ಇಂಗ್ಲೀಷ್ ಮೂಲ: ರಾಬರ್ಟ್ ಲೆಸ್ಲಿ ಬೆಲ್ಲೆಂ (೧೯೪೩)
ಕನ್ನಡಕ್ಕೆ: ನಾಗೇಶ್ ಕುಮಾರ್ ಸಿ.ಎಸ್.
೧೯೪೩, ಹಾಲಿವುಡ್
೧
ನಾನು ಆ ಪೇಪರ್ ಕವರನ್ನು ಬಿಚ್ಚುತ್ತಿದ್ದಂತೆಯೇ ಒಂದು ಮನುಷ್ಯನ ತಲೆ ಅದರಿಂದ ಜಾರಿ ನನ್ನ ಮಡಿಲಿಗೆ ಬಿದ್ದಿತು. ಅದೊಂದು ಪುರುಷನ ತಲೆ, ಮಧ್ಯವಯಸ್ಕನ ಅರೆ ಬಕ್ಕ ರುಂಡ, ಅದರ ಹಣೆಯ ಮಧ್ಯೆ ಒಂದು ಗುಂಡು ಹೊಕ್ಕ ರಂಧ್ರ! ಒಂದು ಕ್ಷಣ ನಾನು ದಿಗ್ಭ್ರಾಂತನಾಗಿ ಕಿಟ್ಟೆಂದು ಕೂಗಿಬಿಡುವೆನೋ ಎನಿಸಿ ನಡುಗಿಹೋದೆ.
ಆಗ ರಾತ್ರಿ ಬಹಳ ಹೊತ್ತಾಗಿತ್ತು ನಾನು ಆಗತಾನೆ ಥಿಯೇಟರಿನಲ್ಲಿ ಎರಡು ನಾಟಕದ ಶೋ ನೋಡಿ ಮನೆಗೆ ವಾಪಸಾಗಿದ್ದೆ. ಕೀ ತಿರುಗಿಸಿ ಬಾಗಿಲು ತೆರೆದಾಗ ಹೊಸ್ತಿಲ ಮೇಲೆ ಇಟ್ಟ ಮಾಂಸದಂಗಡಿಯೊಂದರ ಬ್ರೌನ್ ಪಪರಿನ ಪಾರ್ಸಲ್ ಕಣ್ಣಿಗೆ ಬಿದ್ದಿತ್ತು. ಅದೇನೆಂದು ತಿಳಿಯದೇ ಒಳಗೆ ಹೋಗಿ ಹಾಲಿನ ಲೈಟ್ ಹಚ್ಚಿ, ‘ಇದ್ಯಾವ ಸಾಂತಾ ಕ್ಲಾಸ್ ಕಳಿಸಿದ ಉಡುಗೊರೆ?’ ಎಂದುಕೊಳ್ಳುತ್ತಾ ಪಾರ್ಸಲ್ ಎತ್ತಿಕೊಂಡಿದ್ದೆ ಅಷ್ಟೆ.
ಆ ಪಾರ್ಸಲ್ ಮೇಲೆ ಯಾವುದೇ ಪೋಸ್ಟೇಜ್ ಸ್ಟಾಂಪುಗಳೂ ಇರಲಿಲ್ಲ; ಅಥವಾ ಯಾವುದೇ ಕೊರಿಯರ್ ಹೆಸರುಪಟ್ಟಿಯೂ ಕಾಣಲಿಲ್ಲ. ಅಂದರೆ ಯಾರೋ ಅದನ್ನು ಇಲ್ಲಿಗೆ ಕೈಯಾರೆ ತಂದು ತಲುಪಿಸಿದ್ದರು. ಅದರ ಮೇಲೆ “ಡ್ಯಾನ್ ಟರ್ನರ್, ಖಾಸಗಿ ಪತ್ತೇದಾರ, ಹಾಲಿವುಡ್” ಎಂದು ಕೈಯಲ್ಲಿ ಬರೆದಿತ್ತು, ಕಳಿಸಿದವರ ಹೆಸರು, ವಿಳಾಸವೂ ಇಲ್ಲ.
ನಾನು ಪಾಕೆಟ್ ಚಾಕುವಿನಿಂದ ದಾರ ಕತ್ತರಿಸಿ ಪೇಪರಿನ ಮಡಿಕೆ ಬಿಚ್ಚಿದಂತೆ ಅಲ್ಲಿ ಒಂದು ಕಾರ್ಡ್‌ಬೋರ್ಡ್ ಬಾಕ್ಸ್ ಇತ್ತು. ಅದನು ಬಿಚ್ಚಿದಾಗಲೇ ಈ ಕತ್ತರಿಸಿದ ರುಂಡ ಕೈ ಜಾರಿ ನನ್ನ ತೊಡೆಗಳ ಮೇಲೆ ಥೊಪ್ಪನೆ ಬಿದ್ದಿತ್ತು. ನನಗೋ ಆ ಕ್ಷಣ ಮೂರ್ಛೆ ಹೋಗುವೆನೇನೋ ಎನಿಸಿತ್ತು. ಯಾರಿಗೆ ಹೀಗೆಲ್ಲ ಆದರೆ ಭಯವಾಗುವುದಿಲ್ಲ ಹೇಳಿ?
ನಾನು ನಾಗರಹಾವುಗಳ ಮೇಲೆ ಕುಳಿತಿದ್ದೆನೋ ಎಂಬಂತೆ ಗಾಬರಿಯಿಂದ ಸೀಟಿನಿಂದ ದಿಗ್ಗನೆದ್ದು “ವಾಟ್ ದ...” ಎನ್ನುತ್ತಿದ್ದಂತೆ, ಆ ರುಂಡವೂ ಉರುಳಿ ಫುಟ್‌ಬಾಲಿನಂತೆ ರೂಮಿನ ಅರ್ಧ ನೆಲ ಸವೆಸಿ ಮಧ್ಯದಲ್ಲಿ ನಿಂತಿತು. ಅದರ ಮುಖ ನನ್ನತ್ತ ತಿರುಗಿತ್ತು ಮತ್ತು ಆ ಅಪರಿಚಿತ ನನ್ನತ್ತ ನೋಡಿ ವ್ಯಂಗ್ಯ ನಗೆ ಬೀರಿದ ಎಂದು ನನಗೆ ಕಲ್ಪನೆಯಾಯಿತು.
ತಕ್ಷಣ ನಾನು ನನ್ನ ಮನೆಯ ಬಾರಿಗೆ ಧಾವಿಸಿ ವ್ಯಾಟ್ ೬೯ ಬಾಟಲಿ ತೆರೆದು ನೇರವಾಗಿ ಗಂಟಲಿಗೆ ಮದ್ಯ ಸುರಿದುಕೊಂಡೆ. ಮೈಯಲ್ಲಿ ಸ್ವಲ್ಪ ಬಿಸಿಯೇರಿದಂತಾಯಿತು, ತುಂಬಾ ಹೆಚ್ಚೇನಲ್ಲ. ಸ್ವಲ್ಪ ನಡುಗುತ್ತಲೇ ನಾನು ಮತ್ತೆ ಕತ್ತರಿಸಿದ ರುಂಡದ ಬಳಿಗೆ ಹೋಗಿ ಕೈಗೆತ್ತಿಕೊಂಡು ನೋಡಿದೆ.
ಆ ಬುಲೆಟ್ ರಂಧ್ರದ ಸುತ್ತಲೂ ರಕ್ತವೇನೂ ಕಾಣಲಿಲ್ಲ. ಕತ್ತಿನ ಗಾಯದ ಸುತ್ತಲೂ ಏನೂ ಕಾಣಲಿಲ್ಲ. ಎಲ್ಲವನ್ನೂ ಚೆನ್ನಾಗಿ ತೊಳೆದು ಕ್ಲೀನ್ ಮಾಡಿದಂತಿತ್ತು.
ಆ ಮುಖದ ಕಳಾಹೀನ ಚಹರೆಯನ್ನು ಗಮನಿಸಿದಾಗ ನನ್ನ ಬೆನ್ನಲ್ಲಿ ಜುಮ್ಮೆನ್ನುವ ಮಿಂಚು ಹಾದುಹೋದಂತಾಯಿತು.
ಇದು ಸ್ಕಿನ್ನಿ ಫ಼ೇಬಿಯನ್ ಎಂಬವನ ತಲೆಯಾಗಿತ್ತು. ಆತ ಮಾಜಿ ಮೂಕಿ ಚಿತ್ರಗಳ ಹಾಸ್ಯ ಕಲಾವಿದ, ತನ್ನ ಕೃತಕ ಹಲ್ಲುಗಳನ್ನು ಹೊರತೆಗೆಯುವುದು, ಮೀಸೆ ಒಳಕ್ಕೆ ಮಡಿಚಿಕೊಳ್ಳುವುದು ಈ ತರಹದ ತನ್ನದೇ ಆದ ವಿಚಿತ್ರ ಹಾವಭಾವಗಳಿಂದ ಆ ಕಾಲದ ವಿದೂಷಕ ಚಿತ್ರಗಳಲ್ಲಿ ನಂಬರ್ ಒನ್ ಆಗಿದ್ದವ. ಆದರೆ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಒಂದೇ ಒಂದು ಕುಡಿದು ಡ್ರೈವಿಂಗ್ ಮಾಡಿದ ಘಟನೆಯಿಂದ ಅವನ ಪತನವಾಗಿತ್ತು. ನನಗೆ ಆಗಿನ ದಿನ ಪತ್ರಿಕೆ ವರದಿಗಳು ಇನ್ನೂ ಚೆನ್ನಾಗಿ ನೆನಪಿದೆ: ಸ್ಯಾನ್ ಡಿಯಗೋ ನಗರದ ನ್ಯಾನ್ಸಿ ಓನೀಲ್ ಎಂಬ ಒಬ್ಬ ಅಪರಿಚಿತ ಹೆಣ್ಣೊಂದನ್ನು ಬಾರುಗಳಲ್ಲಿ ಕುಡಿಸಲು ಕರೆದೊಯ್ದಿದ್ದ. ಇಬ್ಬರೂ ಕಂಠಮಟ್ಟ ಕುಡಿದು ಮರೆಯುತ್ತಿದ್ದಾಗ ಆ ರಾತ್ರಿ ಆಕೆ ಅದೇಕೋ ಹಠಾತ್ತನೆ ಸಾವನ್ನಪ್ಪಿದ್ದಳು. ಪೋಲೀಸರು ಆ ಸಾವನ್ನು ಸ್ಕಿನ್ನಿಯ ತಲೆಗೆ ಕಟ್ಟಲು ನಿರ್ಧರಿಸಿದ್ದರೂ, ಮರಣೋತ್ತರ ವರದಿ ನೋಡಿ ಕೋರ್ಟು ಆಕೆ ಅತಿ ಕುಡಿತದಿಂದ ಲಿವರ್ ತೊಂದರೆ ಉಲ್ಬಣವಾಗಿ ಸಹಜವಾಗಿ ಮೃತಪಟ್ಟಳು ಎಂದು ತೀರ್ಪು ಕೊಟ್ಟಿತ್ತು. ಇದರಿಂದ ಸ್ಕಿನ್ನಿ ಫ಼ೇಬಿಯನ್ ಬಿಡುಗಡೆಯಾದರೂ ಅಲ್ಲಿಗೆ ಅವನ ಅದೃಷ್ಟದ ದಿನಗಳೂ ಮುಗಿದಿದ್ದವು. ಇಡೀ ಚಿತ್ರರಂಗಕ್ಕೆ ಹಾಲಿವುಡ್ ಪತ್ರಿಕೆಯವರು ಒಂದು ರೀತಿ ಕಪ್ಪು ಮಸಿ ಬಳಿಯುವ ಅಭಿಯಾನ ಮಾಡಿದ್ದರಿಂದ ಚಿತ್ರರಂಗದವರೂ ಇದಕ್ಕೆಲ್ಲ ಅವನ ತಲೆಯ ಮೇಲೆ ಗೂಬೆ ಕೂರಿಸಿ ಕೈತೊಳೆದುಕೊಂಡಿದ್ದರು.
ಈ ಪ್ರಕರಣದ ಕರಾಳ ಛಾಯೆಯಿಂದ ಅವನ ಚಿತ್ರಗಳು ನಿರ್ಮಾಪಕರ ಪಟ್ಟಿಯಿಂದ ಮಾಯವಾದವು. ಚಿತ್ರರಂಗದ ಅಲಿಖಿತ ನಿಷೇಧ ಅನುಭವಿಸಿ ಅವನು ಬಿದ್ದುಹೋಗಿದ್ದ. ಅವನಿಗೆ ಇದು ತಕ್ಕ ಶಿಕ್ಷೆಯೋ ಅಲ್ಲವೋ, ಯಾರಿಗ್ಗೊತ್ತು? ಎಷ್ಟೋ ಮಂದಿ ಸಿನಿಮಾ ರಂಗದವರು ಈ ರೀತಿ ಕುಡಿತ ಮತ್ತು ಹೆಣ್ಣುಗಳ ಜೊತೆ ಚೆಲ್ಲಾಟವಾಡಿ ಬಚಾವ್ ಸಹ ಆಗಿದ್ದಾರೆ. ಒಟ್ಟಿನಲ್ಲಿ ಕೆಟ್ಟ ಹೆಸರು ಪಡೆದ ಸ್ಕಿನ್ನಿ ಮಾತ್ರ ಹಾಲಿವುಡ್ಡಿನಲ್ಲಿ ಅಸ್ಪೃಶ್ಯನಾಗಿದ್ದ. ಯಾರಿಗೂ ಹೇಗೆ ಹರಿದ ಉಡುಪು ಬೇಡವಾಗುತ್ತದೋ ಹಾಗೆ ಸ್ಕಿನ್ನಿ ಫ಼ೇಬಿಯನ್ ಸ್ಥಿತಿಯಾದಾಗ ಅವನು ಹಾಲಿವುಡ್ ತೊರೆದು ತನ್ನ ಸ್ವಂತ ನಾಡಾದ ದಕ್ಷಿಣ ಅಮೆರಿಕದಲ್ಲಿ ಟೂರ್ ಶೋ ಮಾಡುತ್ತಿದ್ದ. ಅದೂ ಯಶಸ್ವ್ವಿಯಾಗದೇ ಮತ್ತೆ ಹಾಲಿವುಡ್ಡಿಗೆ ಬಂದು ಸದ್ದಿಲ್ಲದೇ ಕೇರೆನ್ ಕಾಲ್ವರ್ಸನ್ ಎಂಬ ಇತರರು ಅಸೂಯೆ ಪಡೆಯುವಂತಹ ಒಬ್ಬ ಸುಂದರ ನಟಿಯನ್ನು ಮದುವೆಯಾಗಿದ್ದ. ಅವಳು ತನ್ನ ಚಿತ್ರಗಳಿಂದ ಚೆನ್ನಾಗಿಯೇ ಹಣ ಸಂಪಾದಿಸಿ ಗಂಡ ಸ್ಕಿನ್ನಿಯನ್ನೂ ಸಾಕಬಲ್ಲವಳಾಗಿದ್ದಳು. ನನಗೆ ಕೇಳಿಬಂದ ಗಾಳಿಮಾತುಗಳ ಪ್ರಕಾರ ಸ್ಕಿನ್ನಿ ಫೇಬಿಯನ್ ತನ್ನದೇ ಆದ ಉಳಿತಾಯವನ್ನೂ ಎಲ್ಲೋ ಗುಟ್ಟಾಗಿ ಸಂಗ್ರಹ ಮಾಡಿ ಇಟ್ಟುಕೊಂಡಿದ್ದನಂತೆ.
