top of page

ರಾಮ ಭಕ್ತ ಭಜರಂಗ ಬಲಿ ಕೃಷ್ಣನನ್ನು ಪರೀಕ್ಷಿಸಿ ನಂಬಿದ ಕಥೆ-ಸನಾತನ ಸಾರಥಿ - 2

ಅವತಾರವಾಣಿ

ಭಾರತವು ಅವತಾರಗಳ ನಾಡು*

ಅಹಂ ಎಂಬುದೇ ಭಕ್ತನ ಮಾರಣಾಂತಿಕ ಪ್ರಮಾದ

ಒಮ್ಮೆ ರಾಮನಿಗೆ ತನ್ನ ಅವತಾರದ ಪಾತ್ರವನ್ನು ತ್ಯಜಿಸುವ ಮುನ್ನ ಹನುಮಂತನನ್ನು ಪರೀಕ್ಷಿಸಬೇಕೆನಿಸಿತು. ಅವನು ಹೀಗೆ ಆಜ್ಞಾಪಿಸಿದನು: 'ನೀನು ವಾಯುದೇವನ ಪುತ್ರ. ನೀನು ಚಿರಂಜೀವಿ ಇದ್ದೀಯೆ. ನಾನು ಮತ್ತೆ ಕೃಷ್ಣಾವತಾರದಲ್ಲಿ ಭೂಮಿಗೆ ಹಿಂತಿರುಗುವವರೆಗೂ ನೀನು ಬೆಟ್ಟದ ಮೇಲೆ ನಿರೀಕ್ಷಿಸುತ್ತಿರು.' ಅಂತೆಯೇ ಹನುಮಂತನು ರಾಮಾಜ್ಞೆಯಂತೆ ಅತ್ಯಂತ ವಿಧೇಯತೆಯಿಂದ ಬೆಟ್ಟದ ಮೇಲೆ ರಾಮನಾಮ ಜಪಿಸುತ್ತಾ ಕಾಯುತ್ತಿದ್ದನು. ಅವನು ಕಾಲಕ್ರಮೇಣ ವೃದ್ಧನಾದ.

ದ್ವಾಪರಯುಗ ಕಾಲಿಟ್ಟಿತು. ಆಗಲೂ ಹನುಮಂತನು ಬೆಟ್ಟದ ಮೇಲೆಯೇ ನೆಲೆಸಿದ್ದ. ಆ ಸಮಯದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದರು. ಒಂದು ದಿನ ಅರ್ಜುನ, ನಕುಲ ಮತ್ತು ಸಹದೇವರು ಆಹಾರಕ್ಕಾಗಿ ಗೆಡ್ಡೆ-ಗೆಣಸು ಹಣ್ಣುಗಳನ್ನು ಅರಸುತ್ತಾ ಹೊರಟರು. ಧರ್ಮರಾಜನು ಕುಟೀರದಲ್ಲೇ ಉಳಿದನು. ಭೀಮ ಮತ್ತು ದ್ರೌಪದಿ ಅಲ್ಲಿಯೇ ಚಿಕ್ಕ ವಾಯುವಿಹಾರಕ್ಕಾಗಿ ಹೊರಟರು. ದ್ರೌಪದಿಗೆ ಪಾರಿಜಾತ ಹೂಗಳನ್ನು ಪಡೆಯುವ ಇಚ್ಚೆಯಾಯಿತು. ಭೀಮನು ಪಾರಿಜಾತ ಪುಷ್ಪಗಳಿಗಾಗಿ ಹುಡುಕಾಟ ನಡೆಸಿದ. ಆಗ ದಾರಿಯಲ್ಲಿ ಒಂದು ಕಪಿಯು ತನ್ನ ಬಾಲ ಅಡ್ಡ ಹಾಕಿಕೊಂಡು ಕುಳಿತಿದ್ದನ್ನು ಗಮನಿಸಿದ.

