top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -2

Updated: Nov 5, 2022


ಸಂಚಿಕೆ 1 ಇಲ್ಲಿದೆ


ಸಂಚಿಕೆ -2


1. ಲಕ್ನೋ ನಗರ ಪ್ರದಕ್ಷಿಣೆ:


ಲಕ್ನೋ ಹೋಟೆಲಿಗೆ ಬಂದಿಳಿದ ಸಂಜೆಯೇ...

ಮೊದಲಿಗೆ ಅವರು ಬಡಾ ಇಮಾಂಬರ ಎಂಬ ಭೂಲ್ ಭುಲೈಯಾ ಇದೆ ಎಂದು ಅಲ್ಲಿಗೆ ಬಸ್ಸಿನಲ್ಲಿ ಕರೆದೊಯ್ದರು. ಯಾಕೆ ಯಾವುದಾದರೂ ಚಿಕ್ಕ ದೇವಸ್ಥಾನಕ್ಕೆ ಹೋಗಿ ಫೂಜೆ ಮಾಡಿ ಅಲ್ಲಿಂದ ಹೋಗಬಹುದಿತ್ತಲ್ಲ ಎಂದು ನಮ್ಮಲ್ಲಿ ಕೆಲವರಿಗೆ ಅನಿಸಿದ್ದು ನಿಜ. ಅಲ್ಲಿ ದೇವಸ್ಥಾನ ಇರಲಿಲ್ಲವೋ, ಅಥವಾ ಈ ಭೂಲ್ ಭುಲೈಯಾ ಮುಚ್ಚಿಬಿಡುತ್ತದೆಯೋ ಎಂದಿರಬಹುದು... ಆದರೆ ಅಲ್ಲಿಗೇ ಹೋದರೆ ಅದು ಅವತ್ತು ಶುಕ್ರವಾರ ಯಾವುದೋ ಉರ್ದು ಕಾರ್ಯಕ್ರಮ ನಡೆಯುತಿತ್ತು, ಪಕ್ಕದ ಮಸೀದಿಯಲ್ಲಿ, ಆದ್ದರಿಂದ ನಿಜಕ್ಕೂ ಮುಚ್ಚಿಬಿಟ್ಟಿತ್ತು.

‘ಇದನ್ನು ಬೇಕಾದರೆ ನಾಳೆ ತೋರಿಸುವೆ’ ಎಂದ ಮ್ಯಾನೇಜರ್ ’ಈಗ ನಾವು ಮಾಜಿ ಮುಖ್ಯಮಂತ್ರಿ ಮಾಯಾವತಿ ಕಟ್ಟಿಸಿದ ಡಾ/ ಅಂಬೇಡ್ಕರ್ ಪರಿವರ್ತನ್ ಎಂಬ ಗ್ರಾನೈಟ್ ಶಿಲೆಗಳ ಬೃಹತ್ ಪ್ರದರ್ಶನ ಮ್ಯುಸಿಯಂ ತರಹ ಇದೆ, ಅದನ್ನು ನೋಡುವಾ’ ಎಂದು ಕರೆದೊಯ್ದರು.

ಅದಕ್ಕೆ ಹೋಗಲು ೩೦ ನಿಮಿಷವೇ ಹಿಡಿಯಿತು ಸಂಜೆ ಟ್ರಾಫಿಕ್ಕಿನಲ್ಲಿ.

ನಾನು ಆಗ ಗಮನಿಸಿದ್ದು:-

ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಬಂದ ಮೇಲೆ ಎಷ್ಟೆಷ್ಟೋ ತರಹದ ಕಣ್ಣಿಗೆ ಕಾಣುವ ಬದಲಾವಣೆಗಳನ್ನು ತಂದಿದ್ದಾರಂತೆ. ಬಹಳ ಕೊಳಕಾಗಿ ಕಸದ ಗುಂಡಿಯಂತಿದ್ದ ಲಕ್ನೋ ರಾಜಧಾನಿ ನಗರವನ್ನು ಕ್ಲೀನ್ ಅಪ್ ಮಾಡಿ ಕಸ ನಿರ್ಮೂಲನ ಎಲ್ಲಾ ವ್ಯವಸ್ಥಿತವಾಗಿಸಿ ಹೊಸ ತರಹದ ಶಿಸ್ತಿನ “ಸ್ವಚ್ ಭಾರತ್” ತರಹದ ಸಿಸ್ಟಮ್ ತರುತ್ತಿದ್ದಾರೆ. ಆದರೆ ಅಲ್ಲಿನ ಜನ ಅದಕ್ಕೆ ಸ್ಪಂದಿಸಬೇಕಷ್ಟೆ. ಇದ್ದ ಹಾಗೆ ಇರುತ್ತೇವೆಂದರೆ ಯಾವ ಸರಕಾರ ಏನು ಮಾಡಲಾದೀತು? ಅದರಲ್ಲಿ ಹಳೇ ಲಕ್ನೋ ನಗರದಲ್ಲಿ ಸ್ವಲ್ಪ ಚಿಕ್ಕ ಚಿಕ್ಕ ಜನಭರಿತ ರಸ್ತೆಗಳೇ ಹೆಚ್ಚು. ಅದರಲ್ಲೂ ಒಂದು ಅಲ್ಪಸಂಖ್ಯಾತ ಜನಾಂಗದವರು ಸ್ವಲ್ಪ ಕೊಳಕೊಳಕ್ಕಾಗೇ ಇಟ್ಟುಕೊಳ್ಳುತ್ತಾರೆ. ಅದನ್ನು ಯಾರು ಎತ್ತ ಎಂದು ನಾನು ವಿವರಿಸಬೇಕಿಲ್ಲ! ಹೊಸ ನಗರದ ಆಧುನಿಕ ಭಾಗಗಳು ಜಗಮಗಿಸುತ್ತಿವೆ. ಖುಶಿಯಾಗುತ್ತದೆ. ಎಂತಹಾ ಕಾಂಟ್ರಾಸ್ಟ್ ಇಲ್ಲಿನ ನಗರಗಳು- ಹಳೆ ಮತ್ತು ಹೊಸ ಭಾಗಗಳು (ಪ್ರಯಾಗ ರಾಜ್, ಕಾಶಿ ಸಹಾ)

ಯು ಪಿ ಯಲ್ಲಿ ಹೊಸ ತರಂಗವೆದ್ದಿದೆ,ಅದೆಲ್ಲೋ ಆಂತರಿಕವಾಗಿ ಗುಪ್ತವಾಗಿದ್ದೇ ಕೆಲಸ ಮಾಡಿ ತೋರಿಸುತ್ತಿದೆ. ಪಕ್ಕದ ಬಿಹಾರ ರಾಜ್ಯದ ವರ್ತಮಾನ ಸ್ಥಿತಿಯನ್ನು ಹೋಲಿಸಿ ನೋಡಿದ ಮೇಲೆ ನನಗೆ ಯು ಪಿ ಯ ಸಾಧನೆಗಳ ಬಗ್ಗೆ ಹೆಚ್ಚು ಅರಿವು ಮೂಡಿತು. ನಾನೂ ಒಂದು ತರಹ ಯೋಗಿ ಆದಿತ್ಯನಾಥರ ಅಭಿಮಾನಿಯಾಗಿಬಿಟ್ಟೆ! ಇಂತಹಾ ಒಂದು ಹಳೆ ಕಾಲದ ಚಿಕ್ಕಚಿಕ್ಕ ಕೊಳಕು ತುಂಬಿದ ಊರುಗಳ ಅಶಿಸ್ತಿನ ಜನರನ್ನು ಬಗ್ಗಿಸಲು ಒಬ್ಬ ಯೋಗಿಯೇ ಬರಬೇಕಿತ್ತು! ನಾವು ಎಂದೂ ವ್ಯಕ್ತಿಯನ್ನಲ್ಲ, ಅವರ ಸಾಧನೆಯನ್ನಷ್ಟೇ ಅಳೆಯಬೇಕು, ಇರಲಿ!೧. ಡಾ‌ ಅಂಬೇಡ್ಕರ್ ಸಾಮಾಜಿಕ‌ ಪರಿವರ್ತನ ಸ್ಮಾರಕ:


