top of page

ದಾನ ಮತ್ತು ಭಕ್ತಿ ಹೇಗಿರಬೇಕು- ಸನಾತನ ಸಾರಥಿ -ಸಂಚಿಕೆ -3

ದಾನವನ್ನು ನಮ್ರತೆಯಿಂದ ಮಾಡಿ

ಮಾನವನು ಜನ್ಮವೆತ್ತಿದಾಗ ಯಾವುದೇ ಗುಣಗಳು ಇರುವುದಿಲ್ಲ. ಆದರೆ ಕಾಲಕ್ರಮೇಣ ಅವನು ಗುಣಗಳನ್ನು ಹೊಂದುತ್ತಿದ್ದಂತೆ ಕೆಡುತ್ತಾ ಹೋಗುತ್ತಾನೆ. ಅಹಂಕಾರಕ್ಕೆ ಬಲಿಯಾಗುತ್ತಾನೆ. ಎಲ್ಲಾ ಬಗೆಯ ‘ಅಹಂ’ ಗಳಲ್ಲಿ ಕಲಿಕೆಯ ಅಹಂ ಅತಿ ದೊಡ್ಡದು. ಇಂದು ಮಾನವನು ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಾನೆ. ತಾನು ಸ್ವಾತಂತ್ರ್ಯವನ್ನು ಯಾವುದೇ ಬೆಲೆ ತೆತ್ತು ಪಡೆಯುವೆನೆಂದು ಬಲವಾಗಿ ವಾದ ಮಾಡುತ್ತಾನೆ.


ದುಶ್ಚಟಗಳಿಂದ ನಿಮ್ಮನ್ನು ಬಿಡುಗಡೆ ಮಾಡಿಕೊಳ್ಳಿ:

ಹಾಗಾದರೆ ನಿಜವಾದ ಸ್ವಾತಂತ್ರ್ಯ ಎಂದರೇನು? ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ಬಂದಿದ್ದನೆಲ್ಲ ಮಾಡುವುದೋ ಅಥವಾ ಇಷ್ಟ ಬಂದ ಕಡೆಗೆ ತಿರುಗಾಡುವುದು ಎಂದೋ?

ಆತ್ಮ ಸಾಕ್ಷಾತ್ಕಾರವೇ ನಿಜವಾದ ಸ್ವಾತಂತ್ರ್ಯ. ಆತ್ಮಕ್ಕೆ ಸಿಗುವ ಆನಂದ (ಆತ್ಮಾನಂದ)ವೇ ನಿಜವಾದ ಸ್ವಾತಂತ್ರ್ಯವಾಗಿದೆ. ಇಂದ್ರಿಯ ನಿಗ್ರಹವೇ ಸ್ವಾತಂತ್ರ್ಯ. ಪರರ ದಾರಿಗೆ ಅಡ್ಡ ಬರದಿರುವುದೇ ಸ್ವಾತಂತ್ರ್ಯ. ಮನುಷ್ಯನಿಗೆ ಎರಡು ವಿಷಯಗಳ ಮಿತಿಯಿದೆ: ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ನಿಯಮ ಮತ್ತು ಕಾನೂನು. ರಸ್ತೆಯ ನಡುವಿನಲ್ಲಿ ಕುಳಿತು ತನಗೆ ಎಲ್ಲಿ ಬೇಕಾದರೂ ಓಡಾಡುವ ಸ್ವಾತಂತ್ರ್ಯ ಇದೆಯದು ಕೊಚ್ಚಿಕೊಳ್ಳುವುದು ಸ್ವಾತಂತ್ರ್ಯವಲ್ಲ, ಏಕೆಂದರೆ ಅದು ಮೂಲಭೂತ ಕಾನೂನಿನ ಉಲ್ಲಂಘನೆಯಾಗುತ್ತದೆ. ಎಲ್ಲರೂ ತಂತಮ್ಮ ಅಹಂಕಾರ, ಕೋಪ ಮತ್ತು ಅಸೂಯೆಯನ್ನು ತ್ಯಜಿಸಬೇಕಾಗುತ್ತದೆ.

