top of page

#1983 #ಅನುಭವಗಳು...#whatsapp_channel ಗಾಗಿ #ರೈಲ್ #ಥ್ರಿಲ್...ಬೆಂಗಳೂರು ಹುಡುಗರ ಡೆಲ್ಲಿ ಅವಾಂತರ!


ರೈಲ್ ಥ್ರಿಲ್...ಬೆಂಗಳೂರು ಹುಡುಗರ ಡೆಲ್ಲಿ ಅವಾಂತರ!

~~~~~~~~~~~~~~~~~~~~~~~~~~~~~~

ಬೆಂಗಳೂರಿನ ಯು ವಿ ಸಿ ಇ ಕಾಲೇಜಿನ 1983-84 ರಲ್ಲಿ ಹೊರಬಂದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಾವು '83 ನಲ್ಲೇ ಆಲ್ ಇಂಡಿಯಾ ಎಜುಕೇಶನಲ್ ಟೂರ್ ಹೋಗಿದ್ದೆವು.

ನಾನೋ ಮಲ್ಲೇಶ್ವರಂನಲ್ಲಿ ಬೆಳೆದ ಪಕ್ಕಾ ’ಬೊಮ್ಮನ್ ಮತ್ತು ಕುಡುಮಿ’ ಹುಡುಗ (ಅಂದರೆ-ಆಗಿನ‌ ಆಡುಭಾಷೆಯಲ್ಲಿ ಬ್ರಾಹ್ಮಣ, ಪುಸ್ತಕದ ಹುಳು...).‌ ಅಪ್ಪ ಅಮ್ಮನ‌ ಜೊತೆ ಬಿಟ್ಟು ಬೇರೆ ಊರಿಗೆ ಹೋಗಿದ್ದೇ ಇಲ್ಲ... ಅಪ್ಪ ಅಂತೂ ಹತ್ತತ್ತು ಸಲ ’ಹುಷಾರು ಗ್ರೂಪ್ ಮಿಸ್ ಮಾಡ್ಕೋಬೇಡಾ, ದುಡ್ಡು ಜೋಪಾನ’ ಅಂತಾ ನನಗೆ ಹೇಳಿ ಹೇಳಿ ಉರು ಹೊಡೆಸಿದ್ದರು. ನಮಗೆ ಅದು 31 ದಿನ ದೊಡ್ಡ ಅವಧಿಯ ಟ್ರಿಪ್, ಒಂದು ಬೋಗಿಯನ್ನೇ ಕಾಲೇಜಿನವರು ಪ್ರತ್ಯೇಕವಾಗಿ ನಮಗಾಗಿ ಬುಕ್ ಮಾಡಿದ್ರು. ಅದರಲ್ಲಿ ನಂನಮ್ಮ ವೈಯಕ್ತಿಕ ಬರ್ತ್ ನಲ್ಲಿ ನಾವು ಸೆಟಲ್ ಆಗಿರಬೇಕು. ಆಗಿನ ನಾನ್-ಏಸಿ ಥರ್ಡ್ ಕ್ಲಾಸ್ ಬೋಗಿ ಅದು. ನಮ್ಮಲ್ಲೇ ಇಬ್ಬರೂ ಟೂರ್ ಲೀಡರ್ ಅವರ ಬಳಿಯೇ ನಮ್ಮ ಬುಕಿಂಗ್, ರೈಲಿನ ಕಾರ್ಯಕ್ರಮ ಎಲ್ಲಾ ಇರೋದು. ಅದರಲ್ಲಿ ಒಬ್ಬ ಸ್ವಲ್ಪ ಉಡಾಫೆಯವನು. ಇನ್ನೊಬ್ಬ ಎಷ್ಟು ತಾನೇ ನೋಡ್ಕೋತಾನೆ.. ಆ ಬೋಗಿಯನ್ನು ಅಲ್ಲಲ್ಲಿ ಬೇರೆ ಬೇರೆ ಊರಿಗೆ ಹೋಗಿವ ರೈಲಿಗೆ ಅಟ್ಯಾಚ್/ ಡಿಟ್ಯಾಚ್ ಮಾಡುತ್ತಿದ್ದರು, ಅದನ್ನು ನಾವು ಲಾಡ್ಜಿಗೆ ಹೋದಾಗ ಡಿಪೋದಲ್ಲಿ ಬಿಟ್ಟುಬಿಡುತ್ತಿದ್ದರು, ಪುನಃ ಹೊಸ ರೈಲಿಗೆ ಕೊನೆಯಲ್ಲಿ ಅಟ್ಯಾಚ್ ಮಾಡುತ್ತಿದ್ದರು. ಇಷ್ಟೆಲ್ಲ ವಿವರ ಯಾಕೆ ಹೇಳ್ತೀನಿ ಅಂದರೆ ಅಲ್ಲೇ ಇರೋದು ಮುಂದಿನ ಸ್ವಾರಸ್ಯ.