ಈ ಹೆಸರಿನಲ್ಲಿ ಎಂಬ ಅದ್ದೂರಿಯಾಗಿ ಕಟ್ಟಿದ ಒಳಗೇನೂ ವಿಶೇಷವಿಲ್ಲದ ಹಸಿರಿನ ಎಳೆಯೂ ಇಲ್ಲದ ಗ್ರಾನೈಟ್ ಮೈದಾನ , ಇದು ಬಿಸಿಲಿನಲ್ಲಿ ಮಿರಮಿರನೆ ಮಿಂಚುತ್ತಿದೆ, ಝಳದಿಂದ ಸುಡುತ್ತಿದೆ. ಒಂದು ಮಳೆ ಬಂದರೆ ನೆಲ ಫ್ಲ್ಯಾಟ್ ಇರುವುದ್ದರಿಂದ ನೀರು ನಿಲ್ಲಬಹುದು. ಒಂದೇ ಒಂದು ಜಾಗದಲ್ಲಿ ನೆರಳಲ್ಲಿ ನಿಲ್ಲಲಾಗದು. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಬಂದವರಿಗೆ ಕೂರಲು ಒಂದೇ ಒಂದು ಆಸನವೂ ಇಲ್ಲ. 45 ಡಿಗ್ರೀ ಸೆಕೆ ಇರುವ ಈ ಭಾಗದಲ್ಲಿ ಇದೇಕೋ ಅತಿ ಶಾಖ ಹುಟ್ಟುವ ಸ್ಥಳವೇ ಆದೀತು.

ವಿಶಾಲವಾದ 105 ಎಕರೆ ಗ್ರಾನೈಟ್ ಅಂಗಳದಲ್ಲಿ ಬೃಹತ್ ಆನೆಗಳ ಶಿಲೆಗಳು! 124 ಆನೆಗಳ ಶಿಲೆಗಳಿವೆ ಎನ್ನುತ್ತಾರೆ.

ಇದು ಮಾಯಾವತಿಯವರ ಬಿ ಎಸ್ ಪಿ ಪಕ್ಷದ ಚುನಾವಣಾ ಚಿನ್ಹೆ, ಇಲ್ಲದಿದ್ದರೆ ಇವರಿಗೆ ಗಜರಾಜನ ಮೇಲೆ ವಿಶೇಷ ಪ್ರೇಮವೇನೂ ಇಲ್ಲ. ಕಟ್ಟಿರುವುದು- ಅತ್ಯುತ್ತಮ ಗುಣ ಮಟ್ಟದ ರಾಜಾಸ್ಥಾನ ರೆಡ್ ಸ್ಯಾಂಡ್ ಸ್ಟೋನ್ ಗ್ರಾನೈಟ್ ಆಗಿದೆ.

ಅದರಲ್ಲಿ ನೆಲ, ಮೆಟ್ಟಿಲು, ಆನೆಯ ಶಿಲೆಗಳು ಎಲ್ಲವನ್ನೂ ಒಂದು ರೀತಿಯಲ್ಲಿ ಎಲ್ಲೆಂದರಲ್ಲಿ ಕಟ್ಟಿದ್ದಾರೆ.

ಏನಿದರ ವಿನ್ಯಾಸವೋ, ಯಾವುದಿದರ ಮಹತ್ವವೋ ಯಾರಿಗೂ ಅಲ್ಲಿ ಗೊತ್ತಿಲ್ಲ.

ಅಲ್ಲಲ್ಲಿ ಸಂಗ್ರಹಾಲಯ ಎಂದು ಆಕೆಯ ಗುರು ಕಾಂಶಿ ರಾಮ್, ನಾರಾಯಣ ಗುರು, ಡಾ. ಅಂಬೇಡ್ಕರ್, ಜ್ಯೋತಿಬಾ ಫುಳೆ ಮುಂತಾದ ಸಾಮಾಜಿಕ ಪರಿವರ್ತನಕಾರರ, ದಲಿತಪರ ಹೋರಾಟಗಾರರ ಶಿಲೆಗಳಿವೆ, ಇನ್ನೂ ಅಲ್ಲಿ ಬಹಳ ಕಲ್ಲಿನ ಕಟ್ಟಡಗಳು ಕಾಣುತ್ತವೆ. ನಮಗೆ ಸುಸ್ತಾಗಿ ಅಲ್ಲೆಲ್ಲಾ ಹೋಗಲಿಲ್ಲ. ಕೆಲವರು ನಮ್ಮಲ್ಲಿ ಹೋದವರೂ ಹೆಚ್ಚೇನೂ ಅವನ್ನು ಹೊಗಳಲಿಲ್ಲ.

ಮಾಯಾವತಿ ಈ 700 ಕೋಟಿ ರೂ. ದುಂದುವೆಚ್ಚದ ಹಗರಣ ಮಾಡಿದ್ದಂತೂ ಎಲ್ಲರಿಗೂ ಗೊತ್ತು.


ಆದರೆ ಯಾಕೆ ಮಾಜಿ ಮು.ಮಂ. ಇದನ್ನು ಕಟ್ಟಿದರೋ ಎಂದು ಜನರೇ ಹುಬ್ಬೇರಿಸುತ್ತಾರಂತೆ... ಬಹಳ ದಂಡ ಎನಿಸಿದ ಸ್ಮಾರಕ.

ಇಂತಿಂತಾ ಅನವಶ್ಯಕ ಕೆಲಸಗಳನ್ನು ಮಾಡಿದ ಮುಖ್ಯಮಂತ್ರಿಯನ್ನು ಸಹಿಸಿಕೊಂಡ ಯು ಪಿ ಜನತೆ ಈಗ ಯೋಗಿ ಆದಿತ್ಯನಾಥರ ಜನಪರ ಕೆಲಸಗಳಿಗೆ ಸ್ಪಂದಿಸಿ ಎರಡನೇ ಸಲದ ಸರಕಾರದ ಅವಕಾಶ ಸಹಾ ಕೊಟ್ಟಿರುವುದು ಸಹಜವೇ.

ಕೆಲವು ಚಿತ್ರಗಳಿವೆ, ನೋಡಿ:
ಅಲ್ಲಿಂದ ನಾವು ಹೋಟೆಲಿಗೆ ರಾತ್ರಿ 7ಕ್ಕೆ ವಾಪಸ್ ಬಂದು ವಿರಮಿಸಿದೆವು. ರಾತ್ರಿ 8.30ಕ್ಕೆ ಸರಿಯಾಗಿ ಮತ್ತೆ ಡೈನಿಂಗ್ ಹಾಲಿನತ್ತ ಹೊರಟೆವು. ಆಗಲೇ ಸಮಯಕ್ಕೆ ಸರಿಯಾಗಿ ಅಡಿಗೆ ಮಾಡಿ ಬಫೆ ತರಹ ಕಾಯುತ್ತಿದ್ದರು ನಮ್ಮ ಅಡಿಗೆ ತಂಡ/ ಎಷ್ಟು ನಿಷ್ಟೆಯವರಪ್ಪ, ಇಡೀ ಟ್ರಿಪ್ಪಿನಲ್ಲಿ 12 ದಿನ ಹೀಗೆಯೇ ಯಾವ್ಯಾವುದೋ ಹೋಟೆಲಿನಲ್ಲಿಯೂ ಸರಿಯಾದ ಸಮಯಕ್ಕೆ ಊಟ ಹಾಕಿದ್ದಾರೆ ನೋಡಿ! ರಾತ್ರಿಗೆ ಮೃದುವಾದ ಎರಡು ಚಪಾತಿ ಎರಡು ತರಹ ಪಲ್ಯ/ ಸಬ್ಜಿ, ಅನ್ನ, ಸಾಂಭಾರ್, ರಸಂ, ಮೊಸರು ಇತ್ತು. ರಾತ್ರಿ ಮಜ್ಜಿಗೆ ಇಲ್ಲ, ಮೊಸರಿನಿಂದ ಮಾಡಿಕೊಳ್ಳಬಹುದು.