ಸತ್ಯಭಾಮೆಗೆ ಅವಳ ಅಸೂಯೆಯೇ ಸಂಕಷ್ಟಗಳನ್ನು ತಂದೊಡ್ಡಿತು. ಅವಳಿಗೆ ಕೃಷ್ಣನು ತನ್ನ ಇತರ ರಾಣಿಯರಾದ ರುಕ್ಮಿಣಿ ಮತ್ತು ಜಾಂಬವತಿಯರ ಬಳಿಗೇ ಹೋಗುತ್ತಿರುವನೆಂಬ ವಿಷಯ ಸಹಿಸಲಾಗದೇ ಮತ್ಸರ ಪಡುತ್ತಿದ್ದಳು.ಆಕೆ ಕೃಷ್ಣನನ್ನು ತನ್ನವನನ್ನಾಗಿ ಮಾತ್ರ ಮಾಡಿಕೊಳ್ಳಬೇಕೆಂದು ಹಂಬಲಿಸುತ್ತಿದ್ದಳು.ಅದಕ್ಕಾಗಿ ಅವಳು ಒಂದು ವ್ರತವನ್ನು ಆಚರಿಸಲು ಸಿದ್ಧಳಾದಳು, ಅದುವೇ ಪತಿದಾನ ವ್ರತ. ಈ ವ್ರತದ ಪ್ರಕಾರ ಅವಳು ಕೃಷ್ಣನನ್ನು ಯಾವುದೇ ಘನ ವ್ಯಕ್ತಿಗೆ ದಾನ ಮಾಡಿ ಅವರಿಂದ ಮತ್ತೆ ಅವನನ್ನು ಕೊಂಡುಕೊಳ್ಳಬೇಕಿತ್ತು. ಆಕೆ ನಾರದನೇ ಅಂತಹಾ ಸಂಭಾವಿತ ವ್ಯಕ್ತಿ ಎಂದು ಭಾವಿಸಿ ಅವನಿಗೇ ಕೃಷ್ಣನನ್ನು ದಾನ ಕೊಡಲು ಮುಂದಾದಳು. ಈಗ ಅವಳು ಕೃಷ್ಣನ ತೂಕದಷ್ಟೇ ಬಂಗಾರವನ್ನು ಕೊಟ್ಟು ಕೊಳ್ಳಬೇಕಿತ್ತು.

ಆಗ ಕೃಷ್ಣನನ್ನು ತಕ್ಕಡಿಯ ಒಂದು ತಟ್ಟೆಯ ಮೇಲೆ ಕುಳ್ಳಿರಿಸಿ ಇನ್ನೊಂದು ತಟ್ಟೆಗೆ ಅವನ ತೂಕಕ್ಕೆ ಸಮವಾಗಿ ಚಿನ್ನವನ್ನು ಸುರಿದಳು. ಅವಳ ಪರಮಾಶ್ಚರ್ಯಕ್ಕೆ ಆಕೆಯು ತನ್ನ ಬಳಿಯಿದ್ದ ಚಿನ್ನದ ವಸ್ತುಗಳೆಲ್ಲವನ್ನೂ ಸುರಿದರೂ ಕೃಷ್ಣ ಕುಳಿತಿದ್ದ ತಟ್ಟೆ ಕೊಂಚವೂ ಮೇಲೇಳಲಿಲ್ಲ. ತಾನು ಈ ವ್ರತದಲ್ಲಿ ಎಲ್ಲಿ ಸೋತುಬಿಡುವೆನೋ ಎಂಬ ಹೆದರಿಕೆಯಾಗಿ ಆಕೆ ಹಿರಿಯ ರಾಣಿ ರುಕ್ಮಿಣಿಯ ಸಹಾಯ ಬೇಡಿದಳು.ರುಕ್ಮಿಣಿಯು ಸತ್ಯಭಾಮೆಯ ಈ ಸೋಲಿನ ಕಥೆ ಕೇಳಿ ‘ನಮ್ಮ ಭಕ್ತಿ ಮಾತ್ರವೇ ಕೃಷ್ಣನ ತೂಕಕ್ಕೆ ಸಮಾನವಾದದ್ದು ’ ಎಂದು ವಿವರಿಸಿದಳು.

ಆಕೆಯು ಕೃಷ್ಣನ ನಾಮವನ್ನು ಉಚ್ಚರಿಸಿ ಒಂದು ದಳ ತುಳಸಿಯನ್ನು ಆ ತಟ್ಟೆಯ ಮೇಲಿಟ್ಟಳು. ಆಗ ಕೃಷ್ಣ ಕುಳಿತಿದ್ದ ತಟ್ಟೆ ಸರಾಗವಾಗಿ ಮೇಲೇರಿತು. ಕೃಷ್ಣನ ನಾಮವೇ ಅವನ ಭಾರಕ್ಕೆ ಸಮವಾಗಿದ್ದು, ಆ ಒಂದು ತುಳಸೀದಳವೇ ಅದಕ್ಕೂ ಮೀರಿದ್ದರಿಂದ ಅವನ ಕಡೆ ತಕ್ಕಡಿ ಮೇಲೇರಿತು. ಹೀಗೆ ಸತ್ಯಭಾಮೆ ಅಸೂಯೆಯಿಂದ ಸಂಕಷ್ಟಕ್ಕೀಡಾಗಿ ರುಕ್ಮಿಣಿಯಿಂದ ಒಂದು ಮುಖ್ಯವಾದ ಪಾಠವನ್ನು ಕಲಿತಳು.

