top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -3

(ನೈಮಿಷಾರಣ್ಯ-ಅಯೋಧ್ಯೆ- ಚಿತ್ರಕೂಟ- ತ್ರಿವೇಣಿ ಸಂಗಮ- ಕಾಶಿ- ಗಯಾ ಪ್ರವಾಸ)



ಸಂಚಿಕೆ -3:

ಅಯೋಧ್ಯೆಯತ್ತ ಹೊರಳಿದ ಹೆಜ್ಜೆ:




ಶ್ರೀ ರಾಮ ಎಂದರೇನೇ ನಮ್ಮ ಹಿಂದೂಗಳಿಗೆ ಒಂದು ತರಹ ಥ್ರಿಲ್ ಆಗುತ್ತೆ, ಮೈ ನವಿರೇಳತ್ತೆ ಅಲ್ಲವೆ?

ಏಕೆಂದರೆ ಶ್ರೀರಾಮನು ಸ್ವಯಂ ನಾರಾಯಣನೇ ಆದರೂ ಮಾನವ ಅವತಾರದಲ್ಲಿ ಆದರ್ಶ ಪುರುಷ - ನೀತಿ, ಧರ್ಮ ಮತ್ತು ಸತ್ಯ ಬಿಡದೇ ಮಗ, ಪತಿ, ಸೋದರ ಮತ್ತು ರಾಜನ ಕರ್ತವ್ಯಗಳನ್ನು ನಿರ್ಭಾವುಕವಾಗಿ, ತ್ಯಾಗಮಯವಾಗಿ ಯಾವುದೇ ಸ್ವಾರ್ಥದ ಸೋಂಕಿಲ್ಲದೇ ನಡೆಯಬೇಕು ಎಂದು ಮಾದರಿ ಹಾಕಿಕೊಟ್ಟ ಮರ್ಯಾದಾ ಪುರುಷೋತ್ತಮ. ಅವನ ಜನ್ಮಭೂಮಿಯ ವಿವಾದದ ಬಗ್ಗೆ ಎರಡು ದಶಕಗಳಿಂದ ನಾವು ಸುದ್ದಿ ಕೇಳಿ ಅದು ಒಂದು ರೀತಿಯ ರಾಷ್ಟ್ರೀಯ ಸನಾತನ ಧರ್ಮದ ಗೌರವದ ಪ್ರತೀಕ ಎಂದು ನಂಬಲಾರಂಭಿಸಿದ್ದೇವೆ. ಹಾಗಾಗಿ ನಾವೆಲ್ಲ ಬಹಳ ಕುತೂಹಲದಿಂದ ಕಾತರದಿಂದ ನಿರೀಕ್ಷಿಸುತ್ತಿದ್ದ ಪ್ರವಾಸದ ಭಾಗ ಇದು.


ಈ ಪ್ರಯಾಣದಲ್ಲಿ ನಮ್ಮ ಶಡ್ಗ, ನಾದಿನಿ ಮತ್ತು ಪತ್ನಿ ಶ್ರೀ ವಿಷ್ಣು ಸಹಸ್ರನಾಮ, ಹನುಮಾನ್ ಚಾಲಿಸ, ಗಣೇಶ ಪಂಚರತ್ನ ಅದಾದ ನಂತರ ಪುರುಷ ಸೂಕ್ತ, ಶ್ರೀ ಸೂಕ್ತ, ನಾರಾಯಣ ಸೂಕ್ತ, ಶ್ರೀ ರುದ್ರಂ- ಚಮಕಂ ಮಂತಾದ ವೇದ ಮಂತಗಳನ್ನು ಹೇಳುತ್ತಲೇ ಇದ್ದಾಗ ಇನ್ನೂ ಕೆಲ ಸಹಯಾತ್ರಿಗಳು ಬಾಯಿಗೂಡಿಸಿದರು. ಅನಂತರ ಒಂಧರ್ಧ ಗಂಟೆಯಾದರೂ ಶ್ರೀರಾಮನ ಭಜನೆಗಳನ್ನು ಹಾಡಿದೆವು. ನಾವು ಕುಟುಂಬಸ್ತರು ಶ್ರೀ ಸತ್ಯಸಾಯಿ ಭಕ್ತ ವೃಂದವದ್ದರಿಂದ ತೀರ್ಥ ಯಾತ್ರೆ ಎಂದ ಮೇಲೆ ಬೇರೆ ರೀತಿಯಲ್ಲಿ ಸಮಯ ಪೋಲು ಮಾಡಲು ಮನಸ್ಸು ಒಪ್ಪುವುದಿಲ್ಲ.

ಸುಮಾರು ೩ ಗಂಟೆ ಪ್ರಯಾಣದಲ್ಲಿ ನಾವು ಲಕ್ನೋದಿಂದ ಅಯೋಧ್ಯೆಯೆ ಫೈಜ಼ಾಬಾದ್ ನಗರ ತಲುಪಿದೆವು. ಇದುವೇ ಇದುವರೆಗೂ ಇದ್ದ ಊರಿನ ಹೆಸರು, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯೋಗಿ ಜೀ ಅದನ್ನು ಬದಲಿಸಿ ಅಯೋಧ್ಯೆ ಜಿಲ್ಲೆ ಮಾಡಿದ್ದಾರೆ.

ನಾವು ಮೊದಲಿಗೆ ಇಲ್ಲಿನ ಶಾನೆ ಅವಧ್ ಎಂಬ ಹೋಟೆಲಿಗೆ ತಲುಪಿದೆವು, ವಿಪರೀತ ಭಾನುವಾರದ ರಶ್ ರಸ್ತೆಯಲ್ಲಿ!. ನಮಗೆ ಮೊದಲೆ ರೂಮುಗಳನ್ನು ಬುಕ್ ಮಾಡಿದ್ದರಿಂದ ಡಬಲ್ ರೂಮ್ -ಏ ಸಿ ಸಿಕ್ಕವು. ಅಲ್ಲಿಂದ ನಾವು ಸ್ವಲ್ಪ ಕಾಲ ಮಾತ್ರ ರೆಸ್ಟ್ ತೆಗೆದುಕೊಂದು ಫ್ರೆಶ್ ಆಗಿ ಬಸ್ಸಿಗೆ ಬಂದೆವು. ನಮ್ಮನ್ನು ಪಕ್ಕದ ಅಯೋಧ್ಯೆ ಹಳೆ ನಗರಿಯತ್ತ ಕರೆದೊಯ್ದರು.

ಬಸ್ಸಿನಲ್ಲಿ ನಮಗೆ ಟೂರ್ ಮ್ಯಾನೇಜರ್ ಈ ಕೆಲವು ಸೂಚನೆಗಳನ್ನು ಕೊಟ್ಟರು:

" ಅಯೋಧ್ಯೆ ಬಹಳ ಪುರಾತನ ನಗರ, ಇದನ್ನು ಮೊಘಲರ ಕಾಲದಿಂದ ಇದುವರೆಗೂ ಯಾರೂ ಸರಿಯಾಗಿ ಮೈನ್ಟನ್ ಮಾಡದೇ ಹಾಳು ಸುರಿಯುತ್ತಿತ್ತು, ಇಲ್ಲೆಲ್ಲ ಚಿಕ್ಕ ಪುಟ್ಟ ಗಲ್ಲಿಗಳಲ್ಲಿ ಸಂಚರಿಸಬೇಕು. ಮೊದಮೊದಲು ಇಲ್ಲೆಲ್ಲಾ ಕುಡಿಯುವ ನೀರು, ಶೌಚಾಲಯ, ಕಸ ನಿರ್ಮೂಲನ ಯಾವುದೇ ವ್ಯವಸ್ಥೆ ಸಹಾ ಸರಿಯಿರಲಿಲ್ಲ. ಈಗ ಯೋಗೀಜಿ ಸರಕಾರ ಬಂದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಈಗ ಸ್ಥಿತಿ ನೀವು ನೋಡುತ್ತಿರುವುದು 2014ರ ನಂತರ ನೂರು ಪಾಲು ವಾಸಿ.

