್ದ ತ್ರಿಮೂರ್ತಿಗಳನ್ನೇ ಬಾಲಕರನ್ನಾಗಿಸಿ, ಅವರ ಪತ್ನಿಯರು ಅಂದರೆ ಮೂವರು ದೇವಿಯರು ಬಂದು ಅದಕ್ಕಾಗಿ ಕ್ಷಮೆ ಕೇಳಿದ ಮೇಲೆ ಅವರಿಗೆ ಬ್ರಹ್ಮ ವಿಷ್ಣು ಮಹೇಶ್ವರರ ರೂಪ ಮರಳಿಸಿದಳಂತೆ ಆ ಮಾತೆ. ಅಂತಹ ಆ ಮಹಾಸತಿಯ ಮಕ್ಕಳು ದತ್ತಾತ್ರೇಯ ಮತ್ತು ದೂರ್ವಾಸಮುನಿ. ಇಲ್ಲಿಗೆ ಬಂದ ಸೀತೆಯೇ ಆಕೆಯಿಂದ ಪಾತಿವ್ರತ್ಯದ ಬಗ್ಗೆ ಕೇಳಿ ತಿಳಿದುಕೊಂಡಳೆಂದೂ ಹೇಳುತ್ತಾರೆ. ಇಲ್ಲಿ ಆಗ ನಡೆದ ಎಲ್ಲಾ ಪೌರಾಣಿಕ ಘಟನೆಗಳ ವಿಗ್ರಹ ರೂಪದ ಕಥಾನಕವಿದೆ.
ಈ ಸ್ಥಳ ಬಹಳ ಪ್ರಶಾಂತವಾಗಿ ಕಾಡಿನ ಮಧ್ಯೆಯಲ್ಲಿದೆ. ಸುಂದರ ಪ್ರಕೃತಿ ಸೌಂದರ್ಯವನ್ನು ನೀವು ಸವಿಯಬಹುದು.
ಅಲ್ಲಿಂದ ನಾವು ಗುಪ್ತ ಗೋದಾವರಿಗೆ ಹೋಗುವವರಿದ್ದೆವು...
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಸತಿ ಅನಸೂಯಾ ಆಶ್ರಮ
ಗುಪ್ತಗೋದಾವರಿಯ ನೀರಿನಲ್ಲಿ ಸಾಹಸ:
ಗೋದಾವರಿ ನದಿಯು ವಿಂಧ್ಯದ ದಕ್ಷಿಣ ಭಾಗದಿಂದ ಆ ಬೆಟ್ಟವನ್ನು ಕೊರೆದು ಉತ್ತರಕ್ಕೆ ಹರಿದು ಚಿತ್ರಕೂಟದಲ್ಲಿದ್ದ ಶ್ರೀರಾಮ ಸೀತೆಯರ ಪಾದಪೂಜೆ ಮಾಡಲೆಂದು ಹರಿದುಬಂದಳಂತೆ. ಮತ್ತೆ ಗುಪ್ತವಾಗಿ ಮರಳುವ ವರವನ್ನು ಪಡೆದಿದ್ದರಿಂದ ಈ ನದಿಯು ಕ್ಷೇತ್ರದ ಬೆಟ್ಟದ ಬಹಳ ಚಿಕ್ಕ ಪ್ರವೇಶವಿರುವ ಗುಹೆಯ ಒಳಗೆ ಉಗಮವಾಗುತ್ತದೆ. ಇದು ಮಧ್ಯಪ್ರದೇಶದ ಗಡಿಯಲ್ಲಿದೆ.
