top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -8


ಸಂಚಿಕೆ 8:ಅಂದು ಮುಂಜಾನೆ 3 ಗಂಟೆಗೆ ನಮ್ಮಲ್ಲಿ ಕೆಲವರು ಕಾಶಿ ವಿಶ್ವನಾಥ ದೇವಸ್ಥಾನದ ಮುಂಜಾನೆಯ ಪೂಜೆ ಮುಂತಾದ್ದನ್ನು ನೋಡಲು ಹೋಗಿ ಬಂದರು. ನನ್ನ ಪತ್ನಿ, ಅವರ ಅಕ್ಕ ಮತ್ತು ಭಾವನವರು ಅದರಲ್ಲಿ ಸೇರಿದ್ದರು, ನನಗೆ ಅಷ್ಟು ಬೇಗ ಸಿದ್ಧನಾಗಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ 6ಕ್ಕೆಲ್ಲಾ ನಾವು ಕಾಶಿ ಬಿಟ್ಟು ಹೊಟೆಲಿನಿಂದ ಹೊರಡುವುದಿತ್ತು. ನಾನು ಅಲ್ಲೇ ಉಳಿದುಕೊಂಡೆ.

ಅಲ್ಲಿಗೆ ಹೋದರೆ ನಿಮ್ಮಲ್ಲಿ ಸಾಧ್ಯವಾದವರು ಅದಕ್ಕೂ ಹೋಗಿ ಬನ್ನಿ- ಆ ಬ್ರಹ್ಮ ಮುಹೂರ್ತದಲ್ಲಿ ಬಹಳ ಪವಿತ್ರವಾದ ಕಾರ್ಯಕ್ರಮವಂತೆ.

ಅಲ್ಲಿಂದ ರೂಮ್ ಖಾಲಿ ಮಾಡಿಕೊಂಡು ಸಿದ್ಧರಾಗಿ ಲಗೇಜ್ ತೆಗೆದುಕೊಂಡು ತಿಂಡಿ ಕಾಫಿ ಮುಗಿಸಿ ನಾವು ಬಿಹಾರದ ಬೋಧಗಯಾ ಮತ್ತು ಗಯಾ ಕಡೆಗೆ ಹೊರಟೆವು. ಅವತ್ತಿನ ದಿನ ಮಧ್ಯಾಹ್ನ ಬಿಹಾರದ ಬೋಧ ಗಯಾ ತಲುಪುವ ಒಳಗೆ ಆ ಕೆಟ್ಟ ರಸ್ತೆಗಳು, ಆ ಟ್ರಾಫಿಕ್ ಜಾಮ್ ಎಲ್ಲಾ ಸಹಿಸಿಕೊಂಡು ಸೇರುವಷ್ಟರಲ್ಲಿ ಬಹಳ ಸಾಕು ಸಾಕಾಗಿ ಹೋಯಿತು. ಹೌದು, ಏ/ಸಿ ಬಸ್ಸಿನಲ್ಲೂ..


ಯು ಪಿ ಮತ್ತು ಬಿಹಾರ್ ವ್ಯತ್ಯಾಸಗಳು


ಅಬ್ಬಾ, ಅದೆಂತಾ ಬೀಮಾರೂ ರಾಜ್ಯ ರೀ, ಆ ಬಿಹಾರ!!

ಬೀ ಮಾ ರೂ ಎಂದರೆ ಬಿಹಾರ , ಮಧ್ಯ ಪ್ರದೇಶ, ರಾಜಾಸ್ಥಾನ ಮತ್ತು ಯು ಪಿ- ಸೇರಿ ಸಂಕ್ಷಿಪ್ತವಾಗಿ BIMARU ಎನ್ನುತ್ತಾರೆ. ಇನ್ನೊಂದು ಹಿಂದಿ ಅರ್ಥದಲ್ಲಿ ಬಿಮಾರೂ ಎಂದರೆ ರೋಗಗ್ರಸ್ತ ಎಂದಾಗುತ್ತದೆ. ಎರಡೂ ಅರ್ಥಗಳು ಸಮರ್ಪಕವೇ!