ಇಲ್ಲಿ ನಾವು ಮೊದಲು ಸರಯೂ ನದಿ ತೀರಕ್ಕೆ ಹೋಗುತ್ತೇವೆ, ಅಲ್ಲಿ ಈಗ ಪ್ರವಾಹ ಬಂದ ಸ್ಥಿತಿಯಿದ್ದು, ನೀರಿನ ರಭಸ ಮತ್ತು ಮಟ್ಟ ಎರಡೂ ಹೆಚ್ಚಿದೆ, ಹಾಗಾಗಿ ನದಿಗಿಳಿದು ಸ್ನಾನ ಮಾಡಲಾಗುವುದಿಲ್ಲ.

ಅಲ್ಲಿ ನೀವು ದಡದ ಮೇಲೆ ನಿಂತು ತಲೆಗೆ ಜಲ ಪ್ರೋಕ್ಷಣೆ ಮಾಡಿಕೊಳ್ಳಿ. ನಾವು ಈ ಊರಿನಲ್ಲಿ ರಸ್ತೆ ರಸ್ತೆಗೂ ಚಿಕ್ಕ ಚಿಕ್ಕ ನೂರಾರು ದೇವಸ್ಥಾನಗಳನ್ನು ಕಾಣುತ್ತೇವೆ. ಇಲ್ಲಿನವರು ಮನೆ ಮನೆಯಲ್ಲೂ ರಾಮ ಸೀತೆಯರ ಗುಡಿಯಿಟ್ಟು ಯಾವುದಾದರೂ ರಾಮಾಯಣದ ಅಂತಹಾ ಘಟನೆ ನಡೆದ ಸ್ಥಳ, ಅಥವಾ ಇಂತಹಾ ಸನ್ನಿವೇಶ ಇಲ್ಲಿಯೇ ಆಗಿದ್ದು ಎಂಬ ಕೆಲವು ಸ್ಥಳಿಯ ಕತೆಯನ್ನೂ ಹೇಳುತ್ತಾರೆ. ಅದರಲ್ಲಿ ಯಾವುದನ್ನು ನಂಬುವುದು ಅಥವಾ ಬಿಡುವುದು ತಿಳಿಯುವುದಿಲ್ಲ. ನೀವು ಯಾರ ಜತೆಗೂ ಅದಕ್ಕೇ ಮಾತಿಗಿಳಿಯಬೇಡಿ. ನಾವು ಒಬ್ಬ ಲೋಕಲ್ ಗೈಡ್ ಹಿಡಿದು ಅವನಿಗೆ ತಿಳಿ ಹೇಳಿ ಯಾವ್ಯಾವ ಸ್ಥಳ ನೋಡಲಿಕ್ಕೆ ಮುಖ್ಯ ಅದನ್ನು ತೋರಿಸುತ್ತೇವೆ, ಎಲ್ಲ ಕಡೆಯೂ ಶೇರ್ ಆಟೋದಲ್ಲಿ ಹೋಗಿ ಇಳಿದು ಹಾಗೂ ಇಡೀ ದಿನದಲ್ಲಿ ಒಟ್ಟು 3 ಕಿಮೀನಷ್ಟು ಒಟ್ಟಾರೆ ನಿಮಗೆ ನಡೆಯುವುದಿದೆ. ಖಂಡಿತಾ ಆಯಾಸವಾಗುತ್ತದೆ, ಮೊದಲೇ ಹೇಳಿಬಿಟ್ಟಿದ್ದೇವೆ! ನಾವು ಒಂದು ಮಠಕ್ಕೆ ಕರೆದೊಯ್ಯುತ್ತೇವೆ, ಅಲ್ಲಿ ನೀವು ದಾನ ಮಾಡಬಹುದು ಅಲ್ಲೊಬ್ಬ ಸ್ವಾಮಿಯಿದ್ದಾರೆ, ಅವರೂ ಇಲ್ಲಿ ಅನ್ನದಾನ ಎಲ್ಲಾ ಮಾಡುತ್ತಾರೆ. ಅಲ್ಲಿ ಬೇಕಾದರೆ ದಾನ ಕೊಡಿ. ಅಲ್ಲಿಂದ ಮುಂದೆ ನಾವು ರಾಮ ಜನ್ಮಭೂಮಿ ದೇವಸ್ಥಾನದ ನಿರ್ಮಾಣ ಶಾಲೆಗೆ ಹೋಗುತ್ತೇವೆ. ಅಲ್ಲಿ ಹೊಸ ದೇವಸ್ಥಾನದ ಕಟ್ಟಡದ ವಿನ್ಯಾಸದ ಅಡಿಗಲ್ಲು, ಕಂಬ, ಮೆಟ್ಟಿಲು ಎಲ್ಲವನ್ನೂ ಬಿಡಿ ಭಾಗಭಾಗವಾಗಿ ತಯಾರಿಸಿ ಸೈಟಿಗೆ ತಂದು ಕಟ್ಟುತ್ತಿದ್ದಾರೆ.(ಎಲ್ ಅಂಡ್ ಟ್ ಇಂಜಿನಿಯರ್ಸ್). ಅದರ ಯಂತ್ರಗಲ ಮೂಲಕ ನಡೆಯುವ ತಯಾರಿಕೆಯನ್ನು ನಾವು ಕಣ್ಣಾರೆ ನೋಡಬಹುದು. ಹಾಗಾಗಿ ಅದನ್ನು ನೋಡಿ ಅಲ್ಲಿಂದ ನಾವು ರಾಮ ಜನ್ಮಭೂಮಿ ದೇವಸ್ಥಾನದ ಹೊಸ ಆಲಯಕ್ಕೆ ನಡೆದೇ ಹೋಗಬೇಕು, ಸುಮಾರು 1 ಕಿಮೀ ನಡೆಯಬೇಕು. ಮೊದಲು ಈ ವಿವಾದ ಕೋರ್ಟಿಗೆ ಹೋಗುವ ಮುನ್ನ ಇದ್ದಂತಾ ರಾಮ ಲಲ್ಲಾ ವಿಗ್ರಹದ ಟೆಂಟನ್ನು ತೆಗೆಸಿ ಈಗ ಹೊಸ ಸೈಟಿನಲ್ಲಿ ಗ್ರಾನೈಟ್ ಕಲ್ಲುಗಳ ತಾತ್ಕಾಲಿಕ ಗರ್ಭಗುಡಿ ಮಂದಿರ ಕಟ್ಟಿ ಅಲ್ಲಿ ಆ ವಿಗ್ರಹವನ್ನು ಇಟ್ಟು ನಿತ್ಯಪೂಜೆ ಮಾಡುತ್ತಿದ್ದಾರೆ. ರಾಮ ಲಲ್ಲಾ ವಿರಾಜಮಾನ್ ಎನ್ನುತ್ತಾರೆ. ಅದನ್ನು ನಾವು ಮೆಟಲ್ ಕಟಲಟೆ ಹೊರಗಿನಿಂದ ನೋಡಬಹುದು ಅಷ್ಟೇ. ಅದನ್ನು ಸಹಾ ತೆಗೆದು ಪೂರ್ತಿ ದೇವಸ್ಥಾನ ಕಟ್ಟಿಅದ ಮೇಲೆ ಹೊಸ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಟಾಪನೆ ಮಾಡುವವರಿದ್ದಾರೆ. ಇಲ್ಲಿ ಒಳಗಡೆ ಯಾವುದೇ ಮೊಬೈಲ್, ವಾಟರ್ ಬಾಟಲ್, ವಾಚ್, ಪೆನ್, ಪಿನ್ನು, ಬ್ಯಾಗ್, ಬೀಗದ ಕೈ ಯಾವುದನ್ನೂ ಬಿಡುವುದಿಲ್ಲ. ಪರ್ಸ್ ನಲ್ಲಿ ಕ್ಯಾಶ್ ಇದ್ದರೆ ಚೆಕ್ ಮಾಡಿ ಒಳಗೆ ಬಿಡುತ್ತಾರೆ. ಮಿಕ್ಕಿದ್ದೆಲ್ಲಾ ಹೊರಗಡೆ ರಾಶಿ ಹಾಕಿ ಬಿಸಾಕಿರುತ್ತಾರೆ, ಬಂದಾಗ ಮತ್ತೆ ತೆಗೆದುಕೊಂಡು ಹೋಗಬೇಕು, ಅದಕ್ಕಾಗಿಯೇ ನಾವು ಅದರ ಹತ್ತಿರದಲ್ಲಿ ಕೆಲವು ಲಾಕರ್ಸ್ ಬಾಡಿಗೆಗೆ ತೆಗೆದುಕೊಂಡಿದ್ದೇವೆ. ಅಲ್ಲಿ ಎಲ್ಲಾ ನಿಮ್ಮ ವಸ್ತುಗಳನ್ನು ಇಟ್ಟು ಹೊರಡಿ. ಅದರ ಕೀ ಸಹಾ ನಿಮ್ಮ ಕೈಲಿ ಕೊಡುವುದಿಲ್ಲ, ನಮ್ಮ ಬಳಿಯೇ ಹೊರಗೆ ಇರುತ್ತದೆ.. ನೀವು ಅಲ್ಲಿಂದ ಸುಮ್ಮನೆ ಉಟ್ಟಬಟ್ಟೆಯಲ್ಲಿ ಜಸ್ಟ್ ಹಾಗೇ ಹೋಗಿ ದೇವರನ್ನು ನೋಡಿ ಬರಬೇಕಷ್ಟೇ. ಇಲ್ಲಿಗೆ ಈಗ ಹೆವಿ ಸೆಕ್ಯುರಿಟಿಯಿದೆ, ಅದರವರೆಗೂ ಎಲ್ಲರೂ ನಮ್ಮ ಟೋಪಿ ಹಾಕಿಕೊಂಡು ಜೊತೆಜೊತೆಯಲ್ಲೆ ನಡೆಯಿರಿ, ಗ್ರೂಪ್ ಮಿಸ್ ಮಾಡಿ ಹಿಂದೆ ಮುಂದೆ ಅಕ್ಕ ಪಕ್ಕ ತಿರುಗಿ ಎಲ್ಲೂ ನಿಲ್ಲಬೇಡಿ. ಅಲ್ಲಿಂದ ಹನುಮಾನ್ ಗದ್ದಿ ದೇವಸ್ಥಾನಕ್ಕೆ ಹೋಗಿ, ಅಲ್ಲಿಂದ ಆಟೋಗೆ ವಾಪಸ್, ಮತ್ತೆ ಬಸ್ಸಿನಲ್ಲಿ ಹೋಟೆಲಿಗೆ ವಾಪಸ್" ಎಂದು ದಿನದ ಕಾರ್ಯಕ್ರಮವನ್ನು ಸವಿವರವಾಗಿ ಹೇಳಿದರು.

