top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -5

Writer's picture: Nagesh KumarNagesh Kumar

ಸಂಚಿಕೆ 5:


ಪ್ರಯಾಗರಾಜ್/ ಅಲಹಾಬಾದ್ - ತ್ರಿವೇಣಿ ಸಂಗಮ ಸ್ನಾನ ಮತ್ತು ದಾನ


1) ಗಂಗಾ ಯಮುನಾ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮ ಎಲ್ಲಿದೆ ಎಂದರೆ ತಕ್ಷಣ ಅಲಹಾಬಾದ್ ಎನ್ನುತ್ತೇವೆ.

2) ಚಂದ್ರಸೀಬೆ ಹಣ್ಣು ಎಲ್ಲಿ ಫೇಮಸ್ ಎಂದರೆ ಅಲಹಾಬಾದ್ ಎನ್ನುತ್ತಿದ್ದೆವು!! :)

3) ಕುಂಭಮೇಳ ನಡೆಯುವ ನಗರ ಯಾವುದು, ಶಾಹೀ ಸ್ನಾನ ಎಲ್ಲಿ ಎಂದರೆ ಇದೂ ಒಂದು - ಅಲಹಾಬಾದ್ ಎನ್ನುತ್ತಿದ್ದೆವು.




ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಈ ನಗರ ಸ್ವಂತ ನೆಲೆಯಾಗಿದೆ. ಜವಹರಲಾಲ್ ನೆಹರೂ, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಗುಲ್ಜಾರಿಲಾಲ್ ನಂದಾ, ವಿ ಪಿ ಸಿಂಗ್ ಹಾಗೂ ಚಂದ್ರಶೇಖರ್ ಅಲ್ಲದೇ ಅಮಿತಾಬ್ ಬಚ್ಚನ್ ಮತ್ತು ಅವರ ತಂದೆ ಮನೆಯವರು ಪ್ರಯಾಗ್ ರಾಜ್‌ನಲ್ಲೇ ಹುಟ್ಟಿದವರು ಅಥವಾ ಪ್ರಯಾಗ್ ರಾಜ್ ವಿ.ವಿ.ಯ ವಿದ್ಯಾರ್ಥಿಗಳು ಅಥವಾ ಪ್ರಯಾಗ್‌ರಾಜ್ ಕ್ಷೇತ್ರದಿಂದ ಆಯ್ಕೆಯಾದವರು. ಬಾದಶಾ ಅಕ್ಬರ್ ಇದರ ಹಳೇ ಹಸರಾದ ಪ್ರಯಾಗ್ ಅನ್ನು ಬದಲಿಸಿ ಅಲಹಾಬಾದ್ ಎಂದಿಟ್ಟಿದ್ದು... ಈಗ 2018ರಲ್ಲಿ ಯೋಗಿ ಆದಿತ್ಯನಾಥರ ಸರ್ಕಾರದಲ್ಲಿ ಇದು ಮತ್ತೆ ಪ್ರಯಾಗ್‌ರಾಜ್ ಆಗಿದೆ.

2014 ರ ಮುಂಚೆ ಮತ್ತು ನಂತರದ ಉತ್ತರ ಪ್ರದೇಶ ಎಂದು ಎಲ್ಲರೂ ಇಂದು ಯು.ಪಿ ಬಗ್ಗೆ ಮಾತನಾಡಲು ತೊಡಗುವುದು ಅವೆರಡರ ಮಧ್ಯೆ ಹೋಲಿಕೆಯಲ್ಲಿ ಅಗಾಧ ವ್ಯತ್ಯಾಸವಿರುವದರಿಂದ ಎನ್ನುತ್ತಾರೆ ಈ ಊರನ್ನು ತಿಳಿದವರು.

ಮೊದಲು ಗೋರಖ್ ಪುರದ ಸಂಸದರಾದ ಯೋಗಿ ಜಿ, ಅನಂತರ 2017ರಿಂದ ಸತತವಾಗಿ ಎರಡನೇ ಸಲ ರಾಜ್ಯದ ಮುಖ್ಯಮಂತ್ರಿಯಾಗಿ ಅದರ ಅದೃಷ್ಟರೇಖೆಯನ್ನು ನಿಧಾನವಾಗಿ ಬದಲಿಸುತಿದ್ದಾರೆ. ಮೊದಮೊದಲು ಇಲ್ಲಿ ನಡೆಯುತ್ತಿದ್ದ ಕುಂಭಮೇಳ ನೋಡಿ ಆ ಅಗಾಧ ರಷ್ಷನ್ನು ಅನಿಯಂತ್ರಿತವಾಗಿ ಬಿಟ್ಟು ಎಂತೆಂತಾ ಗೊಂದಲ, ತೊಂದರೆ ಅನುಭವಿಸುತ್ತಿದ್ದ ಇಲ್ಲಿನ ನಾಗರೀಕರು ಅದೆಲ್ಲಾ ಕಳೆದ ಕುಂಭ ಮೇಳದಿಂದ ಪವಾಡದಂತೆ ಬದಲಾಯಿತೆನ್ನುತ್ತಾರೆ.