ಯು.ಪಿ.ಯಿಂದ ಬಿಹಾರದತ್ತ ರಸ್ತೆ ಕ್ರಮಿಸುತ್ತಾ ಬಂದಂತೆ ಅಲ್ಲಿನ ಅರಾಜಕತೆ, ಆ ನಿರ್ಲಕ್ಷ್ಯ, ಆ ಬಡತನ , ಆ ಕೊಳಕು ರಸ್ತೆ ಮತ್ತು ಅರೆ ಬರೆ ಇಟ್ಟಿಗೆ ಗೂಡಿನಂತೆ ಗಾರೆಯಿಲ್ಲದೇ ಕಟ್ಟಿದ ಕಿಷ್ಕಿಂದದ ನಿವಾಸಗಳ ಗಲ್ಲಿಗಳು ಎಲ್ಲಾ ಕಣ್ಣಿಗೆ ಚುಚ್ಚುವಂತಿದೆ. ಅದೆಲ್ಲಾ ಒಮ್ಮೆಲೆ ನೋಡಿ ಒಂದು ಕ್ಷಣ ಅಸಹ್ಯ ಹುಟ್ಟಿದರೆ ಮರುಕ್ಷಣವೇ ನಮ್ಮಲ್ಲೇ ಅಪರಾಧಿ ಪ್ರಜ್ಞೆ ಜಾಗೃತವಾಗಿ ಮರುಕ, ಕರುಣೆ ಉಕ್ಕಿ, ಮಾನವೀಯತೆ ದೃಷ್ಟಿಯಿಂದ ನೋಡಬಯಸುತ್ತೇವೆ. ಹೀಗೂ ಇದೆ- ಇನ್ನೂ ಬದಲಾಗದೇ ಉಳಿದ ಭಾರತದ ಈ ಒಂದು ಮುಖ ಎಂದು ನಿಟ್ಟುಸಿರು ಬರುತ್ತದೆ.

ಈಗೀಗ ನಿಜಕ್ಕೂ ಸ್ವಲ್ಪ ಸ್ವಲ್ಪ ವಾಸಿಯಂತೆ, ನಮ್ಮ ಮ್ಯಾನೇಜರ್ ಹೇಳಿದರು ಅಂದರೆ ಕಳೆದ ಹತ್ತು ವರ್ಷದ ಹೋಲಿಕೆಯಲ್ಲಿ!.

ನನಗೇನೋ ಅದರ ಹಿಂದಿನ ಸ್ಥಿತಿ ಹೇಗಿರಬಹುದು ಎಂದು ಲೆಕ್ಕ ಹಾಕಲಾಗಲಿಲ್ಲ. ದೇಶದ ಮಹಾನಗರಗಳಲ್ಲಿ ಈಗ ಬಿಹಾರಿ ಯುವಕರ ದಂಡು ಅದೇಕೆ ನೌಕರಿ ಹುಡುಕಿಕೊಡು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು ಸೇರಿ ಹೋಗಿದ್ದಾರೆ ಎಂದು ನಮಗೆ ಅರಿವಾಗುವುದು ಕಷ್ಟವಿಲ್ಲ. ಸರಳವಾಗಿ ಹೇಳಬೇಕೆಂದರೆ- ಅಲ್ಲಿನ ಠಾಕೂರರು ಇಟ್ಟುಕೊಂಡ ಎಕರೆಗಟ್ಟಲೆ ಜಮೀನು ಬಿಟ್ಟರೆ, ದುಡಿಯಲು ಯಾವುದೇ ಭಾರೀ ಉದ್ಯಮ ಅಥವಾ ವಾಣಿಜ್ಯದ ಅವಕಾಶಗಳು ಅಲ್ಲಿ ಬೆಳೆದಿಲ್ಲವೋ, ಅಥವಾ ಶೋಷಿಸಲೆಂದೇ ಸರಕಾರಗಳು ಅವನ್ನು ಬೆಳೆಯಲು ಬಿಟ್ಟಿಲ್ಲವೋ - ನನಗೆ ಅದರ ಹಿನ್ನೆಲೆ ಅಷ್ಟಾಗಿ ತಿಳಿಯದು. ಹಾಗಾಗಿ ಒಟ್ಟಿನಲ್ಲಿ ನಿರುದ್ಯೋಗಿಗಳ ಈ ಮಹಾವಲಸೆ!

ಪಟನಾ ನಗರ ಮಾತ್ರವೇ ನಾಗರೀಕತೆಯ ಅಥವಾ ಪ್ರಗತಿಯ ಕುರುಹು, ಮಿಕ್ಕಿದೆಲ್ಲಾ ಗ್ರಾಮೀಣ ಪ್ರದೇಶದಂತೆ ಇವೆ ಎನ್ನುತ್ತಾರೆ ಇಲ್ಲಿನವರೇ.

