top of page

Sanathana Sarathi- kannada -1 ಸನಾತನ ಸಾರಥಿ-ಕನ್ನಡ-1

ಭಾರತ ದೇಶ ಅವತಾರಗಳ ಭೂಮಿ*

ಹೃದಯ ಪಾವಿತ್ರ್ಯತೆಯನ್ನು ಬೆಳೆಸಿಕೊಂಡು ದೈವಪ್ರೇಮವನ್ನು ಗಳಿಸಿರಿ


ನಾವು ಅಧಾರ್ಮಿಕ ಜೀವನಶೈಲಿಯನ್ನು ತ್ಯಜಿಸಬೇಕು. ಧರ್ಮೋ ರಕ್ಷತಿ ರಕ್ಷಿತಃ. (ಧರ್ಮವನ್ನು ಯಾರು ರಕ್ಷಿಸುತ್ತಾರೋ, ಅವರನ್ನು ಧರ್ಮವು ರಕ್ಷಿಸುತ್ತದೆ). ನಾವು ತ್ಯಾಗಮನೋಭಾವವನ್ನು ಭಕ್ತಿಯಿಲ್ಲದೇ ಆಚರಿಸಿದರೆ ದೈವಕೃಪೆಯನ್ನು ಪಡೆಯಲಾರೆವು. ನಾವು ಕೆಲವು ಸಂಕಷ್ಟಗಳು, ನಷ್ಟಗಳು ಮತ್ತು ದುರಂತಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.

ವಜ್ರವನ್ನು ಹಲವು ರೀತಿಯಲ್ಲಿ ಕತ್ತರಿಸಿ ಪರಿಶುದ್ಧಗೊಳಿಸಿದಾಗ ಮಾತ್ರ ಅದರ ಮೂಲಬೆಲೆಯು ವೃದ್ಧಿಸುತ್ತದೆ. ಅಂತೆಯೇ ಒಳ್ಳೆಯ ಜನರಿಗೆ ಹಲವು ಸಂಕಷ್ಟಗಳು ಎದುರಾಗುತ್ತವೆ.

ಹಣ್ಣು ಬಿಡುವ ಮರಕ್ಕೆ ಮಾತ್ರ ಜನರು ಕಲ್ಲು ಹೊಡೆಯುತ್ತಾರೆ. ಯಾರೂ ಬರಡು ಮರಕ್ಕೆ ಕಲ್ಲು ಹೊಡೆಯುವುದಿಲ್ಲ. ಹಾಗಾಗಿ ನಾವು ಯಾವಾಗಲೂ ಅನ್ಯರು ನಮ್ಮ ಹಾನಿ ಮಾಡುತ್ತಿದ್ದಾರೆಂದು ತಿಳಿಯದೇ ಹೊಂದಾಣಿಕೆ ಮನೋಭಾವದಿಂದ ಸ್ವೀಕರಿಸಬೇಕು. ನಾವು ಫಲದಾಯಕರಾಗಿದ್ದೇವಾದ್ದರಿಂದ ಎಲ್ಲರೂ ನಮ್ಮನ್ನೂ ಗಮನಿಸುತ್ತಿದ್ದಾರೆ. ಇಲ್ಲದಿದ್ದರೆ ಯಾರೂ ನಮ್ಮನ್ನುಗಮನಿಸುತ್ತಲೇ ಇರಲಿಲ್ಲ.

ದೇವರನ್ನು ಪಡೆಯುವ ಬಗೆ:

ಹಾಗಾಗಿ ನೀವು ಫಲದಾಯಕ ಹಾಗೂ ಉತ್ಪಾದಕರಾಗಿದ್ದೀರೆಂಬ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಒಬ್ಬ ಭಕ್ತನಿಗೆ ಈ ರೀತಿಯ ದೃಢವಿಶ್ವಾಸ ಇದ್ದಾಗಲೇ ಧೈರ್ಯವು ದೊರೆಯುವುದು. ಒಂದು ಮರದಲ್ಲಿ ಯಾವುದೇ ಹಣ್ಣಿಲ್ಲದಿದ್ದರೆ ಯಾರೂ ಅತ್ತ ನೋಡುವುದಿಲ್ಲ. ಆದರೆ ಪ್ರತಿ ಮನುಷ್ಯನಲ್ಲಿಯೂ ಒಂದು ಫಲವಿದೆ. ಯಾವುದು ಆ ಫಲ? ಭಕ್ತಿಯೇ ಆ ಫಲ.