ಹೊಸ ನಿಯಂತ್ರಿತ ಶಿಸ್ತಿನ ಸ್ವಚ್ಚ ಕುಂಭಮೇಳವಾಗಿ ಬದಲಾಗಿದ್ದು ನೋಡಿ ನಗರದ ಜನತೆಯೇ ಮೂಗಿನ ಮೇಲೆ ಬೆರಳಿಟ್ಟುಕೊಂಡರಂತೆ. ಅದೇ ಮೊದಲಿನಂತೆ 10 ಲಕ್ಷ ಜನರ ಕೂಟ! ಆದರೆ ಆ ಕೊಳಕು, ಅಶಿಸ್ತು, ಅಪರಾಧ, ಗದ್ದಲ ಗೊಂದಲ, ಕಾಲ್ತುಳಿತ ಯಾವುದೂ ಇಲ್ಲ! ಇಡೀ ನಗರದ ನಕ್ಷೆಯನ್ನೇ ಬದಲಿಸಿ ಒಂದು ಬೆರಗಾಗುವಂತಹಾ ಮಾದರಿ ಕುಂಭ ಮೇಳ ಆಯೋಜಿಸಿತಂತೆ ಅವರ ರಾಜ್ಯ ಸರಕಾರ. ಇದೆಲ್ಲವನ್ನೂ ನಮಗೆ ನಮ್ಮ ಟೂರ್ ಮ್ಯಾನೇಜರ್ ಮೋಹನ ಪ್ರಭು ವಿವರಿಸುತ್ತಾ, ಇದೆಲ್ಲಾ ತಮ್ಮ 16 ವರ್ಷಗಳ ಅನುಭವದಲ್ಲಿ ಕಣ್ಣಾರೆ ಕಂಡಿದ್ದು ಅನುಭವಿಸಿದ್ದು ಎನ್ನುತ್ತಾರೆ.

ಹಾಗಾಗಿಯೇ ಈ ನಗರವನ್ನು ನೋಡಿ ಅಲ್ಲಿ ನಾವು ಒಂದು ಶ್ರಾದ್ಧ ಅಥವಾ ಪಿತೃಕಾರ್ಯ ಮಾಡಿ ಅಲ್ಲಿಂದ ತ್ರಿವೇಣಿ ಸಂಗಮದ ಸ್ನಾನ ಮಾಡಲು ಕಾತರರಾಗಿದ್ದೆವು.


ಬೆಳಿಗ್ಗೆ ನಗರದಲ್ಲಿ ನಾವಿಳಿದುಕೊಂಡಿದ್ದ ಉತ್ತಮ ಹೋಟೆಲಿನಿಂದ ಸ್ನಾನ ಮಾಡಿ ತಿಂಡಿ ತಿಂದು 6ಕ್ಕೆಲ್ಲಾ ಎಲ್ಲರೂ ಒಟ್ಟಿಗೆ ಕಾಶೀ ಮಠ ಎಂದು ಸಂಗಮದ ಬಳಿಯಿರುವ ಸ್ಥಳಕ್ಕೆ ಹೋದೆವು. ಅಲ್ಲಿ ಮಹಿಳೆಯರಿಗೂ ಒಂದು ಪೂಜಾವಿಧಿ ಇತ್ತು. ಅದುವೆ ವೇಣಿ ದಾನ! ವೇಣಿ ಎಂದರೆ ಕೇಶ, ಮುಡಿ.