ಇಷ್ಟು ಹಾಲಿವುಡ್ ಪತ್ತೇದಾರನಾಗಿ ನನಗೆ ಇದ್ದ ಮಾಹಿತಿ. ಆದರೆ ಈಗ ಅವನ ರುಂಡ ನನ್ನತ್ತ ಅಣಕಿಸುವಂತೆ ಕಾಣುತ್ತಿತ್ತು. ಆದರೆ ಆ ದೇಹದ ಮಿಕ್ಕ ಭಾಗಗಳೆಲ್ಲಿ?. ಈ ರೀತಿ ಬರೀ ತಲೆಯೊಂದಿಗೆ ಯಾರಾದರೂ ಪತ್ತೆದಾರನನ್ನು ಭೇಟಿಯಾಗಲು ಬರುತ್ತಾರೆಯೆ? ಯಾಕೋ ನನಗೆ ಹುಚ್ಚು ಕೋಪ ಬರಲಾರಂಭಿಸಿತು, ಅವನ ತಲೆಗೆ ಒದ್ದು ಬಿಡಲೇ ಎನಿಸಿದರೂ, ‘ಬೇಡ, ಅವನಿಗೆ ಮೊದಲೇ ಕಾಲಿಲ್ಲ, ವಾಪಸ್ ಒದೆಯಲೂ ಆಗಲ್ಲ’ ಎಂದು ದಯೆ ತೋರಿದೆ!
ನನ್ನ ಟೆಲಿಫೋನಿಗೆ ಕಾಲೆಳೆದುಕೊಂಡು ಹೋಗಿ, ನನ್ನ ಗೆಳೆಯ ಪೋಲೀಸ್ ಹೋಮಿಸೈಡ್‌ನ (ನರಹತ್ಯೆ ವಿಭಾಗದ) ಡೇವ್ ಡೊನಾಲ್ಡ್‌ಸನ್‌ಗೆ ಕಾಲ್ ಮಾಡಿದೆ.
ಅವನ ಧ್ವನಿ ಸ್ವಲ್ಪ ಹೊತ್ತಿನ ನಂತರ ಗೊರಗುಟ್ಟಿತು, “ಹಾ, ಯಾರಿದು? ಏನು ಬೇಕು?”
“ಟರ್ನರ್ ಮಾತಾಡುತ್ತಿದ್ದೇನೆ. ನನಗೊಂದು ತಲೆ ಸಿಕ್ಕಿದೆ...”
“ಮೊದಲು ಇರಲಿಲ್ಲವಲ್ಲ ನಿನಗೆ, ಒಳ್ಳೆಯದಾಯಿತು ಈಗಾದರೂ ಸಿಕ್ಕಿದ್ದು... ಅದಕ್ಕಾಗಿ ಈಗ ಎಬ್ಬಿಸಿದೆಯಾ?”
“ನೀನು ಡ್ಯೂಟಿ ಸಮಯದಲ್ಲಿ ನಿದ್ದೆ ಹೊಡೆಯಬಾರದು,” ನಾನಂದೆ, “ಅಲ್ಲದೇ ಇದೊಂದು ಬೇರೆ ತಲೆಯ ವಿಷಯ. ಇದು ಸ್ಕಿನ್ನಿ ಫ಼ೇಬಿಯನ್ ತಲೆ...”
“ಓಹ್, ಹೌದೆ? ಅವನು ಅದನ್ನು ನಿನಗೆ ಸಾಲವಾಗಿ ಕೊಟ್ಟಿದ್ದಾನೆ ಅನ್ನು.. ಪಾಪಾ, ಅವನು ಅದಿಲ್ಲದೇ ಹೇಗೆ ಕೆಲಸ ಮಾಡತ್ತಿದ್ದಾನೋ?” ಎನ್ನುವುದೇ ಡೇವ್!
“ನಂಗೊತ್ತಿಲ್ಲ. ಈ ತಲೆ ಮಾತಾಡುವುದಿಲ್ಲ. ಸತ್ತು ಹೋಗಿದೆ. ಅದನ್ನು ಕಡಿದು ಯಾರೋ ನನ್ನ ಮನೆಗೆ ಕಾರ್ಡ್‌ಬೋರ್ಡ್ ಬಾಕ್ಸಿನಲ್ಲಿಟ್ಟು ಕಳಿಸಿದ್ದಾರೆ. ಅದರಲ್ಲಿ ಒಂದು ಬುಲೆಟ್ ತೂತು ಸಹ ಇದೆ!”
“ಬಾಕ್ಸಿನಲ್ಲಿ ತೂತಿದೆಯೆ?”
ನಾನು ಸುಸ್ತಾದವನಂತೆ ಹೇಳಿದೆ, “ಬಾಕ್ಸಿನಲ್ಲಲ್ಲ್ಲ ಕಣಯ್ಯ, ಹಣೆಯಲ್ಲಿ!”
ಡೇವ್ ರೇಗಿದ, “ನೋಡು, ಷೆರ್ಲಾಕ್! ನೀನು ಮೊದಲು ಹೋಗಿ ನಿದ್ದೆ ಮಾಡು. ಇಂತಹ ಕೆಟ್ಟ ಕನಸೆಲ್ಲ ನನಗೂ ಕೆಲವು ಸಲ ಬೀಳ್ತಿರತ್ತೆ... ಜಾಣಮರಿ, ನಿನಗೊಂದು ಪಿಂಕ್ ಆನೆಯನ್ನೇ ನಾಳೆ ಗಿಫ್ಟ್ ಕಳಿಸುತ್ತೇನೆ, ಸರಿಯಾ?”
“ಓಹ್ ಸರಿ,” ನಾನೂ ಸಮನಾಗಿ ಹೇಳಿದೆ, “ಫ಼ೇಬಿಯನ್ ಕೊಲೆಯಾಗಿದೆ. ನೀನು ಹೆಡ್‌ಕ್ವಾರ್ಟರಿಸಿನಲ್ಲಿ ಇಸ್ಪೀಟು ಆಡುತ್ತಿದ್ದೀಯೇನಯ್ಯ? ನಾನು ಈಗ ಆ ತಲೆಯನ್ನು ಕಸದ ಬುಟ್ಟಿಗೆ ಎಸೆದು ಎಲ್ಲಾ ಮರೆತುಬಿಡ್ತೀನಿ. ಹಾಳಾಗಿ ಹೋಗು!”
“ಹೇ, ಒಂದು ನಿಮಿಷ ತಾಳಯ್ಯ... ನೀನು ಹೇಳುತ್ತಿರುವುದು ನಿಜ ತಾನೆ?”
“ಹೌದು ಮತ್ತೆ! ನೀನು ಸರಿಯಾಗಿ ಕೇಳಿಸಿಕೊಂಡರೆ ನನ್ನ ಹಲ್ಲುಗಳು ನಡುಕದಿಂದ ಕಟಕಟನೆ ಸದ್ದು ಮಾಡಿದ್ದೂ ಕೇಳಿಸಬಹುದು...” ಎಂದೆ.
“ಯಾರೋ ನಿನಗೆ ಸಿನ್ನಿ ಫ಼ೇಬಿಯನ್ ರುಂಡ ಕತ್ತರಿಸಿ ಕಳಿಸಿದ್ದಾರೆ ಅಂದೆಯಲ್ಲವೆ?”
“ಹಾಗೇ ಕಾಣಿಸುತ್ತದೆ!” ಎಂದೆ ಒಣಹಾಸ್ಯದಿಂದ.
“ಓ, ಭsಗವಂತಾ!” ಅವನು ಉದ್ರಿಕ್ತ ದನಿಯಲ್ಲಿ ಉದ್ಗರಿಸಿದ, “ಅದನ್ನು ನೀನು ಅದನ್ನು ಇದೀಗಲೇ ನನ್ನ ಆಫೀಸಿಗೆ ತೆಗೆದುಕೊಂಡು ಬಾ, ಗೊತ್ತಾಯಿತೆ?”
“ಹದಿನೈದು ನಿಮಿಷದಲ್ಲಿ. ಅಥವಾ ಹೆಚ್ಚೆಂದರೆ ಇಪ್ಪತ್ತು!” ನಾನು ಫೋನಿಟ್ಟು ನಡುಗುವ ಕೈಗಳಿಂದ ಒಂದು ಸಿಗರೇಟ್ ಹಚ್ಚಿದೆ. ಉಸ್ಸೆಂದು ಮುಂದಿನ ಕೆಲಸ- ಆ ತಲೆಯನ್ನೆತ್ತಿ ಇನ್ನು ಪ್ಯಾಕ್ ಮಾಡಬೇಕು ಎಂದುಕೊಳ್ಳುತ್ತಿರುವಾಗಲೇ-
ಅದೇನು ಹೊರಗಡೆ ಯಾವುದೋ ಸದ್ದು??
ಮುಂಬಾಗಿಲಿನ ಹೊರಗೆ ಹೆಜ್ಜೆಸಪ್ಪಳ ಕೇಳಿಸುತ್ತಿದೆ. ನನ್ನ ಭುಜದ ಹೋಲ್ಸ್ಟರಿನಲ್ಲಿರುವ .೩೨ ರಿವಾಲ್ವರನ್ನು ಅವಸರದಿಂದ ಕೈಗೆತ್ತಿಕೊಂಡೆ. ಬಾಗಿಲ ಬಳಿ ದೌಡಾಯಿಸಿ ರವ್ವನೆ ತೆರೆದು ನೋಡಿದೆ...
“ಅಲ್ಲೇ ನಿಲ್ಲ್ಲು, ಸಿಸ್ಟರ್,” ಎಂದೆ.
ಆಕೆಯೊಬ್ಬ ಎತ್ತರದ ಚೆಲುವೆಯೆನ್ನಬಹುದಾದ ಬ್ಲಾಂಡ್ ಹೆಣ್ಣು. ಆಕೆ ಧರಿಸಿದ್ದ ಅರೆಪಾರದರ್ಶಕ ಸಿಲ್ಕ್ ಗೌನ್ ಮೈಗೆ ಪೇಂಟ್ ಮಾಡಿದಂತಿತ್ತು. ತಲೆಯ ಮೇಲೆ ಬೆಳ್ಳಿ ರಂಗಿನ ತೋಳದ ಚರ್ಮವನ್ನು ಸೆರಗಿನಂತೆ ಹೊದ್ದಿದ್ದಳು. ಆಕೆ ಸುಂದರಿಯೇ ಇರಬಹುದು, ಆದರೆ ನನಗೆ ತಲೆ ಹೋಗುವಂತಾ ಕೆಲಸವಿತ್ತು, ನೋಡಿ!
ಆಕೆ ಎಷ್ಟು ಕಾಲ ಈ ಕಾರಿಡಾರಿನಲ್ಲಿ ನಿಂತಿದ್ದಳೋ ಎಂದು ತಕ್ಷಣ ಯೋಚಿಸಿದೆ. ನಾನು ಹೊರಬಂದ ರಭಸಕ್ಕೆ ಅವಳು ಗಾಬರಿಯಾದಳು. ನನ್ನ ಕೈಲಿದ್ದ ಗನ್ನನ್ನು ಕಂಡು ದೊಡ್ಡದಾಗಿ ಬಾಯಿ ತೆರೆದು “ಓಹ್-ಹ್-ಹ್” ಎಂದಳು.
“ಹಾ!” ಎಂದ ನಾನು ನನ್ನ ಮುಖವನ್ನು ಸನಿಹ ತಂದು ಅವಳ ನೀಲಿಕಂಗಳಲ್ಲಿ ದಿಟ್ಟಿಸಿ ಕೇಳಿದೆ, “ಯಾರು ನೀವು ಮತ್ತು ನಿಮಗೇನು ಬೇಕು?”
“ನಾ- ನಾನು ಟರ್ನರ್ ಎಂಬ ಪತ್ತೇದಾರನನ್ನು ಹುಡುಕಿಕೊಂಡು ಬಂದೆ.”
“ನನ್ನ ಮುಖ ನೋಡು! ನಿನ್ನೆದುರಿಗೇ ಇದ್ದೇನೆ” ಎಂದೆ.
“ನಾನು ನಿಮ್ಮನ್ನು ಒಂದು ನಿಮಿಷ ನೋಡಬಹುದೆ?... ನನಗೆ ಬಹಳ ಚಿಂತೆಯಿದೆ.”
“ನನಗೂ ಅಷ್ಟೆ!” ಆಕೆಯನ್ನು ದಿಟ್ಟಿಸಿ ನೋಡಿದೆ. ಅವಳು ನಿಜಕ್ಕೂ ಯಾವುದರ ಬಗ್ಗೆಯೋ ಬಹಳ ಚಿಂತಿತಳಾಗಿ ಕಾಣುತ್ತಿದ್ದಳು. ಆಕೆ ಆಕರ್ಷಕವಾಗಿ ನೀಟಾಗಿಯೂ ಕಾಣಿಸುತ್ತಿದ್ದಳು. ಅವಳ ಬಂಗಾರದ ಹಳದಿ ಕೂದಲು ನನ್ನ ಭುಜದ ಮೇಲಿತ್ತು – ಮತ್ತು ನಾನು ಆರಡಿಗಿಂತಲೂ ಎತ್ತರವಿದ್ದೇನೆ. ಅವಳು ಮೂವತ್ತರ ಆಸುಪಾಸಿನಲ್ಲಿದ್ದವಳು ಸ್ವಲ್ಪ ಮೇಕಪ್ ಮಾಡಿಕೊಂಡು ಕೆಲವು ವರ್ಷ ಕಿರಿಯಳಂತೆ ಕಾಣುವ ಪ್ರಯತ್ನವನ್ನೂ ಮಾಡಿದಂತಿತ್ತು. ನೋಡಲು ಸಣಕಲು ದೇಹವಲ್ಲ, ಒಳ್ಳೆಯ ಅಂಗಸೌಷ್ಟವ ಹೊಂದಿದ್ದಳು.