ಹನುಮಂತನ ಅತ್ಯುನ್ನತ ರಾಮಭಕ್ತಿ

ಭೀಮನು ಆ ಕಪಿಗೆ ತನ್ನ ಬಾಲವನ್ನು ಸರಿಸಿ ತನಗೆ ದಾರಿ ಮಾಡಿಕೊಡಲು ಹೇಳಿದ. ಆ ಕಪಿಯು ಹನುಮಂತನೇ ಆಗಿದ್ದ. ಆಗ ಹನುಮಂತನು ಭೀಮನಿಗೆ `ತನ್ನ ಬಾಲವನ್ನು ಅವನೇ ಪಕ್ಕಕ್ಕೆ ಸರಿಸಿ ಮುಂದೆ ಹೋಗಬೇಕೆಂದೂ, ತನಗೆ ಬಹಳ ವಯಸ್ಸಾಗಿರುವುದರಿಂದ ಸಾಧ್ಯವಾಗುತ್ತಿಲ್ಲವೆಂದೂ' ಉತ್ತರಿಸಿದ. ಭೀಮನು ತನ್ನ ಎಡಗೈಯಲ್ಲಿ ಆ ಬಾಲವನ್ನು ಎತ್ತುವ ಪ್ರಯತ್ನ ಮಾಡಿದ. ಅದು ಸಾಧ್ಯವಾಗಲಿಲ್ಲ. ಆಗ ಅವನು ಎರಡೂ ಕೈಯಿಂದ ಆ ಬಾಲವನ್ನು ಎತ್ತಲು ನೋಡಿದ, ಆಗಲೂ ಸಾಧ್ಯವಾಗಲಿಲ್ಲ. ಭೀಮನು ತನ್ನ ಶಕ್ತಿಯನ್ನೆಲ್ಲಾ ವ್ಯಯ ಮಾಡಿ ಎತ್ತಲು ನೋಡಿದರೂ ಆಗಲೇ ಇಲ್ಲ. ಆಗ ಹನುಮಾನ್ ಭೀಮನಿಗೆ ಹೇಳಿದನಂತೆ, `ನಾನು ಬಹಳ ವಯಸ್ಸಾದವನು, ನನ್ನ ಬಾಲವನ್ನು ಎತ್ತಲೂ ನಿನಗೆ ಆಗಲಿಲ್ಲ. ಇನ್ನು ಮಹಾಭಾರತ ಯುದ್ಧದಲ್ಲಿ ಹೇಗೆ ತಾನೆ ಭಾಗವಹಿಸುವೆ?’ ಭೀಮ ಅವನಿಗೆ ವಂದಿಸಿದನು. ಹನುಮಂತ ಹೇಳಿದನು, `ನಾನು ನಿಮ್ಮ ಅಣ್ಣ. ನಾನು ನಿನಗೆ ಮಹಾಭಾರತ ಯುದ್ಧದಲ್ಲಿ ಸಹಾಯ ಮಾಡುತ್ತೇನೆ. ಆದರೆ ಹೀಗೆ ದೈಹಿಕವಾಗಿ ಅಲ್ಲಿಗೆ ಬರುವುದಿಲ್ಲ. ನಾನು ಅರ್ಜುನನ ಧ್ವಜದ ಮೇಲೆ ಆಸೀನನಾಗುತ್ತೇನೆ. ಅಲ್ಲಿಂದ ಗರ್ಜಿಸುತ್ತೇನೆ. ಅದನ್ನು ಕೇಳಿಯೇ ಶತ್ರುಸೇನೆಯವರು ಬೆದರಿ ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತಾರೆ. ನಿಮಗೆ ವಿಜಯ ಪ್ರಾಪ್ತಿಯಾಗಲು ಸಹಾಯ ಮಾಡುವೆ’. ಹೀಗೆ ಹೇಳುತ್ತಾ ಪಾಂಡವರಿಗೆ ಅವನು ಸಹಾಯ ಮಾಡುವ ವಚನವಿತ್ತನು.