ಇದರಲ್ಲಿ ಪತ್ನಿಯ ಮುಡಿಯನ್ನು ಪತಿ ಸ್ವಲ್ಪ ಕತ್ತರಿಸಿ (ನಾಲ್ಕು ಎಳೆ ಕೂದಲನ್ನು ಜಡೆಯ ತುದಿಯಿಂದ ಕತ್ತರಿಸುವುದು) ನದಿಗೆ ದಾನ ಬಿಡುವಂತದ್ದು. ಇದು ಪತಿಯ ಆರೋಗ್ಯಕ್ಕೆ ಪತ್ನಿ ಮಾಡುವ ದಾನ, ಅದಕ್ಕೊಂದು ಚಿಕ್ಕ ಪೂಜೆಯೂ ಇರುತ್ತದೆ.

ಮೊದಲು ಈ ಕಾರ್ಯ ಇರುತ್ತದೆ. ಅವರೆಲ್ಲರನ್ನೂ ಕೂರಿಸಿ ಒಂದು ಕಡೆ ದೇವರಿಗೆ ಪೂಜೆ ಮಾಡಿಸಿದ ಮೇಲೆ ಪತಿ ತಮ್ಮ ಪತ್ನಿಯ ಹಿಂದೆ ಕುಳಿತು ಅವಳ ಜಡೆಯ ಕೊನೆಯಿಂದ ಸ್ವಲ್ಪ ಮುಡಿ ಕತ್ತರಿಸಿ ಅವಳ ಕೈಗೆ ಕೊಡಬೇಕು. ಅಲ್ಲದೆ ಮತ್ತೆ ಹೊಸದಾಗಿ ಅವಳ ಜಡೆ ಹಾಕಬೇಕು!! ಈ ಎರಡನೆಯ ಕೆಲಸವೇ ನನಗೆ ಸವಾಲಾಗಿದ್ದು. ನನಗೆಲ್ಲಿ ಅವಳ ಜಡೆ ಹಾಕಿ ಅನುಭವವಿರುತ್ತದೆ? ಕೆಲವು ಪತಿಯರಿಗೆ ಇತ್ತೇನೋ, ಅವರು ಸರಸರನೆ ಹಾಕಿದರು. ನನಗೋ ಆ ಮೂರೆಳೆ ಇಟ್ಟುಕೊಂಡು ಜಡೆ ಹೆಣೆಯುವುದಕ್ಕೆ ಹೆಣಗಿದೆ, ಹೇಗೋ ಸೊಟ್ಟ ಪಟ್ಟಾ ಹಾಕಿ ಮುಗಿಸಿದೆ ಅನಿಸುತ್ತದೆ. ಅವರು ಆಮೇಲೆ ತಾವೇ ಹಾಕಿಕೊಳ್ಳುತ್ತಾರೆ ಶಾಸ್ತ್ರ ಮುಗಿದ ಮೇಲೆ!!. ಎಲ್ಲರಿಗೂ ಇದೊಂದು ಹೊಸ ಅನುಭವ, ನಗುವೋ ನಗು!.

ಈ ವೇಣಿ ದಾನಕ್ಕೂ ಒಂದು ಚಾರ್ಜ್ ಇರುತ್ತದೆ. 500/- ರೂ. ಏನೋ. ಅಲ್ಲೇ ಕೊಡಬೇಕು, ನಮ್ಮ ಮ್ಯಾನೇಜರಿಗೆ ಎರಡು ದಿನ ಮೊದಲೇ ಹೇಳಿ ಹೆಸರು ಬರೆಸಿರಬೇಕು ಪಿಂಡದಾನದ ಜೊತೆಗೆ. ಆಗ ನಮಗೆ ಎಲ್ಲಾ ರೆಡಿ ಮಾಡಿಟ್ಟಿರುತ್ತಾರೆ. ನಾವೇನೂ ತೆಗೆದುಕೊಂಡು ಹೋಗಬೇಕಿಲ್ಲ.

ಆ ಮುಡಿಯನ್ನು ತ್ರಿವೇಣಿ ಸಂಗಮಕ್ಕೆ ನಾವೆಲ್ಲಾ ಪಿಂಡದಾನಕ್ಕೆ ಹೋದಾಗ ಅವರೂ ಮಾಡಬೇಕು.


ಅನಂತರ ನಾವು ಪಿತೃಗಳ ಶ್ರಾದ್ಧ ಮಾಡಿಸಲು ಕೆಳಗಿನ ಹಾಲಿಗೆ ಹೋದೆವು. ಅದಕ್ಕೆ ಒಬ್ಬೊಬ್ಬರಿಗೆ 550/- ಚಾರ್ಜ್ ಮಾಡುತ್ತಾರೆ.