ಆಕೆ ಸಪ್ಪಗೆ ನಕ್ಕಳು, “ನಾನು ನಿಮ್ಮ ಜೊತೆ ಮಾತಾಡಬಹುದೆ- ಒಳಗೆ?”
“ಇಲ್ಲ.”
“ನಾನು...ಮಾತಾಡಲೇಬೇಕು.”
“ನಾಳೆ ಬಾ, ಸುಂದರಿ! ಆಫೀಸಿನ ಸಮಯಕ್ಕೆ.” ನಾನಂದೆ, “ಇವತ್ತು ಯಾವುದೋ ರಹಸ್ಯದಲ್ಲಿ ‘ತಲೆ’ಯವರೆಗೂ ಮುಳುಗಿದ್ದೇನೆ. ಅಲ್ಲೊಬ್ಬ ಪೋಲೀಸ್ ಆಫೀಸರ್ ಹೆಡ್ಕ್ವಾಟರ್ಸಿನಲ್ಲಿ ನನಗಾಗಿ ಕಾಯುತ್ತ್ತಿದ್ದಾನೆ, ನಾನು ತರುವುದನ್ನು ನೋಡಲು...”
“ನೀವು ಪೋಲೀಸರಿಗೆ ಆಮೇಲೆ ಉತ್ತರಿಸಿ. ಮಿ. ಟರ್ನರ್, ನಾನು ಹೇಳುತ್ತಿರುವುದು ಬಹಳ ಮುಖ್ಯ.. ಇದು ಕಾಯುವ ವಿಷಯವಲ್ಲ.”
“ಕಾಯಲೇಬೇಕಾಗಿದೆ.”
ಅವಳು ನನ್ನ ಬಾಗಿಲ ಹೊಸಿಲ ಮೇಲೆ ನಿಂತು ಬಿಗಿಪಟ್ಟು ಹಿಡಿದಳು, “ನೀವು ಯಾವಾಗಲೂ ಕಕ್ಷಿದಾರರನ್ನು ಹೀಗೇ ನಿರಾಕರಿಸುತ್ತೀರಾ?” ಅವಳಿಗೆ ಸಿಟ್ಟು ಬಂದಿತ್ತು.
“ಯಾವಾಗಲೂ ಅಲ್ಲ. ಈ ತರಹ ಗದ್ದಲ ಮಾಡಿದರೆ!.”
“ಛೆ, ಎಂಥ ಮನುಷ್ಯ!”ಎಂದು ಉದ್ಗರಿಸಿ ಒಮ್ಮೆಲೇ ನನ್ನ ಕಪಾಳಕ್ಕೆ ಚಟ್ ಎಂದು ಬಿಗಿದಳು.
ನಾನು ತಾಳ್ಮೆಗೆಟ್ಟು ಸ್ಫೋಟಿಸಿದೆ. ನಾನು ಕೈಯೆತ್ತಿದೆ. ಅವಳು ತಲೆ ಬಗ್ಗಿಸಿ ಕೈ ಅಡ್ಡ ಹಿಡಿದಳು, ನಾನು ಆ ಕೈಯನ್ನೆ ಬಿಗಿಯಾಗಿ ಹಿಡಿದೆ, “ನನಗೆ ಹೊಡೆದಿದ್ದಕ್ಕೆ ಬುದ್ದಿ ಕಲಿಸಲೆ?”ಎಂದು ಮುಖ ತ್ತಿರ ಸರಿಸಿ ಕೇಳಿದೆ. ಅವಳು ಕಣ್ಣು ಕಿರಿದಾಗಿಸಿ ದೊಡ್ಡ ದನಿಯಲ್ಲಿ ಕೇಳಿದಳು, “ನಿಮ್ಮ ಒರಟುತನಕ್ಕೆ ತಕ್ಕ್ಕ ಶಾಸ್ತಿ ಎಂದುಕೊಳ್ಳಿ. ಈಗ ನಾನು ಜೋರಾಗಿ ಕಿರುಚಿ ಗದ್ದಲ ಮಾಡಿ ನೀವು ನನ್ನ ಮೇಲೆ ದಾಳಿ ಮಾಡಿದಿರಿ ಎಂದು ಕೂಗಿ ಹೇಳಿದರೆ ಆಗ..?”
ನನ್ನ ಮನಸ್ಸಿಗೆ ‘ಓಹೋ, ಇವಳೇಕೋ ಬಡಪೆಟ್ಟಿಗೆ ಬಗ್ಗುವವಳಲ್ಲ, ಏನಾದರೂ ತೊಂದರೆ ಮಾಡೇ ಮಾಡುತ್ತಾಳೆ’ ಎಂದು ಖಚಿತವಾಯಿತು.
“ಇಲ್ಲ, ನನಗೆ ಗದ್ದಲವೇ ಬೇಡ. ಒಳಗೆ ಬನ್ನಿ,” ನಾನು ಶರಣಾದೆ, “ಅವಸರ ಪಟ್ಟೆ ಅನಿಸುತ್ತದೆ.”
“ನಾನು ಹೇಳಿದ್ದೆ ಸರಿ ಹಾಗಾದರೆ. ನನ್ನ ತೊಂದರೆ ದೊಡ್ಡದೇ,” ಎಂದು ಮೆದುವಾಗಿ ಉಲಿಯುತ್ತಾ ಬಾಗಿಲು ದಾಟಿ ಒಳಬಂದಳು ಆಕೆ.
ನಾನು ದುರುಗುಟ್ಟಿ ನೋಡಿದೆ, “ನಿಮಗೆ ಒಬ್ಬ ಪತ್ತೇದಾರನ ಅವಶ್ಯಕತೆ ನಿಜಕ್ಕೂ ಇರಬೇಕು, ಇಲ್ಲವಾದರೆ ಹೀಗೇಕೆ ಮಾಡುತ್ತಿದ್ದಿರಿ?”
“ನೀವೇನೋ ಒಳ್ಳೆಯವರು ಎಂದು ಕೇಳಿ ಬಂದಿದ್ದೆ. ಈಗ ನೀವೆಷ್ಟು ಒಳ್ಳೆಯವರಾದರೂ ನಿಮಗೆ ಕೆಲಸ ಕೊಡುವುದಾ ಬೇಡವಾ ಎನಿಸಿದೆ...” ಆಕೆಗೆ ಇನ್ನೂ ನನ್ನ ಮೇಲೆ ಅಸಹನೆ ಇತ್ತು ಅನಿಸಿತು.
“ಅದು ಪರಸ್ಪರ ಭಾವನೆ, ನನಗೂ ನಿಮ್ಮ ಕೇಸ್ ಬೇಕೇ ಬೇಕೆಂಬ ಹಠವಿಲ್ಲ.”
“ಇಲ್ಲಾ, ಹಾಗಲ್ಲ. ಒಟ್ಟಿನಲ್ಲಿ ನನ್ನ ಸಮಸ್ಯೆ ಹೇಳಿಯೇ ಬಿಡುತ್ತೇನೆ, ಏನು ಮಾಡಲಿಚ್ಚಿಸುವಿರಿ ಎಂದು ನೋಡಿ. ನನ್ನ ತಂಗಿಗೆ ನೀವೇ ಸಹಾಯ ಮಾಡಲೂ ಬಹುದು.”
“ನಿಮ್ಮ ತಂಗಿ?”
“ಹೌದು, ಅವಳು ಕೇರೆನ್ ಕ್ಯಾಲ್ವರ್ಸನ್ ಎಂಬ ಚಿತ್ರನಟಿ. ಆಲ್ಟಾಮೌಂಟ್ ಫಿಲಂಸ್‌ನವಳು. ಯಾಕೆ- ನಿಮಗೇನಾಯಿತು?”
ನಾನು ನನ್ನ ಮುಖದಲ್ಲಿ ಮೂಡಿದ್ದ ಅಚ್ಚರಿಯ ಭಾವವನ್ನು ಅಳಿಸಿ ಕಿರುದನಿಯಲ್ಲಿ ಕೇಳಿದೆ, “ನಿಮ್ಮ ತಂಗಿ ಅಂದರೆ ಅದೇ ಕೇರೆನ್ ಕ್ಯಾಲ್ವರ್ಸನ್ ಅಂತಾ, ಸ್ಕಿನ್ನಿ ಫೇಬಿಯನ್ನನ ಪತ್ನಿ ಅಲ್ಲವೆ?”
“ಹೌದು, ಅವಳೇ. ನನಗೆ ಅವಳ ಬಗ್ಗೆ ಬಹಳ ಚಿಂತೆಯಾಗಿದೆ. ನೋಡಿ, ಅವಳು ತನ್ನ ಪತಿ ಸ್ಕಿನ್ನಿ ಜೊತೆ ದೊಡ್ಡ ಜಗಳವಾಡಿಕೊಂಡಿದ್ದಾಳೆ.”
“ಯಾವಾಗ?”
“ಮೂರು ದಿನದ ಹಿಂದೆ. ಅವನು ಕುಡಿದು ಬಂದು ಅಸೂಯೆ ಪಡುವುದೇ ಕಾರಣವಾಯಿತು. ಅವನು ವಿಪರೀತ ಸಿಟ್ಟಿಗೆದ್ದು ಮನೆಯಿಂದ ಹೊರಗೆ ಹೋದವನು ಇನ್ನೂ ವಾಪಸು ಬಂದಿಲ್ಲ. ಅವನ ಬಗ್ಗೆ ನನಗೆ ಸ್ವಲ್ಪ ಭಯವಿದೆ-ಅದೂ ನನ್ನ ತಂಗಿಗಾಗಿ. ಅವನು ‘ವಾಪಸು ಬಂದು ನಿನ್ನನ್ನು ಕೊಲ್ಲುತ್ತೇನೆ’ ಎಂದು ಅವಳನ್ನು ಹೆದರಿಸಿ ಹೋಗಿದ್ದಾನೆ...”
“ಮುಂದೆ ಹೇಳಿ...”
ಅವಳು ತಲೆ ಕುಣಿಸಿದಳು, “ನೀವು ಅವನೆಲ್ಲಿದ್ದಾನೆ ಎಂದು ಪತ್ತೆ ಮಾಡಿದರೆ ಸಾಕು, ಅವನು ಬಂದು ನನ್ನ ತಂಗಿಗೆ ಏನೂ ಅಪಾಯ ಮಾಡದ ಹಾಗೆ ನೋಡಿಕೊಳ್ಳಿ ಅಷ್ಟೆ.”
“ನೀನು ಅದಕ್ಕೆ ಎಷ್ಟು ಬೆಲೆ ಕಟ್ಟಬಲ್ಲೆ, ಬೇಬಿ?” ಎಂದೆ. ನನಗೂ ಹಣದ ಅವಶ್ಯಕತೆ ಇದೆ ಈ ವೃತ್ತಿಯಲ್ಲಿ. ಒಂದೇ ಫೀಸಿಗೆ ಇಬ್ಬರು ಕೊಲೆಗಾರರು ಸಿಕ್ಕುವಂತಾದರೂ ಸೈ!
ಅವಳು ತನ್ನ ದುಬಾರಿ ಮಣಿ ಹ್ಯಾಂಡ್‌ಬ್ಯಾಗ್ ತೆರೆದಳು ಮತ್ತು ಕೆಲವು ನೋಟುಗಳನ್ನು ಕೈಗೆತ್ತಿಕೊಂಡಳು.
“ಇನ್ನೂರು ಡಾಲರ್. ಅದು ಸಾಕಾಗುತ್ತದೆ ತಾನೆ?... ಮತ್ತು ಇನ್ನೊಂದು ವಿಷಯ. ನೀವೇನೂ ನನ್ನನ್ನು ‘ಬೇಬಿ’ ಎಂದೆಲ್ಲಾ ಕರೆಯಬೇಕಿಲ್ಲ. ನಾನು ಕ್ಲೋಯಿ ಕ್ಯಾಲ್ವರ್ಸನ್. ಸುಮ್ಮನೆ ‘ಮಿಸ್’ ಕ್ಯಾಲ್ವರ್ಸನ್ ಎಂದು ಕರೆದರೆ ಸಾಕು...ಪ್ಲೀಸ್.”
“ಅದು ನಿನ್ನಿಚ್ಚೆ, ಬಂಗಾರಿ,” ಎಂದೆ ಅಣಕದ ದನಿಯಲ್ಲಿ. “ಒಟ್ಟಿನಲ್ಲಿ ಸ್ಕಿನ್ನಿ ಫೇಬಿಯನ್ನನ್ನು ಪತ್ತೆ ಮಾಡಿಕೊಟ್ಟರೆ ಇನ್ನೂರು ಡಾಲರ್ ಕೊಡುತ್ತೀಯೆ. ಹೌದು ತಾನೆ?”
“ನಿಮಗೆ ಸಾಧ್ಯವಾದರೆ...”
ನಾನು ಕೋಣೆಯ ಆ ಬದಿಗೆ ಹೋಗಿ ಬಿದ್ದಿದ್ದ ಸ್ಕಿನ್ನಿ ರುಂಡವನ್ನು ಕೈಗೆತ್ತಿಕೊಂಡು ಬಂದೆ. ಅವಳ ಮುಖಕ್ಕೆ ಒಡ್ಡಿದೆ. “ತಗೊಳ್ಳಿ ಇಲ್ಲೇ ಇದ್ದಾನೆ. ಅವನ ಒಂದು ದೊಡ್ಡ ಭಾಗ!”
ಅವಳು ಅದರತ್ತ ಒಂದು ಅಘಾತದ ದೃಷ್ಟಿ ಬೀರಿ ಮೂರ್ಛೆ ಬಂದು ಅಲ್ಲೇ ಕುಸಿದಳು.