“ನಾಳೆ ಬೆಳಿಗ್ಗೆಗೆ 6.30ಕ್ಕೆ ಹೊರಡ್ಬೇಕು, 6 ಗಂಟೆಗೆ ರೆಡಿಯಾಗಿ ಹೊರಬನ್ನಿ. ಅದಕ್ಕೂ ಮುಂಚೆ 5 ಗಂಟೆಗೆ ಡೋರ್ ಬೆಲ್ ಮಾಡಿ ಕಾಫಿ, ಟೀ/ (ಶುಗರ್ ಲೆಸ್ಸ್) ಎಲ್ಲಾ ಕೊಡುತ್ತೇವೆ, ಇನ್ನು ಒಂದು ಗಂಟೆಯಲ್ಲಿ ಸ್ನಾನ ಮಾಡಿ ರೆಡಿಯಾಗಿ. 6 ಗಂಟೆಗೆ ತಿಂಡಿ ತಿಂದು ಇಲ್ಲಿಂದ 6.30ಕ್ಕೆ ಹೊರಡೋಣ” ಎಂದು ಮ್ಯಾನೇಜರ್ ಅಪ್ಪಣೆಯಾಯಿತು.

‘ಹೇಗಪ್ಪಾ, ಬೆಳಗಿನ ಜಾವ 5 ಗಂಟೆಯ ಸಕ್ಕರೆ ನಿದ್ದೆ ಬಿಟ್ಟು ಏಳುವುದು?’ ಎಂಬ ಯೋಚನೆ ಮೊದಲ ದಿನ ನಮ್ಮನ್ನು ಕೊರೆಯಿತು…

ಕಾಫಿ ಸೇವಿಸಿ, ಎದ್ದು, ಶೌಚ ಕರ್ಮ ಮಾಡಿ ಸ್ನಾನ ಮಾಡಿ ಬಟ್ಟೆಗಳನ್ನು ಮತ್ತೆ ಇಟ್ಟುಕೊಂಡು ಶುಭ್ರವಾಗಿ ಲಗೇಜು ತೆಗೆಸಿಕೊಂಡು 6ಕ್ಕೆ ತಿಂಡಿ ಕಾಫಿ ಸಹಾ ತಿಂದು, ಬಸ್ಸು 6.30ಕ್ಕೆ ಹೊರಟಿರಬೇಕು. ಓಹೋ, ಹೀಗಿರುತ್ತೋ ಈ ಟೂರ್? ಎಂದು ಮೊದಲ ಸಲ ಈ ಕಠಿಣ ದಿನಚರಿಯ ಪರಿಚಯ ನಮಗಾಯಿತು.

ನನ್ನ ಇಡೀ ಜೀವನದಲ್ಲಿ ಈ 12 ದಿನದ ಮುಂಜಾನೆ 5 ರಿಂದ 6 ವರೆಗಿದ್ದಂತಹಾ ಬಿಝಿ ಶೆಡ್ಯೂಲ್ ಹಿಂದೆಂದೂ ಅನುಭವಿಸಿರಲಿಲ್ಲ. ಬೆಳಿಗ್ಗೆ ಬೇಗ ಏಳುವವರಿಗೆ ಈ ಸಮಸ್ಯೆ ಇಲ್ಲ ನೋಡಿ, ನಮ್ಮ ಶಡ್ಗ ಸುರೇಶ್ ಮತ್ತು ಗೀತಾ ಈ ಅಭ್ಯಾಸದವರು, ನನ್ನ ಪತ್ನಿಯೂ ಆ ತರಹ ಪರವಾಗಿಲ್ಲ. ನನಗೇ ಅಭ್ಯಾಸ ಮಾಡಿಕೊಳ್ಳಬೇಕಾಯಿತು.

ಇದೊಂದು ಹೊಸ ಅನುಭವ-ಒಂದು ತರಹ ಸವಾಲು, ಒಂದು ತರಹ ಉತ್ಸಾಹ ಎರಡೂ ಸೇರಿತ್ತು.

ಆದರೆ ಮೊದಲ ದಿನವೇ ಸ್ವಲ್ಪ ಕಷ್ಟ ಎನಿಸಿದರೂ ಅಭ್ಯಾಸವಾಗಲಿ ಎಂದು 5 ಗಂಟೆಗೆ ಎದ್ದು ಕಾಫಿ ಕುಡಿದು, ನಿತ್ಯಕರ್ಮ ಮುಗಿಸಿ ಹೊಸ ಬಟ್ಟೆ ಧರಿಸಿ ತಿಂಡಿಗೆ ಬಂದೆವು, ಎಲ್ಲ ಸಹಪ್ರಯಾಣಿಕರೂ ಹಸನ್ಮುಖಿಯಾಗಿ ಫ್ರೆಶ್ ಆಗಿದ್ದರು. ಒಳ್ಳೆಯ ಬಾಂಧವ್ಯ ಬೆಳೆಯುವ ಸೂಚನೆಗಳಿದ್ದವು. ಅವರಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಕಾರ್ಕಳ ಮುಂತಾದ ಕಡೆಯ 50+ ವಯಸ್ಸು ದಾಟಿದ ದಂಪತಿಗಳು, ನಿವೃತ್ತರೇ ಹೆಚ್ಚು. 75ರ ವರೆಗೂ ಇದ್ದರು ನೋಡಿ, ಎಲ್ಲರಿಗೂ ಒಂದೇ ಉತ್ಸಾಹ!

ನಾನು ಲೇಖಕ ಎಂದು ಯಾರಿಗೋ ಒಬ್ಬರಿಗೆ ಸುಮ್ಮನೇ ಪರಿಚಯ ಮಾಡಿಕೊಡುವಾಗ ಬಸ್ಸಿನಲ್ಲಿ ಹೇಳಿದ್ದು ಈಗ ಎಲ್ಲರಿಗೂ ತಿಳಿದುಬಿಟ್ಟಿತ್ತು, ‘ಬರೀತೀರಾ? ಏನು ಬರೀತೀರಿ? ನಮಗೂ ಹೇಳಿ, ಕೊಡಿ, ನಾವೂ ಕನ್ನಡ ಪುಸ್ತಕ ಓದ್ತಿದ್ವಿ, ಈಗಲ್ಲ...’ ಎಂದೆಲ್ಲಾ ಕೆಲವರು ಮಾತಾಡಿಸಿದರು.

ಬೆಳಿಗ್ಗೆ 6 ಕ್ಕೆಲ್ಲ ಬಿಸಿಬಿಸಿ ಇಡ್ಲಿ ವಡೆ ಸಾಂಬಾರ್, ಚಟ್ನಿ, ಕಾಫಿ ಟೀ ರೆಡಿ ಇತ್ತು!

