ಅಮೆಜ಼ಾನ್ ಕಿಂಡಲ್ ಪುಸ್ತಕ
~~~~~~~~~
ಕಾದಂಬರಿ ಹೀಗೆ ಆರಂಭವಾಗುತ್ತದೆ: ( ಕನ್ನಡ ಅನುವಾದ ನನ್ನದು):
ನೋಡಿ, ಒಂದು ಹೆಣದ ಜತೆ ಇರುವುದೆಂದರೆ ಸ್ವಲ್ಪ ತಲೆ ನೋವಿನ ಕೆಲಸವೇ. ಅದೂ ಸಹಾ ಆ ಶವವಾಗಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ಇಲ್ಲದಿದ್ದರೆ ಇನ್ನೂ ತೊಂದರೆ.
ಆದರೆ ಈ ಶವದ ಅವಸ್ಥೆ ನೋಡಿದರೆ ಡಾಕ್ಟರೇ ಏಕೆ, ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸಹಾ ಈತನ ಸಾವು ಹೃದಯ ಸ್ಥಂಭನ ಆಗಿಯೇ ಎಂದು ಸುಲಭವಾಗೇ ಹೇಳಿಬಿಡುತ್ತಿದ್ದ.
ಏಕೆಂದರೆ ಸ್ವಲ್ಪ ಹೊತ್ತಿನ ಕೆಳಗೆ ಆ ವ್ಯಕ್ತಿಯ ಪಕ್ಕೆಲುಬುಗಳ ಮಧ್ಯೆ ಹರಿತವಾದ ಚಾಕುವನ್ನು ಚುಚ್ಚಿದ್ದರಿಂದ ರಕ್ತಸಂಚಾರ ಏರುಪೇರಾಗಿ ಹೃದಯ ನಿಂತುಹೋಗಿತ್ತು. ಹೇಗಾದರೂ ಅದೂ ಹೃದಯ ಸ್ಥಂಭನವೇ ಎನ್ನಿ! ವೈದ್ಯರನ್ನು ಕೇಳಿದರೆ..
ಆದರೆ ಯಾವುದೇ ವೈದ್ಯರನ್ನು ಕರೆಸಲು ನನಗೆ ಅವಸರವೇನಿರಲಿಲ್ಲ...
ಕಾರಣವೇನೆಂದರೆ ಆ ಚಾಕು ನನ್ನದೇ ಮತ್ತು, ಅದನ್ನು ಅವನ ಎದೆಗೆ ಚುಚ್ಚಿ ಅವನ ಹೃದಯ ರಿಪೇರಿಯಾಗದಂತೆ ಮಾಡಿದ ಕೈ ಸಹಾ ನನ್ನದೇ ಆಗಿತ್ತು
ಇಂತಹಾ ಸಿಡಿದ ಪಟಾಕಿಯಂತಾ ಮೊದಲಸಾಲುಗಳಿಂದ ಆರಂಭವಾದ ಗುಪ್ತಚರನ ಥ್ರಿಲ್ಲರ್ ಮುಂದೆ ಹೇಗಿರಬೇಡ?.
ರನಿಂಗ್ ಬ್ಲೈಂಡ್ ಎಂದರೆ ಯದ್ವತದ್ವಾ ಅಥವಾ ಕೆಟ್ಟೆನೋ ಬಿದ್ದೆನೋ ಎಂದು ಓಡುವುದು!
ಉತ್ತಮ ಪುರುಷ ದಲ್ಲಿ ಬರೆದ ( ಅಂದರೆ ನಾನು ಎಂದು ನಾಯಕನೇ ಕಥೆ ಹೇಳಿದಂತೆ) ಈ ಕಾದಂಬರಿಯ ನಾಯಕ ಅಷ್ಟೇನೂ ಜನಪ್ರಿಯನಲ್ಲದ ತನ್ನ ಗುಪ್ತಚರ ಸಂಸ್ಥೆಯ ಏಜೆಂಟ್, ತನ್ನ ಗರ್ಲ್ ಫ್ರೆಂಡ್ ಜತೆ ಕೊರೆಯುವ ಹಿಮದ ನಾಡಾದ ಉತ್ತರ ಧ್ರುವದ ಹತ್ತಿರದ ಐಸ್ ಲೆಂಡಿನಲ್ಲಿ ವಾಸಿಸುತ್ತಿದ್ದಾನೆ. ಅವನ ಬಾಸ್ ಸ್ಲೇಡ್ "ಒಂದು ಸಿಂಪಲ್ ಪೋಸ್ಟ್ ಮನ್ ಕೆಲಸ ಮಾಡು" ಎಂದು ಒಂದು ಪಾರ್ಸಲ್ ಕೈಯಲ್ಲಿತ್ತು ಎಲ್ಲಿಗೆ ಹೇಗೆ ಹೋಗಬೇಕೆಂದು ವಿಳಾಸ ಹೇಳಿ ಸುಮ್ಮನೆ ಕೊಟ್ಟು ಕಳಿಸಿದ್ದಾನೆ.