‘ಏನಪ್ಪಾ, ಇವರು ಒಳ್ಳೆ ಚಿಕ್ಕಮಕ್ಕಳಿಗೆ ಹೇಳಿದಂತೆ ಮಾತಾಡುತ್ತಾರೆ, ಏನಾಗಿಬಿಡತ್ತೆ, ನಾವು ಎಲ್ಲೆಲ್ಲೋ ಹೋಗಿ ಬಂದಿದ್ದೇವೆ!’ ಎಂದೆಲ್ಲಾ ಅನಿಸುವುದು ಸಹಜ. ಆದರೆ ಈ ಊರಿನ ಮಟ್ಟಿಗೆ ಇವೆಲ್ಲ ಶಿಸ್ತು, ನಿಯಮಪಾಲನೆ ಖಂಡಿತಾ ಬೇಕು ಎಂದು ನಮಗೇ ನಡೆಯುತ್ತಾ ನಡೆಯುತ್ತಾ ಅನುಭವವಾಯಿತು.

ಸರಯೂ ನದಿ ತೀರ:


ಸರಯೂ ನದಿ ತೀರ-1

ಸರಯೂ ನದಿ ತೀರ-2


ಇದಕ್ಕೆ ಆಟೋದಲ್ಲಿ ಹೋಗಿ ಮೆಟ್ಟಿಲು ಹತ್ತಿ ನೀರಿನ ದಡಕ್ಕೆ ಇಳಿಯಬೇಕು, ಸುತ್ತಲೂ ಗೋವುಗಳನ್ನು ಹಿಡಿದುಕೊಂಡು ಅಲ್ಲಿನ ಜನರು ನಿಂತಿರುತ್ತಾರೆ. ಅವಕ್ಕೆ ಕಡಲೆ ಪುರಿ, ಮತ್ತಿತರ ಬೂಸಾ ತರಹದ ತಿನಿಸು ಅವರಲ್ಲೇ ಕೊಂಡುಕೊಂಡು ತಿನ್ನಿಸುವುದು ಪದ್ಧತಿ. ಯಾವುದೋ ಒಂದು ಗೋವಿಗೆ ತಿನ್ನಿಸಲೇಬೇಕಾಗುತ್ತದೆ. ಹಾಗಾಗಿದೆ ಅಲ್ಲಿನ ಒತ್ತಡ.

ಮಧ್ಯಾಹ್ನದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದೆವು, ಅಲ್ಲಿ ಸರಯೂ ನೀರು ಬಹಳ ವೇಗವಾಗಿ ಸುಳಿಯ ತರಹ ಎರಡು ದಿಕ್ಕಿಗೆ ಚಕ್ರದಂತೆ ಸುತ್ತುತ್ತಾ ಹರಿಯುತ್ತಿತ್ತು. ನೀರು ಪ್ರವಾಹದ ಜೊತೆ ಸೇರಿಯೋ ಏನೋ ಸ್ವಲ್ಪ ಮಣ್ಣಿನ ಬಣ್ಣ ಇತ್ತು, ಅದನ್ನು ತಲೆಗೆಲ್ಲ ಪ್ರೋಕ್ಷಣೆ ಮಾಡಿಕೊಂಡು ‘ರಾಮಾಯ ರಾಮಭದ್ರಾಯ...’ ಎಂತಲೋ, ‘ಶ್ರೀ ರಾಮ ರಾಮ ರಾಮೇತಿ...’ ಎಂತಲೋ, ‘ಗಂಗೇಚ ಯುಮುನೇಚೈವ... ’ ಎಂತಲೋ ಹೇಳಿಕೊಳ್ಳಬಹುದು, ನಂನಮ್ಮ ಅಭ್ಯಾಸದಂತೆ.

ಅಲ್ಲಿ ನಾನೊಂದು ಹಳದಿ ಶ್ರೀರಾಮ್ ಲಿಖಿತ ಪೇಟ ಕಟ್ಟಿಕೊಂಡೆ.

ಅಲ್ಲಿಂದ ಹೊರಟು ನಾವು ವಾಲ್ಮೀಕಿ ಮಂದಿರ ಮತ್ತು ಒಂದು ಮಠಕ್ಕೆ ಭೇಟಿಯಿತ್ತೆವು. ಹಳೆ ಕಾಲದ ಮಂದಿರಗಳು ಚೆನ್ನಾಗಿವೆ, ವಿಪರೀತ ರಷ್ ಇರಲಿಲ್ಲ . ಅಲ್ಲಿ ದೇವರ ಸನ್ನಿಧಿಯಲ್ಲಿ ಸ್ವಲ್ಪ ಕಾಲ ಕಳೆದೆವು.