೨
ಒಬ್ಬ ಅಪರಿಚಿತ ಹೆಣ್ಣಿನ ಮೇಲೆ ಪ್ರಯೋಗಿಸಲು ಇದು ಬಹಳ ಕೆಟ್ಟ ಟ್ರಿಕ್ ಎಂದು ನೀವು ಭಾವಿಸಬಹುದು, ಆದರೆ ನನಗೆ ಸಕಾರಣವಾಗಿತ್ತು. ಈ ಕ್ಲೋಯಿ ಕ್ಯಾಲ್ವರ್ಸನ್ ಎಂಬ ಹೆಣ್ಣೇ ಈ ಸಮಸ್ಯೆಯ ಕಾರಣವಿರಬಹುದು. ಅವಳೇ ಈ ಸ್ಕಿನ್ನಿಯ ಕತ್ತರಿಸಿದ ರುಂಡವನ್ನು ನನ್ನ ಹೊಸಿಲಲ್ಲಿ ಇಟ್ಟಿದ್ದಿರಬಹುದು. ಅಥವಾ ಇವಳಿಗೇನೋ ಸಂಬಂಧವಿರಬಹುದು. ನನಗೆ ಇಂತಹ ಘೋರವಾದ ಪಾರ್ಸಲ್ ಬಂದ ರಾತ್ರಿಯೇ ಇವಳೂ ಬಾಗಿಲ ಬಳಿ ಕಾಣಿಸಿಕೊಂಡಿದ್ದಾಳೆ ಎಂಬುದು ಬರೇ ಕಾಕತಾಳೀಯವಾದೀತೆ? ಎಂದು ನನ್ನ ಅನುಮಾನ.
ಅವಳ ಕಥೆಗೂ ನಡೆದ ಘಟನಾವಳಿಗೂ ಸಾಮ್ಯತೆಯಿತ್ತು. ಅಂದು ಸ್ಕಿನ್ನಿ ಫೇಬಿಯನ್ ತುಂಬಾ ಕುಡಿದು ಗದ್ದಲ ಮಾಡಿದ್ದ. ಹೆಂಡತಿಯನ್ನು ಮುಗಿಸಿಬಿಡುವುದಾಗಿ ಬೆದರಿಸಿದ್ದ. ಆಗ ಹೆಂಡತಿ ತಾನೇ ಆತ್ಮರಕ್ಷಣೆಯ ನೆಪದಲ್ಲಿ ಅವನನ್ನು ಕೊಂದುಬಿಟ್ಟಿದ್ದಳೋ? ಅಥವಾ ಈ ಬ್ಲಾಂಡ್ ಕೂದಲಿನ ತಂಗಿಯೇ ಕೊಂದುಬಿಟ್ಟಳೋ? ಹೇಗೇ ಆಗಲಿ, ಆ ತಂಗಿಯಂತೂ ಈಗ ಜ್ಞಾನ ತಪ್ಪಿ ಬಿದ್ದಿದ್ದಾಳೆ, ಪೋಲೀಸಿನವ ಡೊನಾಲ್ಡ್‌ಸನ್ ಏನಾದರೂ ಆಕೆಯನ್ನು ಬಂಧಿಸಬೇಕಾದರೆ, ವಿಚಾರಣೆ ಮಾಡಬೇಕಾದರೆ ಈಗ ಸುಲಭವಾಯಿತು.
ನಾನು ಅವಳನ್ನು ನನ್ನ ದಿವಾನ್ ಮೇಲೆ ಮಲಗಿಸಿ, ನನ್ನ ಬಳಿಯಿದ್ದ ಒಂದು ಸ್ವಂತ ಕೈಕೋಳದಿಂದ ಅವಳ ಕೈಯನ್ನು ದಿವಾನ್ ಕಾಲಿಗೆ ಬಂಧಿಸಿ ಅಲ್ಲಿಂದ ಹೊರಟೆ. ಬಾಗಿಲಿನಲ್ಲಿದ್ದ ಸ್ಕಿನ್ನಿಯ ರುಂಡವನ್ನು ನನ್ನ ಬಗಲಿನಲ್ಲಿಟ್ಟುಕೊಂಡು ಕಾರ್ ಹತ್ತಿ ಪೋಲೀಸ್ ಹೆಡ್ ಕ್ವಾರ್ಟರ್ಸಿಗೆ ಡ್ರೈವ್ ಮಾಡಿದೆ.
“ಓಹ್, ನಿಜಕ್ಕೂ ಇದು ಸ್ಕಿನ್ನಿ ತಲೆಯೇ!” ಎಂದು ಬೆರಗುಗಣ್ಣಿಂದ ತನ್ನ ತಲೆ ಆಡಿಸಿದ ಡೇವ್ ಡೊನಾಲ್ಡ್‌ಸನ್ ಅದನ್ನು ಅವನ ಎದುರಿಗಿಟ್ಟಾಗ ನೋಡಿ.
ನಾನು ಹೌದೆಂದು ತಲೆಯಾಡಿಸಿದೆ.
“ಆದರೆ ಅವನನ್ನು ಕೊಂದಿದ್ದು ಯಾರು? ತಲೆ ಕತ್ತರಿಸಿ ನಿನ್ನ ಹೊಸಿಲಲ್ಲಿ ಇಟ್ಟವರ್ಯಾರು?”
“ಕೇಳಿಸಿಕೋ ನನ್ನ ಊಹೆ”, ಎಂದು ನಾನು ಕ್ಲೋಯಿ ಕ್ಯಾಲ್ವರ್ಸನ್ ಬಗ್ಗೆ ಹೇಳಿದೆ.
“ಹಾಗಾದರೆ ಸೋದರಿಯರು ಮಾಡಿದರೆ?”
“ಅವರಲ್ಲಿಯೂ ಒಬ್ಬರೋ, ಇಬ್ಬರೋ ಇರಬಹುದು. ಅನಂತರ ಕ್ಲೋಯಿ ಬಂದು ನನ್ನನ್ನೇ ಬಾಡಿಗೆಗೆ ಕರೆಯುವ ನಾಟಕವಾಡಿ ತಮಗೆ ಅವನು ಸತ್ತಿಲ್ಲವೆಂಬಂತೆ ತೋರಿಸುವ ತಪ್ಪು ಮುಚ್ಚಿಹಾಕುವ ಯತ್ನ ಮಾಡಿರಬಹುದು”.
“ಆಗಲಿ, ಆದರೆ ನಿನಗೆ ಆ ತಲೆ ಕಳಿಸಿದ ಭಾಗ ಆ ನಾಟಕಕ್ಕೆ ಹೊಂದುವುದಿಲ್ಲವಲ್ಲ?” ಎಂದ ಡೇವ್.
“ಅದು ಅವರಿಬ್ಬರಿಗೆ ಗೊತ್ತಿಲ್ಲದಿರಬಹುದು. ನನಗೆ ತಲೆ ಕಳಿಸಿ ಅವರು ಬಂದಾಗ ನನ್ನ ಬಳಿ ಸಿಕ್ಕಿಹಾಕಿಕೊಳ್ಳಲಿ ಎಂದು ಈ ಕೊಲೆ ತಿಳಿದ ಬೇರೆ ಯಾರೋ ಅದನ್ನು ಮಾಡಿರಲೂ ಸಾಧ್ಯ”.
“ಸರಿ...ಈಗ ಈ ಸಿಸ್ಟರ್ ಕ್ಲೋಯಿ ನಿನ್ನ ರೂಮಿನಲ್ಲಿ ಬಂಧಿ ಅಲ್ಲವೆ? ಸದ್ಯಕ್ಕೆ ಅಲ್ಲೇ ಇರಲಿ, ನಾವು ಸ್ಕಿನ್ನಿ ಪತ್ನಿಯ ಬಳಿಗೆ ಮೊದಲು ಹೋಗೋಣ. ಅದಕ್ಕೂ ಮುಂಚೆ ಈ ತಲೆಯನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಬರುತ್ತೇನೆ”.
ಅನಂತರ ನಾವಿಬ್ಬರೂ ನನ್ನ ಕಾರಿನಲ್ಲಿ ಅದರ ಶಕ್ತಿ ಮೀರಿದ ವೇಗದಲ್ಲಿ ದೌಡಾಯಿಸಿದೆವು.
೩
ಸ್ಕಿನ್ನಿ ಫ಼ೇಬಿಯನ್ನನ ವೆಸ್ಟ್‌ವುಡ್ ಮನೆಯ ಮುಂದೆ ಒಂದು ನೀಲಿ ಬಣ್ಣದ ಕನ್ವರ್ಟಿಬಲ್ ಕಾರು ನಿಂತಿತ್ತು, ನನಗೇನೋ ಅದರ ಅನುಮಾನ ಬಂದಿತಾದರೂ ಅದು ಪಕ್ಕಾ ಆಗಿರಲಿಲ್ಲ, ಹಾಗಾಗಿ ಸುಮ್ಮನಾದೆ. ನಾವು ಬೆಲ್ ಮಾಡಿದಾಗ, “ಯೆಸ್ಸ್ ಸ್ಸರ್” ಎಂದು ಉಲಿಯುತ್ತಾ ಮುದ್ದಾದ ಚೀನೀ ಯುವ ಸೇವಕಿಯೊಬ್ಬಳು ಬಾಗಿಲು ತೆರೆದು ನಮ್ಮತ್ತ ನೋಡಿದಳು. ನಾವು ಕಾರಣ ಹೇಳಿದವು,
“ಮಿಸೆಸ್ ಕ್ಯಾಲ್ವರ್ಸನ್ ಮೇಲಿನ ರೂಮಲ್ಲಿ ಮಲಗಿದ್ದಾರೆ. ನೀವು ಬೆಳಿಗ್ಗೆ ಬನ್ನಿ...”
ಡೇವ್ ಸಿಟ್ಟಿನಿಂದ ”ನಾವು ಈಗಲೇ ನೋಡುತ್ತೇವೆ” ಎಂದು ಪೋಲೀಸ್ ಬ್ಯಾಡ್ಜ್ ತೋರಿಸಿ ಮುನ್ನುಗ್ಗಿದ.
“ಅಯ್ಯೋ ಬೇಡ, ಮೇಲೆ ಇನ್ಯಾರೋ ಬಂದಿದಾರೆ!” ಹೀಗೆ ಚೀನಿ ಯುವತಿಯ ಬಿಳಿ ಸುಳ್ಳು ಹೊರಬಿತ್ತು.
ಡೇವ್ ಬೇಸರದಿಂದ, “ಪಕ್ಕಕ್ಕೆ ಸರಿ, ಹುಡುಗಿ” ಎಂದವನೇ ಮಹಡಿಯತ್ತ ಒಳನುಗ್ಗಿದ.
ನಾವಿಬ್ಬರೂ ಸರಸರನೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಬಾಗಿಲ ಹಿಂದಿನಿಂದ ಒಂದು ರಿವಾಲ್ವರ್ ಗುಡುಗಿತು ಡಮ್-ಡಂ! ಮತ್ತೆ ಸದ್ದಿಲ್ಲ!
ನಾನು “ಇದೇನು-?” ಎನ್ನುತ್ತಾ ನನ್ನ ಇಡೀ ದೇಹದ ಭಾರವನ್ನು ಬಿಟ್ಟು ಬಾಗಿಲನ್ನು ಜಾಡಿಸಿ ಒದ್ದು, ಒಳಗೆ ತೂರಿದ್ದೆ, ಜೊತೆಗೆ ನನ್ನ .೩೨ ರಿವಾಲ್ವರ್ ಕೈಗೆ ಬಂದಿತ್ತು.
ಆ ಕೋಣೆಯ ಒಳ ಅಲಂಕಾರವೆಲ್ಲ ಪೇಸ್ಟೆಲ್ ಪಿಂಕ್ ರಂಗಿನಾದಗಿತ್ತು ಅಲ್ಲಿನ ಹೆಣ್ಣೊಂದರ ಸುಗಂಧವನ್ನೂ ಮುಚ್ಚುವಂತೆ ರಿವಾಲ್ವರ್ ಬುಲೆಟ್ ವಾಸನೆ ಅಡರಿತ್ತು. ನೆಲದ ದುಬಾರಿ ರಗ್ಗಿನ ಮೇಲೆ ಒಬ್ಬ ಅಷ್ಟೇ ದುಬಾರಿ ಸಿಲ್ಕ್ ಪಜಾಮ ಸೂಟ್ ಧರಿಸಿದ್ದ ಕಂದುಗೂದಲಿನವಳು ಅಡ್ಡಡ್ಡ ಬಿದ್ದಿದ್ದಳು.
ಆಕೆಯೇ ಸ್ಕಿನ್ನಿ ಫ಼ೇಬಿಯನ್ ಪತ್ನಿ ಕೇರೆನ್ ಕ್ಯಾಲ್ವರ್ಸನ್. ಆಕೆಯ ಎದೆಯಲ್ಲಿ ಎರಡು ಗುಂಡು ತೂರಿ ರಕ್ತ ಸೋರಹತ್ತಿತ್ತು ಮತ್ತು ಈಗ ತಾನೇ ಸತ್ತುಹೋಗಿದ್ದಳು!
೪
ಅವಳ ಪಕ್ಕದಲ್ಲೊಬ್ಬ ದಪ್ಪ ದೇಹದ ಫುಲ್ ಸೂಟ್ ಧರಿಸಿದ ವ್ಯಕ್ತಿ ನಿಂತಿದ್ದ. ಅವನ ಮುಷ್ಟಿಯಲ್ಲೊಂದು .೩೮ ಕಪ್ಪನೆ ರಿವಾಲ್ವರ್ ಇನ್ನೂ ಹೊಗೆಯುಗುಳುತ್ತಿತ್ತು.
ನಾನು ಅವನನ್ನು ಗುರುತಿಸಿದೆ. ಡ್ವಿಗ್ ಬಲ್ಲಾರ್ಡ್, ಆಲ್ಟಾಮೌಂಟ್ ಪಿಕರ್ಸ್ ಸಂಸ್ಥೆಯ ಯಶಸ್ವಿ ನಿರ್ದೇಶಕ. ಆಹ್, ಆತನೇ ಈ ಕೇರನ್‌ಗೆ ಹಳೆಯ ಚಿತ್ರರಂಗದ ದೋಸ್ತ್. ಅತನದೇ ನೀಲಿ ಕಾರ್ ಹೊರಗೆ ನಿಂತಿದ್ದಿದು, ನಾನು ಅದನ್ನು ಹಾಲಿವುಡ್ಡಿನಲ್ಲಿ ನೋಡಿ ಬಲ್ಲೆ.
ಪಕ್ಕದಲ್ಲಿ ಡೇವ್ ಡೊನಾಲ್ಡ್‌ಸನ್ ಆರ್ಭಟಿಸಿದ, “ಗನ್ ಬೀಳಿಸು, ಮಿಸ್ಟರ್!”
