top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -1

Updated: Nov 5, 2022

(ನೈಮಿಷಾರಣ್ಯ-ಅಯೋಧ್ಯೆ- ಚಿತ್ರಕೂಟ- ತ್ರಿವೇಣಿ ಸಂಗಮ- ಕಾಶಿ- ಗಯಾ ಪ್ರವಾಸ)


ಸಂಚಿಕೆ -1


ಪರಿವಿಡಿ:


1) ನಿರ್ಮಲಾ ಟ್ರಾವೆಲ್ಸ್ ವ್ಯವಸ್ಥೆ ಮತ್ತು ವೆಬ್ ಸೈಟ್ ಲಿಂಕ್

2) ಲಕ್ನೋ ಗೆ ರೈಲಿನಲ್ಲಿ

ಮ್ಯಾನೇಜರ್ ಮೋಹನ್ ಪ್ರಭು ವಿವರಿಸಿದ ಉತ್ತರ ಭಾರತ ದಕ್ಷಿಣ ಭಾರತದ ವ್ಯತ್ಯಾಸಗಳು

3) ಲಕ್ನೋ- ಬಡಾ ಇಮಾಂಬರಾ, ಡಾ ಅಂಬೇಡ್ಕರ್ ಸ್ಮಾರಕ- ಅಲ್ಲಿಂದ ನೈಮಿಷಾರಣ್ಯಕ್ಕೆ ಪಯಣ

4) ನೈಮಿಷಾರಣ್ಯ ಹೇಗಿದೆ?- ಸ್ಥಳ ಪುರಾಣ, ಅಲ್ಲಿನ ವ್ಯವಸ್ಥೆ, ನಾವು ನೋಡಿದ ಸ್ಥಳಗಳು

5) ಮತ್ತೆ ಲಕ್ನೊಗೆ- ಅಲ್ಲಿಂದ ಅಯೋಧ್ಯೆಯತ್ತ ಬಸ್ ಪ್ರಯಾಣ

6) ಸರಯೂ ನದಿ ಸ್ನಾನ, ಗೋವಿಗೆ ತಿನ್ನಿಸುವುದು, ವಾಲ್ಮೀಕಿ ಮಂದಿರ, ರಾಮ ಜನ್ಮ ಭೂಮಿ ದೇವಸ್ಥಾನ, ಅದರ ಕಟ್ಟಡ ನಿರ್ಮಾಣ ಶಾಲೆ ಭೇಟಿ- ಹನುಮಾನ್ ಗದ್ದಿ ದೇವಸ್ಥಾನ- ಲತಾ ಮಂಗೇಶ್ಕರ್ ಚೌಕ, ಫೈಜ಼ಾಬಾದ್ ಹೋಟೆಲಿಂದ ಚಿತ್ರಕೂಟದತ್ತ ಪ್ರಯಾಣ. ಗೋಮತಿ ನದಿ ಸೇತುವೆ- ಕುಶಾಪುರ-ಸುಲ್ತಾನ್ ಪುರ್

7) ಚಿತ್ರಕೂಟ - ಮ ಪ್ರ -ಉಪ್ರ ಬಾರ್ಡರ್, ನಮ್ಮ ರೆಸಾರ್ಟ್, ಚಿತ್ರಕೂಟ ಮಂದಾಕಿನಿ ನದಿ ಆರತಿ, ಕಾಮದ್ಗಿರಿ ತಪ್ಪಲಿನ ದೇವಾಲಯ, ಅತ್ರಿ-ಅನಸೂಯಾ ಆಶ್ರಮ, ಗುಪ್ತ ಗೋದಾವರಿ ಗುಹೆ ನೀರಿನಲ್ಲಿ ನಡೆದಿದ್ದು, , ರಾಮ ದರ್ಶನ್ ಮ್ಯೂಸಿಯಂ

8) ಚಿತ್ರಕೂಟದಿಂದ ಪ್ರಯಾಗ ರಾಜ್ ತ್ರಿವೇಣಿ ಸಂಗಮದತ್ತ

9) ಪ್ರಯಾಗ ರಾಜಿನ ಕಾಶಿಮಠದಲ್ಲಿ ಪತ್ನಿಯಿಂದ ವೇಣಿ ದಾನ, ಅಲ್ಲಿ ಶ್ರಾಧ್ಧ, ಪಿಂಡ ದಾನ (೨೨), ತ್ರಿವೇಣಿ ಸಂಗಮಕ್ಕೆ ದೋಣಿಯಲ್ಲಿ ಹೋಗಿ ಸ್ನಾನ

10) ಅಲ್ಲಿಂದ ಸೀತಾಮಢಿ ಕ್ಷೇತ್ರಕ್ಕೆ ದರ್ಶನ. ಸೀತಾ ಭೂಮಿಯಲ್ಲಿ ಐಕ್ಯಳಾದ ಸ್ಥಳದ ದೇವಸ್ಥಾನ

11) ಅಲ್ಲಿಂದ ಕಾಶಿಗೆ ಪ್ರಯಾಣ- ಇಂದು ವಾರಣಾಸಿಯಲ್ಲಿ...

12) ಆಟೋ ಮಾಡಿಕೊಂಡು 3 ಗಂಟೆ ಕಾಲ ಸುತ್ತಿದ್ದು...

13) ೧. ಸಂಕಟ ಮೋಚನ‌ಹನುಮಾನ್ ದೇವಾಲಯ

14) ೨. ತ್ರಿದೇವ್ ಮಂದಿರ

15) ೩. ತುಲಸಿ ಮಾನಸ ಮಂದಿರ

16) ೪. ದುರ್ಗಾ ಮಂದಿರ

17) ೫. ಕವಡೀ ದೇವಿ ಮಂದಿರ-

18) ಬೆಳಿಗ್ಗೆ ಕಾಲಭೈರವ ದರ್ಶನ, ಬಿಂದು ಮಾಧವ ದರ್ಶನ, ಗೋಕರ್ಣ ಮಠ- ಪಂಚಗಂಗಾ ಸ್ನಾನ ಬೆಳಿಗ್ಗೆ ಆರತಿ- ಶ್ರಾಧ್ಧ ಕಾರ್ಯಕ್ರಮ.