ಕೋಪ ಮಾನವನಿಗೆ ಇನ್ನೊಂದು ಬದ್ಧ ವೈರಿ. ನರಕಾಸುರನ ಕೋಪವನ್ನು ಕೆರಳಿಸಿ ಅವನನ್ನು ದುರ್ಬಲನಾಗಿ ಮಾಡಿಯೇ ಕೃಷ್ಣನು ಅವನನ್ನು ಸಂಹಾರ ಮಾಡಿದ್ದು. ನರಕಾಸುರನು ಅವನನ್ನು ಅಟ್ಟಿಸಿಕೊಂಡು ಬಂದಾಗಲೆಲ್ಲಾ ಕೃಷ್ಣನು ಹಿಂದೆ ತಿರುಗಿ ಓಡಿಹೋಗಿ ತಪ್ಪಿಸಿಕೊಳ್ಳುವನು. ಹೀಗೆ ಎಂಟು ಬಾರಿ ಕೃಷ್ಣನು ನರಕಾಸುರನನ್ನು ಆಟವಾಡಿಸಿದನು. ಕೃಷ್ಣನು ನರಕಾಸುರನ ಕೋಪ ಕೆರಳಿಸಿ ಅವನು ಉದ್ವಿಗ್ನನಾಗಲೆಂದೇ ಹೀಗೆ ಮಾಡಿದ್ದನು. ಹೀಗೆ ನರಕಾಸುರನು ಕೋಪದಿಂದ ಉರಿಯುತ್ತಾ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ದುರ್ಬಲನಾಗುತ್ತಾ ಹೋದನು. ಕೊನೆಗೆ ಒಂಬತ್ತನೇ ಸಲ ಸತ್ಯಭಾಮೆಯಂತಹಾ ಹೆಣ್ಣು ಸಹಾ ಅವನನ್ನು ಕೊಲ್ಲಲು ಸಾಧ್ಯವಾಗಿಬಿಟ್ಟಿತು.

ಎಲ್ಲ ಕಾರ್ಯಗಳನ್ನೂ ದೇವರನ್ನು ಮೆಚ್ಚಿಸಲು ಮಾಡಿರಿ:

ಮಾನವನು ದಾನ ಮತ್ತು ತ್ಯಾಗ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಆದರೆ ಈ ಗುಣಗಳನ್ನು ನಾವು ಎಂದೂ ಪ್ರದರ್ಶಿಸಿಕೊಳ್ಳಬಾರದು.

ಉದಾಹರಣೆಗೆ, ಒಬ್ಬ ಮಹಿಳೆ ದಾನ ಧರ್ಮಗಳಲ್ಲಿ ತೊಡಗಿರುತ್ತಿದ್ದಳು. ಎಲ್ಲರೂ ಮಲಗಿದ ನಂತರ ಆಕೆ ಒಂದು ರಿಕ್ಷಾದಲ್ಲಿ ಆ ಊರಿನ ಬಜಾರಿಗೆ ಹೋಗಿ ಅಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಅನಾಥರಿಗೆ ಚಳಿಯನ್ನು ತಡೆಯಲೆಂದು ಕಂಬಳಿ ಹೊದಿಸಿ ಬರುವಳು. ಆದರೆ ಆಕೆ ತನ್ನ ರಿಕ್ಷಾಗೆ ದೀಪ ಸಹಾ ಹಾಕುತ್ತಿರಲಿಲ್ಲ, ಯಾರಾದರೂ ದಾನ ಮಾಡುವಾಗ ತನ್ನನ್ನು ಗುರುತು ಹಿಡಿದುಬಿಡುವುದು ಬೇಡವಾದ್ದರಿಂದ. ಹಗಲಿನಲ್ಲಿ ಆಕೆ ಅವರಿಗೆಲ್ಲ ಅನ್ನದಾನ ಮಾಡುವಳು. ಆಕೆ ಒಂದು ದಾನದ ಸಾಗರ ಎಂದೇ ಪ್ರಸಿದ್ಧಳಾಗಿದ್ದಳು. ಆದರೂ ಆಕೆಗೆ ಸ್ವಲ್ಪವೂ ಅಹಂಕಾರವಿರಲಿಲ್ಲ. ಆಕೆ ಅನಾಥರಿಗೆ ದಾನ ಮಾಡಲು ಅವರ ಶಿಬಿರಗಳಿಗೆ ಹೋದಾಗ ತಲೆ ಬಗ್ಗಿಸಿಕೊಂಡು, ಸೆರಗಿನಿಂದ ಮುಖವನ್ನು ಮುಚ್ಚಿಕೊಂಡೇ ಇರುವಳು. ಆಕೆಯನ್ನು ದಾನ ಮಾಡುವಾಗಲೂ ಏಕೆ ತಲೆ ತಗ್ಗಿಸಿರುವಿರೆಂದು ಕೇಳಿದರು.

ಆಕೆ ಉತ್ತರಿಸಿದಳು- ಆ ಭಗವಂತನೋ ಸಹಸ್ರಾ ಶೀರ್ಷಾ ಪುರುಷಃ, ಸಹಸ್ರಾಕ್ಷ, ಸಹಸ್ರಪಾದ್ (ಎಂದರೆ ಸಹಸ್ರ ಶಿರಗಳು, ಕಣ್ಣುಗಳು, ಮತ್ತು ಕಾಲುಗಳು ಉಳ್ಳ ಪರಮಾತ್ಮ) ಉಳ್ಳವನು ಸಹಸ್ರ ಕೈಗಳಿಂದ ನನಗೆ ಕೊಡುತ್ತಿದ್ದರೂ ನಾನಾದರೋ ಒಂದೇ ಕೈಯಿಂದ ದಾನಮಾಡುತ್ತಿದ್ದೇನಲ್ಲ ಎಂಬ ಲಜ್ಜೆಯಿಂದ ಎಂದಳಂತೆ. ಈ ಭಾರತದಂತಹಾ ಪುಣ್ಯಭೂಮಿಯಲ್ಲಿಯೇ ಅಂತಹಾ ಶ್ರೇಷ್ಟ ತ್ಯಾಗಮೂರ್ತಿಗಳು ಜನ್ಮವೆತ್ತುತ್ತಾರೆ.