ಆತ ಗನ್ ಬಿಸುಟು ನಮ್ಮತ್ತ ತಿರುಗಿದಾಗ ಅವನ ಮುಖ ಹಾಲಿನಂತೆ ಬೆಳ್ಳಗಾಯಿತು, “ಅಯ್ಯೋ, ನಾನೇನೂ... ಮಾಡಲಿಲ್ಲ, ಆಫೀಸರ್! ನಾ...ನಾನು...”
ಡೇವ್ ಮುಂದೆ ಹೋಗಿ ದುರುಗುಟ್ಟಿದ, “ಅದೆಲ್ಲಾ ಲಾಯರ್ ಮುಂದೆ ಬೊಗಳುವೆಯಂತೆ, ನಡಿ!”
“ಅರೆ, ನಾನು ಏನೂ ಮಾಡಿಲ್ಲ. ಇಲ್ಲೇ ಒಳಗಿದ್ದೆ ಸರ್, ಈಗ ಬಂದೆ!” ಎಂದು ಆತಂಕದಿಂದ ಕೂಗಿದ ಡ್ವಿಗ್.
“ಓಹ್!” ಡೇವ್ ವ್ಯಂಗ್ಯವಾಗಿ ನಕ್ಕ, “ಗುಂಡಿನ ಸದ್ದು ಕೇಳಿ ಬಂದು ಕೊಲೆಗಾರ ಎಸೆದು ಹೋಗಿದ್ದ ಗನ್ ಎತ್ತಿಕೊಂಡು ಬಿಟ್ಟೆ, ಅಲ್ಲವೆ? ಆ ಕ್ಷಣವೇ ನಾವೂ ಬಂದೆವು?” ಎಂದ ಊಹೆ ಮಾಡುತ್ತಾ.
“ಹೌದು ಸರ್, ಹಾಗೇ ಆಗಿದ್ದು...ನಾನು ಕೊಲೆ ಮಾಡಿಲ್ಲ!” ಎಂದ ಬೆದರಿದ ಮುಖದ ನಿರ್ದೇಶಕ.
ನಾನೂ ಗುಡುಗಿದೆ. “ನೀನು ಇಲ್ಲೇಕೆ ಬಂದಿದ್ದಿ? ಈ ಹೆಣ್ಣಿನ ಜೊತೆ ಇತ್ತೀಚೆಗೆ ಕದ್ದು ಪ್ರೇಮಿಸುತ್ತಿದ್ದೆ ಅಲ್ಲವೆ?”
“ಹೌದು...ಅಯ್ಯೋ, ಇದೇನಾದರೂ ನನ್ನ ಪತ್ನಿಗೆ ತಿಳಿದರೆ ಡೈವೋರ್ಸ್ ಮಾಡಿಬಿಟ್ಟಾಳು ಸರ್!” ಆತಂಕದಿಂದ ಉಲಿದ.
“ಇಲ್ಲೇನು ಮಾಡಿದೆ, ಬೇಗ ಹೇಳು”, ಡೇವ್ ಅವನನ್ನು ಜಗ್ಗಿಸಿದ.
“ನಾನು ಮತ್ತು ಕೇರೆನ್ ಇದೇ ರೂಮಿನಲ್ಲೇ ಇದ್ದೆವು, ನಾನು ಎರಡು ನಿಮಿಷಕ್ಕೆ ಪಕ್ಕದ ಕೋಣೆಗೆ ಹೋದೆನಾ! ಆಗ ಗನ್ ಸದ್ದು ಕೇಳಿಸಿ ಮತ್ತೆ ಓಡಿ ಬಂದೆ. ಅವಳು ಕೆಳಗೆ ಬಿದ್ದಿದ್ದಳು. ಪಕ್ಕದಲ್ಲಿ ಈ ಹೊಗೆಯಾಡುವ ಗನ್ ಇತ್ತಾ, ಗಾಬರಿಯಲ್ಲಿ ಎತ್ತಿಕೊಂಡೆ...”
“ಎಲ್ಲರೂ ಹೀಗೆ ಹೇಳುವುದು, ಸಿಕ್ಕಿ ಬಿದ್ದಾಗ!”, ಎಂದ ಡೇವ್ ಗಲ್ಲ ಉಜ್ಜಿಕೊಳ್ಳುತ್ತಾ.
“ಇದೇ ಸತ್ಯ, ಸ್ವಾಮಿ. ಆಕೆಯೇ ಗುಂಡು ಹೊಡೆದುಕೊಡು ಆತ್ಮಹತ್ಯೆ ಮಾಡಿಕೊಂಡಿರಬೇಕು!” ಎಂದು ಮುಲುಗಿದ.
ನಾನು ಕೇರೆನ್ ಹೆಣದತ್ತ ಬಗ್ಗಿ ನೋಡಿದೆ,
“ಇಲ್ಲ. ಎರಡು ಸಲ ಯಾರೂ ಎದೆಗೆ ಗುಂಡು ಹೊಡೆದುಕೊಳ್ಳುವುದು ಸಾಧ್ಯವೇ ಇಲ್ಲ. ಅಲ್ಲದೇ ಗಾಯದ ಸುತ್ತಲೂ ಇರಬೇಕಾದ ಗನ್‌ಪೌಡರ್ ಸುಟ್ಟ ಗುರುತೂ ಇಲ್ಲ, ಸ್ವಲ್ಪ ದೂರದಿಂದ ಯಾರೋ ಶೂಟ್ ಮಾಡಿದ್ದಾರೆ...” ಎನ್ನುತ್ತಿದ್ದಂತೆ ಇನ್ನೊಂದು ಆಶ್ಚರ್ಯಕರ ಘಟನೆ ನಡೆಯಿತು.
ಕೈಕೋಳ ತೊಡಿಸಿ ಎಂಬಂತೆ ಕೈಗಳನ್ನು ಮುಂದೆ ತಂದ ಡ್ವಿಗ್ ತಕ್ಷಣ ಎಡಗೈಯಿಂದ ಡೇವ್ ಗಲ್ಲಕ್ಕೆ ಬೀಸಿ ಹೊಡೆದ. ಜೊತೆಗೇ ಬಲಗೈಯಿಂದ ಅವನ .೩೮ ಗನ್ ಬೀಳಿಸಿದ. ಡೇವ್ ಆ ದಾಳಿಗೆ ದಬಾಲನೆ ನೆಲಕ್ಕೆ ಜಾರಿ ಬಿದ್ದ. ತಾತ್ಕಾಲಿಕವಾಗಿ ಅಪ್ರಯೋಜಕನಾದ.
ನಾನು ಓಡಹತ್ತಿದ್ದ ಆ ದಡಿಯನ ಮೈಮೇಲೆ ಎರಗಲು ಹೋದೆ. ಸರಕ್ಕನೆ ನನ್ನ ಚಾಚಿದ ಗನ್ ಕೈಯನ್ನು ಬಡಿದು, ಕೆಳಗೆ ಬಿದ್ದ ತನ್ನ ಗನ್ ಎತ್ತಿಕೊಂಡು ನನ್ನತ್ತ ಎರಡು ಸಲ ಗುರಿಯಿಲ್ಲದೇ ಗುಂಡು ಹಾರಿಸಿದ. ಅದು ನನ್ನನ್ನು ಬೆದರಿಸಿ ಹಿಂದೆ ತಡೆಯಲು ಮಾತ್ರ, ಕೊಲ್ಲಲು ಅಲ್ಲ. ಅವನು ಮೆಟ್ಟಿಲಗಳನ್ನು ಹಾರುತ್ತ ಬಿರುಗಾಳಿಯಂತೆ ಓಡಿದ್ದ, ನಾನು ಅವನ ಹಿಂದೆ ಓಡುವಾಗ ಅಲ್ಲಿ ಬಿದ್ದಿದ್ದ ಡೇವ್ ದೇಹವನ್ನು ಎಡವಿದೆ. ಅವನು ಕೂಗಿಕೊಂಡ. ಮತ್ತೆ ಸಾವರಿಸಿಕೊಂಡು ಓಡಿದೆ, ಆದರೆ ಡ್ವಿಗ್ ಬಹಳ ದೂರ ಕ್ರಮಿಸಿಬಿಟ್ಟಿದ್ದ. ನಾನು ಅವನ ಹಿಂದೆ ಬಿದ್ದೆನಾದರೂ ಅವನು ಕೆಳಗೆ ಮುಂಬಾಗಿಲನ್ನು ಲಾಕ್ ಆಗುವಂತೆ ಬಡಿದಿದ್ದ, ನಾನು ಅದನ್ನು ಬಿಡಿಸಿಕೊಂಡು ಆ ಅವಸರದಲ್ಲಿ ಹೊರಗೆ ಓಡಿದೆನಾದರೂ ಅವನು ತನ್ನ ನೀಲಿ ಕಾರ್ ಹತ್ತಿ ಶುರು ಮಾಡಿಬಿಟ್ಟಿದ್ದ.
ಓಡುತ್ತಿದ್ದ ನನಗೆ ಮತ್ತೆ ಎರಡು ಸಲ ಗುಂಡು ಹಾರಿಸಿದ್ದು ಕೇಳಿ ತಕ್ಷಣ ಅಲ್ಲೇ ತಲೆ ಬಗ್ಗಿಸಿ ಅವಿತುಕೊಂಡೆ.
ಆದರೆ ಆ ಗುಂಡುಗಳು ನನ್ನತ್ತ ಹಾರಿಸಿದ್ದಲ್ಲ, ಎದ್ದು ನೋಡಿದರೆ ಆ ಕಾರಿನಲ್ಲಿ ಸ್ಟಿಯರಿಂಗ್ ವೀಲಿನ ಮೇಲೆ ತಲೆಯಿಟ್ಟು ಡ್ವಿಗ್ ಒರಗಿದ್ದ. ಅವನ ತಲೆಯಿಂದ ರಕ್ತ ಸುರಿಯಹತ್ತಿತ್ತು!
“ವಾಟ್ ದ ಹೆಲ್...” ಎಂದ ನನ್ನ ಮಾತು ಅಲ್ಲೇ ಉಡುಗಿತ್ತು. ನನ್ನ ಜೊತೆಗೇ ಡೊನಾಲ್ಡ್‌ಸನ್ ಈಗ ಸಾವರಿಸಿಕೊಂಡು ಓಡಿ ಬಂದಿದ್ದ. ಆದರೆ ಬಹಳ ತಡವಾಗಿಬಿಟ್ಟಿತ್ತು. ಡ್ವಿಗ್ ಸತ್ತುಹೋಗಿದ್ದ.
೫
ಡೇವ್ ಮತ್ತು ನಾನು ಡ್ವಿಗ್ ಕೈಯಲ್ಲಿ ಹಿಡಿದಿದ್ದ ಗನ್ನಿನತ್ತ ನೊಡಿದೆವು.
ಡೇವ್ ಕಣ್ಣರಳಿತು, “ಅರೆ, ಇವನೂ ಆತ್ಮಹತ್ಯೆ ಮಾಡಿಕೊಂಡು ಬಿಟ್ಟ, ಅದೂ ಕಾರಲ್ಲಿ!”
“ಇಲ್ಲದಿರಬಹುದು” ಎಂದೆ.
“ಅಂದರೇನರ್ಥ?”
“ಇಲ್ಲಿಯೂ ಅವನ ಹಣೆಯ ಬಳಿ ಪೌಡರ್ ಬರ್ನ್ ಇಲ್ಲ, ಅಂದರೆ ಮೇಲಿನ ರೂಂನಲ್ಲಿದ್ದ ಸ್ಥಿತಿ. ಯಾರೋ ಇವನಿಗೂ ಸ್ವಲ್ಪ ದೂರದಿಂದ ಶೂಟ್ ಮಾಡಿದ್ದಾರೆ!”
“ಅಂದರೆ ಇಲ್ಲೇ ಯಾರೋ_” ಎಂದು ಹೊರಟವ ತಕ್ಷಣ ಸುತ್ತಮುತ್ತಲಿನ ಪೊದೆಯಲ್ಲೆಲ್ಲ ಟಾರ್ಚಲೈಟ್ ಆನ್ ಮಾಡಿ ಹುಡುಕಿ ಕೊನೆಗೆ ಖಾಲಿ ಕೈಯಲ್ಲಿ ಹಿಂತಿರುಗಿದ.
ನಾನಂದೆ, “ನಿಜಕ್ಕೂ ಡ್ವಿಗ್ ಸತ್ಯ ಹೇಳುತ್ತಿದ್ದನೆಂದು ತಿಳಿಯೋಣ. ಅವನು ಹೇಳಿದಂತೆಯೆ ಕೊಲೆಗಾರ ಎಸೆದ ಗನ್ ಅವನೆತ್ತಿಕೊಂಡ ಎಂದುಕೊಳ್ಳೋಣ..”
“ಯಾವ ಕೊಲೆಗಾರ? ಯಾರಿದ್ದರು ಇಲ್ಲಿ?”
“ಕಾಣಲಿಲ್ಲ ಅಷ್ಟೇ, ಡೇವ್” ನಾನಂದೆ, “ನಿನಗೆ ನೆನಪಿದೆಯೆ, ಈ ಡ್ವಿಗ್ ಬಲ್ಲಾರ್ಡ್ ‘ಇದೇನಾದರೂ ಬಹಿರಂಗವಾದರೆ ನನ್ನ ಪತ್ನಿ ಡೈವೋರ್ಸ್ ಕೇಳುತ್ತಾಳೆ’ ಎಂದು ಬೆದರಿದ್ದ...ಅಲ್ಲಿ ನೋಡು”, ನಾನು ಆ ಮನೆಯ ಹಿಂಭಾಗದಲ್ಲಿ ಆ ಬೆಡ್ರೂಮಿನ ಕಿಟಕಿಯ ಬಳಿ ಒರಗಿಸಿದ್ದ ಏಣಿಯನ್ನು ತೋರಿಸಿದೆ.