ಅನಂತರ ಒಮ್ಮೆ ಕೃಷ್ಣನು ಹನುಮಂತನನ್ನು ಕರೆಸಲು ಗರುಡನಿಗೆ ಅಪ್ಪಣೆಯಿತ್ತನು. ಗರುಡನು ಹನುಮಂತನ ಬಳಿ ಹೋಗಿ `ಪರಮಾತ್ಮನಾದ ಗೋಪಾಲ ಕೃಷ್ಣನು ನಿನ್ನನ್ನು ಕರೆಯುತ್ತಿದ್ದಾನೆಂದು' ಆಹ್ವಾನಿಸಿದ. ನಾನು ಶ್ರೀರಾಮನ ಹೆಸರಿನ ವಿನಾ ಬೇರೆ ಯಾರನ್ನೂ ಕೇಳೆನೆಂದು ಉತ್ತರಿಸಿದನು. ಗರುಡನು ಇನ್ನೂ ಸಮೀಪ ಹೋಗಿ 'ಬೃಂದಾವನ ವಿಹಾರಿ, ಗೋಪಿಮನ ಸಂಚಾರಿಯೇ ನಿನ್ನನ್ನು ಕರೆದಿದ್ದಾನೆಂದು' ಮತ್ತೆ ಆಹ್ವಾನಿಸಿದ. ಆಗಲೂ ಹನುಮಂತ ನನಗೆ ಶ್ರೀರಾಮನು ಮಾತ್ರವೇ ಬೇಕೆಂದೂ, ಅನ್ಯರನ್ನು ಲೆಕ್ಕಿಸುವುದಿಲ್ಲವೆಂದೂ ನಿರಾಕರಿಸಿದ. ಆದರೆ ಗರುಡನು ಪದೇ ಪದೇ ತನ್ನ ಜೊತೆ ಬರಲು ಕರೆಯುತ್ತಲೇ ಇದ್ದಾಗ ಹನುಮಂತನು ಕುಪಿತನಾಗಿ ಅವನಿಗೆ ಹೊಡೆದೋಡಿಸಿದ. ಗರುಡನ ರೆಕ್ಕೆಗೆ ಸ್ವಲ್ಪ ಗಾಯವಾಯಿತು. ಅವನು ಕೃಷ್ಣನ ಬಳಿ ಹಿಂತಿರುಗಿ ದೂರಿದನು, `ಸ್ವಾಮಿ, ನೀವು ಹನುಮಂತನನ್ನು ಮಹಾಭಕ್ತನೆಂದಿರಿ. ನಿಮ್ಮ ಹೆಸರನ್ನು ಹೇಳಿ ಕರೆದರೂ ಅವನು ಕೊಂಚವೂ ಗೌರವಿಸಲಿಲ್ಲ. ಅವನು ಭಕ್ತನೇ ಅಲ್ಲ.’ ಆಗ ಕೃಷ್ಣನು ಗರುಡನಿಗೆ ಹೇಳುತ್ತಾನೆ, ’ಯಾರ ಜೊತೆಯಾದರೂ ಸಂವಹನ ಮಾಡಿದಾಗ ಅವರಿಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅವರ ಇಷ್ಟವೇ ನನ್ನ ಇಷ್ಟ ಸಹಾ. ಅವನು ನನ್ನ ಹೆಸರನ್ನು ಹೇಳಿದರೆ ಒಪ್ಪುವುದಿಲ್ಲ. ಮತ್ತೆ ಹೋಗಿ, ರಾಮನು ಕರೆಯುತ್ತಿದ್ದಾನೆಂದು ಹೇಳಿ ಕರೆದುಕೊಂಡು ಬಾ’ . ಗರುಡನಿಗೆ ಮತ್ತೆ ಹೋಗಲು ಭಯವಿತ್ತು. ಏಕೆಂದರೆ ಅವನಿಗಾಗಲೇ ಹನುಮಂತನಿಂದ ಒಮ್ಮೆ ಏಟು ತಿಂದು ಅವನ ಶೌರ್ಯದ ರುಚಿ ಗೊತ್ತಾಗಿಹೋಗಿತ್ತು. ಕೃಷ್ಣನು ಅವನಿಗೆ ತಾನು ಅವನನ್ನು ಕಾಪಾಡುವೆನೆಂದು ವಾಗ್ದಾನವಿತ್ತನು.

ಗರುಡನು ದೂರದಿಂದಲೇ ರಾಮನು ಕರೆಯುತ್ತಿದ್ದಾನೆಂದು ಹನುಮಂತನನ್ನು ಕರೆದನು.

ಹನುಮಂತನು ತಕ್ಷಣವೇ ಎದ್ದುನಿಂತು `ರಾಮ, ನನ್ನ ರಾಮ. ಎಲ್ಲಿದ್ದಾನೆ?’ ಎಂದನು. ಗರುಡನು, `ಅವನೀಗ ಮಥುರಾದಲ್ಲಿದ್ದಾನೆ, ನನ್ನನ್ನು ಹಿಂಬಾಲಿಸು ’ ಎಂದನು. ಹನುಮಂತನು ನುಡಿದನು, `ನಿನಗೆ ಮಥುರಾ ತಲುಪಲು ಬಹಳ ಸಮಯವಾಗುತ್ತದೆ. ನಾನು ಅದಕ್ಕ್ಕೂ ಮುಂಚೆಯೇ ಅಲ್ಲಿಗೆ ತಲುಪಬಲ್ಲೆ. ನಿನ್ನ ಶಕ್ತಿಯು ನನಗಿಂತಾ ಅಧಿಕವೋ? ’. ಹನುಮಂತನು ಒಂದೇ ಜಿಗಿತದಲ್ಲಿ ಮಥುರಾ ತಲುಪಿದನು. ಅಲ್ಲಿ ‘ಎಲ್ಲಿ ರಾಮ?’ ಎಂದು ಕೇಳಿದನು. ಅವನು ಕೃಷ್ಣನ ಸ್ವರೂಪವನ್ನು ಇಷ್ಟಪಡಲಿಲ್ಲ. ಅವನಿಗೆ ರಾಮನ ಸ್ವರೂಪ ಮಾತ್ರವೇ ಬೇಕಿತ್ತು. ಹನುಮಂತನ ಮನಸ್ಸು ಒಂದೇ ನಾಮ ಮತ್ತು ಆಕಾರದಲ್ಲಿ ಮಗ್ನವಾಗಿತ್ತು. ಅದುವೇ ರಾಮನ ಹೆಸರು ಮತ್ತು ಆಕಾರ.