ಮಠ ವಿಶಾಲವಾಗಿ ಸೌಕರ್ಯಕರವಾಗಿದೆ. ಅಲ್ಲಿ ನಮಗೆ ಅಂದು ಒಬ್ಬರು ಮಹಾರಾಷ್ಟ್ರ ಗಡಿ ಕಡೆಯ ಪುರೋಹಿತರು ಕಾರ್ಯ ಮಾಡಿಸಲು ಬಂದಿದ್ದರು. ಅವರಿಗೆ ಅರ್ಧಂಬರ್ಧ ಕನ್ನಡ- ಹಿಂದಿ- ಮರಾಠಿ ಬರುತ್ತಿತ್ತು. ಹಾಗೂ ನಮಗೆ ಅರ್ಥವಾಗದಾದಾಗ ಇಂಗ್ಲೀಷ್ ಬೆರಸಿ ಮಾತಾಡಿ ಚೆನ್ನಾಗಿಯೇ ಮ್ಯಾನೇಜ್ ಮಾಡಿದರು. ಅಲ್ಲಿ ನಮಗೆ ಒಂದು ಸ್ಥಾನ, ಎಲೆ ಹಾಕಿದ್ದರು. ಅದರಲ್ಲಿ ಕಾರ್ಯಕ್ಕೆ ಬೇಕಾದ ವಸ್ತುಗಳು, ದರ್ಭೆ, ಸ್ವಲ್ಪ ಹೂವು ಕುಂಕುಮ ಅರಿಶಿನ ಎಲ್ಲಾ ಇಟ್ಟಿದ್ದರು. ಪಕ್ಕದ ದೊಡ್ಡ ಮುತ್ತುಗದ ಎಲೆಯಲ್ಲಿ ಒಂದು ರಾಶಿ ಬಿಸಿ ಅನ್ನ ಸುರಿದು ಅದರ ಮೇಲೆ ಕರಿ ಎಳ್ಳು ಉದುರಿಸಿದರು. ನಾವು ಸ್ವಂತ ಕೈಯಲ್ಲೇ ಪಿಂಡ ಕಟ್ಟಬೇಕು.

ಇಲ್ಲಿನ ರೂಢಿ ಪ್ರಕಾರ ಎಲ್ಲಾ ಪಿತೃಗಳಿಗೂ ಸೇರಿ 22 ಪಿಂಡ ಕಟ್ಟಬೇಕು. ಇದೂ ನನಗೆ ಸ್ವಲ್ಪ ಸವಾಲಿನ ಕೆಲಸವೇ ಆಯಿತು. ನಾನು ಉಂಡೆ ಕಟ್ಟುವುದು- ಅದು ಕೈಯಲ್ಲಿ ಮುರಿದು ಹೋಗುವುದು ಇಲ್ಲವೇ ಅಪ್ಪಚ್ಚಿಯಾಗುವುದು! ಆಗ ನನ್ನ ಶಡ್ಗ ಸುರೇಶ್ ಅವರು ನನಗೆ ಅರ್ಧಕ್ಕರ್ಧ ಕಟ್ಟಿಕೊಟ್ಟರು, ತಮ್ಮದನ್ನು ಮುಗಿಸಿ...