ನಾವು ಮದರಾಸಿಂದ ಒರಿಸ್ಸಾ ಸುತ್ತಿ ದೆಹಲಿಗೆ ಬಂದಿದ್ದೆವು, ಅಬ್ಬಾ ಏಪ್ರಿಲ್ ತಿಂಗಳ ಸೆಖೆಯೋ ಸೆಖೆ! ಹುಡುಗರು ಮಾತ್ರ ಇದ್ದುದರಿಂದ ನಾವೆಲ್ಲಾ ಚಡ್ಡಿ ಬನಿಯನ್ನಿನಲ್ಲೇ ಮಧ್ಯಾಹ್ನ ಇರಬೇಕಾದಷ್ಟು ಬೋಗಿ ತಾರಸಿ ಸುಟ್ಟು ಹೋಗುತ್ತಿತ್ತು. ದೆಹಲಿಯಿಂದ ಮುಂದೆ ವಾರಣಾಸಿಗೆ ಹೋಗುವುದೆಂದು ನಮ್ಮ ಕಾರ್ಯಕ್ರಮ ಇತ್ತು, ಅದೂ ಎರಡು ದಿನದ ನಂತರ. ನಾವೆಲ್ಲ ಕಡೆ ಯೂಥ್ ಹಾಸ್ಟೇಲ್ ಬುಕ್ ಮಾಡಿ ಅಲ್ಲಿರುತ್ತಿದ್ದೆವು. ನಾವು ಇಳಿದುಕೊಂಡಿದ್ದು ದೆಹಲಿಯ ಚಾಣಕ್ಯಪುರಿ ಎನ್ಕ್ಳೇವ್ ಬಳಿಯ ಯೂಥ್ ಹಾಸ್ಟೆಲಿನಲ್ಲಿ . ದೆಹಲಿಯ ದರ್ಶನ ಮುಗಿಸಿ ಹೊರಡುವುದು ರಾತ್ರಿ 8 ಗಂಟೆಯ ಹೌರಾಗೆ ಹೋಗುವ ಎಕ್ಸ್ಪ್ರೆಸ್ ರೈಲಿನಲ್ಲಿ ಎಂದು ಲೀಡರ್ ನಂ 1 ಹೇಳಿದ್ದ. ಆದರೆ ಈ ಪ್ರೋಗ್ರಾಂ ಪಟ್ಟಿ ಅವತ್ತೂ ಅಂತ ಲೀಡರ್ 2 ರ ಬಳಿ ಕೊಟ್ಟಿದ್ದ. ನಾವು ಬಂದಿಳಿದಿದ್ದ ಓಲ್ಡ್ ಡೆಲ್ಲಿ ರೈಲ್ವೇ ಸ್ಟೇಷನ್ನಿನಲ್ಲಿ, ಅಲ್ಲಿ ತಾನೇ ಮತ್ತೆ ಬೋಗಿ ಅಟ್ಯಾಚ್ ಮಾಡುತ್ತಾರೆಂದು ನಾವು ಅದಕ್ಕೆ ಸ್ವಲ್ಪ ಹೆಚ್ಚಿಗೆ ಸಮಯ ಮಾರ್ಜಿನ್ ಇಟ್ಟುಕೊಂಡೇ ಬ್ಯಾಗೆಲ್ಲಾ ಬಸ್ಸಿನ ಮೇಲೆ ಹಾಕಿ ಎರಡು ಬಸ್ ಜನ ಹೊರಟಿದ್ದೆವು. ರಸ್ತೆಯಲ್ಲಿ ಸ್ಟೇಷನ್ ಬಳಿಗೆ ಬಂದಾಗ ಒಮ್ಮೆ ಒಂದು ಬಸ್ ಡ್ರೈವರ್ ‘ಸಾಬ್, ನೀವು ಓಲ್ಡ್ ಡೆಲ್ಲಿ ತಾನೇ ಹೋಗಬೇಕು, ಪಕ್ಕಾ ಒಂದ್ಸಲ ನೋಡಿ... ’ ಎಂದು ಕೇಳಿದ. ಲೀಡರ್ ನಂಬರ್ 2 ಆಗ ಪಟ್ಟಿಯನ್ನು ಲೀಡರ್ 1 ಕೈಗೆ ಕೊಟ್ಟ..