ಕೃಷ್ಣನು ತಾನೇ ರಾಮನಾಗಿ ಪರಿವರ್ತಿತನಾದನು. ಅವನ ಪಕ್ಕದಲ್ಲಿ ಸತ್ಯಭಾಮೆಯಿದ್ದಳು. ಅವನು ಆಕೆಗೆ ಹೇಳಿದನು, ಹನುಮಂತನು ಬಂದಾಗ ಅವನು ರಾಮನ ದರ್ಶನಕ್ಕಾಗಿ ಹಾತೊರೆಯುತ್ತಿರುತ್ತಾನೆ. ಅವನು 'ನನ್ನ ತಾಯಿ ಸೀತಾಮಾತೆ ಎಲ್ಲಿ?' ಎನ್ನುವನು. ನೀನು ಹೇಗೆ ಸೀತೆಯಾಗಿ ಬದಲಾಗುವೆ? ಸತ್ಯಭಾಮಾಳ `ಅಹಂ'ಗೆ ಧಕ್ಕೆಯಾಯಿತು. ಕೃಷ್ಣನು 'ನೀನು ಸೀತೆಯಂತೆ ಬದಲಾಗು ಇಲ್ಲವೆ ಒಳಗೆ ಹೋಗು' ಎಂದನು. ಒಳಗೆ ಹೋಗಲು ಇಚ್ಚೆಯಿಲ್ಲದೇ ಅವಳು ಸೀತೆಯಂತೆ ವೇಷ ಧರಿಸಿದಳು. ಹನುಮಂತನು ಅವಳನ್ನು ನೋಡಿ ‘ಕೇವಲ ವೇಷ ಧರಿಸಿದ ಮಾತ್ರಕ್ಕೆ ನೀನು ಸೀತೆಯಾಗಿಬಿಡುವೆಯಾ?’ ಎಂದು ಕೇಳಿದನು. ಆಗ ರುಕ್ಮಿಣಿಯು ಸೀತೆಯಂತೆ ಪರಿವರ್ತಿತವಾಗಿ ಒಳಗಿನಿಂದ ಬಂದಳು. ಕೃಷ್ಣನು ರಾಮನಾಗಬಲ್ಲನಾದರೆ ರುಕ್ಮಿಣಿಯೇಕೆ ಸೀತೆಯಾಗಲು ಸಾಧ್ಯವಿಲ್ಲ? ಹನುಮಂತನು ಅವಳ ಪಾದ ಮುಟ್ಟಿ ನಮಸ್ಕರಿಸಿದನು. ಹನುಮಂತನಿಗೆ ಸಂತೋಷವಾಯಿತು. ಕೃಷ್ಣನು ಹನುಮಂತನಿಗೆ ಹೇಳಿದನು, ‘ಹನುಮಂತ, ನೀನು ಸದಾ ನನ್ನ ಜಪದಲ್ಲಿಯೇ ಮಗ್ನನಾಗಿ ನನ್ನಲ್ಲಿ ಪೂರ್ಣ ವಿಶ್ವಾಸವಿಟ್ಟುಕೊಂಡಿದ್ದರೂ, ನಿನಗೆ ಸ್ವಲ್ಪ ಅಹಂಕಾರವಿದೆ .’ ಆಗ ಹನುಮಂತನು, ‘ಸ್ವಾಮಿ, ನನಗೆ ಕಿಂಚಿತ್ತೂ ಅಹಂಕಾರ ಇಲ್ಲ’ ಎಂದನು.