ಸದ್ಯ ಇವತ್ತು ಮಾತ್ರ ಲಕ್ನೋಗೆ ರಾತ್ರಿ ವಾಪಸು ಬರುವವರಿದ್ದೆವು ಹಾಗಾಗಿ ಎಲ್ಲಾ ಸಾಮಾನು ರೂಮಿನಲ್ಲೇ ಬಿಟ್ಟು ಹ್ಯಾಂಡ್‌ಬ್ಯಾಗ್, ನೀರು ಇಟ್ಟುಕೊಂಡು ಹೊರಟೆವು. ಮತ್ತು ನಮ್ಮ ಬಟ್ಟೆಗಳನ್ನು ಒಗೆದು ರೂಮಿನಲ್ಲಿ ಒಣಹಾಕಲು ಮೊದಲ ಅವಕಾಶ ಸಹಾ ಸಿಕ್ಕಿತ್ತು.


ತಿಂಡಿ ಮುಗಿಸಿ, ಬಸ್ಸಿನ ಬಳಿ ಬಂದು ಬ್ಯಾಕ್ ಪ್ಯಾಕ್ ಮಾತ್ರವನ್ನೇ ಸೀಟಿನ ಮೇಲಿನ ರ‍್ಯಾಕಿನಲ್ಲಿಟ್ಟುಕೊಂಡೆವು. ನಮಗೆ ಒಂದು ಬಾಟಲ್ ಮಿನರಲ್ ನೀರು- ‘ಕಿನ್ಲೇ’ ಕೊಟ್ಟರು.


ಹಾ, ಇದಕ್ಕೂ ಮುನ್ನ ನಮಗೊಂದು ವಿಶೇಷ ಕಾಣಿಕೆ ಸಿಕ್ಕಿತ್ತು -ಅವರ ನಿರ್ಮಲಾ ಟ್ರಾವೆಲ್ಸ್ ಹೆಸರಿರುವ ಒಂದು ನೀಲಿ-ಕೆಂಪು ಏರ್ ಬ್ಯಾಗ್ ಮತ್ತು ನೀಲಿ ಬಣ್ಣದ ಕ್ಯಾಪ್!
‘ಇದು ನಮ್ಮ ಯೂನಿಫಾರ್ಂ ತರಹ, ಬಹಳ ಜನಗಳ ಗುಂಪಿದ್ದಾಗ ನಿಮಗೂ ನಮಗೂ ಪರಸ್ಪರ ಗುರುತಿಸಲು ಸಾಧ್ಯವಾಗುವಂತೆ ಹಾಕಿಕೊಳ್ಳಿ. ಕಳೆದುಹೋದರೂ ಕ್ಯಾಪ್ ನೋಡಿ ಹಿಡಿಯಬಹುದು, ಇದನ್ನು ತಲೆಯ ಮೇಲೆ ಹಾಕಿಕೊಂಡವರ ಜೊತೆ ಗ್ರೂಪ್ ತರಹ ನಡೆಯುತ್ತಿರಿ, ಕಳೆದುಹೋಗಲ್ಲ’ ಎಂದರು. ‘ಮರೆಯದೇ ಕ್ಯಾಪ್ ಹಾಕಿಕೊಂಡರೆ ಒಳ್ಳೆಯದು’ ಎಂದು ಒತ್ತಿ ಒತ್ತಿ ಮ್ಯಾನೇಜರ್ ಹೇಳಿದರು.


೨. ಮೊದಲು ಮತ್ತೆ ಬಡಾ ಇಮಾಂಬರಾ ಎಂಬ ಭೂಲ್ ಭುಲೈಯಾ ಕಡೆಗೆ ನಮ್ಮ ಸವಾರಿ ಹೊರಟಿತು... ನೋಡಿ, ನಾನೂ ಸಾಕಷ್ಟು ವಿಶಾಲ ಮನೋಭಾವದಿಂದ , ಜಾತ್ಯಾತೀತವಾಗಿಯೂ ಯೋಚಿಸಬಲ್ಲೆ. ಭಗವಾನ್ ಸತ್ಯ ಸಾಯಿಬಾಬಾ ನಮಗೆ ಎಲ್ಲ ಧರ್ಮದವರನ್ನೂ ಗೌರವಿಸಲು ಹೇಳಿದ್ದಾರೆ. ಆದರೆ ಅಯೋಧ್ಯೆ ಕಾಶಿ ಎಂದು ಹೊರಟಿರುವ ಸಂಪ್ರದಾಯಸ್ಥ ತೀರ್ಥ ಯಾತ್ರಿಗಳಿಗೆ ಇದೇಕೆ ಬೇಕಿತ್ತು ಎಂದನಿಸಿದ್ದು ಸತ್ಯ.

ಯಾಕೆಂದರೆ ಇದರಲ್ಲಿ ಯಾವುದೇ ಮೂರ್ತಿ, ದೇವರು, ಪಾವಿತ್ರ್ಯ ಏನೂ ಇಲ್ಲ. ಒಂದು ದೊಡ್ಡ ಇಮಾರತ್ ಅಂದರೆ ಬೃಹತ್ ಕಟ್ಟಡ ಇದೆ. ಅದಕ್ಕೆ ಪ್ರವೇಶ ಟಿಕೆಟ್ ಇದೆ, ಸರಕಾರಿ ಟಿಕೆಟನ್ನು ನಮ್ಮ ಗೈಡ್ ಎಲ್ಲರಿಗೂ ಕೊಂಡುಕೊಟ್ಟು ಕಳಿಸಿದರು. ಅದನ್ನು ಅಲ್ಲಿನ ಲೋಕಲ್ ನವಾಬ ಅಸಫ಼್ ಉದ್ ದೌಲಾ ಎಂಬಾತ 1750ರಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲು ಈ ತರಹ ಕಟ್ಟಲು ಹೇಳಿ ಅವರಿಗೆ ದಿನಗೂಲಿ ಕೊಡುವ ವ್ಯವಸ್ಥೆ ಮಾಡುತ್ತಿದ್ದನಂತೆ. ಇಲ್ಲದಿದ್ದರೆ ಆಗಿದ್ದ ಬರಗಾಲದಲ್ಲಿ ಅವರೆಲ್ಲ ಹೊಟ್ಟೆಗಿಲ್ಲದೇ ಸಾಯುತ್ತಿದ್ದರಂತೆ. ತನ್ನ ಪ್ರಜೆಗಳಿಗಾಗಿ ಆತ ಕಟ್ಟಿಸಿದ್ದು ಎನ್ನುತ್ತಾರೆ. ಅದನ್ನು ಅವರು ದಿನವೆಲ್ಲಾ ಕಟ್ಟುವುದು , ರಾತ್ರಿ ನವಾಬನ ಬೇರೆ ಆಳುಗಳು ಬಂದು ಸ್ವಲ್ಪ ಮಟ್ಟಿಗೆ ಅದನ್ನೆಲ್ಲಾ ಒಡೆದು ಹಾಕುವುದು ಅಲ್ಲಿನ ವ್ಯವಸ್ಥೆ ಅಂತೆ. ಬೇಗ ಮುಗಿಯದಿರಲಿ, ನಿಧಾನವಾಗಿ ಹೆಚ್ಚೆಚ್ಚು ದಿನ ಅವರಿಗೆಲ್ಲಾ ಕೂಲಿ ಸಿಗಲಿ ಎಂದು!!. ವಾಹ್ ವಾಹ್! ಇದಕ್ಕಿಂತಾ ಉತ್ತಮ ದಾರಿ ಹೊಳೆಯಲಿಲ್ಲವೆ ಆತನಿಗೆ?.

ಅಲ್ಲಿ 1000 ಒಂದೇ ತರಹದ ಬಾಗಿಲುಗಳಿರುವ ಕತ್ತಲಿನ ಗುಹೆಗಳಿವೆ, ಅದರಲ್ಲೊಂದೇ ಒಂದು ಸರಿಯಾದ ಹೋಗಿ ಬರುವ ದಾರಿ... ಮಿಕ್ಕ 999 ತಪ್ಪು ದಾರಿಗಳು, ಅಲ್ಲಿ ಸುತ್ತುತ್ತಲೇ ಇರಬೇಕು...