ಅನಂತರ ನಾವು ರಾಮ ಜನ್ಮಭೂಮಿ ಶಿಲಾ ನಿರ್ಮಾಣ ಶಾಲೆಗೆ ಕಾಲಿಟ್ಟೆವು. ಅಲ್ಲಿ ಈಗ ಎಲ್ಲರಿಗೂ ಪ್ರವೇಶವಿದೆ. ಅಲ್ಲಿ ಮೊಬೈಲ್ ಸಹಾ ತೆಗೆದುಕೊಂದು ಹೋಗಬಹುದು. ಹೊಸ ಜನ್ಮ ಭೂಮಿ ದೇವಸ್ಥಾನದ ಶಿಲೆಗಳು, ಅಡಿಗಲ್ಲು, ಮೆಟ್ಟಿಲು, ಕಂಬಗಳ ಭಾಗಗಳು ಇತ್ಯಾದಿ ಅಲ್ಲಿ ಭರದಿಂದ ಶಿಲ್ಪಿಗಳು ದೊಡ್ಡ ದೊಡ್ಡ ಕಟಿಂಗ್ ಮತ್ತು ಗ್ರೈಂಡಿಂಗ್ ಮೆಶೀನ್ ಸಹಾಯದಿಂದ ಬಿಡಿಯಾಗಿ ಕತ್ತರಿಸಿ ಕಟ್ಟಿ ಕಟ್ಟಿ ಜೋಡಿಸಿಡುತ್ತಿದ್ದಾರೆ, ಅವನ್ನು ಜನ್ಮಭೂಮಿ ದೇವಸ್ಥಾನ ಸೈಟಿಗೆ ತೆಗೆದುಕೊಂಡು ಹೋಗಿ ಜೋಡಿಸಿ ಅಲ್ಲಿ ಕಟ್ಟುತ್ತಾರೆ ಅಲ್ಲಿನ ‘ಎಲ್ ಅಂಡ್ ಟಿ’ ಕಟ್ಟಡದ ತಂಡದವರು. ಅದರಲ್ಲಿ ನಾವು ಶೋ ಕೇಸಿನಲ್ಲಿ ಪೂರ್ಣ ದೇವಸ್ಥಾನದ ಮಾಡೆಲ್ ನೋಡಿದೆವು. ತಮಿಳ್ನಾಡಿನ ರಾಮೇಶ್ವರಂನಲ್ಲಿ ತಯಾರಾದ ಬೃಹತ್ ಕಂಚಿನ ಗಂಟೆಯೊಂದನ್ನು ಅಲ್ಲಿ ಈಗ ಪ್ರದರ್ಶನಕ್ಕಿಟ್ಟುಕೊಂಡಿದ್ದಾರೆ, ಅದನ್ನೂ ಹೊಸ ದೇವಸ್ಥಾನದಲ್ಲಿ ಸ್ಥಾಪಿಸಲಿದ್ದಾರೆ. ನೋಡಲು ಬಹಳ ಭರ್ಜರಿಯಾಗಿದೆ, ಜೈ ಶ್ರೀರಾಮ್ ಎಂದು ಅದರ ಮೇಲೆ ಕೊರೆದಿದ್ದಾರೆ. ಅಲ್ಲೆಲ್ಲಾ ಚಿತ್ರಗಳನ್ನು ಸೆರೆ ಹಿಡಿದೆವು. ಒಂದು ರೀತಿಯ ತೃಪ್ತಿ ಮತ್ತು ಸಾಧನೆಯ ಮನೋಭಾವದಿಂದ ಇದೆಲ್ಲಾ ಕಂಡು ಎದೆಯುಬ್ಬುವದು ಸಹಜ.


ಇಷ್ಟೆಲ್ಲಾ ನಡೆದು ಸುತ್ತಾಡಿ ನೋಡುವಷ್ಟರಲ್ಲಿ ಅದೇಕೋ ನನಗೆ ಬಹಳ ಆಯಾಸ ಮತ್ತು ಹೊಟ್ಟೆ ಸಂಕಟ ಶುರುವಾಯಿತು.

ಆಗ ತಾನೇ ಸ್ವಲ್ಪ ಕುಲ್ಹಾಡ್ (ಮಣ್ಣಿನ ಕುಪ್ಪಿ) ಚಾಯ್ ಮತ್ತು ಬಿಸ್ಕೆಟ್ಸ್ ಸಹಾ ಸೇವಿಸಿದ್ದೆ, ಮಧ್ಯಾಹ್ನ ಸ್ವಲ್ಪ ಲೈಟಾಗಿ ಅನ್ನ ಸಾರು ಪಲ್ಯ, ಮಜ್ಜಿಗೆ ಅನ್ನವೇ ಸೇವಿಸಿದ್ದೆ. ಅದೇನು ಬಿಸಿಲಿನಲ್ಲಿ ಸುತ್ತಿದ್ದಕ್ಕೋ ಏನೋ ಸ್ವಲ್ಪ ನಡಿಗೆಯಲ್ಲಿ ತಂಡಕ್ಕಿಂತಾ ನಾನು ಕೆಲವು ಹೆಜ್ಜೆ ಹಿಂದೆ ಬಿದ್ದಿದ್ದೆ. ’ಏನಪ್ಪ, ರಾಮ ಜನ್ಮಭೂಮಿ ಟೆಂಪಲ್ ಬಾಕಿಯಿದೆ, ಅದಕ್ಕೇ ಇನ್ನೂ ಹೆಚ್ಚು ನಡೆಯಬೇಕಿರುವುದು, ಈಗಲೇ ಹೀಗನಿಸುತ್ತಿದೆ?’ ಎಂದು ಭಯವಾದರೂ, ಮತ್ತೆ ಮನಸ್ಸು ಗಟ್ಟಿ ಮಾಡಿಕೊಂಡು ರಾಮನಾಮ ಜಪ, ಭಜನೆಗಳು ಹೇಳಿಕೊಳ್ಳುತ್ತಾ ಸಾಗಿದೆ.

ಅವರು ಮೊದಲು ಹೇಳಿದ ಹಾಗೆ ರಾಮ ಜನ್ಮಭೂಮಿ ( ಮಾಜಿ ಬಾಬ್ರಿ ಮಸೀದಿ) ಇದ್ದ ಸೈಟಿಗೆ ಹೋಗುವ ದಾರಿ ( ಇವನ್ನು ಸಂದು, ಗಲಿ ಎನ್ನಬಹುದು) ಬಹಳ ಕಿರಿದಾದ ಹಲವು ಅಡ್ಡ ಗಲ್ಲಿಗಳು ಸಿಗುವ ಪ್ಯಾಸೇಜ್. 1992ರಲ್ಲಿ ಕರಸೇವಕರು ಈ ಗಲಿಯು ಇದಕ್ಕಿಂತಾ ಕಷ್ಟಕರ ಹಾಗೂ ದುಸ್ತರವಾಗಿದ್ದಾಗ ಅದು ಹೇಗೆ ಅಲ್ಲಿಯವರೆಗೆ ನಡೆದು ಆ ಸಂಖ್ಯೆಯಲ್ಲಿ ತಲುಪಿದರೋ, ಅವರನ್ನು ತಡೆಯುವ ಪೋಲಿಸರು ಅದೆಲ್ಲಿ ನಿಂತಿದ್ದರೋ ಊಹಿಸಲು ಸಹಾ ಕಷ್ಟವೇ ಅನ್ನಿ.


ರಾಮ ಜನ್ಮ ಭೂಮಿಯತ್ತ


ಈ ಗಲಿಯಲ್ಲಿ ಎರಡೂ ಕಡೆ ಮನೆ, ಚಿಕ್ಕ ಕ್ಯಾಬಿನ್ನು ತರಹದ ಈ ಹಳೆ ಕಾಲದ ಟೆಲಿಫೋನ್ ಬೂತ್ ಸೈಜಿನ ಅಂಗಡಿಗಳ ಸಾಲು ಸಾಲೇ ಇವೆ. ಅದರ ಮೇಲೆ ಮಹಡಿಗಳು ಇವೆ. ಇವೆಲ್ಲ ಬಡವರ ಮನೆಗಳೇ. ಇಲ್ಲಿ ನಿಜಕ್ಕೂ ನಮ್ಮಗಳ ಮನಸ್ಸು ಹಿಂಡುವ ಬಡತನವಿದೆ, ಅವರು ನಾವು ಪ್ರವಾಸಿಗರು ಏನಾದರೂ ಕೊಳ್ಳುವೆವೋ ಎಂದು ಕಣ್ಣು ಕಣ್ಣು ಬಿಟ್ಟು ನೋಡುತ್ತಿರುತ್ತಾರೆ. ಇಲ್ಲವಾದರೆ ಅವರಿಗೆ ಬೇರೆ ಜೀವನಾಧಾರವೇ ಇಲ್ಲವಲ್ಲ!