ಕೃಷ್ಣನು ಎದ್ದು ಸ್ವಲ್ಪ ದೂರ ನಡೆದನು. ಒಂದು ಚಿಕ್ಕ ಕಲ್ಲು ಅವನ ಕಾಲಿಗೆ ತಗುಲಿತು. ಅವನು ಎಡವಿಬೀಳುವಂತೆ ನಟಿಸಿದನು. ಹನುಮಂತನು ಹತ್ತಿರ ಹೋಗಿ ‘ರಾಮನು ನಡೆಯುವಲ್ಲಿ ಯಾವ ಕಲ್ಲೂ ಅವನಿಗೆ ತೊಂದರೆ ಕೊಡಬಾರದು’ ಎಂದನು. ಕೃಷ್ಣನು ಹಾಗಿದ್ದರೆ ಆ ಕಲ್ಲನ್ನು ತೆಗೆದುಬಿಡು ಎಂದನು. ಹನುಮಂತನು ಆ ಕಲ್ಲನ್ನು ಕಾಲಿಂದ ಒದ್ದನು, ಆದರೆ ಅದು ಚಲಿಸಲಿಲ್ಲ. ಹನುಮಂತನು ಅದನ್ನು ಕೈಯಿಂದ ಎತ್ತಲು ಪ್ರಯತ್ನಿಸಿದನು. ಕೃಷ್ಣನು ಹನುಮಂತ ಕಲ್ಲನೆತ್ತಲು ಕಷ್ಟಪಡುತ್ತಿರುವುದನ್ನು ಗಮನಿಸಿದನು. ಕೃಷ್ಣನು ಹನುಮಂತನಿಗೆ ಆ ಕಲ್ಲು ಅಲುಗಾಡುವುದಿಲ್ಲವೆಂದೂ, ಅವನು ಅದನ್ನು ಪ್ರಯತ್ನಿಸಬಾರದೆಂದೂ ಹೇಳಿದನು. ಹನುಮಂತನು 'ಈ ಕಲ್ಲು ನಿಕೃಷ್ಟವಾದದ್ದು, ಇದೇನು ಮಹಾ, ತಾನು ಬೆಟ್ಟಗಳನ್ನೇ ಪುಡಿ ಮಾಡಬಲ್ಲೆನೆಂದೂ' ಹೇಳಿದನು. ಹನುಮಂತನು ಪದೇ ಪದೇ ಪ್ರಯತ್ನಿಸಿದರೂ ಆ ಕಲ್ಲು ಎತ್ತಲಾಗಲಿಲ್ಲ್ಲ. ಅವನ ಬಾಲವು ಮುರಿಯಿತು, ಕೈಗಳಿಗೆ ಗಾಯವಾಗಿ ರಕ್ತ ಬಂದವು. ಆದರೆ ಕಲ್ಲು ಅಲ್ಲಾಡಲಿಲಲ್ಲ. ಆಗ ಕೃಷ್ಣನು ಆ ಕಲ್ಲು ಸಾಮಾನ್ಯವಾದುದಲ್ಲವೆಂದೂ, ಅದು ತಾನು ಹಿಂದಿನ (ರಾಮ) ಜನ್ಮದಲ್ಲಿ ಸೃಷ್ಟಿಸಿದ್ದ ಚಿನ್ನದ ಲಿಂಗ, ಅದರ ಹೆಸರು ‘ರಾಮಲಿಂಗ’ ಎಂದು ಹೇಳಿದನು. ಅದರಲ್ಲಿ ತನ್ನ (ರಾಮನ) ಜ್ಯೋತಿ ಇದ್ದುದರಿಂದ ಪವಿತ್ರವಾದದ್ದು ಎಂದು ಹನುಮಂತನಿಗೆ ಹೇಳಿದನು. ಆಗ ಹನುಮಂತನ ಅಹಂಕಾರ ನಾಶವಾಯಿತು. ಮಾನವನಿಗೆ ಅತ್ಯುನ್ನತ ಭಕ್ತಿ ಇದ್ದಾಗಲೂ, ಸ್ವಲ್ಪ ಅಹಂಕಾರವಿದ್ದರೂ ಪೂರ್ಣ ಆನಂದ ಲಭಿಸುವುದಿಲ್ಲ. ಅಹಂಕಾರವೇ ಭಕ್ತನ ಮಾರಣಾಂತಿಕ ಪ್ರಮಾದವಾಗಿದೆ.

ಭಗವಂತನು ತನ್ನ ಭಕ್ತರನ್ನು ಸದಾ ರಕ್ಷಿಸುತ್ತಾನೆ

ಭಗವಂತನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ ಮತ್ತು ಅವನ ಸೇವಕನಾಗಿಯೂ ಪಾತ್ರ ವಹಿಸುತ್ತಾನೆ. ಭಕ್ತನಿಗೇ ಭಗವಂತನು ಶರಣಾಗಿಬಿಡುತ್ತಾನೆ.

ಕುರುಕ್ಷೇತ್ರ ಯುದ್ಧದ ಒಂಬತ್ತನೇ ದಿನ ಭೀಷ್ಮನು ಒಂದು ಘೋರ ಪ್ರತಿಜ್ಞೆಯನ್ನು ತೆಗೆದುಕೊಂಡನು. ಮುಂದಿನ ಸೂರ್ಯೋದಯದ ಒಳಗೆ ಎಲ್ಲ ಪಾಂಡವರನ್ನು ಕೊಂದುಬಿಡುವುದಾಗಿ ಆ ಪ್ರತಿಜ್ಞೆ ಇದ್ದಿತು. ಇದನ್ನು ಕೇಳಿ ದ್ರೌಪದಿಯು ಚಿಂತಾಕ್ರಾಂತಳಾದಳು. ಅವಳು ಕೃಷ್ಣನನ್ನು ಪ್ರಾರ್ಥಿಸಿದಳು, ‘ಓ ಭಗವಾನ್, ಹೀಗೆಂದೂ ಆಗಬಾರದು. ನೀನೇನಾದಾರೂ ಉಪಾಯ ಮಾಡಲೇಬೇಕು, ನನಗೆ ಹೇಗೆಂದು ತಿಳಿದಿಲ್ಲ. ಆದರೆ ನಾನು ವಿಧವೆಯಾಗಬಾರದೆಂದು ಖಚಿತ ಮಾಡಿಬಿಡು.’ ಕೃಷ್ಣನು ಮುಗುಳ್ನಕ್ಕ ಆದರೆ ಏನೂ ಆಶ್ವಾಸನೆ ಕೊಡಲಿಲ್ಲ. ಅವನು ಸುಮ್ಮನೆ, ‘ಇವತ್ತು ಕಾದು ನೋಡು ಏನು ನಡೆಯುವುದು’ ಎಂದನು. ದೇವರು ಯಾವುದೇ ಆಶ್ವ್ವಾಸನೆ ಕೊಡದವನಂತೆ ಗೋಚರಿಸಿದರೂ, ನಾವು ಅಚಲ ವಿಶ್ವಾಸದಿಂದ ಕೋರಿಕೊಂಡರೆ, ಅವನು ಖಂಡಿತಾ ಸ್ಪಂದಿಸುತ್ತಾನೆ.