ನಾನು ಮೊದಲೇ ಹೇಳಿದಂತೆ ಯು.ಪಿ ಯ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ, ಇಲ್ಲಿ ಕಾಣುತ್ತಿಲ್ಲ. ಒಂದೆಡೆ ಬಸ್ ಮಧ್ಯೆ ನಿಲ್ಲಿಸಿದ್ದಾಗ ರಸ್ತೆ ಬದಿಯ ಒಬ್ಬ ಚಹಾವಾಲನೊಂದಿಗೆ ಮಾತು ಬೆಳೆಸಿದೆ- ‘ಇಲ್ಲೇಕೆ ಯು ಪಿ ತರಹ ಸ್ವಚ್ಚತೆ, ರಸ್ತೆ ಇತರ ಮೂಲಭೂತ ಸೌಲಭ್ಯದ ಅಭಿವೃದ್ಧಿ ಶುರುವಾಗುತ್ತಿಲ್ಲ?’ ಎಂದು. ಅವನು ಸಪ್ಪಗೆ ನಕ್ಕು ಹೇಳಿದ- "ಉದರ್ ಯೋಗಿ ಜಿ ಹೈ, ಇದರ್ ನಹಿ ಹೈ ನಾ, ಸಾಹೇಬ್?". ಅಷ್ಟೇ! ಇದೊಬ್ಬ ಅವಿದ್ಯಾವಂತ ಮತದಾರನ ಸರಳೀಕರಣ ಎಂದುಕೊಂಡರೂ ಪರವಾಗಿಲ್ಲ. ಆದರೆ ಇಲ್ಲಿಗೆ ಸಾಕು ನನ್ನ ವಿಶ್ಲೇಷಣೆ.

ಬೋಧ ಗಯಾ ಒಂದು ಬೌದ್ಧ ಧರ್ಮದ ಪುಣ್ಯಕ್ಷೇತ್ರ, ಇಲ್ಲಿಗೆ ನಮ್ಮ ಏಷ್ಯಾದಲ್ಲಿ ಬೌದ್ಧ ‘ಧಮ್ಮ’ ಪ್ರಬಲವಾಗಿರುವ ಎಲ್ಲ ಅಕ್ಕ ಪಕ್ಕದ ದೇಶಗಳ ಯಾತ್ರಿಗಳು ಆಗಾಗ ಬಂದು ಹೋಗುವ ಜನಪ್ರಿಯ ಸ್ಥಳ, ಅವರದೇ ಆದ ಶೈಲಿಯ ಹಲವು ಬಗೆಯ ದೊಡ್ಡ ಚಿಕ್ಕ ಬೌದ್ಧ ಮಂದಿರಗಳಿವೆ. ಹೋಟೆಲುಗಳೂ, ವಸತಿ ಸೌಕರ್ಯವೂ ಇದೆ.ಈ ಬೋಧಗಯಾ ಮತ್ತು (ಹಿಂದೂ) ಗಯಾ ಎರಡೂ ಅಂಟಿಕೊಂಡು ಅಕ್ಕಪಕ್ಕದಲ್ಲಿವೆ.

ಹೌದು , ಈ ಭಾಗ ತಕ್ಕ ಮಟ್ಟಿಗೆ ಸ್ವಚ್ಚವಾಗಿಯೇ ಇದೆ. ಅದೂ ಬಹುಶಃ ವಿದೇಶಿ ಪ್ರವಾಸಿಗರ ಸಹಜವಾದ ಶಿಸ್ತು ಮತ್ತು ನೈರ್ಮಲ್ಯಪಾಲನೆಯಿಂದ ಇರಬಹುದು.