ಇನ್ನೂ ಬೇರೆಯೇ ವರ್ಗದ ಜನರೂ ಇರುತ್ತಾರೆ. ಒಂದು ಆಶ್ರಮದಲ್ಲಿ ಒಬ್ಬ ಗುರೂಜಿ ಇದ್ದರು. ಅವರು ದಿನಾಲೂ ಭಕ್ತಾದಿಗಳಿಗೆ ಭಗವದ್ಗೀತೆ ಮತ್ತು ಪುರಾಣಗಳ ಪ್ರವಚನ ಮಾಡುತ್ತಿದ್ದರು. ಅವರು ಧೀರ್ಘಕಾಲ ಪ್ರವಚನ ಮಾಡಿ ದಣಿದು ಬೆವೆತು ಹೋಗುತ್ತಿದ್ದರು. ಅವರ ಸಭೆಯಲ್ಲಿ ಒಬ್ಬ ಭಕ್ತನು ಒಮ್ಮೆ ಎದ್ದು ನಿಂತು, ಗುರುಗಳು ಇಷ್ಟೊಂದು ಆಯಾಸ ಪಡುತ್ತಿರುವುದರಿಂದ ಅವರ ತಲೆಯ ಮೇಲೆ ಒಂದು ಫ್ಯಾನ್ ಅಳವಡಿಸುವುದಾಗಿ ಹೇಳಿದನು. ಗುರೂಜಿ ಫ್ಯಾನ್ ಅಳವಡಿಸುವ ಬಗ್ಗೆ ಒಪ್ಪಿದರು.

ಮುಂದಿನ ದಿನವೇ ಆ ಭಕ್ತನು ಒಂದು ಎಲೆಕ್ಟ್ರಿಕ್ ಫ್ಯಾನ್ ತಂದು ಹಾಕಿ, ಅದರ ಒಂದು ರೆಕ್ಕೆಯ ಮೇಲೆ ತನ್ನ ಹೆಸರು, ಇನ್ನೊಂದು ರೆಕ್ಕೆಯ ಮೇಲೆ ಪತ್ನಿಯ ಹೆಸರು ಮತ್ತು ಮೂರನೇ ರೆಕ್ಕೆಯ ಮೇಲೆ ತನ್ನ ಮಗನ ಹೆಸರನ್ನೂ ಬರೆಸಿದನು. ಮಧ್ಯದ ಭಾಗದಲ್ಲಿ ತನ್ನ ಕುಟುಂಬ ನಾಮವನ್ನೂ ಹಾಕಿಸಿದನು. ಗುರೂಜಿ ತಮ್ಮ ಪ್ರವಚನ ಆರಂಭಿಸಿದರು, ಫ್ಯಾನ್ ತಿರುಗುವಾಗ ಮಾತ್ರ ಯಾರ ಹೆಸರೂ ಓದಲಾಗುತ್ತಿರಲಿಲ್ಲ. ಆ ಭಕ್ತನು ತನ್ನ ಹೆಸರು ಕಾಣಿಸದಿರುವುದನ್ನು ಗಮನಿಸಿ ತಕ್ಷಣ ಎದ್ದು ನಿಂತು ಅದರ ಸ್ವಿಚ್ ಬಂದ್ ಮಾಡಿ ನಿಲ್ಲಿಸಿದನು. ಫ್ಯಾನನ್ನು ಏಕೆ ಆರಿಸಿದೆ ಎಂದು ಕೇಳಲು, ಅದು ಸುತ್ತುತ್ತಿದ್ದರೆ ತನ್ನ ಹೆಸರು ಕಾಣುವುದಿಲ್ಲ ಎಂದನು.

ಈ ರೀತಿಯಾಗಿ ನಾವು ಈತನಂತೆ ದಾನದ ಪ್ರಚಾರ ಮಾಡುವುದು ಸರಿಯೆ? ದಾನವನ್ನು ಅತ್ಯಂತ ನಮ್ರತೆ ಮತ್ತು ದೀನಭಾವದಿಂದ ಯಾವುದೇ ಪ್ರದರ್ಶನವಿಲ್ಲದೇ ಮಾಡಬೇಕು. ಬಲಗೈಯಿಂದ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎನ್ನುತ್ತಾರೆ.