ಇಂತಹ 3 ಅಡಿ ಅಗಲ ಇರಬಹುದಾದ ಗಲಿಯನ್ನು ನೀವು ಯಾವುದೋ ಮುಖ್ಯರಸ್ತೆಯಿಂದ ಪ್ರವೇಶಿಸಿದಿರಿ ಅನ್ನಿ, ಎರಡೂ ಕಡೆಯ ಮನೆಯ ಮೆಟ್ಟಿಲುಗಳು ಹೊರಕ್ಕೆ ಸ್ವಲ್ಪ ಜಾಗವನ್ನು ಕಸಿದಿರುತ್ತವೆ, ಅದರ ಮಧ್ಯೆ ಮಾತ್ರವೇ ಸ್ವಲ್ಪ ರಸ್ತೆ ಮಿಕ್ಕಿದೆ. ಅಲ್ಲಿ ನಿಮಗೆ ಎದುರಾಗಲಿದೆ-ಎರಡು ದಿಕ್ಕಿನ ಟ್ರಾಫಿಕ್ ಅಂದರೆ ಟೂ ವೀಲರುಗಳದ್ದು...ಅಲ್ಲದೇ ಎರಡೂ ಕಡೆಗೆ ನುಗ್ಗುತ್ತಿರುವ ಜನಗಳು....ಅಲ್ಲಲ್ಲಿ ಕಸ-ಕಡ್ಡಿ, ಸಗಣಿ, ಎಮ್ಮೆ ಕುಳಿತಿರುವುದು, ಹಸು ನಡೆಯುತ್ತಾ ಎದುರಿಗೇ ಬರುವುದು, ಬೀದಿ ನಾಯಿಗಳು... ಇವೆಲ್ಲಾ ಹೇಗೆ ಈ ಕಿಷ್ಕಿಂದ ರಸ್ತೆಯಲ್ಲಿ ಅಪಘಾತವಾಗದೇ ಬಾಳಿ ಬದುಕುತ್ತಿದ್ದಾರೋ ಇದೇ ಒಂದು ದೊಡ್ಡ ವಿಸ್ಮಯ!

ಅಲ್ಲಿ ಎಡಕ್ಕೂ ಬಲಕ್ಕೂ ಸೊಟ್ಟಕ್ಕೂ ತಿರುಗುವ ಅಡ್ಡ ಗಲಿಗಳು, ಎಲ್ಲವೂ ನೋಡಲು ಒಂದೇ ತರಹ ಇರುತ್ತವೆ, ಹೆಸರುಗಳು ಎಲ್ಲಿದೆಯೋ ದೇವರೇ ಬಲ್ಲ. ಅಲ್ಲಿ ನೀವೇನಾದರೂ ತಪ್ಪು ದಿಕ್ಕಿಗೆ ತಿರುಗಿದಿರೆಂದರೆ ಮತ್ತೆ ಹುಡುಕಲು ಈ ಊರಿನ ಗೈಡ್ ಒಬ್ಬನಿಗೇ ಸಾಧ್ಯ, ಮೊಬೈಲ್ ಕಾಲ್ ಮಾಡಿ ಹೇಳೋಣ ಎಂದರೂ ಎಲ್ಲಿದೀವಿ ಎಂದು ಹೇಗೆ ಲ್ಯಾಂಡ್‌ಮಾರ್ಕ್ ಹೇಳುವುದು? ಎಲ್ಲಾ ಒಂದೇ ತರಹದ ಮನೆಗಳೇ. ಅಂಗಡಿಗಳೇ...ಅಬ್ಬಬ್ಬಾ!...ಇವಕ್ಕೆ ಪತ್ಲೀ ಗಲಿ ಎನ್ನುತ್ತಾರೆ ಹಿಂದಿಯಲ್ಲಿ- ಕಿರಿದಾದ ಗಲ್ಲಿ. ಅಲ್ಲೇ ಯಾಕೋ ಮೈಗೆ ಲಘು ಜ್ವರ ಇದೆ ಎನಿಸಿ ಯಾಕೋ ಐಮೋಲ್ ಪ್ಲಸ್ ಮತ್ತು ಗ್ಯಾಸ್ ಟ್ಯಾಬ್ಲೆಟ್ ಮಾತ್ರೆ ತೆಗೆದುಕೊಂಡು ನೀರಿನಲ್ಲಿ ಕುಡಿದೆ.

ಇಂದು ನಾವು ಹೋಗುವ ಸಮಯವೋ ಭಾನುವಾರ. ’ಮಧ್ಯಾಹ್ನದ ಪೀಕ್ ಅವರ್ ಅಲ್ಲವಾ?’ ಎಂದೆ ಪಾಲು ಎಂಬ ನಮ್ಮ ಲೋಕಲ್ ಗೈಡಿಗೆ! ’ಈಗೀಗ ಎಲ್ಲಾ ಅವರ್ರೂ ಪೀಕ್, ಸಾಹೇಬ್’ ಎಂದರು ಅಲ್ಲಿನ ಗೈಡ್! ಬಹಳ ಜನ ದೇಶದಾದ್ಯಂತಾ ರಾಮಜನ್ಮಭೂಮಿ ನೋಡಲು ಧಾವಿಸಿ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ, ಅಯೋಧ್ಯೆ ಇಂತಹಾ ಪ್ರವಾಸಿಗರ ಜನಜಂಗುಳಿ ಹಿಂದೆಂದೂ ನೋಡಿಲ್ಲ’ ಎಂದ. ಈ ದೇವಸ್ಥಾನ ನೋಡಲು ಮುಖ್ಯ ಗೇಟಿನ ಸೆಕ್ಯುರಿಟಿ ಬಳಿ ತಲುಪಿರಲು ಸಮಯ ಇದೆ (ಬೆಳಿಗ್ಗೆ 6 ರಿಂದ 11.30 ಮತ್ತು 2 ರಿಂದ 7.30).

ನಾನು ‘ಯಾವಾಗ ಮುಗಿಯುವುದೋ ಈ ಮಂದಿರ ಕಟ್ಟಡ ಪೂರ್ತಿ?’ ಎಂದಾಗ ಅವನು ಹುಬ್ಬೇರಿಸಿದ. "ಏನು ನಮ್ಮ ಕೈಯಲ್ಲಿದೆಯೆ, ಸಿಯಾವರ ರಾಮಚಂದ್ರನೇ ಕಟ್ಟಿಸಿಕೊಳ್ಳುತ್ತಿದ್ದಾನೆ. ಮೊದಲಿಂದಲೂ ಇಲ್ಲೊಂದು ಲೋಕಲ್ ಮಾತಿದೆ, ಸಾಬ್... "ಮಂದಿರ್ ವಹೀ ಬನಾಯೇಂಗೇ, ಸಮಯ್ ನಹೀ ಬತಾಯೇಂಗೇ"..." ಎಂದುಬಿಟ್ಟ.

ಸರಿ ಹೋಯಿತು, ಇದನ್ನು ಕೇಳಿ- ನನಗೂ ಒಂದು ನೆನಪಿಗೆ ಬಂದಿತು. ಇದಕ್ಕೂ ಮುನ್ನ ಈ ರಾಮ ಜನ್ಮಭೂಮಿ ನೋಡಲು ಬಂದಾಗ ‘ರಾಮಲಲ್ಲಾ ವಿರಾಜಮಾನ್’ ಎಂದು ಹೊರಗೆ ಒಂದು ಟೆಂಟಿನಲ್ಲಿ ಈ ಬಾಲ ರಾಮನ ಶಿಲೆ ಇರುತ್ತಿತ್ತಂತೆ. ಅದು ಅಲ್ಲೇ ಸ್ವಯಂಭೂ, ಉದ್ಭವ ಆಯಿತೆಂದು ಅಲ್ಲಿನ ಮುಖ್ಯ ಅರ್ಚಕ ಅಭಿರಾಮ್ ದಾಸ್ ಕೋರ್ಟ್ ಹೇಳಿಕೆ ಕೊಟ್ಟಿದ್ದರೂ ಆತನೇ ಒಳಗಿಟ್ಟನೆಂದೂ ಇನ್ನು ಕೆಲವರು ಹೇಳುತ್ತಾರೆ, ಅಲ್ಲಿಂದಲೇ ಈ ವಿವಾದ ಕೋರ್ಟ್ ಏರಿದ್ದು....(ಅದನ್ನೇ ಈಗ ಹೊಸ ಆಲಯದ ಒಳಗೆ ತಾತ್ಕಾಲಿಕವಾಗಿ ಇಟ್ಟಿದ್ದಾರೆ) ಆಗಲೂ ಹೊಸ ಮಂದಿರ ಕಟ್ಟಿಸುವ ಉತ್ಸುಕ ಕರಸೇವಕರ ಒಂದು ಘೋಷಣೆಯಿತ್ತು-"ರಾಮ್ ಲಲ್ಲಾ, ಹಂ ಆಯೇಂಗೆ, ಮಂದಿರ್ ವಹೀ ಬನಾಯೇಂಗೆ" (ಲಲ್ಲಾ ಎಂದರೆ ಮುದ್ದು ಮಗು, ಕಂದ).