ಅಲ್ಲಿನ ಮಹಾಬೋಧ ಮಂದಿರ/ ಆಶ್ರಮದ ಮುಂದೆ ನಿಲ್ಲಿಸಿ ‘ಒಳಗೆಲ್ಲಾ ನೋಡಿ ಬನ್ನಿ’ ಎಂದು ಬಸ್ ನಿಲ್ಲಿಸಿದರು. ನಾನಂತೂ ಹೋಗಲಿಲ್ಲ- ಕಾರಣ ಎರಡು ತರಹ ಇದ್ದೀತು- ನನಗೆ ಬೌದ್ಧ ಧರ್ಮದ ಬಗ್ಗೆ ಅಂತಹಾ ವಿಶೇಷ ಆಸಕ್ತಿಯಿಲ್ಲ. ಹಲವು ಬುದ್ಧನ ಸಿದ್ಧಾಂತಗಳು ಹಿಂದೂ ಸನಾತನ ಧರ್ಮ ಸಂಪ್ರದಾಯಕ್ಕೆ, ವೇದಕ್ಕೆ ವಿರುದ್ಧವಾಗಿದೆ ಎಂಬುದೂ ವಾಸ್ತವ. ಇದು ಅವರವರ ಇಚ್ಚೆ ಅಷ್ಟೆ . ಹಾಗಿಲ್ಲದಿದ್ದರೂ ಪ್ರವಾಸಿಯಾಗಿ ಒಮ್ಮೆ ಹೋಗಬಹುದಿತ್ತೇನೋ- ಆದರೆ ನನಗೆ ಆ ವೇಳೆಗೆ ಲಘುವಾಗಿ ಜ್ವರ ಬಂದಿತ್ತು, ಕೈಕಾಲು ನಿತ್ರಾಣವಾದಂತೆ ಭಾಸವಾಗಿತ್ತು. ಆದ್ದರಿಂದ ಬಸ್ಸಿನಲ್ಲೇ ಉಳಿದೆ.

ಸುಮಾರು ಅರ್ಧಗಂಟೆಯ ನಂತರ ಎಲ್ಲ ಸಹ ಪ್ರಯಾಣಿಕರೂ ವಾಪಸ್ ಬಂದರು.

ಅಲ್ಲಿಂದ ನಮ್ಮನ್ನು ಅಲ್ಲಿನ ಒಂದು ಸಾಧಾರಣ- ಮಧ್ಯಮ ವರ್ಗದ ಹೋಟೆಲಿಗೆ ಕರೆದೊಯ್ದರು. ಈ ಊರಿನಲ್ಲಿ ಬೇರೆ ಊರುಗಳಲ್ಲಿನ ಹೋಟೆಲುಗಳ ಸಮ ಗುಣಮಟ್ಟದ್ದು ಇಲ್ಲಿ ಇದೇ ಎಂದು ಮ್ಯಾನೇಜರ್ ಹೇಳಿದ್ದರು. ಸಾಮಾನ್ಯವಾದ ಸ್ವಚ್ಚವಾದ ರೂಮು, ಬಾತ್ ರೂಮು, ಬಿಸಿ ನೀರು ಇತ್ತು. ಇಷ್ಟು ಸಾಕೆನಿಸಿತು. ಆಗಲೇ ನನಗೆ ರೂಮು ಸೇರುವಷ್ಟರಲ್ಲಿ ಜ್ವರ ಏರಿತ್ತು, ನಾನು ಶ್ರೀಮತಿಗೆ ‘ಸುಸ್ತಾಗುತ್ತಿದೆ’ ಎಂದು ಹೇಳಿ ಮಲಗಿಬಿಟ್ಟೆ. ಆಕೆ ಹಣೆಮುಟ್ಟಿ ‘ಅಯ್ಯೋ ಮೈ ಸುಡುತ್ತಿದೆಯಲ್ಲ?’ ಎಂದು ಉದ್ಗರಿಸಿ ಮತ್ತೆ ನಮ್ಮ ಮ್ಯಾನೇಜರಿಗೆ ಸುದ್ದಿ ಮುಟ್ಟಿಸಿದಳು. ಆ ಹೋಟೆಲಿನವರೇ ಅಲ್ಲಿದ್ದ ಲೋಕಲ್ ಡಾಕ್ಟರನ್ನು ಕರೆಸಿ ರೂಮಿನಲ್ಲೇ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿದರು. ನಾನು ಅದಕ್ಕಾಗಿ ಅವರಿಗೆ ಸದಾ ಋಣಿಯಾಗಿರುತ್ತೇನೆ. ಒಬ್ಬ ಮಧ್ಯವಯಸ್ಕ ನಗುಮುಖದ ಕುಳ್ಳ ವ್ಯಕ್ತಿ ಒಳಬಂದರು, ‘ಮೈ ಡಾ. ಕೇಸರಿ ಹೂಂ’ ಎಂದು ಪರಿಚಯ ಮಾಡಿಕೊಂಡರು. ಅವರು ನನ್ನ ತಾಪಮಾನ ನೋಡಿದಾಗ 103 ಡಿಗ್ರಿ ಜ್ವರ ಇತ್ತು.