ನಾವು ಯಾವುದೇ ದಾನ ಮಾಡಿದರೂ ಭಗವಂತನಿಗೆ ಅರ್ಪಿಸಬೇಕು. ಎಲ್ಲಾ ಕರ್ಮಗಳನ್ನೂ ದೇವರನ್ನು ಮೆಚ್ಚಿಸುವಂತೆ ಮಾಡಿರಬೇಕು. ಅದು ಮಾತ್ರವೇ ನಿಜ ಭಕ್ತಿ ಆಗಿರುತ್ತದೆ. ದೇವರಿಗೆ ಸಮರ್ಪಣೆ ಮಾಡುವುದೇ ನಿಜವಾದ ಭಕ್ತಿಯ ಗುಣವಾಗಿರುತ್ತದೆ. ಅಹಂಕಾರವು ಭಕ್ತಿಗೆ ಹಾನಿಕಾರಕವಾಗಿರುತ್ತದೆ. ಭಾಗವತದಲ್ಲಿ ಇದನ್ನು ಸಮರ್ಥಿಸುವಂತಹಾ ಒಂದು ಉತ್ತಮ ನಿದರ್ಶನವಿದೆ.

ಯಾದವರು ಶ್ರೀಕೃಷ್ಣನು ತಮ್ಮ ಯಾದವ ಕುಲದಲ್ಲಿ ಹುಟ್ಟಿದವನಾಗಿದ್ದು ಮಹಾಭಾರತದಲ್ಲಿ ಪಾಂಡವರಿಗೆ ಜಯವನ್ನು ಗಳಿಸಿಕೊಟ್ಟನೆಂದು ಕೊಚ್ಚಿಕೊಳ್ಳುತ್ತಿದ್ದರು. ಅಲ್ಲದೇ, ಶ್ರೀಕೃಷ್ಣನಿಲ್ಲದೇ ಪಾಂಡವರು ಯುದ್ಧದಲ್ಲಿ ಗೆಲ್ಲುತ್ತಲೇ ಇರಲಿಲ್ಲವೆಂದೂ ಹೇಳಿಕೊಳ್ಳುತ್ತಿದ್ದರು. ಹಾಗೂ ಅವರೆಲ್ಲಾ ನಾವು ಆ ಕೃಷ್ಣನ ಸೋದರ, ಮಾವ, ಬಾವಮೈದ ಎಂದೂ ಹೆಮ್ಮೆಯಿಂದ ಬೀಗುತ್ತಿದ್ದರು. ಈ ಅಹಂಕಾರವೇ ಅವರಿಗೆ ಕೊನೆಗೆ ಮುಳುವಾಗಿ ಅವರು ನಾಶವಾದರು. ಆದರೆ ಇನ್ನೊಂದು ಕಡೆ ಗೋಪಿಕೆಯರು ಬೇರೆಯೇ ಭಾವನೆಯಿಂದ ಕೃಷ್ಣನನ್ನು ನೆನೆಸಿಕೊಳ್ಳುತ್ತಿದ್ದರು. ಅವರು "ಕೃಷ್ಣಾ, ನಾವು ನಿನ್ನವರು, ನಾವು ನಿನ್ನವರು" ಎಂದು ಹೇಳಿಕೊಳ್ಳುತ್ತಿದ್ದರು. ಅಂತಹಾ ವಿನೀತ ಭಾವದಿಂದ, ಭಕ್ತಿಯಿಂದ ಸಮರ್ಪಿಸಿಕೊಂಡ ಗೋಪಿಕೆಯರು ದೇವರ ಅಗಾಧ ಕೃಪೆಯನ್ನು ಪಡೆಯಬಲ್ಲವರಾದರು. ನಾವು "ಅವನು ನನ್ನವನು, ನೀನು ನನ್ನವನು" ಎಂಬ ಭಾವನೆಯನ್ನು ಬೆಳೆಸಿಕೊಂಡರೆ ಅದುವೇ ಅಹಂಕಾರ. ಆದರೆ "ನಾವು ನಿನ್ನವರಯ್ಯಾ" ಎಂದು ಭಾವಿಸಿದಲ್ಲಿ ಅದುವೇ ಶರಣಾಗತಿ.