ಭಕ್ತಿ ಅಮೃತ ಸ್ವರೂಪಚ ಎಂದರು ನಾರದ.

ಯಲ್ಲಬ್ಧ್ವಾ ಪುಮಾನ್ ಇಚ್ಚರಮೋ ಭವತಿ ತೃಪ್ತೋ ಭವತಿ ಮತ್ತೋ ಭವತಿ ಆತ್ಮಾರಂ ಭವತಿ || (ಇದನ್ನು ಪಡೆದಾಗ ಮಾನವನು ರೋಮಾಂಚನಗೊಳ್ಳುತ್ತಾನೆ, ಆತ್ಮತೃಪ್ತಿಗೊಳ್ಳುತ್ತಾನೆ, ಪರಮಾನಂದದಲ್ಲಿ ಮುಳುಗುತ್ತಾನೆ)

ಭಕ್ತನು ಭಕ್ತಿಯಿಂದ ಹುಚ್ಚನಾಗುತ್ತಾನೆ, ಪರಮಾನಂದದಲ್ಲಿ ಮುಳುಗುತ್ತಾನೆ, ಅವನು ಜಗತ್ತಿನ

ಅಸ್ತಿತ್ವ್ವವನ್ನು ಮರೆತು ಅದರ ವ್ಯವಹಾರಗಳಿಂದ ವಿಮುಖನಾಗಿ ವಿಸ್ಮೃತಿಗೊಳ್ಳುತ್ತಾನೆ.

ಇಂತಹ ಪರಮ ಭಕ್ತಿಗೆ ದಾರಿ ಯಾವುದು?

ಕರ್ಮ, ಭಕ್ತಿ , ಜ್ಞಾನ ಮತ್ತು ಯೋಗ –ಇವುಗಳೇ ಪರಮಾತ್ಮನನ್ನು ತಲುಪುವ ದಾರಿಗಳು.

ಸಾಮಾನ್ಯ ಜನರಿಗೆ ಅರ್ಚನೆಯನ್ನು ದಾರಿಯೆಂದು ಭೋಧಿಸಲಾಗಿದೆ. ಒಂಬತ್ತು ಬಗೆಯ ಪೂಜೆಗಳಿದ್ದು ಅವನ್ನು ಹೆಸರಿಸಲು- ಶ್ರವಣಂ (ಆಲಿಸುವುದು), ಕೀರ್ತನಂ ( ಹಾಡುವುದು), ವಿಷ್ಣ್ಣುಸ್ಮರಣಂ (ಭಗವಂತನ ಸ್ಮರಣೆ), ಪಾದಸೇವನಂ(ಭಗವಂತನ ಪಾದಸೇವೆ ಮಾಡುವುದು),

ವಂದನಂ (ವಂದಿಸುವುದು), ಅರ್ಚನಂ (ಅರ್ಚನೆ ಪೂಜೆ ಮಾಡುವುದು), ದಾಸ್ಯಂ (ಭಗವಂತನ ದಾಸನಾಗಿ ಸೇವೆ ಮಾಡುವುದು), ಸ್ನೇಹಂ (ದೇವರ ಸ್ನೇಹವನ್ನು ಪಡೆಯುವುದು). ಆತ್ಮನಿವೇದನಂ (ಸ್ವಯಂ ಶರಣಾಗತನಾಗುವುದು). ಇವೆಲ್ಲವೂ ಭಗವಂತನನ್ನು ಪೂಜಿಸುವ ವಿವಿಧ ಕ್ರಮಗಳಾಗಿವೆ. ಮನಸ್ಸನ್ನು ಪರಿಶುದ್ಧಗೊಳಿಸುವುದು ಈ ವಿವಿಧ ರೀತಿಗಳಿಂದ ಸಾಧ್ಯ. ಇದುವೇ ಭಕ್ತಿಮಾರ್ಗವಾಗಿದೆ.

ಕರ್ಮ ಎಂದರೇನು? ಯಜ್ಞ ಯಾಗಾದಿಗಳನ್ನು ವೈದಿಕ ವಿಧಿವಿಧಾನಗಳ ಅನ್ವಯ ನೆರವೇರಿಸುವುದು; ದಾನಧರ್ಮಗಳನ್ನು ಲೋಕಕಲ್ಯಾಣಕ್ಕಾಗಿ ಕರ್ಮಫಲದ ಮತ್ತು ಸ್ವಾರ್ಥದ ಅಪೇಕ್ಷೆಯಿಲ್ಲದೇ ನಡೆಸುವುದೇ ‘ಕರ್ಮ’.