19) ಕಾಶಿ ವಿಶ್ವನಾಥ ದೇವಸ್ಥಾನ- ಹೇಗೆ ಹೊಸ ದೇವಸ್ಥಾನದ ಅಂಗಳ ಕಟ್ಟಲಾಯಿತು- ಏನೇನು ಮಾಡಿದರು ಮೋದೀಜಿ!- ಹೊಸ ಕಾರಿಡಾರ್- ಅನ್ನಪೂರ್ಣ ದೇವಸ್ಥಾನ, ವಿಶಾಲಾಕ್ಷಿ ದೇವಸ್ಥಾನ ದರ್ಶನ

20) ಕಾಶಿಯಿಂದ ಗಯಾಗೆ ಪ್ರಯಾಣ

21) ಅಲ್ಲಿ ಬೀಮಾರೂ ರಾಜ್ಯ

22) ಗಯಾದಲ್ಲಿ ಕರ್ನಾಟಕ ಭವನ ದಲ್ಲಿ ಶ್ರಾಧ ಪಿಂಡ ದಾನ-ಅಲ್ಲಿನ ಸ್ಥಳ ಪುರಾಣ- ರಾಮಾಯಣದ ಕಥೆಯಲ್ಲಿ ಸೀತೆ ಶಾಪ- ಪರಿಹಾರ- ಅಲ್ಲಿಂದ ಪಿಂಡ ದಾನ ಮಾಡಲು ಫಲ್ಗುಣಿ ನದಿ ತೀರ- ವಿಷ್ಣುಪಾದ ದೇವಸ್ಥಾನ ಮತ್ತು ಅರಳಿ ಮರದಲ್ಲಿ

23) ಅಲ್ಲಿಂದ ನಲಂದ ವಿಶ್ವವಿದ್ಯಾಲಯ ಅವಶೇಷಗಳು- ಲೇಖನ-

24) ಅಲ್ಲಿಂದ ಪಟ್ನಾ ವಿಮಾನ ನಿಲ್ದಾಣಕ್ಕೆ ಮತ್ತು ಬೆಂಗಳೂರಿಗೆ ವಾಪಸಾದದ್ದು!ಪೀಠಿಕೆ ಮತ್ತು ಪೂರ್ವ ತಯಾರಿ ವಿವರಗಳು


ನನ್ನ ಕಸಿನ್ ಮತ್ತು ಶಡ್ಗನವರಾದ ಸುರೇಶ್ ಮೈಸೂರಿನಿಂದ ನಿರ್ಮಲಾ ಟ್ರಾವೆಲ್ಸ್ ಏರ್ಪಡಿಸಿರುವ ಈ ಪ್ಯಾಕೇಜ್ ಟೂರ್ ಬಗ್ಗೆ ತಿಳಿಸಿದಾಗ ಆಸಕ್ತಿ ಕೆರಳಿದ್ದು ನಿಜ. ನಂತರ ಅದರ ಕಾರ್ಯಕ್ರಮದ ವಿವರಗಳನ್ನು ಪರಿಶೀಲಿಸಿದಾಗ ಅಲ್ಲಿ ಅಯೋಧ್ಯೆಯ ಹೆಸರೂ ಇದ್ದುದು ನೋಡಿ ಹೋಗಿ ಅಲ್ಲಿ ಆರಂಭಿಸಿರುವ ನೂತನ ಶ್ರೀರಾಮ ಜನ್ಮಭೂಮಿ ಮಂದಿರ ನೋಡಿ ಬರಲೇಬೇಕೆಂಬ ಕಾತರ ಉಂಟಾಯಿತು. ಇದಕ್ಕೆ ತಕ್ಕಂತೆ ಪತ್ನಿ ಶ್ಯಾಮಲಾ ಸಹ ಸಕಾರಾತ್ಮಕವಾಗಿ ಸ್ಪಂದಿಸಿದಾಗ ನಾವು ನೋಡಿಲ್ಲದ ಈ ಮುಖ್ಯ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಯೇ ಬರೋಣವೆಂದು ತೀರ್ಮಾನಿಸಿದೆವು. ನಿರ್ಮಲಾ ಟ್ರಾವೆಲ್ಸ್ ನವರು ಸುಮಾರು ೫೦ ವರ್ಷಗಳಿಂದ ಇಂತಹಾ ಪ್ರವಾಸ ಮತ್ತು ಯಾತ್ರೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆಂದು ತಿಳಿದು ನಾವು ಸರಿಯಾದ ಹೆಜ್ಜೆಯಿಟ್ಟಿದ್ದೇವೆ ಎಂದು ಖಚಿತ ಪಡಿಸಿಕೊಂಡು ಅದಕ್ಕೆ ತಕ್ಕ ಚಾರ್ಜನ್ನು ಕೊಟ್ಟೆವು.

ಅವರ ನಾನಾ ಪ್ರವಾಸಿ ಸ್ಥಳಗಳ ಪ್ಯಾಕೇಜ್ ಟೂರ್ ವಿವರಗಳಿಗೆ ಅವರ ಕೆಳಕಂಡ ವೆಬ್ ಸೈಟ್ ಸಂಪರ್ಕಿಸಿ. (ಸ್ಥಳ ಮತ್ತು ಚಾರ್ಜುಗಳು ಬದಲಾಗುತ್ತಾ ಇರುತ್ತವೆಯಾದ್ದರಿಂದ ನೀವೇ ವಿಚಾರಿಸಿ ನೋಡಿ). ಇವರು ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಿಂದಲೂ ಆರಂಭಿಸುತ್ತಾರೆ.

ಪ್ರವಾಸ:

ಮೊಬೈಲ್ ಸಂಪರ್ಕ:


ನಾವು ಹೋಗಿದ್ದ ಪ್ರವಾಸದ ವಿವರಗಳು:


ಬೆಂಗಳೂರು-ಲಕ್ನೋ-ನೈಮಿಷಾರಾಣ್ಯ- ಅಯೋಧ್ಯೆ-ಚಿತ್ರಕೂಟ್-ಪ್ರಯಾಗ್ ರಾಜ್-ಕಾಶಿ- ಗಯಾ- ನಲಂದ ( ರಾಜ್ ಗಿರ್)-ಪಟನಾ- ಬೆಂಗಳೂರು

ದಿನಾಂಕ: ಅಕ್ಟೋಬರ್ ೧೨ -೨೨, ೨೦೨೨


ಮಾರ್ಗ:

ಹೋಗುವಾಗ ಬೆಂಗಳೂರು-ಲಕ್ನೋ ರೈಲು ಪ್ರಯಾಣ ಬುಕ್ ಆಗಿರುತ್ತದೆ. ಬರುವಾಗ ಪಟ್ನಾ -ಬೆಂಗಳೂರು ರೈಲು ಅಥವಾ ವಿಮಾನ ಟಿಕೆಟ್ ಬುಕ್ ಮಾಡಿರುತ್ತಾರೆ