ಅವನು ಅದನ್ನು ನೋಡಿ, ‘ಹೌದು ಒಲ್ಡ್ ಡೆಲ್ಲಿ ಸ್ಟೇಷನ್ನಿಗೆ ಈಗ ಹಜ಼್ರತ್ ನಿಜಾಮುದ್ದೀನ್ ಎನ್ನುತಾರೆ ತಾನೆ?... ಅಲ್ಲೇ!’ ಎಂದು ಉತ್ತರಿಸಿದ.

ಅದಕ್ಕೆ ಡ್ರೈವರ್ ಹೇಳಿದ ಉತ್ತರ ಕೇಳಿ ನಾವೆಲ್ಲಾ ಹೈರಾಣಾಗಿ ಹೋದೆವು.

"ನಹಿ ನಹೀ ಸಾಬ್, ಅದು ಅಲಗ್ ಸ್ಟೇಷನ್, ಬಹಳ ದೂರ ಇದೆ...ನಮಗೆ ಈಗ ರೂಟ್ ಚೇಂಜ್ ಮಾಡಿಕೊಂಡು ಸೌತ್ ಡೆಲ್ಲಿಗೆ ಹೋಗಬೇಕಲ್ಲ.. ಎಂಥ ಕೆಲಸ ಮಾಡಿದಿರಿ!!" ಎಂದ.

ನಮಗೆ ಯಾರಿಗೂ ಈ ವಿಷಯವೇ ಗೊತ್ತಿಲ್ಲ, ಡೆಲ್ಲಿ ಅಂದರೆ ಒಂದೇ ಸ್ಟೇಷನ್ ಎಂದುಕೊಂಡಿದ್ದೆವು. ಆಗ ತಾನೇ ಹಜ಼್ರತ್ ನಿಜಾಮುದ್ದೀನ್ ಎಂಬ ಹೊಸ ಸ್ಟೇಷನ್ ತೆರೆದಿದ್ದರು, ನಮ್ಮ ಬೋಗಿಯನ್ನು ರೈಲ್ವೇಯವರೇ ಇಳಿದ ಸ್ಟೇಷನ್ನಿಂದ ಎಳೆದುಕೊಂಡು ಹೋಗಿ ಅಲ್ಲಿನ ರೈಲಿಗೆ ಅಟ್ಯಾಚ್ ಮಾಡುತ್ತಾರೆ ಎಂದು ಸಹ ಗೊತ್ತಿರಲಿಲ್ಲ. ಹಾಗೆ ನೋಡಿದರೆ ದೆಹಲಿ ನಗರದಲ್ಲಿ ಮೂರು ನಿಲ್ದಾಣಗಳಿವೆ- ಓಲ್ಡ್ ಡೆಲ್ಲಿ, ನ್ಯೂಡೆಲ್ಲಿ ಮತ್ತು ಹಜ಼್ರತ್ ನಿಜಾಮುದ್ದೀನ್ ಅಂತಾ ಅಲ್ಲೇ ಬಸ್ಸಿನಲ್ಲಿ ಗೊತ್ತಾಗಿದ್ದು. (ಇದಾದ ಹಲವು ವರ್ಷಗಳ ಬಳಿಕೆ ನಾನೇ 2 ವರ್ಷ ಕಾಲ ನವದೆಹಲಿ ನಿವಾಸಿಯಾಗಿದ್ದಾಗ ಈ ಮೂರು ನಿಲ್ದಾಣಗಳನ್ನೂ ಬಳಸಿದ್ದೇನೆ.)

ನಮ್ಮ ಇಬ್ಬರು ಲೇಡರುಗಳೂ ಇದನ್ನು ಗಮನಿಸಿರಲೇ ಇಲ್ಲ, ದೆಹಲಿಯಿಂದ 8 ಗಂಟೆಗೆ ಹೊರಡುವುದು ಎಂದುಕೊಂಡು ಸ್ಟೇಷನ್ ಹೆಸರು ಚೆಕ್ ಮಾಡಿಕೊಂಡಿರಲಿಲ್ಲ.