ವಿಚಾರ ಮಾಡಿ ಮುಕ್ತಿಗೆ ಸರಿಯಾದ ಮಾರ್ಗವನ್ನು ಅನುಸರಿಸಿರಿ

ಮುಕ್ತಿಯನ್ನು ಪಡೆಯಲು ಎರಡು ದಾರಿಗಳವೆ. ದಾಸೋಹಂ (ನಾನು ಒಬ್ಬ ದಾಸ, ಸೇವಕ) ಇನ್ನೊಂದು ಶಿವೋಹಂ ( ನಾನು ದೇವರೇ ( ಶಿವನೇ) ಆಗಿದ್ದೇನೆ). ಒಬ್ಬನನ್ನು ಸರಪಣಿಗಳಿಂದ ಬಂಧಿಸಿದ್ದರೆ ಆತನು ತನ್ನ ದೇಹವನ್ನು ಹಿಗ್ಗಿಸಿಕೊಂಡು ಅಥವಾ ಕುಗ್ಗಿಸಿಕೊಂಡು ಅದರಿಂದ ಬಿಡುಗಡೆ ಪಡೆಯಬಹುದು. ನಾನೇ ಶಿವ, ಭಗವಂತ (ಶಿವೋಹಂ) ಎಂಬ ಭಾವನೆಯನ್ನು ಬೆಳೆಸಿಕೊಂಡರೆ ದೇಹವು ಹಿಗ್ಗಿ ಸರಪಣಿಗಳು ಖಂಡಿತಾ ಒಡೆದು ಚೂರಾಗಿ, ಅವನಿಗೆ ಬಿಡುಗಡೆಯಾಗುತ್ತದೆ. ಆದರೆ ಅವನು ‘ನಾನೇ ದಾಸ’ (ದಾಸೋಹಂ) ಭಾವನೆ ಬೆಳೆಸಿಕೊಂಡರೆ ಸರಪಣಿಗಳು ಸಡಿಲವಾಗಿ ಅವನ ದೇಹವೇ ಕುಗ್ಗಿ ಅವನಿಗೆ ಹಾಗೂ ಬಿಡುಗಡೆಯಾಗುತ್ತದೆ. ಅಂದರೆ ನೀವು ‘ನಾನು ದೇವರ ಸೇವಕನೆಂದು’ ಭಾವಿಸಿಕೊಳ್ಳಬೇಕು ಅಥವಾ ‘ದೇವರು ನನ್ನಲ್ಲಿದ್ದಾನೆ, ಹಾಗಾಗಿ ನಾನೇ ದೇವರು’ ಎಂಬ ಭಾವನೆಗೆ ಬಲ ನೀಡಬೇಕಾಗುತ್ತದೆ. ಆದರೆ ಇಂದು ನಾವು ಈ ಎರಡರಲ್ಲಿ ಯಾವುದನ್ನೂ ಸತತವಾಗಿ ಮಾಡುವುದಿಲ್ಲ. ಒಂದು ನಿಮಿಷ ಒಂದು ಭಾವನೆಯಾದರೆ, ಮರುನಿಮಿಷವೇ ಬೇರೆ ಭಾವನೆ ಬರುತ್ತದೆ. ನಾವು ಒಂದು ರೀತಿಯಲ್ಲಿ ಇಬ್ಬದಿಯಲ್ಲೂ ಕುಣಿಯಹೊರಟಿದ್ದೇವೆ. (ಉದಾ. ಎರಡು ದೋಣಿಗಳಲ್ಲಿ ಒಂದೊಂದು ಕಾಲಿಟ್ಟ ರೀತಿ ಎಂಬ ನಾಣ್ಣುಡಿಯಿದೆ).

ಈ ರೀತಿಯ ಚಂಚಲತೆಯಿಂದ ಯಾವ ಒಂದರ ಲಾಭವೂ ನಮಗೆ ಸರಿಯಾಗಿ ದೊರೆಯುತ್ತಿಲ್ಲ. ಆದ್ದರಿಂದ ಯಾವುದೋ ಒಂದು ಚಿಂತನೆಯನ್ನು ಭದ್ರವಾಗಿ ಹಿಡಿದುಕೊಳ್ಳಬೇಕು ಮತ್ತು ಅದನ್ನೇ ಸಮರ್ಪಣೆ ಮತ್ತು ಏಕಾಗ್ರತೆಯಿಂದ ಅನುಸರಿಸಬೇಕು.

ಭಗವದ್ಗೀತೆಯು ’ಅರ್ಜುನ ವಿಷಾದ ಯೋಗ’ ಅಧ್ಯಾಯದಿಂದ ಆರಂಭವಾಗುತ್ತದೆ. ಕರ್ಮಯೋಗ ಎಂಬುವುದು ಮೂರನೆ ಅಧ್ಯಾಯ. ಕೃಷ್ಣನು ಅರ್ಜುನನಿಗೆ ಕರ್ಮಯೋಗವನ್ನು ಅನುಸರಿಸಿ ಕರ್ಮದಲ್ಲಿ, ಕರ್ತವ್ಯದಲ್ಲಿ ತೊಡಗು ಎಂದು ಉಪದೇಶಿಸುತ್ತಾನೆ. ಅವನು ಮುಂದುವರೆದು "ನಾನು ಸಹಾ ಸದಾ ಕರ್ಮದಲ್ಲಿ ತೊಡಗಿಯೇ ಇರುತ್ತೇನೆ. ನಾನು ಕರ್ಮದಲ್ಲಿ ನಿರತನಾಗದಿದ್ದರೆ ಇಡೀ ಜಗತ್ತೇ ಪೂರ್ತಿಯಾಗಿ ನಿಂತುಹೋಗುತ್ತದೆ. ಎಲ್ಲರೂ ತಂತಮ್ಮ ಕರ್ತವ್ಯವನ್ನು ಕರ್ಮದಲ್ಲಿ ತೊಡಗಿ ಮಾಡಲೇಬೇಕು’ ಎಂದು ಘೋಷಿಸುತ್ತಾನೆ. ಕೃಷ್ಣನು ಮುಂದುವರೆದು, ‘ಯಾವುದೇ ಫಲವನ್ನು ಅಪೇಕ್ಷಿಸದೇ, ಆಸೆಯಿಲ್ಲದೇ ಕರ್ಮವನ್ನು ಮಾಡು. ನಾನು ಧರ್ಮವನ್ನು ಸಂಸ್ಥಾಪಿಸಲು ಈ ಭೂಮಿಯಲ್ಲಿ ಪುನಃ ಪುನಃ ಜನ್ಮವೆತ್ತುತ್ತಿರುತ್ತೇನೆ. ಯಾರು ಯಾವುದೇ ಅನ್ಯ ಚಿಂತೆಯಿಲ್ಲದೇ ನನ್ನನ್ನೇ ಧ್ಯಾನಿಸುವರೋ, ನಾನು ಅಂತಹವರ ಎಲ್ಲಾ ಅವಶ್ಯಕತೆಗಳನ್ನೂ, ಯೋಗಕ್ಷೇಮವನ್ನೂ ನೋಡಿಕೊಳ್ಳುತ್ತೇನೆ, ಆದುದರಿಂದ ಯಾವುದೇ ಫಲಾಪೇಕ್ಷೆಯಿಲ್ಲದೇ ಸದಾ ನನ್ನ ಧ್ಯಾನದಲ್ಲಿದ್ದುಕೊಂಡು ಕರ್ಮವನ್ನು ಮಾಡಬೇಕಾದ್ದು ಮುಖ್ಯ’ ಎಂದು ಅರ್ಜುನನಿಗೆ ಉಪದೇಶಿಸಿದ್ದಾನೆ.