ಮಿಕ್ಕ ಎಲ್ಲ ಊರುಗಳು ಅವರ ಒಂದೇ ಏ/ಸಿ ಬಸ್ಸಿನಲ್ಲಿ ಪೂರ್ತಿ ಪ್ರಯಾಣ ಮಾಡುತ್ತೇವೆ


1) ಆಹಾರ ವ್ಯವಸ್ಥೆ:


ಅವರದೇ ಆದ ಅಡಿಗೆಯವರ ತಂಡ ಇರುತ್ತದೆ, ನಮ್ಮ ಜತೆಯಲ್ಲೇ ಬಂದು ಆಯಾ ಹೋಟೆಲಿನ ಸ್ಪೆಶಲ್ ಜಾಗದಲ್ಲಿ ತಾವು ತಯಾರಿಸಿದ ಉಡುಪಿ ಶೈಲಿಯ ಕಾಫಿ, ಟೀ, ತಿಂಡಿಗಳು, ಊಟ ಎಲ್ಲಾ ಅಡಿಗೆ ಮಾಡಿ ಸರಿಯಾದ ಸಮಯಕ್ಕೆ ಬಡಿಸುತ್ತಿರುತ್ತಾರೆ, ಅತ್ಯಂತ ಸಮಯಸ್ಪೂರ್ತಿಯಿಂದ ಕಷ್ಟ ಪಟ್ಟು ಎಂತೆಂತಾ ಊರುಗಳಲ್ಲಿ ನಮಗೆ ಯಾವುದೇ ಹೊಟೆಲ್ ವ್ಯವಸ್ಥೆಯಲ್ಲಿಯೂ ಇವರು ಅಡಿಗೆ ಮಾಡಿ ಡೈನಿಂಗ್ ಹಾಲ್ ಬಿಡಿಸಿಕೊಂಡು ಬಡಿಸಿ ಸರಿಯಾದ ಸಮಯಕ್ಕೆ ನಮ್ಮನ್ನು ಭೇಟಿಗೆ ಕಳಿಸುತ್ತಾ ಇರುತ್ತಾರೆ, ಎಲ್ಲಿಯೂ ಒಂದು ನಿಮಿಷ ತಡ ಮಾಡದೇ ಯಂತ್ರದಂತೆ ದುಡಿದರು, ಪಾಪಾ. ಅವರು ಮಾಡಿರುತ್ತಿದ್ದ ರುಚಿಕರ ಐಟಂಸ್ ತಿನ್ನಲು ನಮಗೆ ಹೊಟ್ಟೆ ಸಾಕಾಗುತ್ತಿರಲಿಲ್ಲ, ಕೆಲವೊಮ್ಮೆ ಸುತ್ತಿ ಸುತ್ತಿ ಸುಸ್ತಾಗಿರುತ್ತಿದ್ದೆವು . ದಿನಾಲೂ ಬೆಳಿಗ್ಗೆ ೩ ಜಾವಕ್ಕೆ ಎದ್ದು ರೆಡಿಯಾಗಿ ಸರಿಯಾಗಿ ರೂಮ್ ಬಾಗಿಲಿಗೆ ಮುಂಜಾನೆ ೫.೦೦ಕ್ಕೆಲ್ಲ ವೇಕ್ ಅಪ್ ಕಾಲ್ ಮಾಡಿ ಕಾಫಿ, ಟಿ ಕೊಡುತ್ತಾರೆ. ನಾವು ಎದ್ದುಬಿಡಬೇಕು. ನಂತರ ಆರಕ್ಕೆಲ್ಲಾ ತಿಂಡಿ ತಿನ್ನಬೇಕು ಬನ್ನಿ ಎನ್ನುತ್ತಾರೆ, ಸ್ನಾನ ಮಾಡಿ ರೆಡಿಯಾಗಿ ಡೈನಿಂಗ್ ಹಾಲಿಗೆ ಹೋಗಿ, ಇಡ್ಲಿ/ ವಡೆ, ದೋಸೆ, ಅವಲಕ್ಕಿ, ಶ್ಯಾವಿಗೆ ಬಾಥ್ ಯಾವುದೋ ಅಂದಿಗೆ, ಮತ್ತೆ ಕಾಫಿ ಟೀ/ ಶುಗರ್ ಲೆಸ್, ಹಾಲು/ ಬಿಸಿ ನೀರು ಹೀಗೆ ಬಿಸಿಬಿಸಿಯಾಗಿ ತಿಂದು ಅಲ್ಲಿಂದ ಅವತ್ತಿನ ದಿನಚರಿಯಂತೆ ದೇವಸ್ಥಾನವೋ ಮಠವೋ ನಾವು ಸರಸರನೆ ಅತ್ತ ಹೊರಡುತ್ತಿರಬೇಕು. ಬೆಳಿಗ್ಗೆ ೬;೩೦ರ ನಂತರ ಕಾದು ತಿಂಡಿ ತಿಂದಿದ್ದೇ ಇಲ್ಲ, ಅಥವಾ ಹೋಟೆಲಿನಲ್ಲಿ ಇದ್ದಿದ್ದೂ ಇಲ್ಲ!


2) ಪ್ರಯಾಣಕ್ಕೆ ಬೇಕಾಗುವ ಬಟ್ಟೆ ಬರೆ, ಇತರೆ ಉಪಯುಕ್ತ ಸಾಮಾನು, ಸಾಧನಗಳು:


ಇದು ಅಕ್ಟೋಬರ್ ತಿಂಗಳಾದ್ದರಿಂದ ಉತ್ತರ ಭಾರತದಲ್ಲಿ ಆಗ ತಾನೇ ಪೂರ್ಣ ಬೇಸಿಗೆ- ಮಳೆಗಾಲ ಮುಗಿದು ಚಳಿಗಾಲ ಶುರುವಾಗುವ ಸ್ವಲ್ಪ ಮುಂಚಿನ ಸಮಯ. ಹಾಗಾಗಿ ಮಳೆ ನಿಂತಿತ್ತು, ತಾಪಮಾನ ಹಗಲು ೩೦-೩೧ ಡಿಗ್ರಿ ಇದ್ದರೆ, ಕನಿಷ್ಟ ೨೧ ಡಿಗ್ರಿ ಇದೆಯೆಂದರಿತು, ಸ್ವಲ್ಪ ಮಾತ್ರ ಉಣ್ಣೆ ಬಟ್ಟೆಗಳ ಸ್ವೆಟರ್, ಮಫ್ಲರ್/ ವುಲನ್ ಟೋಪಿ ಇತ್ಯಾದಿ ಇಟ್ಟುಕೊಂಡೆವು. ಆದರೆ ನಿಜಕ್ಕೂ ಎಲ್ಲಾ ಕಡೆಯೂ ಅಷ್ಟೇನೂ ಬೇಕಾಗಲಿಲ್ಲ. ಸಾಮಾನ್ಯವಾಗಿ-ಕೂಲ್ ಮತ್ತು ನೈಸ್ ಎನ್ನುವಂತಾ ಸಂಜೆಗಳು, ಮಧ್ಯಮ ಬಿಸಿಲಿನ ಹಗಲು.