ಕಳೆದುಹೋದರೆ ದೇವರೇ ಗತಿ, ಅದಕ್ಕಾಗಿ ಇದನ್ನು ಭೂಲ್ ಭುಲೈಯ- ಗೋಜಲು ದಾರಿಗಳು, ಮೇಝ್-maze ಎನ್ನುತ್ತಾರೆ. ಈ ತರಹದ ಕಟ್ಟಡ ಮಹಡಿಯ ಮೇಲಿದೆ...ಚಿಕ್ಕ ಮಹಡಿ ಮೆಟ್ಟಿಲಲ್ಲಿ ಹತ್ತುವ ಇಳಿಯುವ ಇಬ್ಬರದೂ ಮೊಳಕೈ ತಳ್ಳುತ್ತಾ ನೂಕಾಟ. ಅಂದು ಶನಿವಾರ ಬೇರೆ, ಆ ರಶ್ ನುಗ್ಗಾಟ ನೋಡಿ ನಾನಂತೂ ಹೊರಗೆ ಉಳಿದು ಬಿಟ್ಟೆ. ಶ್ರೀಮತಿ ಹಾಗೂ ಗೈಡ್ ಜೊತೆಗೆ ಹೋಗಿ ಅರ್ಧ ಗಂಟೆಯ ನಂತರ ಹೊರಬಂದಳು ಅದೇ ಗ್ರೂಪ್ ಜೊತೆ. ಅಲ್ಲಿ ಮುಂದಿನ ಕಟ್ಟಡದಲ್ಲಿ ಮಸೀದಿಯಿದೆ, ಹೋಗುವಂತಿಲ್ಲ. ಮತ್ತು ಕೆಳಗಿನ ಭವನದಲ್ಲಿ ಆ ನವಾಬನ ಮತ್ತು ಅದರ ವಾಸ್ತು ಶಿಲ್ಪಿ ಆರ್ಕಿಟೆಕ್ಟನ ಸಮಾಧಿಗಳಿವೆ, ಅಲ್ಲಿ ರತನ್ ಮಹಲ್, ಶೀಶ್ ಮಹಲ್ ಎಂಬ ಹಳೆ ಹಾಳಾಗಿರುವ ಮಹಲು ದ್ವಾರ ಎಲ್ಲಾ ಇವೆ, ಯಾವುದೂ ನೋಡಲು ಅಂತಹಾ ಕಣ್ಣಿಗೆ ತಂಪಿಲ್ಲ. ಓಹೋ ಹೌದೆ ಎನ್ನುತ್ತಾ ಮುಂದೆ ಹೋಗಬೇಕು. ಈ ಹಳೆಯ ಕಟ್ಟಡವನ್ನು ಹೆರಿಟೇಜ್ ಸ್ಟ್ರಕ್ಚರ್ ಎಂದು ಮಾಡಿದ್ದಾರೆ. ಒಂದು ದೊಡ್ಡ ಬಹಳ ಆಳವಾದ ಬಾವಿ ಉಳಿಸಿಕೊಂಡಿದ್ದಾರೆ. ಅದರಿಂದ ಈ ಕಟ್ಟಡಕ್ಕೆ ನೀರು ತೆಗೆಯುತ್ತಿದ್ದರಂತೆ, ಅಷ್ಟೇ!...ಹಲವರು ನಮ್ಮಲ್ಲಿ ಇದನ್ನು ಹತ್ತಿ ನೋಡಲು ಬರಲಿಲ್ಲ, ಅಥವಾ ಹೊರಗುಳಿದರು.

ಕೆಲವು ಚಿತ್ರಗಳಿವೆ ನೋಡಿ:3. ನೈಮಿಷಾರಣ್ಯಕ್ಕೆ ಪ್ರಯಾಣ:


ಇಲ್ಲಿಂದ ನಮ್ಮ ನಿಜವಾದ ತೀರ್ಥಯಾತ್ರೆ ಆರಂಭವಾಯಿತು ಎನ್ನಿ.

ಹೊರಟ ತಕ್ಷಣ ಬಸ್ಸಿನಲ್ಲೇ ಇದರ ಮಹತ್ವವನ್ನು ನಮ್ಮ ಮ್ಯಾನೇಜರ್ ಮೋಹನ್ ಪ್ರಭು ವಿವರಿಸಿದರು:

"ಶಕ್ತಿಯ ಮೊದಲ ಅವತಾರವೇ ದಕ್ಷನ ಮಗಳು ದಾಕ್ಷಾಯಣಿ, ಶಿವನ ಮೊದಲ ಪತ್ನಿ. ಈಕೆಯನ್ನು ಸತಿ ಎಂದೂ ಕರೆಯುತ್ತಾರೆ. ಆಕೆ ಪುರಾಣ ಕಥೆಯ ಪ್ರಕಾರ ಒಮ್ಮೆ ತಂದೆಯ ಮೇಲೆ ಕುಪಿತಳಾಗಿ ಅಗ್ನಿಪ್ರವೇಶ ಮಾಡಿಕೊಂಡು ಬಿಡುತ್ತಾಳೆ. ಆಗ ಅವಳ ಶವವನ್ನು ಹೊತ್ತು ಶಿವನು ಲೋಕ ರಕ್ಷಣೆ ಅಥವ ಲಯವನ್ನೇ ಮರೆತು ದುಃಖದಿಂದ ಲೋಕವೆಲ್ಲಾ ತಿರುಗುತ್ತಿರುತ್ತಾನೆ. ಆಗ ದೇವತೆಗಳ ಮಾತು ಕೇಳಿ ಹೀಗೆ ಮುಂದುವರೆದರೆ ಲೋಕದ ಅಂತ್ಯವಾಗುವುದೆಂದು ಬೆದರಿ ವಿಷ್ಣು ತನ್ನ ಸುದರ್ಶನ ಚಕ್ರ ಬಿಟ್ಟು ಅವಳ ದೇಹವನ್ನು 51 ಸಲ ತುಂಡರಿಸಿದನು. ಆ ಭಾಗಗಳು ಭೂಮಿಯಲ್ಲಿ ಬಿದ್ದ ಸ್ಥಳಗಳೇ 'ಶಕ್ತಿ ಪೀಠ' ಗಳಾದವು. ಅದರ ಕೊನೆಯ ಭಾಗ‌ ನೈಮಿಷಾರಣ್ಯದಲ್ಲಿ ಬಿದ್ದಾಗ ಅಲ್ಲಿ ದೊಡ್ಡ ತೀರ್ಥೋದ್ಭವವಾಗಿ ಭೂಮಿಯಿಂದ ನೀರು ಚಿಮ್ಮಿತು. ಅದುವೇ ಇಲ್ಲಿನ 'ಚಕ್ರ ತೀರ್ಥ/ ಚಕ್ರ ಕುಂಡ್'.ಅದರ ಪ್ರವಾಹ ವಿಪರೀತವಾಯಿತೆಂದೂ ಆಗ ಶಕ್ತಿ ದೇವಿ ಅದನ್ನು ನುಂಗಿ ನಿಯಂತ್ರಿಸಿ ಅಲ್ಲಿ ನೆಲೆಸಿದಳೆಂದೂ ಸಹಾ ಹೇಳುತ್ತಾರೆ. ಇಲ್ಲಿ ಅದರ ಗುರುತಾಗಿ ಒಂದು ಲಲಿತಾ ದೇವಿ ಮಂದಿರ ಸಹಾ ಇದೆ. ಇದು ಗೋಮತಿ ನದಿ ತೀರದಲ್ಲಿರುವ ಕ್ಷೇತ್ರ.