ಅವರು ನನಗೆ ಐ ವಿ ಇಂಜೆಕ್ಷನ್ ನೀಡಿ ಎರಡು ಮೂರು ತರಹದ ಮಾತ್ರೆಗಳನ್ನು ತಾವೇ ತಂದ್ದಿದ್ದನ್ನು ಕೊಟ್ಟರು. "ನನಗೆ ನಾಳೆ ಬೆಳಿಗ್ಗೆ ಪಿತೃ ಕಾರ್ಯ ಮಾಡುವುದಿದೆ , ಅದರೊಳಗೆ ಸರಿ ಹೋಗಬೇಕು, ಸ್ವಲ್ಪ ನೋಡಿ ಕೊಡಿ" ಎಂದು ನಮ್ರವಾಗಿ ಕೋರಿಕೊಂಡೆ. ವಿಶ್ವಾಸದಿಂದ ಆ ವೈದ್ಯರು ‘ಎಲ್ಲಾ ಸರಿ ಹೋಗಿ ನಾಳೆ ಮಾಡುವಂತಾಗುತ್ತದೆ, ಇವತ್ತು ರಾತ್ರಿ ಜಾಗ್ರತೆಯಿಂದ ಇದ್ದು, ಲಘುವಾಗಿ ಇಂತಿಂತಾ ಆಹಾರ ಸೇವಿಸಿ ದವಾ ತೆಗೆದುಕೋ’ ಎಂದು ನನಗೆ ಸೂಚಿಸಿ, ಆಶ್ವಾಸನೆ ಕೊಟ್ಟು ನಮ್ಮ ಜೊತೆ ಸ್ವಲ್ಪ ಹೊತ್ತು ಮಾತಾಡುತಿದ್ದು ನನಗೆ ನಿದ್ದೆ ಬರುವ ವೇಳೆಗೆ ಹೊರಟರು. ಅವರು ಹೊರಟ ಒಂದೂವರೆ ಗಂಟೆಗೆ ಅಂದರೆ ರಾತ್ರಿ 8 ರ ಹೊತ್ತಿಗೆ ವಿಪರೀತವಾಗಿ ಮೈ ಬೆವೆತು ನೀರಾಗಿ ಜ್ವರ ಬಿಟ್ಟಿತು. ಅಂದು ರಾತ್ರಿ ಸ್ವಲ್ಪ ಬ್ರೆಡ್ ತಿಂದಿದ್ದೆ, ಸಾರನ್ನ ಪಲ್ಯ ಸಹಾ ಇತ್ತೇನೋ. ಮಜ್ಜಿಗೆ ಸೇವಿಸಲಿಲ್ಲ.

ಬೆಳಿಗ್ಗೆ 6.30ರ ಹೊತ್ತಿಗೆ ಮತ್ತೆ ಹೊರಡುವುದಿತ್ತು. ಬೆಳಿಗ್ಗೆ ಮೈ ಹಗುರಾಗಿತ್ತು, ಆದರೆ ಸುಸ್ತಾಗಿತ್ತು. ಒಳ್ಳೆಯ ಔಷದಿ ಕೊಟ್ಟ ಆ ವೈದ್ಯರಿಗೆ ಫೋನ್ ಮಾಡಿ ವಂದಿಸಿದೆವು.

ನಾನು ಕೇವಲ ಶಾಸ್ತ್ರಕ್ಕೆ ಸ್ನಾನ ಮಾಡಿ ಕರ್ನಾಟಕ ಭವನದಲ್ಲಿ ನಡೆಯಲಿದ್ದ ಪಿತೃಕಾರ್ಯಕ್ಕೆಂದು ಸಿದ್ಧನಾದೆ ಮತ್ತು ಅವತ್ತು ದೇವರನ್ನು ಮನಸಾ ‘ನನ್ನ ಕೈಲಿ ಈ ಅಂತಿಮ ಪಿತೃ ಕಾರ್ಯವನ್ನು ಮಾಡಿಸಿಕೊಡು’ ಎಂದು ಪ್ರಾರ್ಥಿಸಿಕೊಂಡು ಹೊರಟೆ. ರಾತ್ರಿ ತಾನೇ ಜ್ವರವಿದ್ದು ಇದೀಗ ಬಿಟ್ಟು ಹೊರಡುವಂತಾಗಿದ್ದಕ್ಕೆ ಆ ದೇವರೇ ಶಕ್ತಿ ಮತ್ತು ಧೈರ್ಯ ಕೊಟ್ಟನೆಂದು ನನ್ನ ವಿಶ್ವಾಸ.