ಆದರೆ ಸರಕಾರವೆನೋ ಗುತ್ತಿಗೆದಾರರಿಗೆ ತನ್ನ ಗಡುವು ಫಿಕ್ಸ್ ಮಾಡಿದೆ- ರಾಮಜನ್ಮಭೂಮಿ ದೇವಸ್ಥಾನ ನಮ್ಮ ಮುಂದೆ 2024 ಮಕರ ಸಂಕ್ರಾಂತಿಯ ನಂತರ ಉದ್ಘಾಟನೆಯಾಗುವುದು!


ನಿರ್ಮಾಣ ಶಾಲೆ-1

ನಿರ್ಮಾಣ ಶಾಲೆ-2

ನಿರ್ಮಾಣ ಶಾಲೆ -3

ನಿರ್ಮಾಣ ಶಾಲೆ -4

ನಿರ್ಮಾಣ ಶಾಲೆ-5

ನಿರ್ಮಾಣ ಶಾಲೆ-6

ನಿರ್ಮಾಣ ಶಾಲೆ-7

ನಿರ್ಮಾಣ ಶಾಲೆ- 8

ನಿರ್ಮಾಣ ಶಾಲೆ-9


ನುಸುಳುವ ಹೊರಳುವ ಆ ಕಿರು ದಾರಿಯಲ್ಲಿ ಉಸಿರು ಬಿಗಿ ಹಿಡಿದು ನಾವು ಅರ್ಧ ಮುಕ್ಕಾಲು ತಾಸು ನಡೆದಿದ್ದೇ ನಡೆದಿದ್ದು. ಕೊನೆಗೂ ಮೈನ್ ಗೇಟ್ ಎಂದು ಕರೆಸಿಕೊಳ್ಳುವ ಸೆಕ್ಯುರಿಟಿ ಬಳಿಗೆ ಹೋಗುವ ಮುನ್ನ ಜೇಬೆಲ್ಲಾ ಖಾಲಿ ಮಾಡಿ ನಮ್ಮ ಮ್ಯಾನೇಜರ್ ಕೈಯಲ್ಲಿ ನೀರಿನ ಬಾಟಲ್, ಮೊಬೈಲ್, ವಾಚ್, ಪೆನ್, ಪೇಪರ್ ಎಲ್ಲಾ ಕೊಟ್ಟೆವು, ಪಾದರಕ್ಷೆ ಅಲ್ಲೇ ಬಿಟ್ಟೆವು. ನಮ್ಮ ವಸ್ತುಗಳನ್ನು ಅಲ್ಲಿದ್ದ ಒಂದು ಅಂಗಡಿಯ ಲಾಕರಿನಲ್ಲಿಟ್ಟರು. ಕೇವಲ ನಮ್ಮ ಪರ್ಸ್ ಮತು ಕ್ಯಾಶ್ ನೋಡಿ ಗಾರ್ಡ್ಸ್ ಒಳಗೆ ಬಿಟ್ಟರು, ಆ ಮೆಟಲ್ ಕಟಕಟೆ ಇರುವ ಪಂಜರದಂತಹಾ ಸಾಲುದಾರಿಯಲ್ಲಿ ನಾವು ನಡೆಯುತ್ತಾ ಹೋದಂತೆ ಕಟ್ಟಡದ ಭಾಗಗಳು ಕಾಣತೊಡಗಿದವು. ಆಗಲೇ ಬೇಸ್ಮೆಂಟ್ ಮೆಟ್ಟಿಲುಗಳ ಕಾರ್ಯ ಮುಗಿಯುತ್ತಾ ಬಂದು ಕಟ್ಟಡದ ಕಂಬಗಳು ಮೇಲೇರತೊಡಗಿವೆ. ಇಷ್ಟೆಲ್ಲಾ ಆಯಾಸ ಮಾಡಿಕೊಂಡು ಬಂದಿದ್ದಕ್ಕೆ ಕೊನೆಗೂ ಇದನ್ನೆಲ್ಲಾ ನೋಡಿ ತೃಪ್ತರಾದೆವು. ಮುಖ್ಯ ಗರ್ಭ ಗುಡಿ ಸಹಾ ಈಗ ತಾತ್ಕಾಲಿಕ ಗರ್ಭಗುಡಿ, ನೀಲಾಂಬರದಲ್ಲಿ ಇಂದು ರಾಮ ಲಲ್ಲಾ ವಿಗ್ರಹವನ್ನು ಬಹಳ ಮನೋಹರವಾಗಿ ಅಲಂಕರಿಸಿದ್ದರು. ಅದನ್ನು ನೋಡಲು ಸ್ವಲ್ಪ ನೂಕು ನುಗ್ಗಲು, ಅಲ್ಲಿನ ಪೂಜಾರಿಗಳ ಕೈಯಲ್ಲಿ ತೀರ್ಥ ತೆಗೆದುಕೊಂಡು ಕಾಲು ಮೆಟ್ಟಿ ನಿಂತು ಏರಿ ಇಣುಕಿ ಇಣುಕಿ ಪೂರ್ತಿಯಾಗಿ ಶ್ರೀರಾಮನ ಬಾಲ್ಯಾವಸ್ಥೆಯ ವಿಗ್ರಹ ದರ್ಶನ ಪಡೆದು ತೃಪ್ತರಾದೆವು, ಸ್ವಲ್ಪ ನಮ್ಮನ್ನು ತಳ್ಳಿದರೂ ಪರವಾಗಿಲ್ಲ, ಪಕ್ಕದಲ್ಲಿ ಅದರ ಟಿವಿ ಪರದೆಯಲ್ಲಿ ದರ್ಶನ ಸಹಾ ಇದೆ. ಈ ತಾತ್ಕಾಲಿಕ ಗರ್ಭಗುಡಿಯಿಂದ ಶಾಶ್ವತ ಗರ್ಭಗುಡಿ ಕಟ್ಟಿ ಅಲ್ಲಿ ಈ ಮೂಲ ವಿಗ್ರಹವನ್ನು ಪುನಃ ಪ್ರತಿಷ್ಠಾಪನೆ ಮಾಡುತ್ತಾರಂತೆ. ಅದನ್ನು ನೋಡಲು ಮತ್ತೊಮ್ಮೆ ಬರಬೇಕು ಎಂದುಕೊಂಡೆವು.

ಎಲ್ಲರ ಕಂಗಳಲ್ಲೂ ಆನಂದಭಾಷ್ಪ, ಎಷ್ಟೆಷ್ಟು ಕಾಲದ ಹರಕೆ, ಬೇಡಿಕೆಗಳೋ ಇವೆಲ್ಲಾ, ಅವರವರ ಮನಸ್ಸಿಗೇ ಗೊತ್ತು. ಬಹಳ ಭಾವನಾತ್ಮಕ ಗಳಿಗೆಗಳು ಅವು!

ನಾವು ಅಲ್ಲಿಂದ ಮೂಕರಾಗಿ ಕಣ್ಣೊರೆಸಿಕೊಂಡು ಹೊರಕ್ಕೆ ನಡೆದಾಗ.

ಅದರೊಳಗೆ ಹಲವು ಚಿಕ್ಕ ಮಂದಿರಗಳು ಸ್ಥಳಗಳು ಕಟ್ಟಲ್ಪಡುತ್ತಿವೆ.

ರಾಮ ಜನ್ಮಭೂಮಿ ದೇವಾಲಯದ ಕೆಲವು ಅಂಕಿ ಅಂಶಗಳು:-

ಈ ಮುಖ್ಯ ದೇವಾಲಯದ ಉದ್ದಗಲ= 350’ ಬೈ 250’. ಇದಕ್ಕೆ 12 ಟೀಕ್ ವುಡ್ ಮುಖ್ಯ ಬಾಗಿಲುಗಳಿರುತ್ತವೆ. ಸುಮಾರು 166 ಕಂಬಗಳು ನೆಲಮಹಡಿಯಲ್ಲಿ, 144 ಮೊದಲನೆ ಅಂತಸ್ತಿನಲ್ಲಿ ಮತ್ತು 82 ಎರಡನೆ ಅಂತಸ್ತಿನಲ್ಲಿರುತ್ತವೆ. ಸುಂದರವಾದ ನಗರಾ ವಾಸ್ತುಶಿಲ್ಪ ಶೈಲಿಯಲ್ಲಿದೆ ಎಂದು ಹೇಳಲಾಗಿದೆ.