ಇನ್ನೊಂದು ಪುರಾಣದ ಪ್ರಕಾರ ಇದಕ್ಕೂ ಮೊದಲು ಸತ್ಯಯುಗದಲ್ಲಿ ಋಷಿ ಮುನಿ ಸಂತರೆಲ್ಲಾ ಬ್ರಹ್ಮನ ಬಳಿ ಮಾನವ ಕಲ್ಯಾಣಕ್ಕಾಗಿ ನಿರಂತರ ತಪಸ್ಸು ಸಾಧನೆ ಮಾಡಲು ನಿರಾತಂಕವಾದ ಪವಿತ್ರ ಸ್ಥಳವೊಂದನ್ನು ಸೂಚಿಸು ಎಂದು ಬೇಡಲು, ಬ್ರಹ್ಮನು ಒಂದು ದರ್ಭೆಯಿಂದ ಚಕ್ರವನ್ನು ಮಾಡಿ ಹರಿಯಲು ಬಿಟ್ಟು, ಅದು ಎಲ್ಲಿ ನಿಲ್ಲುವುದೋ ಅಲ್ಲಿ ನೀವು ನೆಲೆಸಿರಿ ಎಂದು ಸೂಚಿಸಿದನಂತೆ, ಅವರೆಲ್ಲ ಆ ಚಕ್ರವನ್ನು ಭೂಮಿಯಲ್ಲಿ ಹಿಂಬಾಲಿಸುತ್ತಾ ನೈಮಿಷಾರಣ್ಯಕ್ಕೆ ಬಂದಾಗ ಅಲ್ಲಿ ಚಕ್ರ ನಿಂತು ಬೇರಾಯಿತಂತೆ. ಅದರ ಹೆಸರು ಸಹಾ ಈ ಘಟನೆಯಿಂದ ಬಂದಿದೆ.

ಇದೇ ಸ್ಥಳದಲ್ಲಿ ಸುಮಾರು 88000 ಮುನಿಗಳು ತಪೋ ಸಾಧನೆ ಮಾಡಿದ್ದಾರಂತೆ. ಇಲ್ಲಿಯೇ ವೇದ ವ್ಯಾಸರ ಆಶ್ರಮವು ಇದ್ದು ಅವರು ಇಲ್ಲಿ ನಾಲ್ಕು ವೇದಗಳ ವಿಂಗಡನೆ ಮಾಡಿದ್ದ ಸ್ಥಳ ಅಲ್ಲದೆ ಗಣಪತಿಯಿಂದ ಮಹಾಭಾರತವನ್ನೇ ಬರೆಸಿದ ಸ್ಥಳ ಎನ್ನುತ್ತಾರೆ. ವ್ಯಾಸ ಗದ್ದಿ ಎಂಬ ಈ ಸ್ಥಳದಲ್ಲಿ 5000 ವರ್ಷ ಹಿಂದಿನ ವೃಕ್ಷವಿದೆ. ವ್ಯಾಸರು ಶ್ರೀ ಸತ್ಯನಾರಾಯಣ ಪೂಜೆಯನ್ನು ಭೋಧಿಸಿದ್ದೂ ಇಲ್ಲೇ ಎನ್ನುತ್ತಾರೆ.

ಸೂತ ಮುನಿಗಳು ಶ್ರೀಮದ್ಭಾಗವತವನ್ನು ಆರಂಭಿಸಿದ ಸ್ಥಳವೂ ಇಲ್ಲಿಯೇ ಎನ್ನುತ್ತಾರೆ.

ವೈಷ್ಣವರ ಪ್ರಕಾರ ಅವರ 108 ದಿವ್ಯ ದೇಶಮ್ ದೇವಸ್ಥಾನಗಳಲ್ಲಿ (ತಿರುನೈಮಿಷಾರಣ್ಯಂ) ಒಂದು ಈ ಸ್ಥಳ; ಇಲ್ಲಿ ನಾರಾಯಣನೇ ಕಾಡಿನ ಸ್ವರೂಪದಲ್ಲಿ ನೆಲೆಸಿದ್ದಾನೆ ಎನ್ನುತ್ತಾರೆ.

ಇನ್ನೊಂದು - ರಾಮಾಯಣದ ಮೂಲದ ಪ್ರಕಾರ ಶ್ರೀ ರಾಮನು ನೈಮಿಷಾರಣ್ಯದಲ್ಲಿಯೇ ಅಶ್ವಮೇಧ ಯಾಗವನ್ನು ಆರಂಭಿಸಿದ್ದು ಎಂಬ ಉಲ್ಲೇಖವಿದೆ..."

ಹೀಗೆ ಹಲವಾರು ಪೌರಾಣಿಕ ಮತ್ತು ಧಾರ್ಮಿಕ ಐತಿಹ್ಯ ಉಳ್ಳ ಪುಣ್ಯುಭೂಮಿಯನ್ನು ನೋಡಲು ನಾವೆಲ್ಲಾ ಉತ್ಸುಕರಾಗಿಯೇ ಇದ್ದೆವು.

ಲಕ್ನೋದಿಂದ ಇದಿರುವ 94 ಕಿಮೀ ದೂರವನ್ನು ನಾವು 2.5 ಗಂಟೆಯಲ್ಲಿ ಏ/ಸಿ ಬಸ್ಸಿನಲ್ಲಿ ಕ್ರಮಿಸಿರಬೇಕು.

ಅಲ್ಲಿ ನೋಡಲು ಹೊರಟಾಗ ಅರಣ್ಯ ಪ್ರದೇಶದಂತಿರುವ ಸ್ಥಳದಲ್ಲಿ ಸಣ್ಣ ಸಣ್ಣ ಆಟೋ ಹೋಗಬಲ್ಲ ಅಂಕು ಡೊಂಕು ದಾರಿಗಳಿವೆ. ನಮಗೆಲ್ಲಾ ಈ ತರಹದ ೮ ಜನ ಕೂಡುವ ನಾಲ್ಕೈದು ಶೇರ್ ಆಟೋ ಮಾಡಿಸಿಕೊಟ್ಟರು ನಮ್ಮ ಮ್ಯಾನೇಜರ್- ಎಲ್ಲರೂ ಒಂದೇ ದಿಕ್ಕಿನಲ್ಲಿ ಕಾರ್ಯಕ್ರಮದಂತೆ ತೆರಳಬೇಕು, ಹೊರಡುತ್ತಿರಬೇಕು, ಇಲ್ಲದಿದ್ದರೆ ಗ್ರೂಪ್ ಮಿಸ್ ಆಗುತ್ತದೆ ಎಂದೆಚ್ಚರಿಸಿದರು.

ಹೀಗೆ ಹೊರಟು ಮೊದಲ ಸ್ಥಳ ನಾವು ನೋಡಿದ್ದು-ಲಿಲಿತಾ ದೇವಿ ಮಂದಿರ; ಅಲ್ಲಿ ನಾಗಪ್ಪನ ಬೆಳ್ಳಿ ಪ್ರತಿಮೆಯೂ ಇದೆ, ಅಕ್ಕ ಪಕ್ಕದಲ್ಲಿ ನಾನಾ ದೇವಿಯರ ಮುದ್ದುಮುದ್ದಾದ ಶಿಲ್ಪಗಳಿವೆ, ಚಿಕ್ಕ ಚಿಕ್ಕ ದೇವಸ್ಥಾನಗಳು, ಹೆಚ್ಚು ಹೊತ್ತು ನಿಂತರೆ ಪೂಜಾರಿಗಳು ಯಾವುದಾದರೂ ಮಂತ್ರ ಪಠಿಸಿ, ಪೂಜೆ ಎಂದು ದುಡ್ಡು ಕೇಳುತ್ತಾರೆ. ತಟ್ಟೆಗೆ ಅಥವ ಹುಂಡಿಗೆ ದುಡ್ಡು ಹಾಕಿ ಹೊರಕ್ಕೆ ಬರುತ್ತಿರಬೇಕು.