ಡೇವ್ ಕಿರುಚಿದ, “ಹೌದು, ಹಾಗಾದರೆ!. ಮಿಸೆಸ್ ಬಲ್ಲಾರ್ಡ್ ಅವನನ್ನು ಹಿಂಬಾಲಿಸಿಕೊಂಡು ಇಲ್ಲಿಗೆ ಬಂದು ಏಣಿಯಿಂದ ಇಣುಕಿ ನೋಡಿದ್ದಾಳೆ. ಅವನು ಕೇರೆನ್ ಜೊತೆ ಲಲ್ಲೆಗೆರೆಯುವುದನ್ನೂ ನೋಡಿ ಅಸೂಯೆಯಿಂದ ಅವಳನ್ನು ಶೂಟ್ ಮಾಡಿದ್ದಾಳೆ, ಗಂಡನನ್ನು ಶೂಟ್ ಮಾಡುವಷ್ಟರಲ್ಲಿ ನಾವು ಇಲ್ಲಿಗೆ ತಲುಪಿದೆವು, ಆಗಲಿಲ್ಲ. ಅವನು ಹೊರಬರುವವರೆಗೂ ಬಚ್ಚಿಟ್ಟುಕೊಂಡಿದ್ದು ಕಾರಿನಲ್ಲಿ ಕುಳಿತಾಗ ಗುರಿಯಿಟ್ಟು ಕೊಂದಿದ್ದಾಳೆ!”
“ಅದೊಂದು ಥಿಯರಿ ಮಾತ್ರ” ನಾನಂದೆ, “ಏಣಿ ನೋಡಿದರೆ ಅದಕ್ಕೆ ಹೊಂದುವ ಸಾಧ್ಯತೆ...ಅಲ್ಲದೇ ಅವಳ ಬಳಿ ಇನ್ನೊಂದು ಗನ್ ಇತ್ತೆ?”
“ಗೊತ್ತಿಲ್ಲ. ನಾನು ಅವಳ ಮನೆಗೆ ಹೋಗಿ ಹಿಡಿಯುತ್ತೇನೆ, ನಮ್ಮ ಪೋಲೀಸರೆಲ್ಲ ಬರುವವರೆಗೂ ನೀನೆಲ್ಲೇ ಇರು” ಎನ್ನುತ್ತಾ ಡೇವ್ ನನ್ನ ಕಾರಿನತ್ತ ಓಡಿದ.
ನಾನು ಹೋಗಿ ಪೋಲಿಸ್ ಕೇಂದ್ರ ಕಚೇರಿಯ ಹೋಮಿಸೈಡ್ ವಿಭಾಗಕ್ಕೆ ಕಾಲ್ ಮಾಡಿ ವಿಷಯ ತಿಳಿಸಿ ಕಾಯಹತ್ತಿದೆ.
೬
ಪಕ್ಕದ ರೂಮಿನಲ್ಲಿ ಏನೋ ಸದ್ದು ಕೇಳಿ ನಾನು ಅಲ್ಲಿ ಸರ್ರನೆ ಓಡಿಹೋಗಿ ನೋಡಿದರೆ ಆ ಚೀನೀ ಯುವ ಸೇವಕಿ ತನ್ನ ತನ್ನ ಗೌನ್ ಜೇಬಿನಲ್ಲಿ ಏನೋ ತುರುಕಿಕೊಂಡು ತೆರೆದಿದ್ದ ಕಿಟಕಿ ಅಡಿಗಲ್ಲ್ಲನ್ನು ಏರಲು ಹೊರಟಳು. ತಪ್ಪಿಸಿಕೊಳ್ಳಲು ಸಿದ್ಧಳಾದವಳಂತೆ!
ನಾನು ಓಡಿ ಹೋಗಿ ಆಕೆಯನ್ನು ಸೆಳೆದೆ. ಅವಳು ತಪ್ಪಿಸಿಕೊಳ್ಳಲು ‘ಬಿಡಿ ಬಿಡಿ’ ಎನ್ನುತ್ತಾ ಕೊಸರಾಡಿದಳು. ಅವಳ ಜೇಬಿನಲ್ಲಿದ್ದ ಆ ವಸ್ತು ನೆಲಕ್ಕೆ ಬಿತ್ತು, ಅದನ್ನು ತೆಗೆದು ನೋಡಿದರೆ ಅದೊಂದು ಬ್ಯಾಂಕ್ ಚೆಕ್, ಸ್ಕಿನ್ನಿ ಫ಼ೇಬಿಯನ್ ಸಹಿ ಮಾಡಿ ವಯೊಲೆಟ್ ಚಾಂಗ್ ಹೆಸರಿಗೆ ಐನೂರು ಡಾಲರಿಗೆ ಬರೆದುಕೊಟ್ಟಿದ್ದನು. ಅವನು ಬದುಕಿದ್ದಾಗ!
ನಾನು ಕಣ್ಣು ಕಿರುಕಿಸಿದೆ, “ನೀನಾ ವಯೋಲೆಟ್ ಚಾಂಗ್?”
“ಹೌದು”
“ಇದನ್ನು ಫೇಬಿಯನ್ ನಾಲ್ಕು ದಿನದ ಹಿಂದೆ ನಿನಗೆ ಕೊಟ್ಟಿದ್ದಾ?” ಚೆಕ್ ಮೇಲಿನ ಡೇಟ್ ಓದಿದೆ.
“ಅದಕ್ಕೆ ನಿನಗೇನು?” ಎಂದಳು ಮೊಂಡ ಧ್ವನಿಯಲ್ಲಿ.
“ಯಾಕೆ ಕೊಟ್ಟಿದ್ದು?” ನಾನು ಪ್ರಶ್ನಾವಳಿ ಮುಂದುವರೆಸಿದ್ದೆ.
“ಅ-ಅದು ಅದು ನನ್ನ ತಿಂಗಳ ಸಂಬಳ...” ಎಂದಳು ಕೀಚಲು ದನಿಯಲಿ.
ನಾನು ಒಪ್ಪಲಿಲ್ಲ, “ಸುಳ್ಳಿ! ಯಾವ ಸೇವಕಿಗೂ ಇಷ್ಟು ಸಂಬಳ ಇರಲ್ಲ, ಐದು ತಿಂಗಳಿನಷ್ಟಿದೆ. ನಿಜ ಹೇಳು, ಐನೂರರ ಚೆಕ್ ಯಾಕೆ?”
“ನೀನೇ ಪತ್ತೆ ಹಚ್ಚಿಕೋ”.
“ಯಾವುದೋ ಸುದ್ದಿ ಪತ್ತೆ ಹಚ್ಚಲು ಕೊಟ್ಟಿದ್ದ ಅಲ್ಲವೆ? ಅದೇ ಡ್ವಿಗ್ ಬಲಾರ್ಡ್ ಮತ್ತು ನಿಮ್ಮ ಮಾಲಿಕಳ ನಡುವಿನ ವಿಷಯದಲ್ಲಿ ಕಣ್ಣಿಡಲು...?”
“ಇ-ಇಲ್ಲ...” ಎಂದು ನನ್ನಿಂದ ಬಿಡಿಸಿಕೊಳ್ಳಲು ಮತ್ತೆ ಕೊಸರಾಡಿದಳು.
ನಾನು ಅವಳ ಭುಜವನ್ನು ಒತ್ತಿ ಹಿಡಿದು ಗಡಸು ದನಿಯಲ್ಲಿ ಕೇಳಿದೆ, “ಎಲ್ಲ ವಿಷಯ ಕಕ್ಕಿಬಿಡು, ಸುಂದರಿ! ನೀನೇ ತಾನೆ ಫೇಬಿಯನ್ನಿಗೆ ಅವನ ಹೆಂಡತಿ ಡ್ವಿಗ್ ಜೊತೆ ಚೆಲ್ಲಾಟವಾಡುತ್ತಿದ್ದಾಳೆಂಬ ಸುಳಿವು ಕೊಟ್ಟಿದ್ದು, ಅದಕ್ಕೇ ಅವರ ನಡುವೆ ದೊಡ್ಡ ಜಗಳವಾಯಿತು ಅಲ್ಲವೆ? ಆಮೇಲೆ ಆ ಕೋಪದಲ್ಲಿ ಅವನು ಮನೆ ಬಿಟ್ಟುಹೋದ ಹೌದಾ?”
“ಹಾ, ಹಾ!... ನನಗೆ ನೋವಾಗುತ್ತಿದೆ ಬಿಡಿ... ಹೌದು, ಅದೆಲ್ಲ ಸತ್ಯ. ಅದಕ್ಕೇನಿವಾಗ?”
“ಮತ್ತೆ ನೀನೇಕೆ ಓಡಿಹೋಗುತ್ತಿದ್ದೆ, ಹೇಳು!”
“ನನಗೆ-ನನಗೆ ಈ ಕೊಲೆ ತನಿಖೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟವಿಲ್ಲ...”
“ಈ ಡ್ವಿಗ್ ಮತ್ತು ನಿನ್ನ ಮಾಲಿಕಳು ಎಷ್ಟು ಸಮಯದಿಂದ ಹೀಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದರು, ಗೊತ್ತೆ?”
“ಸುಮಾರು ಒಂದು ವರ್ಷದಿಂದ, ಆಗಾಗ ಎಂದು ಕಾಣುತ್ತೆ”.
“ಡ್ವಿಗ್‌ಗೆ ಮದುವೆಯಾಗಿದೆ, ಗೊತ್ತಲ್ಲವೆ?” ಎಂದೆ.
“ಅದೇನೂ ರಹಸ್ಯವಲ್ಲ, ಎಲ್ಲರಿಗೂ ಗೊತ್ತು...”
“ಆಕೆ ಎಂಥವಳು? ತುಂಬಾ ಅಸೂಯಾಪರಳೆ? ಅನುಮಾನ ಪಡುವವಳೆ?”
“ನಂಗೊತ್ತಿಲ್ಲ... ಅಂದರೆ ಅವಳೇ ಇಲ್ಲಿಗೆ ಕೊಲ್ಲಲು ಬಂದಳಾ?” ಕಣ್ಣರಳಿಸಿದಳು.
“ಬಂದಿರಬಹುದು” ದೂರದಲ್ಲಿ ಪೋಲೀಸ್ ಸೈರನ್ ಸದ್ದು ಕೇಳಿಬಂದಿತು, “ಪೋಲೀಸ್!”.
ಇದ್ದಕ್ಕಿದ್ದಂತೆ ಆ ಚೀನಿ ಸುಂದರಿ ನನ್ನನು ಬಳ್ಳಿ ಮರವನ್ನಪ್ಪಿದಂತೆ ಬಿಗಿದುಕೊಂಡಳು, “ದಯವಿಟ್ಟು ಅವರು ನನ್ನನ್ನು ಹಿಡಿಯಲು ಬಿಡಬೇಡಿ... ನನ್ನನ್ನು ಒಂದು ಚೀನೀ ಅಫೀಮು ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದೆ ಎಂದು ಬಂಧಿಸಿದ್ದರು, ನಾನು ಆಗ ಪರೋಲ್ ತಪ್ಪಿಸಿಕೊಂಡವಳು...ನನ್ನನ್ನು ಮತ್ತೆ ಜೈಲಿಗೆ ಕಳಿಸಿಬಿಡುತ್ತಾರೆ...ಪ್ಲೀಸ್, ನಿಮಗೆ ಆಮೇಲೆ ದುಡ್ಡು ಕೊಡುತ್ತೇನೆ...!”
“ನೀನು ಕೊಡಲಾರೆ, ಇದು ಮರ್ಡರ್ ಕೇಸು” ಎಂದೆ ವಿಷಾದದಿಂದ, “ಈಗ ಬಿಟ್ಟುಬಿಟ್ಟರೆ ಆಮೇಲೆ ಬರುತ್ತೀಯೆಂದು ಹೇಗೆ ನಂಬಲಿ?”
“ಓಹ್ಹ್.. ಇಲ್ಲ ಸರ್” ಎಂದು ಅವಳು ನನ್ನನ್ನು ನಂಬಿಸಲೆಂದು ಒಮ್ಮೆ ಚುಂಬಿಸಿಯೂಬಿಟ್ಟಳು, “ಖಂಡಿತಾ ಬರುತ್ತೇನೆ, ಕೊಡುತ್ತೇನೆ!”
ಆದರೆ ಪೋಲೀಸ್ ಸಮೀಪಿಸಿಬಿಟ್ಟಿದ್ದರು. ಅವಳಿಗೆ ಕೊಲೆ ಮಾಡಲು ಅವಕಾಶವೇನೋ ಇತ್ತು ನಿಜ, ಆದರೆ ಇಬ್ಬರನ್ನೂ ಕೊಲ್ಲಲು ಅವಳಿಗೆ ಆಗುವಂತದ್ದಲ್ಲ. ನಾನೇನಾದರೂ ಈಗ ಹಿಡಿದುಕೊಟ್ಟರೆ ಇದಕ್ಕಲ್ಲದಿದ್ದರೂ ಹಳೇ ಚಿಕ್ಕ ತಪ್ಪಿಗೆ ಬಂಧಿತಳಾಗುವುದು ನಿಶ್ಚಿತ, ನಾನು ಮನಸನಲ್ಲೇ ಸ್ವಲ್ಪ ಕಾಲ ಜಿಜ್ಞಾಸೆ ಮಾಡಿ ‘ಬೇಡ, ಬಿಟ್ಟು ನೋಡೋಣ ಸದ್ಯಕ್ಕ್ಕೆ’ ಎಂದುಕೊಂಡು ಆಕೆಯನ್ನು ದೂರ ತಳ್ಳಿ ನುಡಿದೆ,
“ಈಗ ಸಾಧ್ಯವಾದರೆ ಓಡಿಹೋಗು. ಆಮೇಲೆ ನನ್ನ ಆಫೀಸಿಗೆ ಬರುವುದು ಮರೆಯಬೇಡ!”
ಅವಳು ಸರಸರನೆ ದೊಡ್ಡ ಕಿಟಕಿ ತೆರೆದು ತೂರಿಕೊಂಡು ಹೊರಕ್ಕೆ ಜಿಗಿದಳ.
ಅದೇ ಕ್ಷಣಕ್ಕೆ ಪೋಲೀಸರು ಮುಂಬಾಗಿಲು ರಿಂಗ್ ಮಾಡಿದರು, ನಾನು ಓಡಿ ಹೋಗಿ ಅವರನ್ನು ಒಳಬಿಟ್ಟೆ.
“ಬೇಗ ಹೋಗಿ” ನಾನು ಪಿಸುಗುಟ್ಟಿದೆ, “ಈ ಪಕ್ಕದಿಂದ ಒಬ್ಬ ಚೀನೀ ಯುವತಿ ಪರಾರಿಯಾದಳು”
ಪೋಲೀರು ಇದರಲ್ಲಿ ವ್ಯಸ್ಥರಾಗಿದ್ದಾಗ ನಾನೊಂದು ಸಿಗರೇಟ್ ಹಚ್ಚಿ ಮಹಡಿಯಲ್ಲಿ ಶತಪಥ ತುಳಿದೆ.