ಜ್ಞಾನ ಎಂದರೇನರ್ಥ? ಲೌಕಿಕ ವಸ್ತುಗಳ ಇಚ್ಚೆಯನ್ನು ತ್ಯಜಿಸಿ ಎಲ್ಲವನ್ನೂ ಪರಮಾತ್ಮನೆಂದು ಬಗೆದು, ಮೋಕ್ಷದ ಮಾರ್ಗವನ್ನು ಕಂಡುಹಿಡಿಯುವುದರ ಮೂಲಕ ಸರ್ವಂ ಬ್ರಹ್ಮಮಯಂ ಎಂಬುದೇ ನಿಜವಾದ ಜ್ಞಾನಮಾರ್ಗ. ಮನಸ್ಸಿನ ಚಂಚಲತೆಯನ್ನು ನಿಯಂತ್ರಣದಲ್ಲಿಡುವ ವಿಧಾನವನ್ನುಯೋಗ ಎನ್ನುತ್ತಾರೆ, ಯೋಗ ಚಿತ್ತ ವೃತ್ತಿ ನಿರೋಧ ಎಂಬುದು ಇದೇ ಅರ್ಥದಲ್ಲಿ. ಒಬ್ಬನಿಗೆ ಯೋಗವನ್ನು ಮಾಡಲು ಕೆಲವು ಅರ್ಹತೆಯೂ ಇರಬೇಕು. ಎಲ್ಲ ಕಾರ್ಯವನ್ನೂ ವೇದಾನುಸಾರವಾಗಿ ನಡೆಸಬೇಕು. ವೇದದಲ್ಲಿ ನಿಷಿದ್ಧಿಸಿದ ಕಾರ್ಯಗಳನ್ನು ತ್ಯಜಿಸಿರಬೇಕು. ಎಲ್ಲರಿಗೂ ಇದು ಸಾಧ್ಯವಿಲ್ಲ. ಇದು ಸಾಮಾನ್ಯ ಜನರ ಶಕ್ತಿಗೆ ಮೀರಿದ್ದಾಗಿದೆ. ಜ್ಞಾನಮಾರ್ಗವೂ ಕಷ್ಟಕರವಾಗಿದೆ. ಯೋಗಮಾರ್ಗದಲ್ಲಿ ಸಾಧನೆ ಮಾಡುವುದು ಬಹಳ ಕ್ಲಿಷ್ಟಕರ ಏಕೆಂದರೆ ನಾವು ಮೈಮೇಲೆ ಒಂದು ಇರುವೆ ಓಡಾಡಿದರೂ ಸಹಿಸಲಾರೆವು. ಜ್ಞಾನ ಸಂಪಾದನೆಯ ಮಾರ್ಗದಲ್ಲಿ ಮುಂದುವರೆಯಲು ಸರ್ವಾಂತರ್ಯಾಮಿಯಾದ ಭಗವಂತನ ಅಸ್ತಿತ್ವವನ್ನು ನಂಬುವುದೂ ಸಹಾ ನಿಜಕ್ಕೂ ಅಸಾಧ್ಯವೇ ಆಗಿದೆ.