ಅಲ್ಲಿಗೆ ನಾವು ಹೋದ ದಿನವೇ ತಮಿಳುನಾಡಿನ ಪ್ರಸಿದ್ಧ ಪ್ರವಚನಕಾರ ಗುರುಗಳಾದ ವೇಲುಕ್ಕುಡಿ ಕೃಷ್ಣನ್ ಅವರ ಭಕ್ತ ತಂಡ 50 ಲಕ್ಷುರಿ ಬಸ್ಸುಗಳಲ್ಲಿ ಶ್ರೀರಂಗಂ, ಟ್ರಿಚ್ಚಿ ಕಡೆಯಿಂದ ಆಗಮಿಸಿಬಿಟ್ಟಿತ್ತು. ಅವರ ಬಸ್ಸುಗಳಿಗೆಲ್ಲ ಒಂದೊಂದು ನದಿಯ ಹೆಸರು ಮತ್ತು ಬ್ಯಾನರ್! ಎಲ್ಲೆಲ್ಲಿಯೂ ಅವರೇ.! ಅಯ್ಯಂಗಾರ್ ಮತ್ತು ಅಯ್ಯರ್ ಮಾಮ ಮಾಮಿಗಳ ಬಿರುಸಿನ ಓಡಾಟ , ಕ್ಯೂ!
ಬಸ್ ನಿಲ್ಲಿಸಿದ ಜಾಗದಿಂದ ಬೆಟ್ಟದ ಚಿಲುಮೆಗೆ, ಮತ್ತೆ ಶೇರ್ ಆಟೋ ಇರುತ್ತದೆ, ಹೋಗಿ ಬರಬಹುದು.
ಆ ಕ್ಯೂನಲ್ಲಿ ನಾವು ನಿಂತು ಬೆಟ್ಟ ಹತ್ತಿ ಇಳಿಯುತ್ತಾ ಮತ್ತೆ ಗುಹೆ ಪ್ರವೇಶಿಸಲು 2-3 ಗಂಟೆಯೇ ಆಗುತ್ತದೆ ಎಂದು ಅಂದಾಜು ಮಾಡಿದೆವು.
ಅಲ್ಲಿ ನಮ್ಮನ್ನು ಪೀಡಿಸುತ್ತಿದ್ದ ಬ್ರಾಹ್ಮಣ ಗೈಡ್ ತಂಡಕ್ಕೆ ತಲಾ ಇಷ್ಟಿಷ್ಟು ಎಂದು ದುಡ್ದು ಕೊಟ್ಟು ಸೀದಾ ಗುಹೆಗೆ ಹೋಗುವಂತೆ, ಏರಿಳಿಯುವ ಬೆಟ್ಟದ ಹಾದಿಯನ್ನು ಪೂರ್ತಿ ಬೈಪಾಸ್ ಮಾಡುವ ಆ ಶಾರ್ಟ್ ಕಟ್ಟಿನಲ್ಲಿ ನಡೆದೆವು. ಅದು ಬಹಳ ಚಿಕ್ಕದು ಅಂದರೆ ಕಿರಿದಾದ ಗುಹೆ ದ್ವಾರ, ಅಲ್ಲಿಂದ ಒಳಹೊಕ್ಕಾಗ ನೀರು ಪಾದ ಮುಳುಗುವಂತಿದ್ದು ನಿಧಾನವಾಗಿ ಮೊಳಕಾಲಿನವರೆಗೂ ಏರುತ್ತದೆ. ತಣ್ಣನೆಯ ನಿರ್ಮಲ ನೀರು ಶುದ್ಧವಾಗಿದೆ. ಆದರೆ ಗುಹೆಯ ಗೋಡೆಗಳು ಓರೆಕೋರೆಯಾಗಿದ್ದು ತಲೆಗೂ ಭುಜಕ್ಕೂ ಬಡಿಯುತ್ತದೆ, ಮತ್ತು ನೆಲದಲ್ಲಿ ಬಂಡೆಕಲ್ಲಿನ ಚೂಪು ತುದಿಗಳು ಪಾದಕ್ಕೆ ಚುಚ್ಚುತ್ತವೆ, ನಮ್ಮ ಕಾಲುಗಳು ಜಾರುತ್ತವೆ ಕೂಡಾ!