ಜೊತೆಗೆ ಒಬ್ಬರಿಗೆ ಒಂದು ಬೆಡ್ ಶೀಟ್, ಕವರ್ (ಹೋಟೆಲಿನಲ್ಲಿ ಸರಿಹೋಗದಿದ್ದಲ್ಲಿ), ಒಂದೆರಡು ಸ್ನಾನದ ಟವೆಲ್/ ಮುಂಡು ಎನ್ನುತ್ತಾರಲ್ಲ ಅಂತಹದೂ ಸಹಾ ಇಟ್ಟುಕೊಳ್ಳುವುದು ಸರಿ ಯಾಕೆಂದರೆ ಮೂರು ಸ್ಥಳಗಳಲ್ಲಿ ನದಿ ಸ್ನಾನವುಂಟು, ಅಲ್ಲದೇ ಕತ್ತರಿ, ಟಾರ್ಚ್/ (ಮೊಬೈಲ್ ಟಾರ್ಚ್ ಓಕೆ) ಮುಂತಾದವನ್ನು ಇಟ್ಟುಕೊಳ್ಳಿ. ಆದರೆ ವಿಮಾನ ಉಪಯೋಗಿಸುವಾಗ ಕತ್ತರಿ, ಚಾಕು ಒಳಗೆ ಬಿಡುವುದಿಲ್ಲ. ಗಮನಿಸಿ. ರೈಲಿನಲ್ಲಿ ತೊಂದರೆಯಿಲ್ಲ. ವಿಮಾನದಲ್ಲಿ ಹತ್ತುವ ಮೊದಲು ನಮ್ಮ ಕೊಡೆ/ ಛತ್ರಿ ಸಹಾ ಬಿಚ್ಚಿ ತೋರಿಸಿದ ಮೇಲೆ ಚೆಕ್ ಮಾಡಿ ಕಳಿಸಿದರು


ಮುಖ್ಯವಾಗಿ ಬಟ್ಟೆಬರೆ- ಇದು ಯಾವ ಸಮಯದ ಪ್ರವಾಸ ಎಂಬುದರ ಮೇಲೆ ಅವಲಂಬಿತ. ನಾವು ಹೋದ ಮಳೆಗಾಲ ಮುಗಿದ , ಚಳಿಗಾಲ ಕಾಲಿಡುತ್ತಿರುವ ಸಮಯ- ಅದು ಉತ್ತರ ಭಾರತದಲ್ಲಿ. ಹಾಗಾಗಿ ನಿಮ್ಮ ಸಾಧಾರಣ ಬಟ್ಟೆ ಬರೆ ಅಷ್ಟು ದಿನಕ್ಕೆ ಆಗುವಂತದ್ದು ಇರಬೇಕು, ಪುರುಷರಿಗೆ ಪಂಚೆ ಉಡುವ ಅಭ್ಯಾಸವಿದ್ದರೆ ಒಳ್ಳೆಯದು. ನಾಲ್ಕೈದು ಉತ್ತಮ ಕಾಟನ್ ಪಂಚೆ ಮತ್ತು ಉತ್ತರೀಯ ಇವೆಲ್ಲಾ ಪಿತೃಕಾರ್ಯ( ತಿಥಿ) ಮಾಡಿಸುವುದಿದ್ದರೆ ೨-೩ ಕಡೆ ಬೇಕೇ ಬೇಕು. ಅದಲ್ಲದೇ ಜೀನ್ಸ್, ಕಾಟನ್ ಶರ್ಟ್, ಟಿ ಶರ್ಟ್ ಇವೆಲ್ಲಾ ಬೇರೆ ಸಮಯಕ್ಕೆ ಬೇಕು. ಒಂದು ಅಥವಾ ಎರಡು ಜೋಡಿ ಪಾದರಕ್ಷೆ ಬೇಕು. ಅದರಲ್ಲೊಂದು ನೀರಲ್ಲಿ ನೆನೆಯಬಲ್ಲ ಹವಾಯಿ ಚಪ್ಪಲಿ, ಮಿಕ್ಕಿದ್ದು ನಿಮ್ಮ ಲೆದರ್ ಚಪ್ಪಲಿ ತರಹದು.


ನಿಮ್ಮ ಲಾಡ್ಜ್, ಹೋಟೆಲುಗಳಲ್ಲಿ ಟವೆಲ್ ಮತ್ತು ಸಾಬೂನು, ಶಾಂಪೂ ಕೊಡುತ್ತಾರೆ, ಅದು ಬಳಸುವುದು ಇಷ್ಟವಿಲ್ಲದಿದ್ದರೆ ನಿಮ್ಮದೇ ತೆಗೆದುಕೊಂಡು ಹೋಗಿ. ಆದರೆ ಒಂದೊಂದೇ ತೆಗೆದುಕೊಂಡು ಹೋದಂತೆ ಭಾರ ಮತ್ತು ಲಗೇಜ್ ಸಂಖ್ಯೆ ಹೆಚ್ಚಾದೀತು, ಅದರ ಬಗ್ಗೆ ಗಮನವಿರಲಿ


ಟ್ರಾವೆಲ್ಸ್ ನವರು ಒಂದು ಸೂಟ್ ಕೇಸ್ ಮತ್ತು ಒಂದು ಏರ್ ಬ್ಯಾಗ್ ಇದ್ದರೆ ಸಾಕು ಎಂಬ ಸೂಚನಾಪತ್ರ ಕೊಟ್ಟಿರುತ್ತಾರೆ, ನೀವು ಇನ್ನೊಂದು ಬ್ಯಾಕ್ ಪ್ಯಾಕ್ ಇಟ್ಟುಕೊಳ್ಳಿ ಬೇಕಾದರೆ,