ಗಯಾ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿನ ಮಹತ್ವ ಏನು? ಅದೇಕೆ ಅಲ್ಲಿಯೇ ಮಾಡುವುದು ಮುಖ್ಯ? ಎಂಬ ಪ್ರಶ್ನೆಗಳಿರಬಹುದು.

ನಮ್ಮ ಮ್ಯಾನೇಜರ್ ನಮಗೆ ಹೇಳಿದ ಸ್ಥಳ ಪುರಾಣ ಹೀಗಿದೆ:

ಶ್ರೀರಾಮನು ತನ್ನ ತಂದೆಯ ಅಂತಿಮ ಶ್ರಾದ್ಧವನ್ನು ಅಲ್ಲಿ ಮಾಡಲು ಬಂದಿದ್ದಾಗ ಸೀತೆಯು ಅಲ್ಲಿನ ಆಲದ ಮರ, ‘ಫಲ್ಗು’ ನದಿ ಮತ್ತು ವಿಷ್ಣುಪಾದ ದೇವಸ್ಥಾನ ಇಂತಹ ಮೂರು ಕಡೆ ಪಿಂಡ ದಾನ ಮಾಡಿದರೆ ಶ್ರೇಷ್ಟ ಎಂಬ ವರವನ್ನಿತ್ತಿದ್ದಳಂತೆ. ಹಾಗಾಗಿ ಅಲ್ಲಿ ಮೂರು ಶ್ರಾದ್ಧವನ್ನು ಪಿತೃಗಳಿಗೆ ಮಾಡುವ ಪದ್ಧತಿಯಿದೆ. ಅಲ್ಲಿ ಮಾಡಿದರೆ ಆ ಆತ್ಮಕ್ಕೆ ಮೋಕ್ಷ ದೊರೆಯುವುದೆಂದು ಪ್ರತೀತಿಯಿದೆ. ಅನಾದಿ ಕಾಲದಿಂದಲೂ ಹೀಗೆ ಇಲ್ಲಿ ಪಿತೃಕಾರ್ಯ ನಡೆದಿರುವ ವೃತ್ತಾಂತಗಳಿವೆ.

ಅಲ್ಲಿನ ಬ್ರಾಹ್ಮಣರ ಬಗ್ಗೆ ಎಚ್ಚರಿಕೆ ಮಾತು ಹೇಳಲು ಮರೆಯಲಿಲ್ಲ. ಅಲ್ಲಿ ಅವರು ನಮ್ಮ ತರಹ ಬಂದ ಯಾತ್ರಿಗಳಿಗೆ ತಾವೇ ಮಾಡಿಸುವುದಾಗಿ ಬೆನ್ನತ್ತುತಾರೆ, ಅವರ ಮಾತಿಗೆ ಮರುಳಾಗಿ ಹೋಗಬೇಡಿರಿ, ನಾವು ಕರ್ನಾಟಕ ಭವನದಲ್ಲಿ 1150/- ರೂ ಗೆ ಸಕಲ ಏರ್ಪಾಡು ಮಾಡಿಸಿದ್ದೇವೆಂದು ಮೊದಲೇ ಹೇಳಿಕಳಿಸಿದರು. ನಾವು ಬೆಳಿಗ್ಗೆ ತಿಂಡಿ ಕಾಫಿ ತೆಗೆದುಕೊಂಡೇ ಹೊರಟೆವು. ಬಸ್ಸಿನಲ್ಲಿ ಮುಖ್ಯರಸ್ತೆಯವರೆಗೂ ಹೋಗಿ ಅಲ್ಲಿಂದ ಶೇರ್ ಆಟೋ ಅಥವಾ ನಡಿಗೆಯಲ್ಲಿ ಸಾಗಬೇಕು.

ಕರ್ನಾಟಕ ಭವನದಲ್ಲಿ...