೭
ನನ್ನ ಮನದಲ್ಲಿ ಈಗ ಮೂರು ಕೊಲೆಗಳು ಕಾಡುತ್ತಿದ್ದವು. ಸ್ಕಿನ್ನಿ ಫೇಬಿಯನ್, ಅವನ ಕೆಂಚು ಕೂದಲ ಪತ್ನಿ ಮತ್ತು ಆಕೆಯ ಪ್ರೇಮಿ-ಡ್ವಿಗ್ ಬಲ್ಲಾರ್ಡ್. ಈ ಮೂರು ಕೊಲೆಗಳಿಗೂ ಸಂಬಂಧ ಇರುವುದಂತೂ ಖಚಿತ, ಆದರೆ ಹೇಗೆ ಎಂದು ತಿಳಿಯುತ್ತಿಲ್ಲ. ನಾನೂ ಸ್ವಲ್ಪ ತನಿಖೆಯೆಂದು ಓಡಾಡಿದರೆ ಬಹುಶಃ ಏನಾದರೂ ಪತ್ತೆಯಾದೀತು.
ಮೊದಲಿಗೆ ಈ ಕೊಲೆಯಾದವಳ ರೂಮನ್ನು ತಡಕಿದೆ. ಅವಳ ಎರಡು ಗುಂಡುಗಳನ್ನು ತಿಂದಿದ್ದ ಪಾಪದ ಶವವನ್ನೂ ನೋಡದಿರಲು ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಬೇರೆಡೆ ತಿರುಗಿಸಿದೆ. ಈಕೆ ಮಹಾ ಸುಂದರಿಯೆನ್ನುವುದರಲ್ಲಿ ಎರಡು ಮಾತಿಲ್ಲ, ಬಲಾರ್ಡ್ ಈಕೆಗೆ ಮನಸೋತಿದ್ದೂ ಆಶ್ಚರ್ಯವಲ್ಲ. ಮತ್ತು ಸ್ಕಿನ್ನಿ ಫ಼ೇಬಿಯನ್ ಆ ಬಗ್ಗೆ ಅಸೂಯೆ ಪಟ್ಟಿದ್ದೂ ಅಷ್ಟೇ ಆಶ್ಚರ್ಯವಲ್ಲ.
ಅಲ್ಲಿ ಯಾವುದೇ ಮುಖ್ಯ ಸಾಕ್ಷ್ಯ ಸಿಗದ ಕಾರಣ ಪಕ್ಕದ ಕೋಣೆಗೆ ಹೋದೆ. ಅದು ಸ್ಕಿನ್ನಿ ಫ಼ೇಬಿಯನ್ನನ ರೂಮಾಗಿತ್ತು. ನಾನು ಒಂದು ಕಪಾಟು ತೆರೆದು ಅದರ ಡ್ರಾಯರುಗಳನ್ನು ಎಳೆದೆ.
ಅಲ್ಲಿ ಒಂದು ಆಲ್ಬಮ್ಮಿನಲ್ಲಿ ಹಳೆಯ ಮಾಸಿದ ಪತ್ರಿಕಾ ವರದಿಗಳ ಕಟಿಂಗ್ಸ್ ಇದ್ದವು. ಅವನು ದೊಡ್ಡ ಹಾಸ್ಯ ಕಲಾವಿದನಾಗಿದ್ದ ಕಾಲದ್ದು. ಅವನು ವಿವಿಧ ವೇಷ ಭೂಷಣಗಳಲ್ಲಿದ್ದ, ಸಾಮಾನ್ಯ ಉಡುಪಿನಲ್ಲಿದ್ದ- ಎಲ್ಲ ತರಹದ ಚಿತ್ರಗಳು. ಅವನು ದಕ್ಷಣ ಅಮೆರಿಕದ ಬಾಲ್ಯದ ಚಿತ್ರಗಳಲ್ಲಿ ಒಂದು ಫ್ಯಾಮಿಲಿ ಚಿತ್ರದಲ್ಲಿ ಅಪ್ಪ, ಅಮ್ಮ ಮತ್ತು ಅವನ ಸಮವಯಸ್ಸಿನ ತಮ್ಮ , ಇಬ್ಬರು ಅಕ್ಕ ತಂಗಿಯರು. ಅತ್ತೆ, ಮಾವಂದಿರು ಎಲ್ಲ ಇದ್ದರು. ಅದು ಹಳೇ ಕಾಲದ ಗ್ರೂಫ್ ಫೋಟೋ. ಆದರೆ ನನಗೆ ಅವನ ಖರ್ಚಾದ ಚೆಕ್ ಬುಕ್ಕಿನಲ್ಲಿ ಹೆಚ್ಚು ಆಸಕ್ತಿಯಿತ್ತು.
ನಾನು ಕೊನೆಯೆ ಮೂರು ಲಿಖಿತ ದಾಖಲೆ ನೋಡಿದೆ. ಒಂದು ಐನೂರರ ಮೊತ್ತ ವಯೋಲೆಟ್ ಚಾಂಗಿಗೆ, ಎರಡನೆಯದು ಗ್ಲೆನ್ಡೇಲಿನ ಪಿ ಅಂಡ್ ಎಸ್ ಆಸ್ಪತ್ರೆಗೆ ಇನ್ನೂರೈವತ್ತು, ಮತ್ತು ಕೊನೆಯದು ಕ್ಯಾಶ್ ಚೆಕ್ ಐವತ್ತು ಸಾವಿರ ಡಾಲರಿಗೆ!
ಹಾಗಾzರೆ ಸ್ಕಿನ್ನಿ ತನ್ನ ತಲೆ ಕತ್ತರಿಸಿಹೋಗುವ ಮುಂಚೆ ತನ್ನ ಬ್ಯಾಂಕಿನಿಂದ ಐವತ್ತು ಸಾವಿರ ಡಾಲರ್ ಹೊರತೆಗೆದಿದ್ದನೇಕೆ? ಹಾಗೆ ನೋಡಿದರೆ ಖಾತೆಯಲ್ಲಿ ನಾಲ್ಕೈದು ಡಾಲರ್ ಇನ್ನೂ ಮಿಕ್ಕಿದ್ದರೆ ಹೆಚ್ಚು- ತನ್ನ ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿದ್ದನೇಕೆ?
ಅಷ್ಟರಲ್ಲಿ ಪೋಲೀಸರು ಆ ಚೀನೀ ಯುವತಿಯನ್ನು ಬಂಧಿಸಿರಬೇಕು, ಹೊರಗೆ ಆಕೆ ಪ್ರತಿಭಟಿಸುತ್ತಿದುದರ ಗದ್ದಲವಾಯಿತು. ನಾನದನ್ನು ಗಮನಿಸಲಿಲ್ಲ, ಸಂಕೋಚವಾಯಿತು. ನಾನೇ ಹಿಡಿದುಕೊಟ್ಟಿದ್ದೆನಲ್ಲ!
ನಾನು ಅದೇ ಬಾಗಿಲಿಂದ ಹೊರಬಿದ್ದು ಸಿಟಿಯತ್ತ ಹೊರಟೆ. ವೆಸ್ಟ್ವುಡ್ ಆ ಸಮಯದಲ್ಲಿ ನಿರ್ಜನವಾಗಿದ್ದರಿಂದ ಬಹಳ ದೂರ ನಡೆದ ನಂತರ ರಾತ್ರಿಯ ಟ್ಯಾಕ್ಸಿ ಸಿಕ್ಕಿತು. ನಾನು ಮನೆಯಲ್ಲಿ ಬಂದಿಸಿದ್ದ ಕ್ಯಾಲ್ವರ್‌ಸನ್ನಿನ ಸೋದರಿ ಕ್ಲೋಯಿಯನ್ನು ಬಾಯಿ ಬಿಡಿಸಿದರೆ ಮಿಕ್ಕ ಚಿಕ್ಕ ಪೀಸ್ ಸಹ ಸಿಕ್ಕಿ ನನ್ನ ಪಜ಼ಲ್ ಪೂರ್ಣವಾದೀತು ಅಂದುಕೊಂಡೆ.
ನಾನು ಟ್ಯಾಕ್ಸಿಯಿಂದ ಇಳಿಯುತ್ತಿದ್ದಂತೆ ಆ ಸಿಲ್ವರ್ ತೋಳದ ದಿರುಸಿನ ಸುಂದರಿ ನನ್ನೆದುರಿಗೇ ಸಿಗಬೇಕೆ? ಕ್ಲೋಯಿ! ತಪ್ಪಿಸಿಕೊಂಡಳು ಹೇಗೆ? ನಾನು ತಕ್ಷಣ ಕೈ ಚಾಚಿ ಅವಳನ್ನು ಹಿಡಿದು ನಿಲ್ಲಿಸಿದೆ, “ಹಾಯ್ ಬೇಬಿ, ಎಲ್ಲಿಗೆ ಓಡುತೀ?”
ಅವಳು ದಿಗ್ಭ್ರಾಂತಳಾಗಿ ನನ್ನನ್ನು ಕಂಡು ಕೊಸರಾಡಿದಳು, “ನೀನು.. ನೀ...?”
“ನಾನೇ! ಯಾವ ಮ್ಯಾಜಿಕ್ ಮಾಡಿ ಬಂಧನದಿಂದ ಬಿಡುಗಡೆಯಾದೆ?”
ಅವಳ ಕಂಗಳು ಕತ್ತಲಿನಲ್ಲೂ ಕಿಡಿಕಾರಿದವು,
“ನಿನ್ನ ದಿವಾನನ್ನು ಟೇಬಲಿನವರೆಗೂ ಎಳೆದೊಯ್ದೆ. ಒಂದು ಕೈ ಫ್ರೀ ಇತ್ತಲ್ಲ. ಅದರಿಂದ ಡ್ರಾಯರಿನಲ್ಲಿ ಹುಡುಕಿದರೆ ಈ ಕೈಕೋಳದ ಚಾವಿ ಸಿಕ್ಕಿತು. ಈಗ ತಾನೇ-”
“ನಡಿ ಒಳಕ್ಕೆ. ನಿನ್ನ ಕೆಲಸವಿನ್ನೂ ಮುಗಿದಿಲ್ಲ...” ಎಂದು ಒಳಗೆ ಸೆಳೆದೆ.
ಅವಳು ಮತ್ತೆ ಕೊಸರಾಡಿದಳು, “ನನ್ನನ್ನು ಬಂಧಿಸಲು ನಿನಗೇನು ಹಕ್ಕಿದೆ?”
ನಾನು ಒಳಗೆ ಸೆಳೆದೊಯ್ದೆ. “ನಾನು ಒಬ್ಬ ಖಾಸಗೀ ಪತ್ತೆದಾರ, ಅಂದರೆ ಒಂದು ರೀತಿಯ ಪೋಲೀಸಿನವರ ತರಹವೇ. ಇಂದು ಹಾಲಿವುಡ್ಡಿನಲ್ಲಿ ಗುಂಡಿನ ಸುರಿಮಳೆಯಾಗುತ್ತಿದೆ...”
“ನಿನ್ನ ಅರ್ಥ ಸ್ಕಿನ್ನಿ ಅಲ್ಲವೆ?” ಅವಳು ಭೀಭತ್ಸ ನೋಟ ಬೀರಿದಳು, “ನನಗೆ ನೆನಪಾಗುತ್ತಿದೆ. ಆ ತಲೆಯನ್ನು ನೀನು ನನ್ನತ್ತ ನೂಕಿದ್ದು- ಅಬ್ಬಾ!”
“ಅದು ಮೊದಲನೆಯದು” ನಾನಂದೆ, “ಅದರ ನಂತರ ಡ್ವಿಗ್ ಬಲ್ಲಾರ್ಡ್ ಸತ್ತುಬಿದ್ದ, ಮತ್ತು ನಿನ್ನ ತಂಗಿ ಕೇರೆನ್!”
ಅವಳ ನನ್ನ ಹಿಡಿತದಲ್ಲೇ ಸೆಟೆದು ನಿಂತಳು, “ಕೇರೆನ್?... ಓ ಹ್ ಹ್ ನೋ. ಅದು ಸುಳ್ಳು.. ನೀನು...”
“ಸಾರಿ, ಚೆಲುವೆ, ಕೇರೆನ್ ದೇವರ ಪಾದ ಸೇರಿದಳು”
ಅವಳ ಕಣ್ಣು ಗುಡ್ಡೆಗಳು ಮೇಲೆ ಸರಿದವು ಮತ್ತು ಆಕೆ ಮೊದಲ ಸಲದಂತೆಯೆ ನನ್ನ ಭುಜಕ್ಕೆ ಪ್ರಜ್ಞೆ ತಪ್ಪಿ ಒರಗಿದಳು.
೮
ಅದೇ ಸಮಯಕ್ಕೆ ಮನೆ ಮುಂದೆ ನನ್ನ ಕಾರು ಬಂದು ನಿಂತಿತು. ಡೊನಾಲ್ಡ್‌ಸನ್ ನನ್ನ ಕಾರಿಂದ ಜಿಗಿದು ಬಂದವನೇ ಕಾರು ನೀಡಿದ್ದಕ್ಕೆ ಥ್ಯಾಂಕ್ಸ್ ಕೂಡ ಹೇಳದೆ, “ನಾನು ನಿನ್ನ ಕೆನ್ನೆಗೆ ಬಾರಿಸಬೇಕು ಕಣಯ್ಯಾ!” ಎಂದ ಉದ್ವೇಗದಿಂದ.
“ಯಾಕೆ ನಿನಗೇನಾಯಿತು?” ಎಂದೆ ತಬ್ಬಿಬ್ಬಾಗಿ.
“ನಾನು ಹೊರಡುವಾಗ ನಮ್ಮ ಸಿಬ್ಬಂದಿ ಬರುವವರೆಗೂ ಫ಼ೇಬಿಯನ್ ಮನೆಯಲ್ಲೇ ನೀನಿರಬೇಕು ಎಂದು ಹೇಳಿದೆ, ಆದರೂ ಇರಲಿಲ್ಲ-”
“ನಾನು ಕಾದಿದ್ದೆ. ನಾನು ಹೊರಟಾಗ ಅವರಲ್ಲೇ ಇದ್ದರು!”
“ಆದರೂ ನೀನಿರಬೇಕಿತ್ತು “ಎಂದು ಸ್ವಲ್ಪ ತಣ್ಣಗಾದವನೇ, “ಈ ಹೊಸ ಯುವತಿ ಯಾರಪ್ಪ?” ಎಂದ ನನ್ನ ಜೊತೆಯಿದ್ದ ಕ್ಲೋಯಿಯನ್ನೆ ದಿಟ್ಟಿಸುತ್ತಾ.