ರಾತ್ರಿಯಾದಾಗ ಯುದ್ಧಭೂಮಿಯು ಶಾಂತವಾಯಿತು ಮತ್ತು ಎಲ್ಲರೂ ತಂತಮ್ಮ ಬಿಡಾರಗಳಿಗೆ ಹಿಂತಿರುಗಿದ್ದರು. ತನ್ನ ಬಿಡಾರದಲ್ಲಿ ಭೀಷ್ಮನು ಮಾತ್ರ ಮನಶ್ಶಾಂತಿಯಿಲ್ಲದೇ ಶತಪಥ ತುಳಿಯುತ್ತಿದ್ದನು. ಅದೇ ಸಮಯದಲ್ಲಿ ಕೃಷ್ಣನು ದ್ರೌಪದಿಯ ಬಳಿಗೆ ಬಂದು, ‘ಇದೇ ಸರಿಯಾದ ಸಮಯ. ಭೀಷ್ಮನು ನಿದ್ದೆ ಬಾರದೇ ತನ್ನ ಬಿಡಾರದಲ್ಲಿ ಶತಪಥ ತುಳಿಯುತ್ತಿದ್ದಾನೆ. ಅವನು ತಾನು ಮಾಡಿದ ಪ್ರತಿಜ್ಞೆಯಿಂದ ಪರಿತಪಿಸುತ್ತಿದ್ದಾನೆ. ಇದೇ ಕ್ಷಣದಲ್ಲಿ ನೀನು ಅಲ್ಲಿಗೆ ನುಗ್ಗಿ ಒಡನೆಯೇ ಅವನ ಕಾಲಿಗೆ ಬೀಳಬೇಕು.’ ದ್ರೌಪದಿಯು ಒಪ್ಪಿ ಭೀಷ್ಮನ ಬಿಡಾರದತ್ತ ನಡೆದಳು. ಅವಳ ಕಾಲಿನಲ್ಲಿ ರಾಜಮನೆತನದವರು ಧರಿಸುವ ಪಾದರಕ್ಷೆಯಿತ್ತು. ಅದು ನಡೆಯುವಾಗ ಕೀಚಲು ಸದ್ದು ಮಾಡುತ್ತಿತ್ತು. ಆ ಸದ್ದು ನಿಶ್ಶಬ್ದರಾತ್ರಿಯಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿತ್ತು. ಕೃಷ್ಣನು ದ್ರೌಪದಿಗೆ ನಿಲ್ಲಲು ಹೇಳಿ, ‘ಭೀಷ್ಮನಿಗೆ ಈ ಸದ್ದು ಕೇಳಿಸಿದರೆ ಯಾರೋ ಮಹಿಳೆಯು ಬರುತ್ತಿರುವಳೆಂದು ತಿಳಿದುಬಿಡುವುದು. ಅವನಿಗೆ ನೀನು ಬರುವುದು ತಿಳಿಯಬಾರದು. ನಿನ್ನ ಪಾದರಕ್ಷೆಯನ್ನು ತೆಗೆದು ನನಗೆ ಕೊಡು’ ಎನ್ನಲು, ದ್ರೌಪದಿಯು ಕೃಷ್ಣ ಹೇಳಿದಂತೆ ಅನುಸರಿಸಿದಳು. ಕೃಷ್ಣನು ಆ ಪಾದರಕ್ಷೆಗಳನ್ನು ತನ್ನ ಅಂಗವಸ್ತ್ರದಲ್ಲಿ ಸುತ್ತಿಕೊಂಡು ಅವಳ ಹಿಂದೆಯೇ ಸ್ವಲ್ಪ ದೂರದಲ್ಲಿ ನಡೆದು ಬರುತ್ತಿದ್ದನು.