ಅಲ್ಲಿ ನಾವು ಎಲ್ಲ ಪಿತೃಗಳಿಗೆ ಸೇರಿ ಮೂರು ಸಲ ಬರೋಬ್ಬರಿ 36*3=108 ಪಿಂಡಗಳನ್ನು ಕಟ್ಟಲು ಎಲೆಯ ಮೇಲೆ ಅನ್ನ ಸುರಿದರು. ನನಗೆ ಅದು ದೊಡ್ಡ ಸಾಹಸವೇ ಸರಿ! ಮತ್ತೊಮ್ಮೆ ನನ್ನ ಶಡ್ಗನವರು ಅರ್ಧಕ್ಕರ್ಧ ಮಾಡಿಕೊಟ್ಟಿದ್ದರಿಂದ ಅದೂ ಮುಗಿಯಿತು!!. ಅಲ್ಲಿ ನಮ್ಮ ಕನ್ನಡಿಗ ಪುರೋಹಿತರಿದ್ದುದರಿಂದ ಎಲ್ಲಾ ಸಾಂಗವಾಗಿ ಸುಲಭವಾಗಿಯೇ ನಡೆಯಿತು. ಅಲ್ಲಿಂದ ನಾವು ಆ ಪಿಂಡಗಳನ್ನು ವಿಸರ್ಜಿಸಲು ಅಲ್ಲಿನ ಚಿಕ್ಕ ಚಿಕ್ಕ ಗಲಿಗಳಲ್ಲಿ ಸಂಚರಿಸಬೇಕು. ಮೊದಲು ಫಲ್ಗು ನದಿಯ ತೀರ ತಲುಪಿ ಅಲ್ಲಿ ನೀರಿನಲ್ಲಿ 36 ಪಿಂಡಗಳನ್ನು ಅರ್ಪಿಸಿದೆವು. ಅಲ್ಲೇನೂ ನದಿ ಸ್ನಾನ ಮಾಡುವ ಪದ್ಧತಿಯೂ ಇಲ್ಲ, ಮಾಡಲು ಸೌಕರ್ಯವೂ ಇಲ್ಲ.

ಅಲ್ಲಿಂದ ಕಿರಿದಾದ ಅಂಗಡಿ ಸಾಲುಗಳ ನಡುವೆ ಸಂದುಗಳಲ್ಲಿ, ಕಾಡುವ ಬೇಡುವವರಿಂದ ತಪ್ಪಿಸಿಕೊಳ್ಳುತ್ತಾ, ವಿಷ್ಣುಪಾದ ದೇವಸ್ಥಾನ ತಲುಪಿದೆವು. ಅಲ್ಲಿ ಬಹಳ ರಷ್ ಸಹಾ ಇತ್ತು, ಒಂದು ಕಡೆ ವಿಷ್ಣುವಿನ ದೊಡ್ಡ ಪಾದವಿದೆ. ಅಲ್ಲೊಂದು ಗುಂಡಿಯಂತೆ ಅಗಲವಾಗಿ ಮಾಡಿರುತ್ತಾರೆ, ಅಲ್ಲಿ ಎರಡನೇ ಒಬ್ಬೆಯ 36 ಪಿಂಡಗಳನ್ನು ಅರ್ಪಿಸಿ ಬರಲು ಸಾಕು ಸಾಕಾಯಿತು. ಅಲ್ಲೆಲ್ಲ ಪಾಂಡಾ ಎಂಬ ಪುರೋಹಿತರು ಮುಂತಾದವರಿಂದ ವಸೂಲಿ ನಡೆಯುತ್ತದೆ. ಇದೆಲ್ಲವನ್ನೂ ಬಹಳ ಸುವ್ಯವಸ್ಥಿತವಾಗಿ ನಿರ್ಮಲಾ ಟ್ರಾವೆಲ್ಸ್ ನವರು ಮಾಡಿಸಿದ್ದರಿಂದ ಗಯಾದಂತಹಾ ಸ್ಥಳದಲ್ಲಿಯೂ ನಮಗೆ ಯಾವುದೇ ತೊಂದರೆಯಾಗದೇ ಕೆಲಸಗಳು ಸುಸೂತ್ರವಾಗಿ ನಡೆದಿತ್ತು. ಎಲ್ಲೆಲ್ಲಿ ಯಾವ್ಯಾವ ಪುರೋಹಿತರಿಗೆ ಎಷ್ಟೆಷ್ಟು ಹಣ ಕೊಡಬೇಕೆಂದು ಒಬ್ಬ ಲೋಕಲ್ ಗೈಡಿಗೆ ಹೇಳಿ ನಮ್ಮ ಜೊತೆಯೇ ಕಳಿಸುತ್ತಿದ್ದರಿಂದ ಎಲ್ಲಿಯೂ ನಾವು ಸುಲಿಗೆಗೆ ಒಳಗಾಗಲಿಲ್ಲ. ಹಾಗೂ ನಾವು ನೂರು ರೂ. ನೋಟುಗಳ ಚಿಲ್ಲರೆ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಎಷ್ಟು ಕೊಟ್ಟರೆ ಅಷ್ಟೇ, ವಾಪಸ್ ಬರುವುದಿಲ್ಲ. .