ಓಹೋ, ನನಗಂತೂ ಹೋಗಿ ಬರುವೆನಾ ಇದರಲ್ಲಿ ಎನಿಸಿಬಿಟ್ಟಿತು. ‘ಶ್ರೀರಾಮ ಶ್ರೀರಾಮ’ ಎಂದು ಮನದಲ್ಲಿ ಜಪ. ಅದರಲ್ಲಿ ಹೋಗಿ ಬರಲು ಜನರಿಗೆ ಒಂದೇ ದ್ವಾರ ಬೇರೆ. ಆಪಾಟಿ ರಷ್ ಬೇರೆ! ಒಮ್ಮೆ ಅಲ್ಲೇ ಬಿದ್ದು ಬಿಟ್ಟೆನೋ ಏನೋ, ಆದರೆ ನೀರಿದ್ದುದರಿಂದ ಹೆಚ್ಚು ಘಾಸಿಯಾಗಲಿಲ್ಲ, ಕಾಲನ್ನು ಸದಾ ತಂಪು ಮಾಡುತ್ತಿರುತ್ತದೆ. ಅಲ್ಲಿ ಒಳಗೆ ಹರಸಾಹಸ ಮಾಡಿ ಹೋದರೆ ಬಂಡೆಯ ನಡುವಿನಿಂದ ನೀರು ಚಿಲುಮೆಯಂತೆ ಉಕ್ಕಿ ಹರಿದು ಬರುತ್ತಿದೆ, ಏನು ರಭಸ ಗುಪ್ತ ಗೋದಾವರಿಯದು! ಅಲ್ಲಿಯೂ ಒಬ್ಬ ಪೂಜಾರಿ ರಾಮ ಲಕ್ಷ್ಮಣ ಸೀತೆಯರ ವಿಗ್ರಹಗಳ ಮುಂದೆ ಕುಳಿತು ಪೂಜೆ ಪೂಜೆ ಎಂದು ದಕ್ಷಿಣೆ ಕೇಳುತ್ತಿರುತ್ತಾರೆ!
ಅಲ್ಲಿನ ಇನ್ನೊಂದು ವಿಚಿತ್ರ ಪವಾಡ ಎಂದರೆ ಆ ರಭಸದಲ್ಲಿ ಉಕ್ಕಿ ಹೊರಕ್ಕೆ ಇಳಿಯುವ ಗುಪ್ತ ಝರಿ ಸ್ವಲ್ಪ ದೂರದಲ್ಲಿ ನೆಲದಲ್ಲಿ ಒಮ್ಮೆಲೇ ಕಾಣೆಯಾಗಿಬಿಡುತ್ತದೆ. ಅದರ ಸುಳಿವೇ ಇಲ್ಲ ಮುಂದೆ! ಹೇಗೆ ನೆಲದಲ್ಲಿ ಹೀರಿಕೊಳ್ಳುತ್ತಿದೆ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಹೀರಿಕೊಳ್ಳುವುದು ನಿಜ ಆದರೆ ಆ ತರಹ ಸತತವಾಗಿ ಬರುತ್ತಿರುವ ನೀರಿನ ಝರಿ ಧರೆಯೊಳಗೆ ಹೋಗಿಬಿಡುವುದು ಸೋಜಿಗವೇ. ಅದಕ್ಕೆ ‘ಗುಪ್ತ’ ಎಂಬ ಹೆಸರಂತೆ. ಒಟ್ಟಿನಲ್ಲಿ ಇದು ಲೈಫ್ ಚೇಂಜಿಂಗ್ ಸಾಹಸ ಎಂದು ನನ್ನ ಅನುಭವ . ನನ್ನಂತಾ ನಗರವಾಸಿಗಳಿಗೆ ಖಂಡಿತಾ ಅನನ್ಯ. ಧೈರ್ಯ ಮತ್ತು ಶ್ರದ್ಧೆ ನಮಗೆ ಮುಖ್ಯವಾಗುತ್ತದೆ. ನಮ್ಮ ಗ್ರೂಪಿನ ಯಾರೂ ಮಿಸ್ ಮಾಡದೇ ನೋಡಿ ಬಹಳ ಸಂತೋಷ ಪಟ್ಟ ಸ್ಥಳ ಇದು.