ಇಲ್ಲಿ ಎಲ್ಲ ದಿವಂಗತ ನೆಂಟರ ಹೆಸರು ಹೇಳಿ ಪಿಂಡದಾನ ಮಾಡುವುದಿದೆ. ನಮ್ಮ ತಂದೆ, ಅಜ್ಜ, ಮುತ್ತಜ್ಜ, ತಾಯಿ, ಅಜ್ಜಿ, ಮುತ್ತಜ್ಜಿ ಅಲ್ಲದೇ ದೊಡ್ಡಪ್ಪ, ಚಿಕ್ಕಪ್ಪ, ಮಾವ, ಅತ್ತೆ, ಅಲ್ಲದೇ ಪತ್ನಿ ಕಡೆಯವರಿಗೇ, ಅಣ್ಣ ತಮ್ಮ ಅಕ್ಕ ತಂಗಿಯರ ಅತ್ತೆ ಮಾವಂದರಲ್ಲಿ- ಯಾರು ತೀರಿಹೋಗಿದ್ದಾರೋ ಅವರಿಗೆ ಕೊಡಲು ಹೇಳುತ್ತಾರೆ. ಯಾರಿಗಾದರೂ ಅವರವರ ಮನೆಯಲ್ಲಿ ಮಿಸ್ ಆದರೆ ಅಥವಾ ಪದ್ಧತಿಯಿಲ್ಲದಿದ್ದರೆ ನಾವಿಲ್ಲಿ ಅವರಿಗೆಲ್ಲಾ ಸೇರಿ ಕೊಟ್ಟುಬಿಡುವ ತರಹ ಇದು. ಎಲ್ಲರ ಗೋತ್ರಗಳು, ಹೆಸರುಗಳೂ ಆ ಸಮಯದಲ್ಲಿ ಹೇಳಿಕೊಂಡು ಮಾಡುವುದಿದೆ. ಗೋತ್ರ ಗೊತ್ತಿಲ್ಲದಿದ್ದರೆ ಕಶ್ಯಪ ಗೋತ್ರ ಎಂದೂ, ಹೆಸರು ಗೊತ್ತಿಲ್ಲದಿದ್ದರೆ ನಾರಾಯಣ ಅಥವಾ ದೇವಿ ಎಂದೋ ಹೇಳಿಬಿಡುವುದು. ನಮ್ಮ ತೀರಿಹೋದ ಸ್ನೇಹಿತರು, ಮನೆಯ ಗುರುಗ್ಳಿಗೂ ಕೊಡಬಹುದು. ಅಲ್ಲದೇ ನಮಗೇ ತಿಳಿಯದ ಅಥವಾ ಮರೆತೇ ಹೋಗಿರುವ ಯಾವುದಾದರೂ ದಿವಂಗತ ಹಿರಿಯರಿದ್ದರೆ ಅವರಿಗೆಲ್ಲಾ ಸೇರಿ ಒಂದು ಅಜ್ಞಾತ ಪಿಂಡ. (ಇದು ಹೇಗೆ? ಎಂದು ಒಬ್ಬರು ಕೇಳಿದರು- ಆಗ ಪುರೋಹಿತರು ಹೇಳಿದ್ದು- ‘ಯಾರೋ ಚಿಕ್ಕ ವಯಸ್ಸಿನಲ್ಲಿ ತೀರಿಹೋದರು, ನಮಗೆ ನೆನಪಿಲ್ಲ, ಅಥವಾ ಮನೆ ಬಿಟ್ಟು 40-50 ವರ್ಷದ ಕೆಳಗೆ ದೇಶಾಂತರ ಹೋಗಿಬಿಟ್ಟರು, ಅವರ ಪತ್ತೆಯಿಲ್ಲ ಅಂದುಕೊಳ್ಳಿ...ಅಂತಹವರಿಗಾಗಿ ಒಂದು ಪಿಂಡ’.) ಇದೆಲ್ಲಾ ಕಾರ್ಯ ಮುಗಿಯುವ ಹೊತ್ತಿಗೆ ಬೆ.10 ಗಂಟೆಯೇ ಆಗಿತ್ತೇನೋ.

ಅಲ್ಲಿಂದ ನಾವು ಈ ವೇಣಿ ದಾನ ಮತ್ತು ಪಿಂಡದಾನ ಮಾಡಿದವನೆಲ್ಲ ಒಂದು ತಟ್ಟೆಯಲ್ಲಿ ಮುಚ್ಚಿಕೊಂಡು ನದಿಗೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಹೊರಬಂದು ಬಸ್ ಹತ್ತಿ ಯಮುನಾ ನದಿ ದಡಕ್ಕೆ ಬಂದೆವು. ಅಲ್ಲಿ ನಾವು ಸ್ನಾನಾನಂತರ ಬಟ್ಟೆ ಬದಲಾಯಿಸಲೂ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಎಲ್ಲವೂ ನಮ್ಮ ಕೈಯಲ್ಲಿರುತ್ತದೆ, ಇವೆಲ್ಲಾ ಒಂದು ಸಾಹಸವೇ ಸೈ. ಅಲ್ಲಿ ನಮಗೆ ನದಿ ದಡದಿಂದ ದೋಣಿ ಹತ್ತಿಸಿ ಕಳಿಸುತ್ತಾರೆ. ಇವೆಲ್ಲಾ ಹಾಯಿಗೋಲು ದೋಣಿಗಳು, ಮೋಟರ್ ಬೋಟ್ ಅಲ್ಲ . 8 ಜನ ಹತ್ತಬಹುದು. ಆಗ ನದಿಯಲ್ಲಿ ಪ್ರವಾಹದಂತೆ ರಭಸವಾಗಿ ನೀರು ಹರಿಯುತಿತ್ತು. ಬೇರೆ ಸಮಯದಲ್ಲಿ ಬಂದರೆ ಗಂಗೆ ನೀರು ಕ್ಲಿಯರ್ ಅಥವಾ ನಸುನೀಲಿ ಇದ್ದು, ಯಮುನಾ ಸ್ವಲ್ಪ ಹಸಿರು ಇದ್ದು ಬೆರೆಯುವುದು ಕಣ್ಣಿಗೇ ಕಾಣುತ್ತದಂತೆ. ಆದರೆ ಇಂದು ಮಳೆನೀರಿನಲ್ಲಿ ಕೊಚ್ಚಿಕೊಂಡು ಬಂದು ಎಲ್ಲಾ ಕೆಂಪು ಕೆಂಪಾಗೇ ಇತ್ತು. ವಂಡು ನೀರು ಅನ್ನುತ್ತಾರಲ್ಲ ಹಾಗಿತ್ತು.