‘ಅಗರ್ ಬ್ರಾಹ್ಮಣ್ ನಹೀ ಮಾಂಗೇಗಾ ತೋ ಖಾಯೇಗಾ ಕ್ಯಾ?’ ಎಂಬ ಮಾತು ಇಲ್ಲಿಯೂ ಸತ್ಯ.

ಅವರು ಹೇಳಿದ್ದಕ್ಕೆಲ್ಲ ಹೆಚ್ಚು ಗಮನ ಕೊಡದೇ ಸುಮ್ಮನೇ ಬರುತ್ತಿರಬೇಕೆಂದು ಮುನ್ನೆಚ್ಚರಿಕೆ ಕೊಟ್ಟಿದ್ದರು.

ಅಲ್ಲಿಂದ ಹೊರಗೆ ಒಂದು ಪುರಾತನ ಆಲದ ಮರವಿದೆ. ಎಷ್ಟೋ ನೂರು ವರ್ಷ ಹಳೆಯದು ಎಂದು ಹೇಳುತ್ತಾರೆ. ಅಲ್ಲಿ ನಮ್ಮ ಕೊನೆಯ 36 ಪಿಂಡಗಳನ್ನು ವಿಸರ್ಜಿಸಬೇಕು. ಅಲ್ಲಿಂದ ಹತ್ತಿರದ ಮುಖ್ಯರಸ್ತೆವರೆಗೂ ನಡೆಯಬೇಕು. ಅಲ್ಲಿಂದ ಶೇರ್ ಆಟೋ ಸವಾರಿ, ಅನಂತರ ನಮ್ಮ ಬಸ್.

ಕರ್ನಾಟಕ ಭವನದ ಬೋರ್ಡ್ ಚಿತ್ರ ಇದೆ.


Address

google image, not ours! ಸಾಂಧರ್ಭಿಕ ಚಿತ್ರ ಗೂಗಲ್


vishnUpada temple


Phalgu River


ಈ ರೀತಿ ಏರ್ಪಡಿಸಿದ ಯಾತ್ರೆಯಲ್ಲಿ ನೀವು ಗಯಾಗೆ ಹೋಗಿ ಬರುವುದೇ ಕ್ಷೇಮ, ಇಲ್ಲದಿದ್ದರೆ ಆ ಪುರೋಹಿತರ ಜಾಲಕ್ಕೆ ಬೀಳುತ್ತೀರಿ.

ಅಲ್ಲಿನ ಅಂಗಡಿಗಳಲ್ಲಿ ಚಿಕ್ಕ ತಾಮ್ರದ ವಿಷ್ಣುಪಾದ ಕೊಳ್ಳಬಹುದು, ನಮಗಾಗಿ ಮತ್ತು ನೆಂಟರಿಷ್ಟರಿಗಾಗಿ. ಅದು ಬಿಟ್ಟರೆ ಇನ್ನೇನೂ ನೋಡಲು ಅಲ್ಲಿ ಇಲ್ಲ ಎಂದು ಕಾಣುತ್ತದೆ.

ಅಲ್ಲಿಂದ ನಾವು ಹೋಟೆಲಿಗೆ ವಾಪಸ್ ಬಂದು ಮತ್ತೆ ಊಟ ಮಾಡಿ ಹೊರಡುವುದಿತ್ತು.

ಸಂಚಿಕೆ 9: ನಲಂದಾ ವಿಶ್ವವಿದ್ಯಾಲಯ ಪಳೆಯುಳಿಕೆಗಳು , ರಾಜ್ ಗಿರ್ ಭಾಗದ ಯಾತ್ರೆ ಬರುತ್ತದೆ57 views0 comments

Comments


bottom of page