ತ್ಯಾಗರಾಜರು ಹಾಡಿದ್ದಾರೆ: ರಾಮನು ಒಂದು ಇರುವೆಯಲ್ಲೂ, ಬ್ರಹ್ಮನಲ್ಲೂ, ಕೇಶವನಲ್ಲೂ ಇರತಕ್ಕವನು. ಅವನು ನನ್ನನ್ನು ರಕ್ಷಿಸಲಿ ಎಂದು. ತ್ಯಾಗರಾಜರು ಭಗವಂತನು ಬ್ರಹ್ಮನಲ್ಲಿಯೂ, ಇರುವೆಯಲ್ಲಿಯೂ ಇರುವವನು ಎಂದರು. ಆದರೆ ಒಂದು ಇರುವೆ ನಮ್ಮ ಬಳಿ ಬಂದರೆ ನಾವು ಅದನ್ನು ಕೊಲ್ಲುತ್ತೇವೆ. ನಮ್ಮಲ್ಲಿ ಈ ರೀತಿಯ ಮನೋಭಾವವಿದ್ದರೆ ಹೇಗೆ ತಾನೆ ದೈವಜ್ಞಾನವನ್ನು ಪಡೆಯಲು ಸಾಧ್ಯ? ಈ ಕಲಿಯುಗದಲ್ಲಿ ಮಾನವನು ದಿನೇ ದಿನೇ ಅವನತಿ ಹೊಂದುತ್ತಿದ್ದಾನೆ. ನಾನೊಂದು ಉದಾಹರಣೆ ನೀಡುತ್ತೇನೆ: ನಾವೀಗ ಮಾತನಾಡುತ್ತಿರುವಾಗ ಒಂದು ನೊಣವು ಬಂದು ನಿಮ್ಮ ಮೂಗಿನ ಮೇಲೆ ಕೂರುತ್ತದೆ ಎನ್ನೋಣ. ನಾವು ತಕ್ಷಣವೇ ಪ್ರತಿಕ್ರಿಯಿಸಿ ಅದನ್ನು ಓಡಿಸುತ್ತೇವೆ. ನಮ್ಮ ಈ ದೊಡ್ಡ ದೇಹದ ಮೇಲೆ ಆ ಚಿಕ್ಕ ನೊಣವು ಕುಳಿತರೆ ನಮಗೇನು ತೊಂದರೆಯಾದೀತು? ನೀವು ಓಡಿಸಿದ ಕೂಡಲೇ ಆ ನೊಣವೂ ಹೋಗಿಯೇ ಬಿಡುವುದಿಲ್ಲ, ಅದುವೇ ಅದರ ಗುಣ. ಅದು ಮತ್ತೆ ಬಂದು ಅಲ್ಲಿಯೇ ಕೂರುತ್ತದೆ. ಆ ನೊಣವೂ ಸಹಿತಾ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ನಿಮಗೆಷ್ಟು ತಾಳ್ಮೆಯಿದೆ ಎಂದು ಅದು ತಿಳಿಯಬಯಸಿರಬಹುದು. ಮೊದಲು ಅದು ಬಂದಾಗ ಓಡಿಸುತ್ತೀರಿ, ಅದಿನ್ನೂ ನಿಮ್ಮ ಗಮನ ಕೆಡಿಸಿದರೆ ಅದನ್ನು ಸ್ವಲ್ಪ ಅಪರಾಧಿ ಪ್ರಜ್ಞೆಯೂ ಇಲ್ಲದೇ ಒಮ್ಮೆಲೇ ಕೊಂದೇ ಬಿಡುತ್ತೀರಿ! ಈ ರೀತಿಯ ಮನೋಭಾವವಿದ್ದವರು ನಾವು ಆತ್ಮಜ್ಞಾನದ ರಹಸ್ಯ ವಿದ್ಯೆಯನ್ನ್ನು ಅರಿಯಲು ಸಾಧ್ಯವೆ? ಇಂತಹಾ ಮಾನವನು ಹೇಗೆ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಕರ್ಮಯೋಗದ ರಹಸ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ?