ಗುಪ್ತ ಗೋದಾವರಿ ಗುಹೆ
ಗುಪ್ತ ಗೋದಾವರಿ ಗುಹೆ
ಗುಪ್ತ ಗೋದಾವರಿ ಗುಹೆ
ಗುಪ್ತ ಗೋದಾವರಿ ಗುಹೆ
ಗುಪ್ತ ಗೋದಾವರಿ ಗುಹೆ
ರಾಮ ದರ್ಶನ ಮ್ಯೂಸಿಯಂ, (ಮ. ಪ್ರ):
ಇದು ಇಲ್ಲಿಗೆ ಬಂದವರು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು. ಎಷ್ಟೆಷ್ಟೋ ದೊಡ್ಡ ದೊಡ್ಡ ಮ್ಯೂಸಿಯಂ ನೋಡಿರುತ್ತೇವೆ, ಇದರಲ್ಲೇನೂ ಹೆಚ್ಚುಗಾರಿಕೆ ಎಂದರೆ ಅತ್ಯುತ್ತಮ ಎಂದೂ ಕಾಣಸಿಗದ ಸುಂದರ ತೈಲ ಚಿತ್ರಗಳು ಹಾಗು ವಿಗ್ರಹಗಳ ‘ಡಿಸ್ಪ್ಲೇ’ ಇಲ್ಲಿ ಇಡೀ ರಾಮಾಯಣವನ್ನೆ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೇ ಪೂರ್ತಿ ಹೇಳುತ್ತದೆ, ತೋರಿಸುತ್ತದೆ. ಇದರ ಅಪ್ರತಿಮ ಕಲಾಕಾರರು ದಭೋಳ್ಕರ್(?) ಎಂಬವರಂತೆ. ಕಣ್ಣಿಗೆ ಕಟ್ಟುವಂತಿದೆ ಅವರ ಚಿತ್ರಗಳು ಮತ್ತು ಪ್ರತಿಮೆಗಳ ಪ್ರಾತ್ಯಕ್ಷಿಕೆಗಳು. ಅದರಲ್ಲಿಯೂ ಕೈಕೇಯಿಯು ದಶರಥನಿಂದ ವರ ಪಡೆಯುವ ಮತ್ತು ರಾಮನನ್ನು ವನವಾಸಕ್ಕೆ ಕಳಿಸಲು ಹೇಳುವ ದೃಶ್ಯ ಮತ್ತು ಶ್ರೀರಾಮ ಸೀತೆಯರ ವನವಾಸದ ಚಿತ್ರಗಳು ನಮಗೆಲ್ಲಾ ಕಣ್ಣಿಗೆ ಕಟ್ಟಿದಂತಿದೆ. ಭಾರತ ಅಲ್ಲದೇ ಶ್ರೀಲಂಕಾ, ಇಂಡೋನೇಶಿಯಾ, ಥಾಯ್ಲೆಂಡ್, ಜಪಾನಿನಲ್ಲೂ ಸಿಕ್ಕ ರಾಮಾಯಣದ ಹಲವು ಚಿತ್ರ ಮತ್ತು ಶಿಲೆಗಳನ್ನೂ ಸಂಪಾದಿಸಿ ಇಟ್ಟಿದ್ದಾರೆ. ಎಲ್ಲವೂ ಬೆರಗಾಗಿಸುವಂತಿದೆ.
ಹೊರಗೆ ಆಂಜನೇಯನ ಬೃಹತ್ ಶಿಲೆಯಲ್ಲಿ ಅವನು ಎದೆ ಬಗೆದು ರಾಮನನ್ನು ತೋರಿಸುವ ಶಿಲೆಯೂ ಅದ್ಭುತವಾಗಿದೆ.
ಇದರ ಕೆಲವು ಚಿತ್ರಗಳು ಹೊರಗೆ ಮಾತ್ರ ತೆಗೆದುಕೊಂಡಿದ್ದು, ಒಳಗೆ ಮೊಬೈಲ್ ಬಿಡುವುದಿಲ್ಲ.