ಅಲ್ಲಿಂದ ಮುಂದೆ ನಾವು ಚಕ್ರ ತೀರ್ಥ ಅಥವಾ ಚಕ್ರ ಕುಂಡ್ ಎಂದು ಕರೆಯುವ ನೀರಿನ ವೃತ್ತಾಕಾರದ ಕುಂಡದ ಬಳಿ ಬಂದೆವು. ಬಹಳ ಸುಂದರವಾಗಿದೆ, ಮಧ್ಯೆ ಗುಂಡನೆಯ ಕಟ್ಟೆಯೊಳಗೆ ನೀರು ವಿಶಾಲವಾಗಿ ಹರಡಿ ಉಕ್ಕುತ್ತಿದೆ, ಅಲ್ಲಿ ಇಳಿದು ಸ್ನಾನವೂ ಮಾಡಬಹುದು ಆದ್ರೆ ಅಷ್ಟು ಸ್ವಚ್ಚವಾಗಿ , ಸುತ್ತಲೂ ಸೌಕರ್ಯಗಳಿಲ್ಲ, ಆದ್ದರಿಂದ ನಾವು ಕೇವಲ ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಸೂರ್ಯನಿಗೆ ಅರ್ಘ್ಯ ಬಿಟ್ಟೆವು. ಸುತ್ತಲೂ ಎಲ್ಲ ಬಗೆಯ ಪುಟ್ಟ ಪುಟ್ಟ ದೇವಸ್ಥಾನಗಳಿವೆ- ಮುಖ್ಯವಾಗಿ ರಾಮ ಲಕ್ಷ್ಮಣ, ಜಾನಕಿ, ಆಂಜನೇಯ, ದೇವಿ, ನಾರಾಯಣ, ಕೃಷ್ಣ ಹೀಗೆ...ಅಲ್ಲೊಂದು ಕಡೆ ಶ್ರೀಮತಿ ಹೇಳಿದಳೆಂದು ಕಾಲಭೈರವನ ಪೂಜೆ ಮಾಡಿ ರೂ. 500/- ಪೂಜಾರಿಯ ಕೈಗಿಟ್ಟೆವು. ಹೀಗೆ ನಿಮಗೆ ಮಾಡಿಸಬೇಕಾದರೆ ಮಾಡಿಸಬಹುದು, ಕೊಡಬಹುದು, ಆದರೆ ಯಾರ ಬಲವಂತಕ್ಕೂ ಸಿಕ್ಕಿಹಾಕಿಕೊಂಡು ಬೇಡ ಎಂದು ನನ್ನ ಮಾತು.

ಮುಂದೆ ನಾವು ವ್ಯಾಸ ಗದ್ದಿ ಎಂದು ಹೆಸರಾಗಿರುವ ಅವರ ನಿವಾಸಕ್ಕೆ ಹೊರಟೆವು. ಅಲ್ಲಿ ದೊಡ್ಡ ಅರಳೀ ವೃಕ್ಷವಿದೆ. ಒಳಗೆ ವೇದ ವ್ಯಾಸರ ಮತ್ತು ಗಣಪತಿಯ ಮೂರ್ತಿಗಳಿಗೆ ಬಣ್ಣ ಬಣ್ಣದ ಲೈಟ್ಸ್ ಹಾಕಿದ್ದಾರೆ. ಸುಂದರವಾಗಿದೆ. ಅಲ್ಲಿಯೂ ಸರಳವಾಗಿ ಕೈಮುಗಿದು ನಮಸ್ಕರಿಸಿ ಹೊರಬಂದೆವು. ಮತ್ತೆ ಆಟೋ ಹತ್ತಿ ಅಲ್ಲಿಂದ ಬಾಲಾಜಿ ಮಂದಿರ್ ಎಂದು ಕರೆಯುವ ನಾರಾಯಣನ ದೇವಸ್ಥಾನಕ್ಕೆ ಬಂದೆವು. ಅದು ಸಹಾ ಬಹಳ ದಿವ್ಯವಾದ ಮಂದಿರ, ಯಾರೋ ಇತೀಚೆಗೆ ಕಟ್ಟಿಸಿರುವ ನೂತನ ಮಂದಿರ. ಅಲ್ಲಿ ಬೃಹತ್ ನಾರಾಯಣನ ಮೂರ್ತಿ, ದುರ್ಗೆಯ ಮೂರ್ತಿ ಇತ್ಯಾದಿಯನ್ನು ಕಂಡು ಸಂತಸಪಟ್ಟು ವಂದಿಸಿ ಬಂದೆವು. ಕೆಲವು ಮೆಟ್ಟಿಲುಗಳನ್ನು ಏರಬೇಕು ಮೂಲ ಮಂದಿರಕ್ಕೆ. ಒಳ್ಳೆ ಮಧ್ಯಾಹ್ನದ ಹೊತ್ತು. ಮಧ್ಯೆ ಎಲ್ಲೋ ಸ್ವಲ್ಪ ಲಘುವಾಗಿ ಕೂಲ್ ಡ್ರಿಂಕ್ಸ್ ಬಿಸ್ಕೆಟ್ಸ್ ಇತ್ಯಾದಿ ಸೇವಿಸಿದೆವು ಎಂದು ನೆನಪು.

ನಮ್ಮ ಬಸ್ಸನ್ನು ಒಂದು ರಸ್ತೆ ಬದಿಯ ಧಾಬಾ ಬಳಿ ನಿಲ್ಲಿಸಿ ಅಲ್ಲಿ ನಮಗೆ ಹೊತ್ತು ತಂದಿದ್ದ ಅಡಿಗೆಯನ್ನು ನಮ್ಮವರೇ ಅಲ್ಲಿ ಬಡಿಸಿದರು. ಬಹಳ ರುಚಿಕರವೂ, ಆಗ ಅವಶ್ಯಕವೂ ಆದ ಭೋಜನ ನಮಗೆ. ಅದೂ ಯು.ಪಿ.ಯ ಒಳನಾಡಾದ ನೈಮಿಷಾರಣ್ಯದಲ್ಲಿ ಹೀಗೆ ನಮಗೆ ದಕ್ಷಿಣ ಭಾರತೀಯ ಸಸ್ಯಾಹಾರಿ ಭೋಜನ!

ಹೀಗೆ ನಿರ್ಮಲಾ ಟ್ರಾವೆಲ್ಸ್ ಇಡೀ ಟ್ರಿಪ್ಪಿನಲ್ಲಿ ನಿಭಾಯಿಸಿದರು ನೋಡಿ. ಎಲ್ಲೆಲ್ಲಿ ಹೋಟೆಲ್ಲಿನಲ್ಲಿ ಇಳಿದುಕೊಡರೆ ಅಲ್ಲೆಲ್ಲ ಡೈನಿಂಗ್ ಹಾಲ್ ಮತ್ತು ಕಿಚನ್ ಭಾಗವನ್ನು ಬಾಡಿಗೆ ಕೊಟ್ಟು ತೆಗೆದುಕೊಂಡು ಆಹಾರ ತಯಾರಿಸಿ ಬಡಿಸುವುದು, ಇಲ್ಲವೇ ಹೀಗೆ ಬಸ್ಸಿನ ಪ್ರಯಾಣವಾದರೆ ಒಂದು ಧಾಬಾ/ ರೆಸ್ಟೋರೆಂಟ್ ನಲ್ಲಿ ಹತ್ತಿಪ್ಪತ್ತು ಮೇಜು ಕುರ್ಚಿ ತೆಗೆಸಿ ಹೊರಗೆ ಹಾಕಿಸಿ ಅಲ್ಲಿ ಬಡಿಸಿ ಕುಡಿಯುವ ನೀರಿಗೆ, ಕೈ ತೊಳೆಯಲು ವ್ಯವಸ್ಥೆ ಎಲ್ಲಾ ಮಾಡುವರು, ಅದೂ ಸ್ವಲ್ಪ ಹೊರಚಾಗಿರುವಂತೆ... ದಾಭಾ ಒಳಗೆ ಯಾರಾದರೂ ನಾನ್ ವೆಜ್ ತಿನ್ನುತ್ತಿದ್ದರೆ ನಮಗೆ ಅದರೊಟ್ಟಿಗೆ ಇರಬಾರದು ಎಂದು. ತೀರ್ಥಯಾತ್ರೆ ಎಂದರೆ ಸಸ್ಯಾಹಾರೀ ಟ್ರಿಪ್!