ಭಕ್ತಿ ಎಂಬುದು ಶಾಶ್ವತ ಆನಂದ

ಭಕ್ತಿ ಎಂಬುದು ಎಲ್ಲಕ್ಕಿಂತಾ ಅತ್ಯಂತ ಸುಲಭ ಮಾರ್ಗ. ಇದಕ್ಕೆ ಯಾವುದೇ ವಯಸ್ಸು, ಸಮಯ ಅಥವಾ ಸ್ಥಳದ ಅರ್ಹತೆಯೂ ಬೇಕಿಲ್ಲ. ಭಕ್ತಿಯು ಪ್ರೇಮಕ್ಕೆ ಸಂಬಂಧಿತವಾಗಿದೆ. ನಾವು ಪ್ರೇಮದಿಂದ ತುಂಬಿದ್ದಾಗ ಬೇರೆ ಯಾವುದರ ಹಿಂದೆಯೂ ಹೋಗಬೇಕಾಗಿರುವುದಿಲ್ಲ. ಭಗವಂತನನ್ನು ತಲುಪಲು ಅತ್ಯಂತ ಸುಲಭ ಮಾರ್ಗವೂ ಸಹಾ ಭಕ್ತಿಯೇ. ಯಾವಾಗ ಭಕ್ತನ ಮನಸ್ಸು ಭಕ್ತಿಯಿಂದ ತುಂಬಿ ತುಳುಕುತ್ತಿರುತ್ತದೋ ಅವನ ಹೃದಯವು ಕರಗಿ ಅವನಲ್ಲಿ ಆನಂದವು ನದಿಯಂತೆ ಹರಿಯುತ್ತದೆ. ಆ ಆನಂದವೇ ಬ್ರಹ್ಮನಾಗಿ ಪರಿವರ್ತಿತವಾಗುತ್ತದೆ. ಆದುದರಿಂದ ಭಕ್ತಿಯೇ ಶಾಶ್ವತ ಆನಂದವಾಗಿದೆ. ಭಕ್ತಿಯು ಪರಮಾನಂದಕ್ಕೂ ಸಹಕಾರಿಯಾಗಿದೆ. ಭಕ್ತಿಯಿಂದ ಯಾವುದನ್ನು ಪಡೆಯುತ್ತೇವೋ ಅದುವೇ ಪರಮಾನಂದ, ಬ್ರಹ್ಮಾನಂದ. ಭಕ್ತಿಯು ಯಾವುದೇ ಸ್ಥಳಕ್ಕೆ ಸೀಮಿತವಾಗಿಲ್ಲ. ಭಕ್ತಿಯೆಂಬುದು ಒಂದಿದ್ದರೆ ನಾವು ಎಲ್ಲಿ ಬೇಕಾದರೂ ದೈವತ್ವವನ್ನು ಅನುಭವಿಸಬಹುದು: ಕಾಡಿನಲ್ಲೋ, ಆಕಾಶದಲ್ಲೋ, ರಸ್ತೆಯಲ್ಲೋ, ತೋಟದಲ್ಲೋ, ಮನೆಯಲ್ಲೋ, ಪ್ರಪಂಚದಲ್ಲಿ ಎಲ್ಲಿದ್ದರೂ ಸರಿಯೇ. ಭಕ್ತಿಮಾರ್ಗವು ನಮ್ಮನ್ನು ನಮ್ಮ ಗುರಿಗೆ ಸುಲಭವಾಗಿ ಸುರಕ್ಷಿತವಾಗಿ ತಲುಪಿಸುತ್ತದೆ. ಸಹಸ್ರಾರು ಭಕ್ತರು ಭಕ್ತಿಮಾರ್ಗದಲ್ಲಿ ನಡೆದು ದೈವತ್ವವನ್ನು ಅನುಭವಿಸಿದ್ದಾರೆ. ಅವರು ಪರಮಾತ್ಮನಲ್ಲಿ ಅತೀಂದ್ರಿಯವಾಗಿ ಲೀನವಾಗಿ ಹೋಗಿದ್ದಾರೆ.

ಜ್ಞಾನಮಾರ್ಗದ ಮೂಲಕ ದೈವತ್ವವನ್ನು ಅನುಭವಿಸಿದವರು ಕೆಲವರು ಮಾತ್ರವೇ ಇದ್ದಾರೆ. ದೈವತ್ವದ ಅನುಭವವು ಎಲ್ಲರಿಗೂ ಸಾಧ್ಯವೂ ಇಲ್ಲ. ಆಧ್ಯಾತ್ಮ ಮಾರ್ಗದಲ್ಲಿ ದೇಶದಲ್ಲಿ ಅಥವಾ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದವರೂ ಕೇವಲ ಭಕ್ತರೇ ಆಗಿದ್ದಾರೆ. ಭಕ್ತಿಮಾರ್ಗದಲ್ಲಿ ನಡೆಯಲು ಯಾವ ಜಾತಿ, ಮತ, ವಯಸ್ಸು, ಸಂಪತ್ತು ಅಥವಾ ವಿದ್ಯೆಯ ಅರ್ಹತೆಯೂ ಬೇಕಿಲ್ಲ.

ಒಂದು ಚಿಕ್ಕ ಉದಾಹರಣೆ:

ವಾಲ್ಮೀಕಿಯು ಯಾವ ವಂಶದವನಯ್ಯಾ?

ನಂದನು ಯಾವ ಗ್ರಾಮದಲ್ಲಿ ಹುಟ್ಟಿದನಯ್ಯಾ?

ಬಡ ಕುಚೇಲನು ಯಾವ ಸಂಪತ್ತನ್ನು ಹೊಂದಿದ್ದನಯ್ಯಾ?

ಧ್ರುವನಿಗೆ ಭೂಮಿಯಲ್ಲಿ ಎಷ್ಟು ವಯಸ್ಸಾಗಿತ್ತಯ್ಯಾ?