ಮ್ಯುಸಿಯಂ ದ್ವಾರ - ಗೂಗಲ್ - ಅಲ್ಲಿ ಮೊಬೈಲ್ ಇಲ್ಲ
ಆಂಜನೇಯ - ಗೂಗಲ್- ಮೊಬೈಲ್ ಬಿಡುವುದಿಲ್ಲ
ಅಲ್ಲಿಂದ ನಾವು ಮತ್ತೆ ನಮ್ಮ ರೆಸಾರ್ಟಿಗೆ ಹಿಂದಿರುಗಿದಾಗ ಅಲ್ಲಿಯೇ ನಮ್ಮವರು ತಯಾರಿಸಿದ್ದ ನಮ್ಮ ಸಸ್ಯಾಹಾರಿ ಶೈಲಿಯ ಚಿತ್ರಾನ್ನ, ಮಜ್ಜಿಗೆ ಹುಳಿ ಸಾರು ಅನ್ನ ಮೊಸರು ಹಪ್ಪಳ ಎಲ್ಲಾ ಇತ್ತು.
ಊಟ ಮಾಡುತ್ತಿರುವಾಗ ಎಲ್ಲಿಂದಲೋ ರಾಮ ಜಪ ಕೇಳಿಸುತ್ತಿತ್ತು .
ಆ ಊರಿನಲ್ಲಿ ಸುತ್ತಲೂ ರಾಮನ ದೇವಸ್ಥಾನಗಳಿದ್ದು 24 ಗಂಟೆಯೂ ‘ಶ್ರೀರಾಮ್ ಜಯರಾಮ್ ಜಯಜಯರಾಂ’ ಎಂಬ ಮಂತ್ರ ಜಪ ಧ್ವನಿ ವರ್ಧಕದಲ್ಲಿ ಕೇಳಿಸುತ್ತಲೇ ಇರುತ್ತದೆ.ಇದು ರಾಮ ಮೆಟ್ಟಿದ ವಾಸಿಸಿದ ಪುಣ್ಯಭೂಮಿ. ಜನರು ಮರೆತಿಲ್ಲ, ಮರೆಯುವುದೂ ಇಲ್ಲ.
ಒಟ್ಟಿನಲ್ಲಿ ನಾನು ಬಹಳವೇ ಎಂಜಾಯ್ ಮಾಡಿದ ನೆನಪಿನಲ್ಲಿಯುಳಿಯುವ ಸ್ಥಳಗಳಲ್ಲಿ ಚಿತ್ರಕೂಟ ಇದೆ, ಅನುಮಾನವೇ ಇಲ್ಲ. ಒನ್ ಆಫ್ ದಿ ಬೆಸ್ಟ್!
ಮಧ್ಯಪ್ರದೇಶಕ್ಕೂ ನನಗೂ ಅದೇನೋ ಪ್ರಿಯವಾದ ನಂಟು 37 ವರ್ಷದಿಂದ ಇದೆ ಎಂದಾಯಿತು.
ಆ ರುಚಿಕರ ಭೋಜನ ಮಾಡಿ ಅರ್ಧ ಗಂಟೆ ಆರಾಮವಾಗಿ ಇದ್ದೆವೇನೋ, ಮತ್ತೆ ಮುಂದಿನ ಸುತ್ತಿನ ಪ್ರಯಾಣಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದೆವು!
ನಮ್ಮ ಸಹಪ್ರಯಾಣಿಕರ ಗ್ರೂಪ್ ಫೋಟೊ- ಚಿತ್ರಕೂಟದ ರಿವರ್ ಫ್ರಂಟ್ ರೆಸಾರ್ಟ್!
ಪ್ರಯಾಗರಾಜ್ ತ್ರಿವೇಣಿ ಸಂಗಮ ನಮ್ಮನ್ನು ಕರೆಯುತ್ತಿತ್ತು...
ಸಂಚಿಕೆ 5>>>>> ಮುಂದುವರೆಯುತ್ತದೆ
Comments