ಅದಲ್ಲದೇ ಸ್ವಲ್ಪ ಸ್ವಚ್ಚವಾದ ಶೌಚಾಲಯ -ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ- ಅಲ್ಲಿರಬೇಕು, ಹಾಗಿದ್ದಲ್ಲಿ ಮಾತ್ರ ನಿಲ್ಲಿಸುತ್ತಿದ್ದರು. ಅವರ ಸಮಯಪಾಲನೆ ಮತ್ತು ವ್ಯವಸ್ಥೆಯನ್ನು ನಿಜಕ್ಕೂ ನೋಡಿಯೇ ಹೊಗಳಬೇಕು.

8.30ಕ್ಕೆ ರಾತ್ರಿ ಊಟಕ್ಕೆ ಹೋಗುವುದು ಎಂದಾಯಿತು. ಮುಂದಿನ ದಿನ ಬೆಳಿಗ್ಗೆಯೆ ಹೊರಡಬೇಕಿದ್ದರಿಂದ ರೂಮಲ್ಲಿ ಒಣ ಹಾಕಿದ್ದ ಬಟ್ಟೆ ಬರೆ ಎಲ್ಲ ತೆಗೆದಿಟ್ಟುಕೊಳ್ಳುವುದು ಇತ್ಯಾದಿ ಇರುತ್ತದೆ. ಕೆಲವರು ಹಾಗೂ ಹೊರಗಡೆ ಅಡ್ಡಾಡಿ ಬಂದು ಅಲ್ಲಿನ ಲೋಕಲ್ ಚಾಟ್ ತಿಂದು ಇಲ್ಲವೇ ಅಲ್ಲೊಂದು ಹನುಮಾನ್ ಗುಡಿ ನೋಡಿಯೂ ಬಂದರು, ಇವೆಲ್ಲಾ ನಂನಮ್ಮ ಅನುಕೂಲವಿದ್ದಂತೆ. ಕೈಲಾದವರು ಹೋಗಬಹುದು. ಅಲ್ಲೆಲ್ಲಾ ಹೊರಗೆ ಅಂಗಡಿಯಲ್ಲಿ ಲಸ್ಸಿ, ರಬ್ಡಿ (ಕೆನೆಯಲ್ಲಿ ಮಾಡಿದ ಸಿಹಿ), ಹಾಲು, ಜಿಲೇಬಿ ದಂಡಿಯಾಗಿ ಸಿಗುತ್ತದೆ

ನಮ್ಮ ರಾತ್ರಿ ಊಟಕ್ಕೆ ಚಪಾತಿ, ಸಬ್ಜಿ. ಅವತ್ತು ವೆಜ್ ಪುಲಾವ್ ಇತ್ತು ಅನಿಸುತ್ತದೆ, ಸಾರು ಮೊಸರು ಎಲ್ಲಾ ಮಾಮೂಲಿನಂತೆ.

ಮುಂದಿನ ದಿನ ನಮಗೆ ಮತ್ತೆ ಬೆಳಿಗ್ಗೆ ಡ್ರಿಲ್ ಶುರುವಾಯಿತು, 5.00ಕ್ಕೆ ಬೆಲ್ ರಿಂಗ್ ಆದ ಕೂಡಲೇ ಬಾಗಿಲು ತೆರೆದು ಎದ್ದು ಬೆಡ್ ಕಾಫಿ (ಅಥವಾ ಬಾಯಿಮುಕ್ಕಳಿಸಿ) ಕುಡಿದು 6 ಗಂಟೆಗೆ ರೆಡಿಯಾಗಿ ಸಾಮಾನೆಲ್ಲವನ್ನು ಬಾಗಿಲ ಹೊರಗಿಟ್ಟು ಬೀಗ ಹಾಕಿಕೊಂಡು ಡೈನಿಂಗಿಗೆ ಬಂದರೆ ತಿಂಡಿ ಕಾಫಿ ರೆಡಿ. ಅಷ್ಟು ಬೇಗ ತಿಂಡಿ ತಿನ್ನಲು ಕಷ್ಟವೇ ಆಯಿತು ಅನ್ನಿ, ಆದರೆ ವಿಧಿಯಿಲ್ಲ. ಅಂದು ಸೆಟ್ ದೋಸೆ ಚಟ್ನಿ ಸಾಂಬಾರ್ ಮಾಡಿದ್ದರು. ಇದರ ನಂತರ 6.30ಕ್ಕೆಲ್ಲಾ ಬಸ್ ಬಳಿ ಕಾಯಬೇಕು. ಅಲ್ಲಿ ನಮ್ಮ ಲಗೇಜು ಒಳಗೆ ಬಸ್ಸಿನಲ್ಲಿ ಹಾಕುವಾಗ ಇದ್ದು ಅಲ್ಲಿಂದ ನಮ್ಮ ಹ್ಯಾಡ್ ಬ್ಯಾಗ್/ ಬ್ಯಾಕ್ ಪ್ಯಾಕ್ ಮಾತ್ರ ಬಸ್ ಸೀಟಿನ ಮೇಲೆ ಇಟ್ಟುಕೊಳ್ಳಬೇಕು. ಅದರಲ್ಲಿ ನಿಮಗೆ ಅಂದು ಬೇಕಿದ್ದ ಅವಶ್ಯಕ ಔಷಧಿ, ಟವೆಲ್, ನೀರು, ಬಾತ್ ಸೋಪು. ಶ್ಲೋಕದ ಪುಸ್ತಕ ಮುಂತಾದ್ದು ಇಟ್ಟುಕೊಂಡಿರಬೇಕು.ಲಲಿತಾ ಮಂದಿರ


ವೈಷ್ಣೋದೇವಿ ಮಾ

ನಾಗ ವಿಗ್ರಹ

ಚಕ್ರ ತೀರ್ಥ/ ಚಕ್ರ ಕುಂಡ

ಚಕ್ರತೀರ್ಥದ ಮುಂದೆ ನಾನು

ರಾಧಾ ಕೃಷ್ಣ

ದುರ್ಗಾ ಶಿಲೆ

ನಾರಾಯಣ/ ಬಾಲಾಜಿ ಮೂರ್ತಿ


ವಾಲ್ಮಿಕಿ ಆಶ್ರಮ

ಗೋಮತಿ ನದಿ


ನಾವು ‘ಜೈ ಶ್ರೀರಾಮ್’ ಮತ್ತು ‘ಬೋಲೊ ಶ್ರೀ ಮಹಾಗಣಪತಿ ಕೀ ಜೈ’ , ‘ಶ್ರೀರಾಮಚಂದ್ರ ಕೀ ಜೈ’ ಎಂದು ಘೋಷಿಸಿ ಅಯೋಧ್ಯೆಯತ್ತ ಹೊರಟೆವು...


ಮುಂದುವರೆಯುವುದು -- ಸಂಚಿಕೆ 3111 views0 comments

Comments


bottom of page