ಶಬರಿಗೆ ಯಾವ ದೊಡ್ಡ ದೈಹಿಕ ಶಕ್ತಿಯಿತ್ತಯ್ಯಾ?

ವಿಭೀಷಣನಿಗೆ ಯಾವ ವಿವೇಚನೆಯಿತ್ತಯ್ಯಾ?

ಹನುಮಂತನಿಗೆ ಯಾವ ಅತಿಶಯ ಬುದ್ದಿಶಕ್ತಿಯಿತ್ತಯ್ಯಾ?

(ತೆಲುಗು ಪದ್ಯದ ಅನುವಾದ)

ವಿಭೀಷಣನು ಹನುಮಂತನಲ್ಲಿ ಕೇಳಿದನಂತೆ: ನಾನು ಜನ್ಮತಃ ರಾಕ್ಷಸ ರಾವಣನ ತಮ್ಮನಾದ್ದರಿಂದ ರಾಮನು ನನ್ನನ್ನು ಒಪ್ಪಿಕೊಳ್ಳುವನೆ ಎಂದು.

ಆಗ ಹನುಮಂತ ಉತ್ತರವಿತ್ತನು – “ಓ ಮುಗ್ಧನೆ, ರಾಮನು ನಿನ್ನ ವ್ಯಕ್ತಿತ್ವವನ್ನಾಗಲೀ, ವಂಶವನ್ನಾಗಲಿ ಕೊಂಚವೂ ಗಮನಿಸುವುದಿಲ್ಲ. ಅವನು ನಿನ್ನ ಬಾಹ್ಯ ಸೌಂದರ್ಯವನ್ನಾಗಲೀ, ನಿನ್ನ ಶೌರ್ಯ ಅಥವಾ ಶಕ್ತಿ


ಯನ್ನಾಗಲೀ ನೋಡುವುದೇ ಇಲ್ಲ. ನನ್ನ ಸ್ವರೂಪವನ್ನ್ನು ನೋಡು, ಎಷ್ಟು ಅಸಹ್ಯಕರವಾಗಿದೆಯಲ್ಲವೆ? ನನ್ನ ಮುಖವು ಉದ್ದವಾಗಿದೆ. ರಾಮನು ನನ್ನ ಸೊಟ್ಟವಾದ ಬಾಯನ್ನಾಗಲೀ, ಬಾಲವನ್ನಾಗಲೀ ನೋಡಲಿಲ್ಲ. ನನ್ನ ವಿಚಿತ್ರ ವರ್ತನೆಯನ್ನೂ ಗಮನಿಸಲಿಲ್ಲ. ನಾನೊಬ್ಬ ಚಂಚಲ ಚಿತ್ತದ ಕಪಿ. ರಾಮನ್ನು ನನ್ನನ್ನೇ ತನ್ನ ಸಹವಾಸದಲ್ಲಿ ಒಪ್ಪಿದ ಮೇಲೆ ನಿನ್ನನ್ನು ಒಪ್ಪದಿರುವನೆ? ರಾಮನಿಗೆ ನಾನು ನಿನ್ನವನೆಂದು ಹೇಳು. ರಾಮನು ಹೃದಯ ಪಾವಿತ್ರ್ಯತೆಯನ್ನು ಮಾತ್ರ ಗಮನಿಸುತ್ತಾನೆಯೇ ವಿನಾ ಅನ್ಯ ಯಾವುದನ್ನೂ ಅಲ್ಲ”

ರಾಮನು ರಾಮಾಯಣದಲ್ಲಿ ಘೋಷಿಸಿದ್ದಾನೆ- ‘ಯಾರು ಒಮ್ಮೆ ತಮ್ಮನ್ನು ನನ್ನವನೆಂದು ಹೇಳುವರೋ, ಅವರನ್ನು ನಾನು ನನ್ನವನಾಗಿಯೇ ಸೀಕರಿಸಿಬಿಡುತ್ತೇನೆ.’