ದೊಣಿಯಿಂದಲೇ ಒಂದು ಕಡೆ ವೇಣಿ ದಾನ ಮತ್ತು ಪಿಂಡ ದಾನ ಮಾಡಲು ನೀರಿಗೆ ಬಿಡಿ ಎನ್ನುತ್ತಾರೆ. ಅಲ್ಲಿ ಅದನ್ನು ಮುಗಿಸಿ ತ್ರಿವೇಣಿ ಸಂಗಮದತ್ತ ದೋಣಿ ಚಲಿಸುತ್ತದೆ. ಅಲ್ಲಿ ನೀರು ಬಹಳವಿದ್ದು ಒಳ್ಳೇ ರಭಸವೂ ಇದೆ. ಸರಸ್ವತಿ ನದಿ ಮಾತ್ರ ಗುಪ್ತಗಾಮಿನಿ, ಹೇಗೆ ಬಂದು ಸೇರುತ್ತಾಳೋ ಕಣ್ಣಿಗೆ ಕಾಣುವುದಿಲ್ಲ. ಅತ್ತಕಡೆ ಗಂಗೆ, ನಾವು ಬಂದಿದ್ದು ಯಮುನಾ ಎಂದು ಅಂಬಿಗ ತೋರಿಸುತ್ತಾನೆ. ಆ ತ್ರಿವೇಣಿ ಸಂಗಮದಲ್ಲಿ ಸ್ನಾನ ಘಟ್ಟದ ತರಹ ಮಾಡಿದ್ದಾರೆ. ಅದೆಂದರೆ ನದಿಯ ನೀರಿನ ಮಟ್ಟದಿಂದ ಐದು ಅಡಿ ಕೆಳಗೆ ಮರದ ಹಲಗೆಗಳ ಪ್ಲಾಟ್ ಫಾರಂ ಕೆಳಗಿಂದ ಕಟ್ಟಿ ಇಟ್ಟಿದ್ದಾರೆ. ಅದಕ್ಕೆ ಸುತ್ತಲೂ ಹೊರಗೆ ಆಯ ತಪ್ಪಿ ಬೀಳದಂತೆ ಬಿದಿರಿನ ಹ್ಯಾಂಡ್ ರೈಲ್ ನಾಲ್ಕೂ ಕಡೆ ಕಟ್ಟಿದ್ದಾರೆ.

ಆದರೂ ನಾವು ಬಟ್ಟೆ ತೆಗೆದು ನೀರಿಗೆ ಇಳಿಯಲು ಹಿಂದು ಮುಂದು ನೋಡುತ್ತಿದ್ದೆವು. ದೋಣಿಯವರು ‘ಬನ್ನಿ ಬನ್ನಿ, ಏನಾಗಲ್ಲ’ ಎಂದು ದೋಣಿಯಿಂದ ಕೈ ಹಿಡಿದು ಎಬ್ಬಿಸಿ ಪ್ಲಾಟ್ಫಾರಮ್ಮಿಗೆ ಸೆಳೆಯುತ್ತಾರೆ. ಬಿಸಿಲು ಆಗ 10.30 ರ ಸಮಯದಲ್ಲಿ ಸ್ವಲ್ಪ ತೀಕ್ಷ್ಣವಾಗೇ ಇದ್ದರೂ ನೀರು ನಿಜಕ್ಕೂ ತಣ್ಣಗೇ ಇತ್ತು.