ಅವತ್ತು ....ಅಲ್ಲಿಗೆ ಹೋಗಲು ಓಲ್ಡ್ ಡೆಲ್ಲಿಯಿಂದ ಸಂಜೆಯ ಟ್ರಾಫಿಕ್ಕಿನಲ್ಲಿ 1 ಗಂಟೆ ಆಗುತ್ತಂತೆ ( ಆಗಿನ ಕಾಲದಲ್ಲೇ)... ಆಗ 7 ಗಂಟೆ ಆಗುತ್ತಿದೆ, ನಾವು ಒಂದು ಗಂಟೆ ಮುಂಚೆಯೇ ಸ್ಟೇಷನ್ನಿಗೆ ಬಂದೆವು ಎನ್ನುವ ಖುಶಿಯಲ್ಲಿದ್ದವರಿಗೆ ಈಗ ಹಜ಼ರತ್ ನಿಜಾಮುದ್ದೀನ್ (ಹ.ನಿ) ಸ್ಟೇಷನ್ನಿಗೆ ಹೋಗಲು ಜಸ್ಟ್ ಅಷ್ಟೇ ಸಮಯ ಮಿಕ್ಕಿದೆ ಎಂದು ತಿಳಿದು ನಿಜಕ್ಕೂ ಕಂಗಾಲಾದೆವು. ಕಾಡಿ ಬೇಡಿ ಎರಡೂ ಬಸ್ಸುಗಳ ಡ್ರೈವರ್ಸ್‌ಗೆ ಆ ಕಡೆಗೆ ತಿರುಗಿಸಲು ಹರುಕು ಮುರುಕು ಹಿಂದಿಯಲ್ಲಿ ಬೇಡಿಕೊಂಡೆವು. ಯಾಕೆಂದರೆ ನಮ್ಮ ಬೋಗಿ ಈ ರೈಲಿನ ಜೊತೆ ಹೋಗಿಬಿಟ್ಟರೆ ನಮಗೆ ಬೇರೆ ರೈಲು ಮತ್ತು ಹೊಸ ಬೋಗಿ ಕೊಡಲು ರೈಲ್ವೆಯವರು ಏನು ಪಂಚಾಯತಿ ಮಾಡುತ್ತಾರೋ, ಜೊತೆಗೆ ಸಮಯ ಸಮಯಕ್ಕೆ ನಾವು ಮಾಡಿದ ಬೇರೆ ಊರಿನ ವಸತಿ ಮತ್ತು ರೈಲಿನ ಬುಕಿಂಗ್ ಎಲ್ಲ ಕೆಟ್ಟು ಹೋಗುವ ಭೀತಿ. ತಲ್ಲಣಿಸಿ ಹೋದೆವು ನಾವು ಹುಡುಗರು, ಒಬ್ಬೊಬ್ಬರು ಅವರಿಗೆ ಒಂದೊಂದು ಸಲಹೆ ಟೀಕೆಗಳು ಬೇರೆ ಕೊಡುತ್ತಿದ್ದೇವೆ.. ಆ ಲೀಡರುಗಳ ಸ್ಥಿತಿ ಹೇಗಾಗಿರಬೇಡ!