ಶಾಂತವಾಗಿ ದ್ರೌಪದಿಯು ಭೀಷ್ಮನ ಬಿಡಾರದೊಳಕ್ಕೆ ಬಂದಳು. ಯೋಚನಾಮಗ್ನನಾದ ಭೀಷ್ಮನು ಯಾರು ಪ್ರವೇಶಿಸಿದರೆಂದು ಗಮನಿಸಲಿಲ್ಲ. ಬಂದ ಕೂಡಲೇ ದ್ರೌಪದಿಯು ಭೀಷ್ಮನ ಪಾದಗಳಿಗೆರಗಿದಳು. ಹಾಗೆ ಮಾಡುವಾಗ ಅವಳ ಕೈಬಳೆಗಳು ಸದ್ದು ಮಾಡಿದವು. ಭೀಷ್ಮನು ಆ ಸದ್ದು ಕೇಳಿ ಒಬ್ಬ ವಿವಾಹಿತ ಮಹಿಳೆಯು ನಮಸ್ಕರಿಸಿದ್ದಾಳೆಂದು ಅರಿತು ಯಾವಾಗಲೂ ಸಾಂಪ್ರದಾಯಿಕವಾಗಿ ಆಶೀರ್ವದಿಸುವಂತೆ ‘ಧೀರ್ಘ ಸುಮಂಗಲೀ ಭವ’ (ಮುತ್ತೈದೆಯಾಗಿ ಧೀರ್ಘ ಕಾಲ ಬಾಳುವಂತಾಗಲಿ) ಎಂದುಬಿಟ್ಟನು. ದ್ರೌಪದಿಗೆ ಈ ಆಶೀರ್ವಾದ ಕೇಳಿ ಸಂತೋಷವಾಯಿತು. ಅವಳು ‘ನನಗಿಷ್ಟು ಸಾಕು’ ಎಂದು ಎದ್ದಳು. ಆಗಲೇ ಭೀಷ್ಮನಿಗೆ ತಾನು ಯಾರಿಗೆ ಹರಸಿದೆನೆಂಬ ಅರಿವಾಗಿದ್ದು. ಅವನು ಉದ್ಗರಿಸಿದನು, ‘ಏನು? ನೀನು ಈ ಹೊತ್ತಿನಲ್ಲಿ ಬಂದೆಯಾ? ಯಾರು ನಿನ್ನನ್ನು ಕರೆತಂದರು?’

ದ್ರೌಪದಿ ಉತ್ತರಿಸಿದಳು, ‘ಕೃಷ್ಣನಲ್ಲದೆ ಇನ್ಯಾರು? ಅವನೇ ನನ್ನ ಪತಿಯರ ಮಾರಣಹೋಮ ತಡೆಯಲು ಈ ಉಪಾಯವನ್ನು ಸೂಚಿಸಿದನು. ನೀವು ನನ್ನನ್ನು ಧೀರ್ಘ ಸುಮಂಗಲಿಯಾಗಿರೆಂದು ಆಶೀರ್ವಾದ ಮಾಡಿದ್ದೀರಿ. ಈಗ ನೀವು ನನ್ನ ಪತಿಯರನ್ನು ಕೊಲ್ಲದೇ ಬಿಟ್ಟುಬಿಡಬೇಕು.’ ಅದೇ ಕ್ಷಣದಲ್ಲಿ ಕೃಷ್ಣನು ಅಲ್ಲಿಗೆ ಪ್ರವೇಶಿಸಿದನು. ಭೀಷ್ಮನಿಗೆ ತನ್ನ ವಚನ ಮುರಿಯಿತಾದರೂ ಈ ಘಟನೆಯು ಸಂತಸವನ್ನೇ ತಂದಿತು. ಪಾಂಡವರು ಆದರ್ಶ ಪುರುಷರು ಮತ್ತು ಭಗವಂತನ ಪರಮಭಕ್ತರು. ಭಗವಂತನೇ ತನ್ನ ಅನಂತ ಕೃಪೆಯನ್ನು ತೋರಿ ಒಂದು ನಾಟಕವಾಡಿಸಿ ಅವರನ್ನು ಸುರಕ್ಷಿತಗೊಳಿಸಿದ್ದನು.