ಹಲವು ಕಡೆ ನಮ್ಮ ದೊಡ್ಡ ಲಗೇಜನ್ನು ಹೋಟೆಲಿನ ಹುಡುಗರು ಬಸ್ಸಿಂದ ಇಳಿಸಿ ರೂಮಿಗೆ ಸಾಗಿಸಿ ಕೊಡುತ್ತಾರೆ. ಅಲ್ಲಿಯೂ ಬಸ್ಸಿನ ಒಳಗಿಂದ ಸೀಟಿನ ಮೇಲಿಟ್ಟಿದ್ದ ನಮ್ಮ ಹ್ಯಾಂಡ್ ಬ್ಯಾಗ್, ಬ್ಯಾಕ್ ಪ್ಯಾಕ್ ನಾವೇ ಎತ್ತಿಳಿಸಬೇಕು, ಹೆಚ್ಚು ಭಾರ ಮಾಡಿಕೊಂಡರೆ ಏರಿಳಿಸುವುದು ನಮಗೇ ಕಷ್ಟವಾದೀತು. ಇದು ೧೨ -೧೪ ದಿನಗಳು ಅಥವಾ ನಿಮ್ಮ ಟೂರ್ ಅವಧಿಗೆ ಸಾಕಾಗುವಂತಿರಬೇಕು. ಬಟ್ಟೆ ಒಗೆದುಕೊಂಡು ಒಣಗಿಸಬಹುದಾ ಎಂಬ ಪ್ರಶ್ನೆ ಕಾಡಿತು. ಸಾಧ್ಯವಿದೆ, ಯಾವಾಗ ಅಂದರೆ ಆಯಾ ಊರಿನಲ್ಲಿ ಒಂದು ರಾತ್ರಿ ಮತ್ತು ಹಗಲು ಉಳಿದುಕೊಂಡಾಗ ಅಲ್ಲಿ ನಿಮ್ಮ ಬಟ್ಟೆ ಒಗೆದು (ಬಾತ್ ರೂಮಿನಲ್ಲಿ ಕಸಕಿ ಹಾಕು ಅನ್ನುತ್ತಾರಲ್ಲ ಹಾಗೆ) ಅಲ್ಲೇ ರೂಮಿನಲ್ಲಿ ಒಣಗಿಸಿಕೊಂಡು ಹೊರಡುವಾಗ ಒಣಗಿದ್ದರೆ ತೆಗೆದುಕೊಂಡು ಹೋಗಬಹುದು, ಅರ್ಧ ಒಣಗಿದ್ದರೆ ಅದಕ್ಕೊಂದು ಬ್ಯಾಗ್ ಬೇಕು, ಒಗೆಯಲಾಗದ ಮೈಲಿಗೆ ಬಟ್ಟೆಗಳಿಗೂ ಸಹಾ ಬೇಕು... ಇದಕ್ಕೆಲ್ಲ ಬಹಳ ಪ್ಲಾನಿಂಗ್ ಬೇಕಿದೆ, ಯಾಕೆಂದರೆ ಸಾಮಾನುಗಳು ಭಾರವಾಗುತ್ತಲೇ ಹೋಗುತ್ತದೆ, ಇತ್ತ ಪ್ರಸಾದಗಳು, ಫೋಟೊಗಳು, ಹೆಂಗಸರ ಶಾಪಿಂಗ್ ವಸ್ತುಗಳು ಇತ್ಯಾದಿ ಸೇರುತ್ತಿರುತ್ತವೆ, ಲಗೇಜ್ ಎತ್ತುವುದು, ಎಣಿಸಿಕೊಳ್ಳುವುದು ಇಳಿಸಿಕೊಳ್ಳುವುದೇ ಒಂದು ಸಮಸ್ಯೆ ಆದರೆ ಸ್ವಲ್ಪ ದಿನದಲ್ಲೇ ಭುಜ ನೋವು, ಬೆನ್ನು ನೋವು ಬಂದೀತು. ಕಾಲು ನೋವಂತೂ ದೊಡ್ಡ ಯಾತ್ರೆಗಳಲ್ಲಿ ಕಟ್ಟಿಟ್ಟ ಬುತ್ತಿ. ಬರಲಿಲ್ಲವೆಂದರೆ ನೀವು ಸೂಪರ್ ಮ್ಯಾನ್! ಅದೂ ನಾವೆಲ್ಲಾ ೫೦-೬೦ ದಾಟಿದ ಹಿರಿಯ ಪ್ರಜೆಗಳಲ್ಲವೆ?

ಲಗೇಜ್ ಎಷ್ಟಿರಬೇಕು, ಯಾವ್ಯಾವ ಬಟ್ಟೆ ಬೇಕು ಎಂಬುದಕ್ಕೆ ಒಂದೆರಡು ದಿನ ಯೋಚಿಸಿ, ಪಟ್ಟಿ ಮಾಡಿಕೊಂಡರೆ ಬಹಳ ಒಳ್ಳೆಯದು. ನಿಮ್ಮ ಮೊಬೈಲ್ ಪ್ಯಾಡಿನಲ್ಲಿ ಬರೆದಿಟ್ಟುಕೊಳ್ಳಿ. ಯಾವ ಊರಿನಲ್ಲಿ ಏನು ಹಾಕಲಿ ಎಂದು ಸಹಾ ಸೂಕ್ಷ್ಮ ಪ್ಲಾನಿಂಗ್ ಮಾಡಬಹುದು.


ಯಾವ್ಯಾವ ವಸ್ತುಗಳನ್ನು ಯಾವ ಬ್ಯಾಗಿನಲ್ಲಿಟ್ಟಿದ್ದೇವೆಂದು ಇನ್ನೊಂದು ಫೈನಲ್ ಪಟ್ಟಿ ಮಾಡಿ ಅಲ್ಲಲ್ಲಿಯೆ ಮತ್ತೆ ಇಡಬೇಕು. ಹೊರಡುವಾಗ ಸಮಯವಿಲ್ಲದಾಗ ಹುಡುಕಾಡಿ ಆತಂಕ ಪಡುವುದು ತಪ್ಪುತ್ತದೆ.


3) ವೈದ್ಯಕೀಯ / ಔಷಧಿ:


ನಿಮ್ಮ ವೈದ್ಯರು ನಿಮಗೆ ಬರೆದುಕೊಟ್ಟ ಎಲ್ಲಾ ಔಷಧಿ ಫುಲ್ ಸೆಟ್ ಇಟ್ಟುಕೊಳ್ಳಲೇ ಬೇಕು, ಹೋದ ಕಡೆಯೆಲ್ಲಾ ಅದೇ ಸಿಗುತ್ತದೆಯೋ, ನಮಗೆ ಹುಡುಕಲು ಸಮಯ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲದೇ ಎಮರ್ಜೆನ್ಸಿಗಾಗಿ ನಿಮ್ಮ ಬಳಿ ನೆಗಡಿ, ಕೆಮ್ಮು ಟ್ಯಾಬ್ಲೆಟ್ ಸಿರಪ್, ಹೊಟ್ಟೆ ಭಾರ- ಗ್ಯಾಸ್ ಗೆ ಜೆಲುಸಿಲ್/ ಡೈಜೀನ್/ ಹಜ್ಮೋಲಾ-ನಿಮ್ಮಿಷ್ಟದ್ದು ಇಟ್ಟುಕೊಳ್ಳಿ/ ಹೊಟ್ಟೆನೋವು ಭೇಧಿಗಾಗಿ ನಿಮ್ಮ ಔಷದಿ ಖಂಡಿತಾ ಇರಲಿ. ಕೈ ಕಾಲು ನೋವಿಗೆ ಪೈನ್ ಕಿಲ್ಲರ್ ಮಾತ್ರೆ, ಸ್ಪ್ರೇ ಇತ್ಯಾದಿ.