ಎಲ್ಲರೂ ಕಾಲದೊಂದಿಗೇ ಬದಲಾಗುತ್ತಲೇ ಹೋಗಬೇಕು. ನಾವು ನಮ್ಮ ವಯೋಧರ್ಮ ಮತ್ತು ಆಯಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಉದಾರಣೆಗೆ, ಚಿಕ್ಕ ಮಗುವಿಗೆ ಹಾಲು ಮತ್ತು ದ್ರವ ಪದಾರ್ಥವನ್ನೇ ಕೊಡಬೇಕು, ಏಕೆಂದರೆ ಅದಕ್ಕೆ ತಿನ್ನಲು ಹಲ್ಲುಗಳು ಬೆಳೆದಿರುವುದಿಲ್ಲ. ಆದರೆ ಹಲ್ಲುಗಳು ಬಂದಮೇಲೆ ಅದು ಯಾವುದೇ ಗಟ್ಟಿ ಆಹಾರವನ್ನು ಸೇವಿಸಬಲ್ಲುದು. ಮಗುವಿನ ದೇಹವು ಬೆಳೆಯುತ್ತಿದ್ದಂತೆ ಅದರ ಆಹಾರ ಪದ್ಧತಿಯೂ ಬದಲಾಗುತ್ತಾ ಹೋಗುತ್ತದೆ. ಹಾಗಾಗಿಯೇ ನಾವು ಬೆಳೆಯುತ್ತಾ ಹೋದಂತೆಲ್ಲಾ ಯಾವುದೇ ಫಲಾಪೇಕ್ಷೆಯಿಲ್ಲದೇ ಕರ್ಮವನ್ನು ಮಾಡುತ್ತಾ ಹೋಗಬೇಕು.

ಈ ವಿಷಯಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಮಾನವನಿಗೆ ಯೋಚನಾಶಕ್ತಿ ಮತ್ತು ಜಿಜ್ಞಾಸೆಯ ಅವಶ್ಯಕತೆಯಿದೆ. ಪ್ರತಿವ್ಯಕ್ತಿಗೂ ಯಾವುದೇ ಸಂಧರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನವಿದ್ದಲ್ಲಿ ಅಂತಹವನಿಗೆ ಗೌರವ ದೊರೆಯುತ್ತದೆ. ಅವನು ಆ ಮಿತಿಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವೇ ಅವನು ಹಾಸ್ಯಾಸ್ಪದನಾಗುತ್ತಾನೆ. ಒಬ್ಬ ಯುವಕನೇನಾದರೂ ಕೋಲು ಹಿಡಿದು ನಡೆದರೆ ಎಲ್ಲರೂ ಅವನನ್ನು ನೋಡಿ ನಗುವರು. ಹಾಗೆಯೇ ಒಬ್ಬ ವೃದ್ಧನು ಮಕ್ಕಳ ಜೊತೆ ಆಟವಾಡುತ್ತಿದ್ದರೂ ಜನರು ನಗುವರು. ನಮ್ಮ ವರ್ತನೆಯು ನಮ್ಮ ವಯಸ್ಸು ಮತ್ತು ಸಂಧರ್ಭಕ್ಕೆ ಸೂಕ್ತವಾಗಿ ಇರಬೇಕು.