ಅದು ಏನೆಂದು ನೋಡುವ ಕಾತರವೂ ನಾಯಕ ಅಲನ್ ಸ್ಟೀವರ್ಟಿಗಿಲ್ಲ.
ಆದರೆ ನಿರ್ಜನ ಹಿಮದಾರಿಯಲ್ಲಿ ಒಬ್ಬ ವಿರೋಧಿಯ ಕೊಲೆ ಮಾಡಲೇಬೇಕಾಗಿ ನಿಂತಾಗ ಅವನಿಗೆ ಅರಿವಾಗುತ್ತದೆ- ಇದು ಸಿಂಪಲ್ ಮಿಷನ್ ಅಂತೂ ಅಲ್ಲವೇ ಅಲ್ಲ
ಆಲ್ಲಿಂದ ಅವನಿಗೂ ಅವನ ಗರ್ಲ್ ಫೆಂಡ್ ಎರಿನ್ ಗೂ ಹೆಜ್ಜೆ ಹೆಜ್ಜೆಗೂ ಅಪಾಯ, ಅವನ ಪಾರ್ಸಲ್ ನಲ್ಲೇನಿದೆ? ಅವನನ್ನು ಅಟ್ಟಿಸಿಕೊಂಡು ಬರುತ್ತಿರುವುದು ಒಬ್ಬ ಶತ್ರುವೆ ಅಥವಾ ಎರಡು ಪ್ರತ್ಯೇಕ ದುಷ್ಟರ ತಂಡವೆ? ನೀವು ಓದಿಯೇ ತಿಳಿಯಬೇಕು
ಪುಟಪುಟದಲ್ಲೂ ನಿರ್ಜನ ಹಿಮದ ನಾಡಿನಲ್ಲಿ ಸಾಹಸ ಹೋರಾಟ, ಟ್ವಿಸ್ಟ್ಸ್. ಉಸಿರು ಬಿಗಿ ಹಿಡಿದು, ಉಗುರು ಕಚ್ಚುವಂತಾ ಸಸ್ಪೆನ್ಸ್ ತಂದಿದ್ದಾರೆ 1970 ದಶಕದ ಬ್ರಿಟಿಷ್ ಲೇಖಕ ಡೆಸ್ಮಂಡ್ ಬ್ಯಾಗ್ಲಿ
ಅದು ಮೊಬೈಲ್, ಅಂತರ್ಜಾಲ ಯುಗದ ಹಿಂದಿನ ಕಾಲದ ಕಥೆ. ಹಾಗಾಗಿ ಅದರ ಸನ್ನಿವೇಶಗಳು, ಸವಾಲುಗಳೇ ಬೇರೆ., ಈಗಿನಂತಲ್ಲ
ನನಗಂತೂ ಇದೊಂದು ಅಚ್ಚುಮೆಚ್ಚಿನ ಸ್ಪೈ ಥ್ರಿಲ್ಲರ್. ಅಂತ್ಯ ಸಹಾ ಬಹಳ ಮಾರ್ಮಿಕ ಮತ್ತು ನೈಜ ಎನ್ನಬಹುದಾದ ಸಾಧ್ಯತೆ ಉಳ್ಳದ್ದು.
ಇದನ್ನು ಒಮ್ಮೆ ಸಂಕ್ಷಿಪ್ತವಾಗಿ ಕಿರು ಕಾದಂಬರಿ ಅಥವಾ ನೀಳ್ಗತೆಯಂತೆ ಕನ್ನಡಕ್ಕೆ ಅನುವಾದಿಸೋಣ ಎನಿಸಿಬಿಟ್ಟಿದೆ. ನೋಡೋಣ ತಾಳಿ!
(ಹೀಗೆ ಇನ್ನೊಂದು ಕಾದಂಬರಿ ಕುಂಟುತ್ತಾ ಸಾಗಿದೆ!)
ಪೀರಿಯಡ್ ಅಥವಾ ನ್ವಾಹ್ರ್ ಥ್ರಿಲರ್ ಇಷ್ಟಪಡುವವರು ಅಮೆಜ಼ಾನ್ ನಲ್ಲಿ ಪುಸ್ತಕ, ಇಪುಸ್ತಕ ಕೊಂಡು ಓದಬಹುದು
Comments