ಒಂದು ಥರ್ಮೋಮೀಟರ್ ಇಟ್ಟುಕೊಂಡರೆ ಒಳ್ಳೆಯದು: ಜ್ವರ ಬಂದಿದ್ದರೆ ಚೆಕ್ ಮಾಡಲು, ಪ್ಯಾರಸಿಟಮಾಲ್ ತೆಗೆದುಕೊಳ್ಳಿ. ಇದರಲ್ಲೂ ಸಹಾ ಬೇಕಿದ್ದನ್ನು ಮಾತ್ರ ನಿಮ್ಮ ಜತೆಯೇ ಇರುವ ಹ್ಯಾಂಡ್ ಬ್ಯಾಗ್ ಅಥವಾ ಬ್ಯಾಕ್ ಪ್ಯಾಕಿನಲ್ಲೇ ಇಟ್ಟುಕೊಳ್ಳಿ. ಬಸ್ಸಿನ ಒಳಗೆ ಲಾಕರಿನಲ್ಲಿ ಇಟ್ಟರೆ ಪ್ರಯಾಣದಲ್ಲಿ ನಿಮಗೆ ಕೈಗೆ ಸಿಗುವುದಿಲ್ಲ!.


4) ಕ್ಯಾಶ್, ಡೆಬಿಟ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ:


ನಿಮ್ಮ ಜತೆ ಪರ್ಸಿನಲ್ಲಿ ಸದಾ ಇವು ಇರಲಿ. ದೇವಸ್ಥಾನ, ಪೂಜೆ, ತಿಥಿ ಮಾಡಿಸಲು ಹೋದಾಗಲೆಲ್ಲಾ ಕ್ಯಾಶ್ ಮುಖ್ಯ. ಕಷ್ಟ ಪಟ್ಟು ೧೦, ೨೦, ೫೦ ಮತು ೧೦೦ ರೂ ನೋಟುಗಳು/ನಾಣ್ಯಗಳು ಚಿಲ್ಲರೆ ಮಾಡಿಸಿ ಇಟ್ಟುಕೊಳ್ಳಿ. ಬಹಳ ಕಡೆ ಇದಕ್ಕಾಗಿ ನಾವು ಪರದಾಡಿದ್ದೂ ಉಂಟು, ೫೦೦ ರೂ ನೋಟ್ ಇಟ್ಟುಕೊಂಡು ಅಲೆಯುತ್ತಾ ಸಮಯವೆಲ್ಲ ಹಾಳು. ಉತ್ತರ ಭಾರತದ ಕಡೆ ಪೂಜಾ ದಕ್ಷಿಣೆ ಹಣ, ಮಂಗಳಾರತಿ, ಹುಂಡಿ ಕಾಸು ಎಲ್ಲಾ ಕ್ಯಾಶ್ ಕೊಡಬೇಕು, ಜಿ-ಪೇ ಎಲ್ಲಾ ಕಡೆ ನಡೆಯುವುದಿಲ್ಲ ಅಲ್ಲಿ. ಹೋಟೆಲಿನಲ್ಲಿ ರೂಮ್ ಕೊಡುವಾಗ ಮತ್ತು ರೈಲು/ ಏರ್ ಪೋರ್ಟಿನಲ್ಲಿ ಆಧಾರ್ ಕಾರ್ಡ್ ಕೇಳುತ್ತಾರೆ. ಕೆಲವು ಕಡೆ ನಾವೇ ಮಾಸ್ಕ್ ಹಾಕಿಕೊಳ್ಳುವುದು ಒಳ್ಳೆಯದು. ಅದನ್ನು ಆಮೇಲೆ ಹೇಳುತ್ತೇನೆ.

ಮೊಬೈಲ್ ಫೋನ್ ಖಂಡಿತಾ ಬೇಕು. ಅದರೆ ಎಲ್ಲಾ ಕಡೆ ಒಳಗೆ ಬಿಡುವುದಿಲ್ಲ. ಅದರ ಚಾರ್ಜರ್ ಮಾತ್ರ 1-2 ಇಟ್ಟುಕೊಳ್ಳಿ, ಜೋಪಾನವಾಗಿ. ಕಳೆದುಕೊಂಡರೆ ಅದಕ್ಕಿನ್ನು ಅಲೆದಾಟ!


5) ಪಿತೃ ಕಾರ್ಯ/ ಶ್ರಾಧ್ಧ ಕರ್ಮ:


ಇದೊಂದು ರೀತಿಯ ಪಿತೃ ಕಾರ್ಯ ಆಧರಿತ ಟ್ರಿಪ್ ಆದ್ದರಿಂದ ಈ ಬಗ್ಗೆ ವಿವರಗಳು ಇಲ್ಲಿವೆ-ಇದರ ಉದ್ದೇಶ ಆಯಾ ಪಿತೃಗಳ ಆತ್ಮಕ್ಕೆ ಮುಕ್ತಿ ದೊರಕಲಿ, ಅವರು ಇನ್ನೂ ಅಲೆಯುತ್ತಿದ್ದರೆ ನಮ್ಮ ಪ್ರೀತಿಯ ದಾನದಿಂದ ಅವರೂ ತೃಪ್ತರಾಗಿ ಮುಕ್ತಿ ಪಡೆದು ನಮ್ಮನ್ನು ಹರಸಲಿ ಎಂದಷ್ಟೆ. ಆಯಾ ಸ್ಥಳಪುರಾಣ ಅಲ್ಲಿಗೆ ಬಂದಾಗ ಹೇಳುತ್ತೇನೆ

ಇದನ್ನು ನಾವು ಹೋದ ತ್ರಿವೇಣಿ ಸಂಗಮ, ಕಾಶಿ ಮತ್ತು ಗಯಾದಲ್ಲಿ ಮೂರೂ ಕಡೆ ಮಾಡಿಸಬೇಕು. ಬರೀ ಗಯಾ ಮಾತ್ರವಲ್ಲ.(ನಾನು ಮೊದಲು ಹಾಗಂದುಕೊಂಡಿದ್ದೆ).

ಅಲ್ಲೇ ಬಹಳ ವಿಸ್ತಾರವಾಗಿ ನಿಮ್ಮ ತಂದೆ ತಾಯಿ ಎರಡೂ ಕಡೆಯ ವಂಶವೃಕ್ಷದ ಹೆಸರುಗಳು, ಸಂಬಂಧಗಳನ್ನು ಕೇಳುತ್ತಾರೆ. ತೀರಿಹೋಗಿದ್ದವರಲ್ಲಿ- ನಿಮ್ಮ ತಂದೆ, ತಾತ, ಮುತ್ತಾತ, ದೊಡ್ಡಪ್ಪ/ ಮ್ಮ, ಚಿಕ್ಕಪ್ಪ/ ಮ್ಮ, ಸೋದರತ್ತೆ- ಮಾವ, ನಿಮ್ಮ ತಾಯಿಯ ಕಡೆ ಅದೇ ಅಜ್ಜಿ ಮುತ್ತಜ್ಜಿ, ಹೆಣ್ಣು ಕೊಟ್ಟ ಅತ್ತೆ ಮಾವ, ಅವರ ಕಡೆಯ ಒಡಹುಟ್ಟಿದವರು, ನಿಮ್ಮ ಸ್ವಂತ ಅಕ್ಕ ತಂಗಿ, ಅಣ್ಣ ತಮ್ಮ ಅಲ್ಲದೇ ನಿಮ್ಮ ಮನೆಯ ಗುರುಗಳು/ ಟೀಚರ್, ಅಲ್ಲದೇ ಸ್ನೇಹಿತರು + ನಮಗೇ ತಿಳಿಯದೇ ಅಥವಾ ಮರೆತುಹೋದವರಿಗಾಗಿ ಒಂದು ಅಜ್ಞಾತ ಪಿಂಡ ಸಹಾ ಇರುತ್ತದೆ. ಅವರವರ ಮನೆಯಲ್ಲಿ ತಿಥಿ ಮಾಡುತ್ತಿದ್ದರೂ ಇಲ್ಲಿ ನಾವು ಪಿಂಡದಾನ ಕೊಡಬಹುದಂತೆ. ಇದೆಲ್ಲಾ ನಂನಮ್ಮ ಇಚ್ಚೆ!

ನಿಮ್ಮ ಮನೆಯಲ್ಲಿ ಆ ಪದ್ಧತಿ ಇದ್ದರೆ:- ಅವರವರ ಗೋತ್ರಗಳನ್ನು ನೆನೆಪಿಟ್ಟುಕೊಳ್ಳಿ. ಇಲ್ಲವೇ ಬರೆದಿಟ್ಟುಕೊಂಡು ಅವರು ಕೇಳುವಾಗ ಹೆಸರುಗಳನ್ನು ಹೇಳುತ್ತಾ ಪಿಂಡದಾನ ಮಾಡುವುದಿದೆ. ಇದು ಸುಮಾರು ೧ ಗಂಟೆಯ ಕಾರ್ಯ. ಬಹಳ ಸಾವಕಾಶವಾಗಿ ಅಲ್ಲಿನ ನಮ್ಮ ಕರ್ನಾಟಕದವರ ಮಠಗಳಲ್ಲಿ ಮಾಡಿಸುತ್ತಾರೆ (ನಿರ್ಮಲಾ ಟ್ರಾವೆಲ್ಸ್ ನವರ ಏರ್ಪಾಡು). ಹೆಸರು ನೆನೆಪಿಲ್ಲದಿದ್ದರೆ ಪುರುಷರಾದರೆ ನಾರಾಯಣ/ ವಿಷ್ಣು/ ದೇವರ ಹೆಸರು ಮತ್ತು ಮಹಿಳೆಯಾದರೆ ಮಹಾಲಕ್ಷ್ಮಿ/ ದೇವಿ ಎಂದೋ ಹೇಳಬಹುದು. ಯಾವುದೇ ಗೋತ್ರ ಗೊತ್ತಿಲ್ಲದಿದ್ದರೆ ಕಶ್ಯಪ ಗೋತ್ರ ಎನ್ನಬಹುದಂತೆ.


6) ನೀವು ಏನೇನು ನಿರೀಕ್ಷಿಸಬಹುದು:


ನಿರ್ಮಲಾ ಟ್ರಾವೆಲ್ಸ್ ೫೦ ವರ್ಷಗಳಿಂದ ನಡೆಯುತ್ತಿರುವ ಮಂಗಳೂರಿನ ಕಾಮತ್ ಕುಟುಂಬದವರ ಸಂಸ್ಥೆ.

ನಾನು ಅದರ ಅನುಭವವನ್ನು ಇಲ್ಲಿ ಬರೆದಿದ್ದೇನೆ. ಬೇರಯವರದು ಹೀಗೆಯೇ ಇರಬಹುದು, ಇಲ್ಲದೆಯೂ ಇರಬಹುದು ಗೊತಿಲ್ಲ.