ತರುಣರು ತಮ್ಮ ಸ್ವಂತ ಬೆಳವಣಿಗೆಗೆ ಮತ್ತು ವ್ಯಕ್ತಿತ್ವದ ಸುಧಾರಣೆಗೆ ಹಿರಿಯರು ನೀಡುವ ಸಲಹೆಗಳನ್ನು ಪಾಲಿಸಬೇಕು. ಯಾರು ನಮ್ಮ ದೋಷಗಳನ್ನು ಎತ್ತಿ ತೋರಿಸುತ್ತಾರೋ, ಅವರೇ ನಿಜವಾದ ಗುರುಗಳು. ‘ಯಾರು ನಮ್ಮ ತಪ್ಪುಗಳನ್ನು ತೋರಿಸಿಕೊಡುತ್ತಾರೋ, ಅವರಿಗೆ ನಾವು ಸಾಷ್ಟಾಂಗ ನಮಸ್ಕಾರ ಮಾಡಬೇಕೆಂದೂ, ಅದರಿಂದ ನಮಗೆ ನಮ್ಮ ದೋಷಗಳನ್ನು ತಿದ್ದಿಕೊಳ್ಳುವ ಸದವಕಾಶವೂ ದೊರೆಯುತ್ತೆಂದೂ’ ಶಂಕರಾಚಾರ್ಯರು ಭೋಧಿಸಿದ್ದಾರೆ. ನಾವು ನಮ್ಮ ತಪ್ಪುಗಳನ್ನೇ ಹೊಗಳಿಕೊಂಡು ವ್ಯಕ್ತಪಡಿಸುತ್ತಿದ್ದಂತೆ ಅವು ಇನ್ನೂ ಹೆಚ್ಚಾಗಿ ಬೆಳೆಯುತ್ತಾ ಹೋಗುತ್ತಿರುತ್ತವೆ. ಹಾಗಾಗಿ ಯಾರು ನಮಗೆ ವಿವೇಕದ ಬುದ್ದಿವಾದ ಹೇಳುವರೋ ಅವರೇ ನಿಜವಾದ ಗುರು. ಶಿಷ್ಯನಾದವನು ತನ್ನ ತಪ್ಪುಗಳನ್ನು ತಿದ್ದಿಕೊಂಡು ಗುರುವಿನ ಬಗ್ಗೆ ಪ್ರೇಮವನ್ನು ವೃದ್ಧಿಸಿಕೊಳ್ಳಬೇಕು. ಈ ಇಮ್ಮಡಿ ಬೆಳವಣಿಗೆಯ ದಾರಿಯಲ್ಲಿ ನಾವು ನಡೆಯಬೇಕು. ನಮ್ಮ ತಪ್ಪುಗಳನ್ನು ತೋರಿಸಿಬಿಟ್ಟರೆಂದು ನಾವು ದೂಷಿಸಬಾರದು. ಹಾಗೆಲ್ಲಾ ಭಾವಿಸುತ್ತಾ ಹೋದರೆ ನಾವು ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವೇ ಇಲ್ಲ. ಟೀಕೆಯನ್ನು ಸಮಚಿತ್ತದಿಂದ ಸ್ವೀಕರಿಸಿ. ವಿದ್ಯಾರ್ಥಿಗಳು ಒಳಿತು ಮತ್ತು ಕೆಡುಕನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದರೆ ಅವರಿಗೇ ಲಾಭ. ಎಲ್ಲರೂ ಸಂತೋಷದಿಂದಿರಿ.

-೨೫ನೇ ಏಪ್ರಿಲ್೧೯೮೮ ರಂದು ಕೊಡೈಕೆನಾಲ್, ಸಾಯಿಶೃತಿಯಲ್ಲಿ ಭಗವಾನರ ದಿವ್ಯೋಪನ್ಯಾಸ.

ಪ್ರೇಮ ಎಂಬುದು ನಾನು ನಿಮಗೆ ತರುವ ವಿಶೇಷ ಕಾಣಿಕೆ, ಆ ವಿಶೇಷ ಮಾಧ್ಯಮದಿಂದಲೇ ನನ್ನ ಕೃಪೆಯು ಕಾರ್ಯ ಮಾಡುವುದು. ನನ್ನ ಎಲ್ಲಾ ವರ್ತನೆಗಳಿಗೂ ಅದುವೇ ಮೂಲಭೂತವಾದುದ್ದು. ದೇವರು ಎಲ್ಲಾ ಮಾನವರಲ್ಲಿಯೂ ವಾಸಿಸುತ್ತಾನೆ ಎನ್ನಲಾಗಿದೆ. ಹೌದು, ಅವನು ಪ್ರೇಮ ಸ್ವರೂಪದಲ್ಲಿ ಇರುತ್ತಾನೆ. ಪ್ರೇಮವನ್ನು ಬಿಟ್ಟರೆ ಜಗತ್ತೇ ದುಃಖ ಮತ್ತು ಸಂಕಷ್ಟದ ಕಡಾಯಿಯಾಗಿಬಿಡುತ್ತದೆ. ಮೀನಿಗೂ ನೀರಿಗೂ ಇರುವ ಅವಿನಾಭಾವ ಸಂಬಂಧದಂತೆ. ಒಂದು ಮೀನನ್ನು ಮುತ್ತು ರತ್ನಗಳ ಪಾತ್ರೆಯಲ್ಲಿಟ್ಟರೂ ಅದು ನೀರಿಗಾಗಿ ಹಾತೊರೆದು ಪ್ರಾಣ ಸಂಕಟ ಪಡುತ್ತಿರುತ್ತದೆ.

- ಭಗವಾನ್ ಶ್ರೀ ಸತ್ಯ ಸಾಯಿಬಾಬಾ.


12 views0 comments

Comments

Couldn’t Load Comments
It looks like there was a technical problem. Try reconnecting or refreshing the page.
bottom of page