ಯಾರು ಯಾವ ವ್ಯಕ್ತಿಯೇ ಆಗಿರಲಿ, ಒಮ್ಮೆ ಅವನಿಗೆ ಶರಣಾಗತನಾದರೆ, ಇಡೀ ಜಗತ್ತೇ ಅವನ ವಿರುದ್ಧವಿದ್ದರೂ ಸರಿ, ರಾಮನು ಅವನನ್ನು ತನ್ನವನೆಂದು ಒಪ್ಪಿಬಿಡುತ್ತಾನೆ. ರಾಮಾಯಣ ಮಹಾಕಾವ್ಯದಲ್ಲಿ ರಾಮನು ಈ ವಚನವಿತ್ತಿದ್ದಾನೆ ಮತ್ತು ತನ್ನ ಪಾದಗಳಿಗೆ ನಮಸ್ಕರಿಸಿ ಶರಣಾದ ವಿಭೀಷಣನ ವಿಚಾರದಲ್ಲಿ ಈ ವಚನವನ್ನು ನೆರವೇರಿಸಿದ್ದಾನೆ. ನಮ್ಮನ್ನೇ ಅರ್ಪಿಸಿಕೊಂಡುಬಿಡುವುದೇ ನಿಜವಾದ ಭಕ್ತಿ. ಭಗವಂತನನ್ನು ಪಡೆಯಲು ಇರುವ ಇಂತಹಾ ಸುಲಭ ಮಾರ್ಗವನ್ನು ತೊರೆದು ಇಂದು ಮಾನವನು ಬಹಳ ಕಷ್ಟಕರವೂ ಅಸಾಧ್ಯವೂ ಆದ ದಾರಿಯನ್ನು ಆರಿಸಿಕೊಂಡಿದ್ದಾನೆ.

ಎಲ್ಲ ಮಾರ್ಗಗಳಿಗಿಂತಾ ಭಕ್ತಿಮಾರ್ಗವೇ ಅತ್ಯುತ್ತಮ ಮಾರ್ಗವಾಗಿದೆ.


(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ...)


-ಭಗವಾನರು ಕೊಡೈಕೆನಾಲಿನ ಸಾಯಿ ಶ್ರುತಿಯಲ್ಲಿ ಏಪ್ರಿಲ್ ೨೬, ೧೯೮೮ ರಂದು ನೀಡಿದ ದಿವ್ಯೋಪನ್ಯಾಸ.


ಸತ್ಯಂ ಶಿವಂ ಸುಂದರಂ

ಭಗವಂತನಿಗೆ ಯಾವುದೇ ಸ್ವರೂಪವಿಲ್ಲದಿದ್ದರೂ ಅವನು ಎಲ್ಲಾ ಸ್ವರೂಪಗಳನ್ನೂ ತಾನಾಗಿ ಧರಿಸಬಲ್ಲನು ಮತ್ತು ಎಲ್ಲ ಹೆಸರುಗಳನ್ನೂ ಹೊಂದಬಲ್ಲನು. ಸತ್ಯಂ ಶಿವಂ ಸುಂದರಂ ಮೂರೂ ಬೇರೆ ಬೇರೆ ತತ್ವಗಳಾಗಿ ಕಂಡರೂ ವಾಸ್ತವವಾಗಿ ಮೂರೂ ಒಂದೇ ಆಗಿದೆ. ಸತ್ಯವೇ ಸೌಂದರ್ಯ. ಎಲ್ಲಿ ಸತ್ಯವಿಲ್ಲವೋ, ಅಲ್ಲಿ ಸೌಂದರ್ಯ ಹೇಗಿರಲು ಸಾಧ್ಯ? ಅಸತ್ಯದಲ್ಲಿ ಸೌಂದರ್ಯವಿರಲು ಸಾಧ್ಯವಿಲ್ಲ; ಆಕರ್ಷಣೆಯಿರಬಹುದು ಆದರೆ ಸೌಂದರ್ಯವಲ್ಲ. ಆದ್ದರಿಂದ ಯಾವುದು ಸತ್ಯವೋ ಅದೇ ಸುಂದರವಾಗಿರುತ್ತದೆ. ಎಲ್ಲಿ ಸತ್ಯ ಮತ್ತು ಸೌಂದರ್ಯ ಒಂದಾಗುತ್ತದೋ ಅಲ್ಲಿ ದೈವತ್ವ ಅಥವಾ ಶಿವನು ಅಭಿವ್ಯಕ್ತನಾಗುತ್ತಾನೆ. ಸತ್ಯ, ಶಿವ ಮತ್ತು ಸುಂದರ ಮೂರೂ ಒಂದೇ ತತ್ವವಾಗಿದೆ.

-ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ


ಭಾಗವತ ವಾಹಿನಿ30 views0 comments

Comments


bottom of page