ರಾಮ ಲಲ್ಲಾ ಈಗಿನ ತಾತ್ಕಾಲಿಕ ಗರ್ಭಗುಡಿ

ರಾಮ ಲಲ್ಲಾ ಈಗಿನ ತಾತ್ಕಾಲಿಕ ಗರ್ಭಗುಡಿ- ಮೋದಿಜಿ ಪೂಜೆ -ಹಳೆ ಚಿತ್ರ - ಸಂಗ್ರಹ


ನಾವು ತೆಗೆದ ಇತರೆ ಚಿತ್ರಗಳು ಇಲ್ಲಿವೆ. ಮತ್ತೆ ನಮ್ಮ ವಸ್ತುಗಳನ್ನು ಲಾಕರಿನಿಂದ ಮರಳಿ ತೆಗೆದುಕೊಂಡು ಮುಂದುವರೆದೆವು. ಇಲ್ಲೆಲ್ಲಾ ಬಹಳ ಜೋಪಾನವಾಗಿರಬೇಕು, ಮರೆಯಬಾರದು ಎಂದು ಒತ್ತಿ ಹೇಳುತ್ತೇನೆ.

ಇಲ್ಲಿ ನಾವು ಕೆಲವು ಫೇಡಾ ಮತ್ತು ಮಿಲ್ಕ್ ಬರ್ಫಿ ತರಹದ ಸ್ವೀಟ್ ಪ್ರಸಾದ್ ಕೊಂಡೆವು. ಇನ್ನೂ ಮುಂದಿನ ಸ್ಥಳಕ್ಕೆ ಎಲ್ಲಾ ಹೊರಟೆವು.

ಆ ವೇಳೆಗಾಗಲೇ ನನಗೆ ಸ್ವಲ್ಪ ಹೆಚ್ಚು ದಣಿವಾಗಿ ಕಾಲೆಳೆದುಕೊಂಡು ಬರುತ್ತಿದ್ದೆ. ಎರಡು- ಪೈನ್ ಕಿಲ್ಲರ್ ಮತ್ತು ಗ್ಯಾಸ್ ಮಾತ್ರೆ ನುಂಗಿಬಿಟ್ಟಿದ್ದೆ, ಆದರೂ ಏನೋ ಸಂಕಟ.

ಎಲ್ಲರೂ ಹನುಮಾನ ಗದ್ದಿ ಎಂಬ ಹನುಮಂತ ಅಯೋಧ್ಯೆಯಲ್ಲಿ ಸ್ವಲ್ಪ ಕಾಲ ಕಾವಲು ಕುಳಿತಿದ್ದ ಸ್ಥಳ- ಈಗ ಅಲ್ಲಿ ದೇವಸ್ಥಾನವಿದೆ, ಸುಮಾರು 70 ಮೆಟ್ಟಿಲು ಹತ್ತಬೇಕು ಎಂದರು.

ಭಾನುವಾರದ ಅಧಿಕ ರಷ್ ಬೇರೆ.

ಯಾಕೋ ಮುಂದೆ ಹೋಗಲು ಬೇಡವೆನಿಸಿತು, ಅಲ್ಲೇ ಒಂದು ಅಂಗಡಿಯಲ್ಲಿ ಉಸ್ಸಪ್ಪಾ ಎಂದು ಸ್ಟೂಲ್ ಹಾಕಿಕೊಂಡು ನಾನು ಮಾತ್ರ ಕುಳಿತುಬಿಟ್ಟೆ. ಮನೆಯವರೆಲ್ಲಾ ಮೇಲೆ ಹತ್ತಿ ಹೋಗಿ ಬಂದರು. ಅಲ್ಲಿ ಮೇಲೆ ಬಹಳ ಭಕ್ತಾದಿಗಳ ಹುಚ್ಚಾಪಟ್ಟೆ ರಶ್ ಆಗಿ ಸ್ವಲ್ಪ ಗೊಂದಲ ಆಯಿತಂತೆ. ಸ್ವೀಟ್ಸ್ ಪ್ರಸಾದ ನೈವೇದ್ಯ ಇತ್ತು.ಅದನ್ನು ಪೂಜಾರಿ ದೇವರ ಬಳಿ ಇಟ್ಟು ಕೊಟ್ಟ ಮೇಲೆ ಎಲ್ಲರೂ ತೆಗೆದುಕೊಳ್ಳುವುದಂತೆ. ಆ ರಶ್ ನಲ್ಲಿ ಹೇಗೋ ನುಗ್ಗಾಡಿ ನೋಡಿ ಬಂದರು, ಹನುಮಂತನ ಮೂರ್ತಿಯನ್ನು.

ನಾನು ಕೆಳಗೆ ಅಂಗಡಿಯಲ್ಲಿ ಅವರು ಇಳಿದು ಬರುವವರೆಗೂ ಕುಳಿತೆದ್ದೆನಾ...ಆಗ ನನಗೆ ಸುಮ್ಮನೆ ಕೂತಿದ್ದರೆ ಸಾಕು ಎನ್ನುವಷ್ಟು ಕಾಲು ನೋವು ಆಯಾಸ ಇತ್ತು. ಅಲ್ಲಿಂದ ಮತ್ತೆ ಶೇರ್ ಆಟೋದಲ್ಲಿ ಗಲಿ ಗಲಿ ಹೊರಳುತ್ತಾ ಬಸ್ಸಿನತ್ತ ಪ್ರಯಾಣ.

ಆಗ ನನಗೆ ತಡೆಯಲಾಗದ ವಾಂತಿ ಸಂಕಟ ಶುರುವಾಗಿಬಿಟ್ಟಿತು. ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಏ/ಸಿ ಬಸ್ ಏರಿ ಕುಳಿತರೆ, ಅದು ಹೊರಡುವುದಕ್ಕೂ ನನಗೆ ಒಮ್ಮೆಲೇ ವಾಂತಿ ಆಗುವುದಕ್ಕೂ ಸರಿ ಹೋಯಿತು, ಬಹಳ ಜೋರಾಗಿಯೇ ಆಗಿ ನರಳಿದೆ. ಎಲ್ಲರೂ ನನಗೇನಾಯಿತು ಎಂದು ನೋಡಿದರು. ಬಟ್ಟೆಯಲ್ಲಿ ಎಲ್ಲಾ ಒರೆಸಿಕೊಂಡು ಹಾಗೇ ತಲೆ ಪತ್ನಿಯ ಭುಜ ಮೇಲಿಟ್ಟು ಮಲಗಿದ್ದೆ. ಒಂದೇ ಸಮನೆ ತಲೆ ಸುತ್ತು, ಹೊಟ್ಟೆ ಸಂಕಟ. ಸಾಧಾರಣವಾಗಿ ನನಗೆ ಪ್ರಯಾಣದಲ್ಲಿ ವಾಂತಿ ಆಗಿರುವುದು ಅಪರೂಪ, ಯಾವಾಗಲೋ ಹಿಂದೆ ಮಂಗಳೂರಿಗೆ ಬೆಟ್ಟದ ದಾರಿಯಲ್ಲಿ ಹೋಗುವಾಗ ಒಮ್ಮೆ ಆಗಿತ್ತು ಅಷ್ಟೇ.

ಛೆ, ಐಮೋಲ್ ಟ್ಯಾಬ್ಲೆಟ್ ಆಗ ತೆಗೆದುಕೊಳ್ಳಬಾರದಿತ್ತೇನೋ, ಎತ್ತಿಹಾಕಿಬಿಟ್ಟಿದೆ ಅಂದರು ಮನೆಯವರು. ಅದು ನಾನು ಸಾಧಾರಣವಾಗಿ ವರ್ಷಾನುಗಟ್ಟಲೆಯಿಂದ ನೋವು ಜ್ವರಕ್ಕೆ ತೆಗೆದುಕೊಳ್ಳುವಂತದ್ದೇ. ಅದೇನೋ ಅಂದು ಮಾತ್ರ ಹಾಗಾಯಿತು!