ಅಬ್ಬಾ ಆ ಸಂಗಮದಲ್ಲಿ ಮುಳುಗೆದ್ದ ಅನುಭವ ಅವಿಸ್ಮರಣೀಯ!. ಆ ಐದಡಿ ಕೆಳಗಿನ ಪ್ಲಾಟ್ ಫಾರ್ಮ್ ಮೇಲೆ ನಿಂತಾಗ ಕತ್ತು, ಮುಖದವರೆಗೂ ನೀರು ಬರುತ್ತದೆ. ಆ ಬಿದಿರನ್ನು ಎರಡೂ ಕೈಯಲ್ಲಿಡಿದು ತಲೆ ಮುಳುಗಿಸಿ ಮೂರು ಸಲ ಎತ್ತಬೇಕಷ್ಟೆ. ಅಲ್ಲಿ ಸೋಪು ಹಾಕಿ ಮೈಯುಜ್ಜಿ ಸ್ನಾನ ಮಾಡುವ ತರಹ ಏನೂ ಅಲ್ಲ. ಪುನಃ ನಮ್ಮ ದೋಣಿಗೆ ಏರಿ ಮೈಯೊರೆಸಿಕೊಂಡು ಅಲ್ಲೇ ಬಟ್ಟೆ ಬದಲಿಸಿದಾಗ ಏನೋ ಎಲ್ಲರಿಗೂ ಉತ್ಸಾಹ, ಸಾರ್ಥಕ ಭಾವ. ‘ನನಗೆ ಹಾಗಿತ್ತು, ಹೀಗಿತ್ತು’ ಎಂದು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆವು. ಎಲ್ಲರಿಗೂ ಬಹಳ ಥ್ರಿಲಿಂಗ್ ಎನಿಸಿದ ಅನುಭವವೇ!

ಮತ್ತೆ ದೋಣಿ ನಮ್ಮನ್ನು ದಡ ಮುಟ್ಟಿಸಿತು, ಅಲ್ಲಿಂದ ನಾವು ಬಸ್ಸಿಗೆ ಏರಿ ಮಠಕ್ಕೆ ಬಂದರೆ ಅಷ್ಟರೊಳಗೆ ಬೆಳಿಗ್ಗೆ 6ಕ್ಕೆ ತಿಂದ ಇಡ್ಲಿಗಳು ಹೊಟ್ಟೆಯಿಂದ ಮಾಯವಾಗಿದ್ದವು!

ಅಲ್ಲಿ ನಮಗೆ ಅಂದು ತಿಥಿಗೆ ತಕ್ಕ ಅಡಿಗೆ ಮಾಡಿ ತಂದು ನಮ್ಮ ಟ್ರಾವೆಲ್ಸ್‌ನವರು ಬಡಿಸಿದರು. ವಡೆ, ಒಬ್ಬಟ್ಟು, ಪಾಯಸ, ಪಲ್ಯ, ಕೋಸಂಬರಿ, ಗೊಜ್ಜು, ಅನ್ನ ಸಾರು, ಮೊಸರು, ಮಜ್ಜಿಗೆ, ಸಂಡಿಗೆ(?) ಎಲ್ಲಾ ಇತ್ತು. ಈರುಳ್ಳಿ, ಬೆಳ್ಳುಳ್ಳಿ ಹಾಕಿರದ ಊಟ ಅವತ್ತು! ‘ತುಂಬಾ ರುಚಿಕರವಾಗಿದೆ’ ಎಂದು ಹೊಗಳುತ್ತಾ 11.45 ಗೆಲ್ಲಾ ಊಟ ಮುಗಿಸಿ ಎದ್ದೆವು.

ಮಠದಲ್ಲಿ ಚಿಕ್ಕ ಕೃಷ್ಣ ಮಂದಿರ ಇದೆ. ಮಿಕ್ಕ ಸೌಕರ್ಯಗಳೂ ಇವೆ. ಇದು ಜಿ ಎಸ್ ಬಿ ಸಮಾಜದವರದು ಎಂದು ತಿಳಿಯಿತು.