ನಮಗೆ ಒಬ್ಬ ಟೂರ್ ಮ್ಯಾನೇಜರ್ ಇರುತ್ತಾರೆ, ಅವರೇ ಅದರ ಪೂರ್ಣ ಆಡಳಿತ ನೋಡಿಕೊಳ್ಳುತ್ತಾರೆ, ನಮಗೆ ಅದೃಷ್ಟವಶಾತ್ ೧೬ ವರ್ಷ ಅನುಭವ ಇರುವ ಎಲ್ಲಾ ಟೂರುಗಳನ್ನು ಹಲವು ಸಲ ನಡೆಸಿರುವ ಮೋಹನ್ ಪ್ರಭು ಎಂಬುವವರಿದ್ದರು. ಮಂಗಳೂರಿನವರು, ಬಹಳ ಉತ್ತಮ ನಡವಳಿಕೆ, ಸಾಮರ್ಥ್ಯ ಅಷ್ಟೇ ಸಮಯ ಪಾಲನೆ, ಶಿಸ್ತು ಮತ್ತು ಒಂದು ರೀತಿಯ ಪಕ್ವವಾದ ವ್ಯಕ್ತಿ. ಹಾಗಾಗಿ ಎಂತೆಂತ ಕಡೆಯೂ ಅವರ ಮಾರ್ಗದರ್ಶನದಿಂದ ಎಲ್ಲವೂ ಹೂವಿನ ಸರ ಎತ್ತಿದಂತೆ ತಡವಾಗದೇ, ಯಾವುದೇ ಗೊಂದಲ, ವಿವಾದ, ವಾಗ್ವಾದ ಆಗದೇ ಅವರು ಹೇಳಿದಂತೆಯೆ ಚಾಚೂ ತಪ್ಪದೇ ಟೂರ್ ನಡೆಯಿತು. ಅಲ್ಲದೇ ಒಳ್ಳೆ ವಾಗ್ಮಿಯಾದ ಇವರ ಬಳಿ ಸಂಪೂರ್ಣ ಮಾಹಿತಿಯ ಭಂಡಾರವೇ ಇತ್ತು, ಪ್ರತಿಯೊಂದು ಕಡೆಯೂ ನಮಗೆ ಬಸ್ಸಿನಲ್ಲಿ ಮೈಕ್/ ಸ್ಪೀಕರ್ ಹಾಕಿ ದೊಡ್ಡ ಪ್ರವಚನದ ತರಹ ಏನೆಲ್ಲಾ ನೋಡಲಿದ್ದೇವೆ,. ಏಕೆ, ಹೇಗೆ, ಅಲ್ಲಿನ ಸ್ಥಳ ಮಹಿಮೆಯ ಕಥೆಯೇನು , ಅಲ್ಲಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿ ಹೇಗಿದೆ, ಲೋಕಲ್ ಜನರ ವ್ಯವಹಾರ ಹೇಗಿರುತ್ತದೆ, ಅವರ ಜೊತೆ ನಾವು ಹೇಗಿರಬೇಕು, ಏನು ಸಿಗುತ್ತೆ, ಏನು ಸಿಗಲ್ಲ...ಹೀಗೆ ೧ ಗಂಟೆ-೨ ಗಂಟೆ ಸಹಾ ಮಾತಾಡಿದ್ದಾರೆ ಅಂದರೆ ಲೆಕ್ಕ ಹಾಕಿಕೊಳ್ಳಿ. ಅವರಿಗೆ ಎಷ್ಟರ ಮಟ್ಟಿಗೆ ಎಲ್ಲದರ ಸ್ಪಷ್ಟ ಚಿತ್ರಣವಿದೆ ಎಂದು. ಅದರ ನಂತರ ನಮಗೆ ಪ್ರಶ್ನೋತ್ತರ ಮಾಡುತ್ತಾ ನಂನಮ್ಮ ಸೀಟಿಗೆ ಬಂದು ಉತ್ತರಿಸುವರು. ಹಾಗಾಗಿ ಇಳಿಯುವ ಮುನ್ನವೇ ಏನೆಲ್ಲಾ ಮಾಡುತ್ತೇವೆಂದು ಒಂದು ಚಿತ್ರದಂತೆ ಪಕ್ಷಿನೋಟ ಸಿಕ್ಕಿರುತಿತ್ತು. ನಾವು ಅನಂತರ ನಿರಾತಂಕವಾಗಿ ಮುನ್ನಡೆಯುತ್ತಿದ್ದೆವು.


ಇದೆಲ್ಲಾ ನೆಡೆಯುವುದು ನಮ್ಮ ಏ/ಸಿ ಬಸ್ಸಿನಲ್ಲಿ. ನಮಗೆ ಬಸ್ಸಿನ ಸೀಟ್ ಅಲಾಟ್ ಮೆಂಟ್ ಚಾರ್ಟ್ ಹಾಕಿ ಮೊದಲ ದಿನವೇ ಕೊಟ್ಟು ಎಲ್ಲರೂ ಅಲ್ಲಲ್ಲೇ ಕುಳಿತುಕೊಳ್ಳಬೇಕು, ಇಡೀ ಟೂರಿನಲ್ಲಿ ಹಾಗೆ ವ್ಯವಸ್ಥೆ ಮಾಡಿದ್ದರು. ಯಾರೂ ಅದನ್ನು ಮುರಿಯಲೂ ಇಲ್ಲ. ವಯಸ್ಸಾದವರು ಮುಂದೆ, ಬರು ಬರುತ್ತಾ ಚಿಕ್ಕ ವಯಸ್ಸಿನವರು ಹಿಂದೆ ಹಿಂದೆ ಹೀಗೆ ಕೊಟ್ಟಿದ್ದರು. ಪ್ರಯಾಣಕ್ಕೆ ಉತ್ತಮ ಎಂಜಿನ್ ಉಳ್ಳ ಹೊಸ ಬಸ್ ಮತ್ತು ಅದಕ್ಕೆ ಸೌಮ್ಯ ಗುಣದ ಡ್ರೈವರ್ , ಶಾಂತವಾಗಿ ತನ್ನ ಕೆಲಸ ಮಾಡುತ್ತಿದ್ದ. ಮೇರಜ್ ಅವನ ಹೆಸರು, ವಾರಣಾಸಿಯವ. ೩೦ ವರ್ಷಕ್ಕಿಂತಾ ಕಿರಿಯವಯಸ್ಸಿನವ. ಹೊಟೆಲ್ ಆಗಲಿ, ದೇವಸ್ಥಾನ ಮಠವಾಗಲಿ ಸರಿಯಾಗಿ ಆಯಾ ಇಳಿಯುವ ಹತ್ತುವ ಸ್ಪಾಟಿನಲ್ಲಿ ನಮ್ಮನ್ನು ಡ್ರಾಪ್ ಮತ್ತು ಪಿಕ್ ಅಪ್ ಮಾಡುತ್ತಿದ್ದ, ಒಂದು ಸಮಯವೂ ತಪ್ಪು ಮಾಡಲಿಲ್ಲ! ಇಳಿಯುವಾಗ ನಮ್ಮ ಹ್ಯಾಡ್ ಬ್ಯಾಗ್ ಎಲ್ಲಾ ಬಸ್ಸಿನಲ್ಲೇ ಬಿಟ್ಟು ಬೇಕಿದ್ದನ್ನು ಮಾತ್ರ ಕೈಯಲ್ಲಿಡಿದು ಹೋಗಬಹುದು. ಬಹಳ ಸೇಫ್ ಆಗಿ ನೋಡಿಕೊಂಡರು, ಒಬ್ಬರ ಒಂದು ಪಿನ್ ಕೂಡಾ ಅವರ ತಪ್ಪಿನಿಂದ ಕಳೆಯಲಿಲ್ಲ.


ಇಷ್ಟು ಅಲ್ಲಿ ನಾವು ಕಂಡ ನಿರ್ಮಲಾ ಟ್ರಾವೆಲ್ಸ್ ವ್ಯವಸ್ಥೆಯ ಬಗ್ಗೆ ಆಯಿತು.

ಮುಂದೆ ಸಂಧರ್ಭ ಬಂದಾಗ ವಿವರಗಳು ಕೊಡುವೆ.


315 views0 comments

留言


bottom of page