ಮತ್ತೆ ರೂಮಿಗೆ ಬಂದು ಕ್ಲೀನ್ ಅಪ್ ಆಗಿ ಮಲಗಿದ್ದೆ. ರಾತ್ರಿ 8.30ಕ್ಕೆ ಊಟಕ್ಕೆ ಎಬ್ಬಿಸಿದಾಗ ಬೇಡ ಎಂದೆ. ಖಾಲಿ ಹೊಟ್ಟೆಯಲ್ಲಿದ್ದರೆ ರಾತ್ರಿ ತೆಗೆದುಕೊಳ್ಳಬೇಕಾದ ನನ್ನ ಬಿಪಿ ಮುಂತಾದ ಮಾತ್ರೆ ತಿನ್ನಲು ಕಷ್ಟವಾಗುತ್ತದೆ ಎಂದರು. ಎರಡು ತುತ್ತು ಮಜ್ಜಿಗೆ ಅನ್ನ ತಿಂದು ಎದ್ದೆ.

ಇದೆಲ್ಲಾ ಯಾಕೆ ವಿಶದವಾಗಿ ಹೇಳಿದೆ ಎಂದರೆ ಇಂತಹ ತೊಂದರೆ ಕೆಲವರಿಗೆ ಪ್ರಯಾಣದಲ್ಲಿ ಆಗಬಹುದು. ನೋಡಿ, ಒಂದು ಇದು ಬಹಳ ಟಫ್ ಶೆಡ್ಯೂಲ್, ಬೆಳಿಗ್ಗೆ ಬೇಗ ಎದ್ದು 6ಕ್ಕೆಲ್ಲಾ ತಿಂಡಿ ತಿನ್ನುವುದು. ಲಾಂಗ್ ಜರ್ನಿ, ಊಟ-ತಿಂಡಿ ನೀರಿನ ವ್ಯತ್ಯಾಸ, ಕಿಲೋಮೀಟರ್ಗಟ್ಟಲೆ ಓಡಾಟ, ನದಿ ಸ್ನಾನ ಇದ್ದರೂ ಆಗಬಹುದು- (ನಮ್ಮದೇ ಟ್ರಾವೆಲ್ಸ‌ನ ಸೌತ್ ಇಂಡಿಯನ್ ಆಹಾರ ಆದರೂ, ಹೀಗೆ ಮೈಗೆ ವ್ಯತ್ಯಾಸ ಆಗಬಹುದು). ನಿಮಗೆ ಅಪ್ಸೆಟ್ ಆದಾಗ ಏನು ವರ್ಕ್ ಆಗುತ್ತದೋ ಅದನ್ನು ಮಾಡಿ- ಉಪವಾಸ, ಮಜ್ಜಿಗೆ, ಸೋಡಾ, ಔಷಧಿ ಹೀಗೆ...ಒಬ್ಬೊಬ್ಬರೂ ನಮ್ಮ ಮೈಗೆ ಸರಿಯಾಗಿರುವಂತೆ ಮಾಡಿದರೆ ಸರಿ ಹೋಗುವುದು.

ನಮ್ಮ ಟೂರ್ ಮ್ಯಾನೇಜರ್ ಸಹಾ ನನ್ನ ಬಳಿ ಕಾಳಜಿಯಿಂದ ಮೊದಲು ಬಂದು ಅವರ ಬಳಿಯಿದ್ದ ಕೆಲವು ಗ್ಯಾಸ್, ಹೊಟ್ಟೆ ಅಪ್ಸೆಟ್ ಮಾತ್ರೆ ಕೊಟ್ಟರು ಪಾಪಾ. "ನಿಮಗೆ ಪಿತ್ತ ಕೆರಳಿದಂತೆ ಆಗಿದೆ, ಸರಿಹೋಗುತ್ತದೆ, ಹಲವರಿಗೆ ಈ ತರಹ ಆಗುತ್ತದೆ, ನಮ್ಮ ಅನುಭವದಲ್ಲಿ" ಎಂದರು.

ಆಗಾಗಲೇ ನಮ್ಮ ಸಹಪ್ರಯಾಣಿಕರಲ್ಲೂ ಕೆಲವರಿಗೇ ಇದೇ ತರಹ ಮಲಬದ್ಧತೆ, ಅಥವಾ ಭೇದಿ, ನೆಗಡಿ, ಕೆಮ್ಮು ಶುರುವಾಗತೊಡಗಿತ್ತು. ಅದೂ ನಾವು ಹೊರಡುವ ಹೊತ್ತಿನಲ್ಲಿ ಅಕ್ಟೊಬರ್ ಮೂರನೆ ವಾರದಲ್ಲಿ ಯು ಪಿ ನಲ್ಲಿ ಮಂಜು/ ಇಬ್ಬನಿ ಬೀಳುತ್ತದೆ, ಜೊತೆಗೆ ಏ/ಸಿ ಬಸ್- ನಾವು ನಮ್ಮ ಸೀಟಿನ ಡಕ್ಟ್ ಕ್ಲೋಸ್ ಮಾಡಿಕೊಳ್ಳಬಹುದು.

ನಮ್ಮ ಮ್ಯಾನೇಜರ್ ಜೊತೆಗೆ ನಾನು ಸುಮ್ಮನೆ ಇದೆಲ್ಲದರ ಬಗ್ಗೆ ಮಾತಾಡಿದಾಗ- "ನಿಮಗೆ ಬೇಕಾದಂತ ಬ್ಯಾಲೆನ್ಸ್ಡ್ ಫುಡ್ ಕೊಡುತ್ತಿದ್ದೇವೆ, ತರಕಾರಿ, ಡಿಶ್ ಎಲ್ಲಾ ಬದಲಿಸಿ ಬದಲಿಸಿ ಕೊಡುತ್ತೇವೆ. ನಮಗೆ ಗೊತ್ತು- ನಿಮಗೆಲ್ಲಾ 60 ವರ್ಷ ದಾಟಿದೆ, ಚಿಕ್ಕ ವಯಸ್ಸಿನವರಂತೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಿಗ್ಗೆ ಬ್ರೇಕ್ ಫಾಸ್ಟ್ ಆಗದಿದ್ದರೆ ಮಧ್ಯಾಹ್ನ ಲಂಚ್ ಒಂದು ಸರಿಯಾಗಿ ತರಕಾರಿ ಸಮೇತ ತಿನ್ನಿ, ರಾತ್ರಿ ಲೈಟಾಗಿ ಚಪಾತಿ ಅಭ್ಯಾಸ ಇದ್ದರೆ, ಅಥವಾ ಸಾರನ್ನ ಮಜ್ಜಿಗೆ ಅನ್ನ ತಿನ್ನಿ" ಎಂದರು.

ನನ್ನ ಪ್ರಕಾರ-ಗ್ಯಾಸ್ ಟ್ರಬಲ್ ಇದ್ದವರು ನಿಮ್ಮ ರೆಗ್ಯುಲರ್ ಔಷಧಿ ತೆಗೆದುಕೊಂಡು ಬನ್ನಿ, ಇಲ್ಲಿನ ನಗರಗಳಲ್ಲಿ ಎಲ್ಲಾ ಸಾಧಾರಣ ಔಷಧಿ ಸಿಗುತ್ತದೆ. ನಿಮ್ಮದೇ ಆಯುರ್ವೇದ, ಹರ್ಬಲ್, ಹೋಮಿಯೋಪತಿ ಆದರೆ ಮನೆಯಿಂದ ತೆಗೆದುಕೊಂಡು ಹೋಗಿರುವುದು ಒಳ್ಳೆಯದು.


ಇಲ್ಲಿಗೆ ಅಯೋಧ್ಯೆ ಪ್ರವಾಸ ಮುಗಿದಂತಾಗಿ ಬೇಗ ಮಲಗಿಬಿಟ್ಟೆವು.

ಮುಂದಿನ ದಿನ ನಾವು ಚಿತ್ರಕೂಟಕ್ಕೆ ಹೊರಡುವುದಿತ್ತು...


ಸಂಚಿಕೆ -4 ಬರುತ್ತದೆ

126 views0 comments

Comentários


bottom of page