ಇಲ್ಲೆಲ್ಲೂ ನಾವು ಮೊಬೈಲ್ ಹೊರತೆಗೆದ ನೆನಪೇ ಇಲ್ಲ ಫೋಟೊ ತೆಗೆಯಲು. ಜೊತೆಗೆ ವೇಣಿ ದಾನ, ಪಿಂಡ ದಾನ ಇವೆಲ್ಲಾ ಚಿತ್ರ ತೆಗೆಯುವಂತದ್ದೂ ಅಲ್ಲ. ಹಾಗಾಗಿ ಕೆಲವು ಗೂಗಲ್ ಸಾಂಧರ್ಭಿಕ ಚಿತ್ರಗಳನ್ನು ಮಾತ್ರ ಕೊಟ್ಟಿದ್ದೇನೆ. ಮಠದ ಅಡ್ರೆಸ್ಸ್ ಕಾಣುವಂತಾ ಚಿತ್ರವಿದೆ. ನೀವು ಯಾರಾದರೂ ಹೋದರೆ ಮೊದಲೇ ಹೇಳಿ ಅಲ್ಲಿ ವ್ಯವಸ್ಥೆ ಮಾಡಿಕೊಳ್ಳಬಹುದು.

ನಮ್ಮ ಮ್ಯಾನೇಜರ್ ’ಇಲ್ಲಿಂದ ನೇರವಾಗಿ ಕಾಶಿಗೆ ಹೋಗೋಣ ’ ಎಂದಾಗ ಯಾಕೋ ಮನಸ್ಸಿಗೆ ಸ್ವಲ್ಪ ಪಿಚ್ಚೆನಿಸಿತು. ಏಕೆಂದರೆ ನಾವು ಹಿಂದಿನ ರಾತ್ರಿ ಲೇಟಾಗಿ ಹೋಟೆಲ್ ಹೊಕ್ಕಿದ್ದರಿಂದ ಪ್ರಯಾಗರಾಜ್ ನಗರವನ್ನೂ ನೋಡಿರಲಿಲ್ಲ. ಅಲ್ಲದೇ ಇವತ್ತು ಬೆಳಗಿನಿಂದ ಈ ಕಾರ್ಯಗಳೆಲ್ಲಾ ಆದ ಮೇಲೂ ಸಮಯವಿಲ್ಲ, ಈಗಲೇ ನೇರ ವಾರಣಾಸಿಗೆ ಪ್ರಯಾಣ? ‘ಇನ್ನೊಂದು ಅರ್ಧ ದಿನ ಇಲ್ಲಿ ಕಳೆಯಬೇಕಿತ್ತು’ ಎಂದು ನಾನು ಫೀಡ್ ಬ್ಯಾಕ್/ ಸಲಹೆ ಕೊಟ್ಟೆ. ‘ಅದೂ ಈಗ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲಕ್ಕೂ ಸಮಯ ಬೇಕಲ್ಲ? ಹೆಚ್ಚಾಗಿ ಕಾಶಿಗೆ ಹೋಗಲು, ಅಲ್ಲಿ ಇರಲು ಸಮಯ ಬೇಕಾಗುತ್ತದೆ. ನಿಮಗ್ಗೊತ್ತಿಲ್ಲ ಇಲ್ಲಿನ ಟ್ರಾಫಿಕ್ ಸ್ಥಿತಿ, ಬಹಳ ಸಮಯವೂ ಹಿಡಿಯಬಹುದು. ಬನ್ನಿ, ಏನೂ ಅಂದುಕೊಳ್ಳಬೇಡಿ’ ಎಂದು ಮ್ಯಾನೇಜರ್ ಸಮಾಧಾನ ಹೇಳಿದರು. ‘ರಸ್ತೆಯಲ್ಲಿ ಸೀತಾಮಢಿ ಎಂಬ ಕ್ಷೇತ್ರಕ್ಕೂ ಹೋಗುತ್ತೇವೆ, ಅದು ಸೀತೆ ಭೂಮಿಯಲ್ಲಿ ಲೀನವಾಗಿ ಹೋಗಿ ಆಕೆಯ ಅವತಾರ ಮುಗಿದ ಸ್ಥಳ’ ಎಂದು ಅವರು ವಿವರಿಸಿದರು

ಮತ್ತೆ ಬಸ್ಸಿನಲ್ಲಿ ಏರಿ ಎಲ್ಲರೂ ಹೊರಟೆವು...


ಸಂಚಿಕೆ 6 >>>> ಮುಂದುವರೆಯುತ್ತದೆ...

+++++


ಯಮುನಾ ನದಿ ದಡ

ಕಾಶೀಮಠ, ಪ್ರಯಾಗ ರಾಜ್

ಗಂಗೆ ಮತ್ತು ಯಮುನೆ (ಹಸಿರು)


74 views0 comments

Comments


© 2020 by Nagesh Kumar CS . Proudly created with Wix.com

bottom of page