ಭೀಷ್ಮನಿಗೆ ಬಹಳ ಕಾಲ ಶತಪಥ ತುಳಿದು ಆಯಾಸವಾಗಿತ್ತು. ಅವನು ಕುಳಿತುಕೊಂಡು, ‘ಕೃಷ್ಣಾ, ನೀನು ನನಗೇನಾದರೂ ಆಹಾರ ತಂದಿರುವೆಯಾ?. ನೀನು ಹೆಗಲಿಗೆ ಯಾವುದೋ ಜೋಳಿಗೆ ಧರಿಸಿರುವೆ. ಅದನ್ನು ತೆರೆದು ನೀನು ನನಗೆ ಅದರಲ್ಲಿರುವ ಆಹಾರ ಕೊಡುವೆಯಾ?’ ಎಂದು ಕೇಳಿದನು. ಕೃಷ್ಣನು ಮುಗುಳ್ನಕ್ಕು ಹೇಳಿದನು, ‘ಈ ಯುದ್ಧಕಾಲದಲ್ಲಿ ಆಹಾರ ಹೊತ್ತು ಸಾಗುವುದು ನನ್ನ ಕರ್ತವ್ಯ ಎಂದುಕೊಂಡೆಯಾ? ಈ ಜೋಳಿಗೆಯಲ್ಲಿ ಯಾವ ಆಹಾರವೂ ಇಲ್ಲ, ದ್ರೌಪದಿಯ ಪಾದರಕ್ಷೆಗಳಿವೆ. ಅವಳು ನಿನ್ನ ಬಿಡಾರಕ್ಕೆ ಬಂದಾಗ ಸದ್ದಾಗದಿರಲಿ ಎಂದು ನಾನೇ ಅದನ್ನು ಹೊತ್ತು ತಂದೆ’ ಎನ್ನುತ್ತಾ ಕೃಷ್ಣನು ತನ್ನ ಅಂಗವಸ್ತ್ರದಲ್ಲಿ ಸುತ್ತಿದ್ದ ಪಾದರಕ್ಷೆಗಳನ್ನು ತೆರೆದು ನೆಲಕ್ಕೆ ಬೀಳಿಸಿದನು. ಅದನ್ನು ಕಂಡು ಭೀಷ್ಮನ ಕಂಗಳಲ್ಲಿ ಕಂಬನಿ ತುಂಬಿತು. ಆತನು ಉಕ್ಕಿದ ಭಾವನೆಗಳಿಂದ ಗದ್ಗದಿತನಾಗಿ ನುಡಿದನು, ‘ಭಗವಂತಾ, ನೀನು ನಿನ್ನ ಭಕ್ತರನ್ನು ರಕ್ಷಿಸಲು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧ, ನಿನ್ನ ಕೃಪೆಗೆ ಮಿತಿಯಿಲ್ಲ.’

ಅವತಾರವು ಚಿಕ್ಕ ಚಿಕ್ಕ ಲೌಕಿಕ ಲೆಕ್ಕಾಚಾರಗಳಿಗೆ ಅತೀತವಾದದ್ದು. ಭಕ್ತನ ವಿಷಯದಲ್ಲಿ ಯಾವುದೇ ಕಾರ್ಯವೂ ಭಗವಂತನಿಗೆ ಕೀಳೂ ಅಲ್ಲ, ಅಲ್ಪವೂ ಅಲ್ಲ. ಮಾಡಬೇಕಾದ್ದ ಕಾರ್ಯವನ್ನು ಯಾವುದೇ ಸ್ಥಳ ಮತ್ತು ಕಾಲದ ಮಿತಿಯಿಲ್ಲದೇ ಮಾಡಿಯೇ ತೀರುತ್ತಾನೆ. ಭಕ್ತರ ರಕ್ಷಣೆ ಮತ್ತು ಯೋಗಕ್ಷೇಮ ಅವನಿಗೆ ಯಾವಾಗಲು ಮೊದಲ ಆದ್ಯತೆಯೇ. ಕೃಷ್ಣನು ಸದಾ ಪಾಂಡವರನ್ನು ಕಾಪಾಡುತ್ತಿದ್ದನು, ಮತ್ತು ಅವರೂ ಕೃಷ್ಣನನ್ನು ದೃಢಭಕ್ತಿಯಿಂದ ಆರಾಧಿಸುತಿದ್ದರು.

ಕೃಷ್ಣನು ತನ್ನ ಭಕ್ತರನ್ನು ರಕ್ಷಿಸಲು ಕೈಗೊಡ ಕ್ರಮಗಳು ನಿಜಕ್ಕೂ ಬೆರಗುಗೊಳಿಸುವಂತದ್ದು. ಭಕ್ತರನ್ನು ರಕ್ಷಿಸಲು ಅವನು ಏನು ಮಾಡಲೂ ಹೇಸುತ್ತಿರಲಿಲ್ಲ. ಅವರಿಗೆ ನಿಜಭಕ್ತಿಯಿದ್ದರೆ ಸಾಕು, ಅವನು ಕಾಪಾಡುತ್ತಿದ್ದನು. ಆದ್ದರಿಂದಲೇ ಎಲ್ಲರೂ ಭಕ್ತಿ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.

-ಭಗವಾನರು ಕೊಡೈಕೆನಾಲಿನ ಸಾಯಿ ಶ್ರುತಿಯಲ್ಲಿ ಏಪ್ರಿಲ್ 26, 1988 ರಂದು ನೀಡಿದ ದಿವ್ಯೊಪನ್ಯಾಸ.

27 views0 comments

Comentários


bottom of page