ಆಗ ಮೊಬೈಲ್, ವಾಟ್ಸಾಪ್, ಇಂಟರ್ನೆಟ್ ಯಾವುದೂ ಇಲ್ಲದ ಕಾಲ. ನಮ್ಮ ಲೀಡರ್ಸ್ ಎಲ್ಲೋ ಇಳಿದು ಹ. ನಿ. ರೈಲ್ವೇ ಸ್ಟೇಷನ್ನಿನ ನಂಬರ್ ಹುಡುಕಿ ಅವರಿಗೆ ಫೋನ್ ಮಾಡಿದರೆ, ಅವರು ಗರ್ವದಿಂದ, "ನಮಗೊತ್ತಿಲ್ಲ ರೈಲು ಹೊರಡುವ ಸಮಯಕ್ಕೆ ಬರಬೇಕು, ನಾವು ನಿಮಗೊಸ್ಕರ ಕಾಯಕ್ಕಾಗೊಲ್ಲ, ಕೈಸಾ ಮದ್ರಾಸಿ ಲೋಗ್. ಕನ್ಸೆಷನ್ ಬೋಗಿಲಿ ಇದು ಬೇರೆ ಪ್ರಾಬ್ಲಂ, ಇವರು ಹಾಗೆ ಹೀಗೆ..." ಎಂದು ಏನೋ ಬೈದರಂತೆ. ಹೌದು, ನಮ್ಮದು ವಿದ್ಯಾರ್ಥಿಗಳಿಗೆ ರಿಯಾಯತಿ ಬೆಲೆಯಲ್ಲಿ ಬಾಡಿಗೆಗೆ ತೆಗೆದುಕೊಡಿದ್ದ ರೈಲ್ವೆ ಬೋಗಿ ಅದು, ಥರ್ಡ್ ಕ್ಲಾಸ್ ಸ್ಲೀಪರ್ ಅಷ್ಟೇ... ನಮಗೇಕೆ ಅವರು ಇಡೀ ರೈಲು ಕಾಯಿಸುತ್ತಾರೆ? ಅವರ ಪಾಲಿಗೆ ನಾವು ಯಾವ ವಿ ಐ ಪಿ ಅಲ್ಲ!

ಇಂತಹಾ ಟೆನ್ಶನ್ನಿನಲ್ಲಿ ಬಸ್ಸುಗಳು ಹ.ನಿ ರೈಲು ನಿಲ್ದಾಣಕ್ಕೆ ದೌಡಾಯಿಸಿದವು, ಡ್ರೈವರ್ ಪಕ್ಕವೇ ನಾವು ಹುಡುಗರು ಮುತ್ತಿಕೊಂಡು, "ಹೂಂ ಹೋಗಪ್ಪಾ, ಫಾಸ್ಟಾಗಿ, ಇನ್ನೂ ಫಾಸ್ಟು" ಎಂದು ಬೇರೆ ಅವರ ತಲೆ ತಿನ್ನುತ್ತಿದ್ದೆವು.. ಎಲ್ಲರ ಮುಖದಲ್ಲಿ ಕಳವಳ, ಮನದಲ್ಲಿ ಹೆದರಿಕೆ ಆತಂಕ!

ಆ ರೈಲು ನಿಲ್ದಾಣದಲ್ಲಿ ಇಳಿದಾಗ ಜಸ್ಟ್ 5 ನಿಮಿಷ ಮಿಕ್ಕಿದೆ. ನಾವು ನಾಲ್ಕು ನಾಲು ಜನ ಬಸ್ ಏರಿ ಅಲ್ಲಿದ್ದ ಒಬ್ಬೊಬ್ಬರ ಸೂಟ್ ಕೇಸು, ಬ್ಯಾಗು ಇಳಿಸಿ ಎಸೆದೆವು. ಸಿಕ್ಕ ಸಿಕ್ಕ ಬ್ಯಾಗ್ ಎತ್ತಿಕೊಂಡು ಪ್ಲಾಟ್ಫಾರ್ಮಿಗೆ ಓದಿದೆವು, ಸದ್ಯಕ್ಕೆ ಪ್ಲಾಟ್ ಫಾರಂ 1 ರಲ್ಲೇ ರೈಲು ಬುಸ್ ಬುಸ್ ಎಂದು ಹೊಗೆ ಬಿಡುತ್ತಾ ರೆಡಿಯಾಗಿದೆ. ಗಾರ್ಡ್ ಆಗಲೇ ಹಸಿರು ಫ್ಲಾಗ್ ಹಿಡಿದುಕೊಂಡು ಕಾಯುತ್ತಿದ್ದಾನೆ, ಸ್ವಲ್ಪ ತಡ ಮಾಡಿದ ನಮನ್ನು ನೋಡಿ ಅಷ್ಟೇ... ನಮ್ಮ ಕೊನೆಯ ಬೋಗಿಗೆ ಓಡಿ ಹತ್ತಿದಾಗ ರೈಲಿನ ಚುಕ್ ಬುಕ್ ಶುರುವಾಗಿಯೇ ಬಿಟ್ಟಿತ್ತು, ಒಬ್ಬೊಬ್ಬರು ನಾಲ್ಕು ನಾಲ್ಕು ಬ್ಯಾಗ್ ಎತ್ತಿಕೊಂಡು (ಆಗೆಲ್ಲ ಎಳೆಯುವ ಚಕ್ರದ ಸೂಟ್ ಕೇಸ್ ಸಹ ಬಂದಿರಲಿಲ್ಲ) ದಬದಬ ಎಂದು ಒಳಗೆಸೆದು ಹೊರಟಿದ್ದ ರೈಲೈ ಜೊತೆ ಓಡೋಡಿ ಹತ್ತಿದೆವು. ಸದ್ಯ ಯಾರೂ ಮಿಸ್ ಆಗಲಿಲ್ಲ. ಅವತ್ತು ಬೋಗಿಯೊಳಗೆ ಯಾರ್ಯಾರ ಬ್ಯಾಗ್ ಎಲ್ಲೆಲ್ಲೋ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಅದನ್ನೆಲ್ಲ ಎತ್ತಿ ಇಟ್ಟುಕೊಳ್ಳಲು ನಮಗೆ ತಕ್ಷಣ ಉಸಿರೇ ಇಲ್ಲ , ಹತ್ತು ಹದಿನೈದು ನಿಮಿಹ ಸುಧಾರಿಸಿಕೊಂಡು ಶುರು ಮಾಡಲು ಅದೇ ಒಂದು ಗಂಟೆ ಹಿಡಿಯಿತು, ಪರವಾಗಿಲ್ಲ, ರೈಲು ಹೊರಡುವ ಮುಂಚೆ ಸೇರಿದ್ದೆವಲ್ಲ, ಬ್ಯಾಗ್ ಯಾವುದೂ ಮಿಸ್ ಆಗಲಿಲ್ಲ. ವೀ ವರ್ ಜಸ್ಟ್ ಲಕ್ಕಿ ಎಂದುಕೊಂಡೆವು.. ಈಗ ಯೋಚಿಸಿದರೆ ಇದೆಲ್ಲ ದೇವರ ಕೃಪೆ ಅದೂ ಇದು ಎನಿಸುತ್ತದೆ. ಆಗೆಲ್ಲ ಹುಡುಗರು ನಾವೇ ಮಾಡಿದ ಸಾಹಸ ಎಂಬ ಚಿಕ್ಕ ಖುಷಿ ಬೇರೆ!

ಆಮೇಲೆ ಗೊತ್ತಾಯಿತು ಆ ಬಸ್ ಡ್ರೈವರ್ಸ್ ಮೊದಲು ಹೇಳಿದ್ದಕ್ಕಿಂತಾ ಡಬಲ್ ಚಾರ್ಜ್ ಮಾಡಿದರಂತೆ, ಅವರದೇನು ತಪ್ಪು ಅಲ್ಲವೆ!

ಇನ್ನು ನಮ್ಮ ಜೊತೆ ಒಬ್ಬರು ಲೆಕ್ಚರರ್ ಸಹ ಬಂದಿದ್ದರು, ನಿದ್ದೆ ಬುರುಕ ಪ್ರೊಫೆಸರ್, ಅವರೇನು ಮಾಡಿದರು ಆಗ ಎಂದರೆ ಸೊನ್ನೆ, ಏನಿಲ್ಲ. ನಮ್ಮ ಜೊತೆ ಓಡೋಡಿ ಬಂದರು ಅಷ್ಟೆ.

ನೋಡಿ, ರೈಲ್ವೆಯವರೇ ತಮಗೆ ಬೇಕಾದಾಗ ರೈಲುಗಳನ್ನು ಗಂಟೆಗಟ್ಟಲೆ ಲೇಟಾಗಿ ಹೊರಡಿಸುತ್ತಾರೆ, ಎಲ್ಲೆಲ್ಲೋ ನಿಲ್ಲಿಸಿಯೂ ಬಿಟ್ಟಿರುತ್ತಾರೆ. ಅದೇ ನಾವು ಈ ತರಹ ಸ್ಟೇಷನ್ನಿಗೆ ಲೇಟಾಗಿ ಬಂದೆವೆಂದರೆ ಅವತ್ತು ಅಂತಾ ರೈಲು ಒಂದು ನಿಮಿಷ ತಡವೂ ಇಲ್ಲದೇ ರೈಟ್ ಟೈಮಿಗೆ ಹೊರಟಿರುತ್ತದೆ. ಇದೇ ಪ್ರಯಾಣಿಕರ ವಿಧಿನಿಯಮ, ಕರ್ಮ ಅನ್ನಿ!

9 views0 comments

Comentários


bottom of page