“ನಾನು ಹೇಳಿದ್ದೆನಲ್ಲ, ಕೇರೆನ್ ಕಾಲ್ವರ್ಸನ್ ಅಕ್ಕ ಈಕೆ. ಮನೆಯಲ್ಲೇ ಬಂಧಿಸಿ ಹೋಗಿದ್ದೆ, ಮತ್ತೆ ಹಿಡಿದೆ”
“ಮತ್ತೆ ಮೂರ್ಛೆ ಹೋಗಿದ್ದು-”
“ಯಾಕೆ ಎಂದು ಕೇಳಬೇಡ. ಇವಳಿಗೆ ತಂಗಿ ಸತ್ತಿದ್ದಕ್ಕೆ ಅಪರಾಧಿ ಪ್ರಜ್ಞೆಯಿರಬೇಕು”
“ಅಂತೂ ಯಾರಿಗೋ ಇಂದು ಹುಳ್ಳನೆ ಮನಸಿದ್ದೇ ಇರತ್ತೆ” ಡೊನಾಲ್ಡ್ ಸನ್ ಧ್ವನಿಯಲ್ಲಿ ಬೇಸರವಿತ್ತು, “ಅದು ಡ್ವಿಗ್ ಬಲ್ಲಾರ್ಡನ ಹೆಂಡತಿಯಂತೂ ಅಲ್ಲ”.
“ನೀನು ಅವಳನ್ನು ಚೆಕ್ ಮಾಡಿದೆಯಾ?”
“ಹಾ! ಅವಳಿಗೆ ಆಲಿಬಿ (ಸಾಕ್ಷಿ) ಇದೆ. ಅವಳು ಸಂಜೆಯಿಂದ ರಾತ್ರಿಯವರೆಗೂ ಗೆಳತಿಯರ ಜೊತೆ ಜಿನ್ ರಮ್ಮಿ ಆಡುತ್ತಾ ಕುಳಿತಿದ್ದಳಂತೆ. ಬಲ್ಲಾರ್ಡ್ ಮತ್ತು ಕೇರೆನ್ನರನ್ನು ಶಾಶ್ವತವಾಗಿ ತಣ್ಣಗಾಗಿಸಿದ್ದು ಅವಳಂತೂ ಅಲ".
“ಹಾಗಾದರೆ ಆ ಚೀನೀ ಸೇವಕಿ?”
“ಪ್ರಯೋಜನವಾಗಲಿಲ್ಲ. ಅವಳ ಕೈಗೆ ಪ್ಯಾರಫ಼ಿನ್ ಟೆಸ್ಟ್ ಮಾಡಿಸಿದೆ, ಅಲ್ಲಿ ಸುಟ್ಟ ಗನ್‌ಪೌಡರ್ ಕುರುಹೂ ಇರಲಿಲ್ಲ. ಅಂದರೆ ಅವಳು ಗನ್ನಿಂದ ಶೂಟ್ ಮಾಡಿಲ್ಲ. ಅವಳನ್ನು ಬಿಟ್ಟುಬಿಟ್ಟೆವು”.
“ಅಂದರೆ ಫೇಬಿಯನ್ ಮನೆಯಲ್ಲಿ ಯಾರೂ ಅಲ್ಲ.” ನಾನಂದೆ, “ಇವಳೊಬ್ಬಳನ್ನು ಬಿಟ್ಟು. ಇಲ್ಲಿಂದ ಕೈ ಬಿಡಿಸಿಕೊಂಡು ಓಡುತ್ತಿದ್ದಳು” ಅವಳನ್ನು ಅಲುಗಾಡಿಸಿದೆ.
“ನಿನಗಿನ್ನೂ ಹೊಸ ವಿಷಯ ಗೊತ್ತಿಲ್ಲ ಮಿತ್ರಾ...ಇಲ್ಲಿ ನೋಡು-” ಎಂದ ಡೊನಾಲ್ಡ್‌ಸನ್ ಹುಬ್ಬುಗಂಟಿಕ್ಕಿ ಒಂದು ಕಾಗದ ಕೈಗೆ ತುರುಕಿದ.
“ಏನಿದು-”
“ಫ಼ೇಬಿಯನ್ನನ ಮರಣೋತ್ತರ ರಿಪೋರ್ಟ್ ಬಂದಿದೆ. ಅವನು ಸತ್ತ ಮೇಲೆ ತಲೆಗೆ ಗುಂಡು ಹೊಡೆದಿದ್ದಾರೆ, ಮುಂಚೆ ಅಲ್ಲ”
ನಾನು ಅವಸರವಾಗಿ ಕಾಗದ ಬಿಡಿಸಿ ಓದಿದೆ: ಅವನ ರುಂಡದ ವಿವರಣೆ ಇತ್ತು. ಅವನ ಚರ್ಮ, ಮಾಂಸದ ವಿವರ, ಫಾರ್ಮಾಲ್ಡಿಹೈಡ್ ಇದ್ದುದರ ಸುಳಿವು ಅವನ ಕೂದಲಿನ ಡೈ ಬಣ್ಣ, ಹಲ್ಲಿನಲ್ಲಿದ್ದ ಫಿಲಿಂಗ್ಸ್ ಲೆಕ್ಕ, ಮತ್ತು ಕತ್ತನ್ನು ದೇಹದಿಂದ ಕತ್ತರಿಸಿರುವ ನಿಶಾನೆ...
“ನನಗೆ ಗೊತ್ತೇ ಇತ್ತು..” ಎಂದು ನಾನು ತಟ್ಟನೆ ಚೀರಿದೆ. “ನನಗೆ ಆಗಲೇ ಗೊತ್ತಾಗಬೇಕಿತ್ತು!” ಎನ್ನುತ್ತಾ ನಾನು ಆ ಅಕ್ಕ ಕ್ಲೋಯಿಯನ್ನು ಎಳೆದುಕೊಂಡು ಕಾರಿಗೆ ಹೋದೆ. ಅವಳನ್ನು ನನ್ನ ಪಕ್ಕ ಕೂರಿಸಿದಾಗ ಆ ಬದಿಯಲ್ಲಿ ಡೊನಾಲ್ಡ್ ಸನ್ ಕುಳಿತಿದ್ದರಿಂದ ಅವಳು ಅಪ್ಪಚ್ಚಿಯಾದಳು! ಆದರೆ ಎಚ್ಚರವಾಗಿರಲಿಲ್ಲ.
ನಾನು ಕಾರಿನ ಆಕ್ಸಲರೇಟರ್ ಒತ್ತಿ ಜೋರಾಗಿ ಓಡಿಸಿದೆ.
ಅವನು ನನ್ನ ಪಕ್ಕ ಉದ್ವೇಗದಿಂದ ಕೇಳಿದನು, “ಅದೇನು ರಹಸ್ಯ ನಿನಗೆ ಗೊತ್ತಾಯಿತಯ್ಯಾ? ಹೇಳ್ತೀಯೋ ಅಥವಾ ನಿನಗೆ ಎರಡು ಸಲ ಗುದ್ದಿ ಕೇಳಲೋ?”
“ಹಲ್ಲು ಕಣಯ್ಯಾ, ಅವನ ಹಲ್ಲು!”, ಮತ್ತು ನಾನು ಕಾರನ್ನು ಗ್ಲೆನ್‌ಡೇಲಿನ ಕಡೆಗೆ ಬಿರುಸಾಗಿ ಓಡಿಸಿದೆ. ಇಪ್ಪತ್ತು ನಿಮಿಷ ನಂತರ ಟಯರುಗಳು ಕಿರ್ರೆನ್ನುವಂತೆ ಪಿ ಅಂಡ್ ಎಸ್ ಆಸ್ಪತ್ರೆಯ ಎದುರಿಗೆ ಬಂದು ನಿಂತೆವು. ಕ್ಲೋಯಿಗಿನ್ನೂ ಎಚ್ಚರವಾಗಿಲ್ಲ್ಲದೇ ಇದ್ದುದು ಒಂತರಾ ಮೂರ್ಛೆ ಹೋಗುವವರ ಜಾಗತಿಕ ದಾಖಲೆಯಿರಬಹುದು.
ರಿಸೆಪ್ಷನಿಸ್ಟಿಗೆ “ನನ್ನ ಅವಸರವನ್ನು ಕ್ಷಮಿಸು. ಇಲ್ಲಿನ ಕಳೆದ ಮೂರು ದಿನಗಳ ಎಲ್ಲ ಸಾವುಗಳ ದಾಖಲೆಗಳು ಎಲ್ಲಿದೆ ತೋರಿಸು”. ಡೇವ್ ನನ್ನ ಮಾತಿಗೆ ಬೆಂಬಲವಾಗಿ ತನ್ನ ಪೋಲೀಸ್ ಶೀಲ್ಡ್ ಅವಳ ಕಂಗಳ ಮುಂದೆ ಅಲ್ಲಾಡಿಸಿದ.
ಆಕೆ ರೆಕಾರ್ಡ್ಸ್ ಫೈಲು ತೆರೆದು ನಾಲ್ಕು ಇತ್ತೀಚಿನ ಸಾವುಗಳ ಕಾರ್ಡ್ಸ್ ಕೊಟ್ಟಳು. ಅದರಲ್ಲಿ ನನಗೆ ಬೇಕಿದ್ದ ಒಂದು: ರೇಮನ್ ಫ಼ೇಬಿಯಾನೋ, ೪೮, ಬಿಳಿಯ (ದಕ್ಷಿಣ ಅಮೆರಿಕನ್). ಮಾರಣಾಂತಿಕ ಸ್ಥಿತಿಯಲ್ಲಿ ದಾಖಲು. ಮಾತಾನಾಡಲೊಲ್ಲ. ಎರಡು ದಿನದ ನಂತರ ಮೃತಪಟ್ಟಿದ್ದಾನೆ.. ಅಲ್ಲಿ ಅವನಿಗೆ ಚಿಕಿತ್ಸೆ ನೀಡಿದ ನರ್ಸ್, ಡಾಕ್ಟರ್ ಮೊದಲಾದವರ ವಿವರಗಳಿದ್ದವು. ನಾನು ರೊಯ್ಯನೆ ಡೊನಾಲ್ಡ್‌ಸನ್ ಕಡೆಗೆ ತಿರುಗಿದೆ, “ಗೊತ್ತಾಯಿತೆ? ರೇಮನ್ ಫ಼ೇಬಿಯಾನೋ ಎಂಬುದು ಸ್ಕಿನ್ನಿ ಫೇಬಿಯನ್ನನ ಅಸಲಿ ಹೆಸರು, ಅವನು ದಕ್ಷಿಣ ಅಮೆರಿಕದ ನಿವಾಸಿಯಾಗಿದ್ದ ಕಾಲದ್ದು.”
“ಅಂದರೆ ಅವನದು ಸಹಜ ಸಾವೇ ಆಗಿತ್ತಾ?”
“ಹಾಗೇ ಇಲ್ಲಿ ಹೇಳುತ್ತಾರಲ್ಲ!”
“ಹಾಗಾದರೆ ಅವನ ತಲೆ ಕತ್ತರಿಸಿ ಗುಂಡು ಹೊಡೆದು ನಿನಗೆ ಪಾರ್ಸಲ್ ಮಾಡಿದ್ಯಾರು?”
ನಾನು ಅದಕ್ಕೆ ಉತ್ತರಿಸುವ ಮುನ್ನ ಹೊರಗೆ ಯಾರೋ ಜೋರಾಗಿ ಚೀರಿದ ದನಿ ಕಿವಿಗಪ್ಪಳಿಸಿತು.
ನಾನು ತಿರುಗಿದವನೇ ಆಸ್ಪತ್ರೆಯ ಹೊರಕ್ಕೆ ಓಡಿದೆ, ನನ್ನ ಹಿಂದೆ ಏದುಸಿರು ಬಿಡುತ್ತಾ ಡೊನಾಲ್ಡ್‌ಸನ್ ಸಹ. ನಾನು ನನ್ನ ಕಾರಿನ ಬಳಿಯೊಬ್ಬ ವ್ಯಕ್ತಿ ತನ್ನ ಗನ್ನನ್ನು ಕ್ಲೋಯಿ ಮುಖಕ್ಕೆ ತಿರುಗಿಸುತ್ತಿದ್ದುದನ್ನು ಕಂಡೆ. ಕ್ಲೋಯಿ ಭಯದಿಂದ ಚೀರಿದ್ದಳು. ನಾನು ಕೂಗಿದೆ,
“ಅವನನ್ನು ಹಿಡಿ, ಡೇವ್, ಇನ್ಯಾರನ್ನಾದರೂ ಕೊಲ್ಲುವ ಮುಂಚೆ. ಸ್ಕಿನ್ನಿ ಫೇಬಿಯನ್ನನ್ನು ಹಿಡಿ!”
೯
ಡೇವ್ ಕೈಯಲ್ಲಿದ್ದ ೦.೩೮ ರಿವಾಲ್ವರ್ ಗುಡುಗಿತು. ಆ ಗುಂಡು ಆ ವ್ಯಕ್ತಿಯ ಬೆನ್ನಿನಲ್ಲಿ ನನ್ನ ಕೈ ತೂರುವಷ್ಟು ದೊಡ್ಡ ರಂಧ್ರವನ್ನು ಉಂಟುಮಾಡಿತು. ಅವನು ದಬಾಲನೆ ನೆಲಕ್ಕೆ ಬಿದ್ದ, ಕ್ಲೋಯಿ ಕಿರುಚುವುದು ಬಿಟ್ಟು ಆಘಾತದಲ್ಲಿ ಮುಲುಗುತ್ತಿದ್ದಳು.
“ಇವನು ಸ್ಕಿನ್ನಿ ಫೇಬಿಯನ್ ಅಂದಿದ್ದು ಕೇಳಿಸಿತು, ಸರಿಯೆ?”
ಇಬ್ಬರೂ ಓಡುತ್ತಿದ್ದೆವು. “ಒಂದು ತಲೆಯಿಲ್ಲದ ದೇಹ ಹೇಗೆ--?” ಎಂದ.
ನಾನು ಮಕಾಡೆ ಬಿದ್ದಿದ್ದ ಶವವನ್ನು ಮಗ್ಗಲು ಹೊರಳಿಸಿದೆ, “ನೀನೇ ನೋಡಿಕೋ”
ಡೊನಾಲ್ಡ್‌ಸನ್ ಅವನ ಮುಖ ನೋಡಿ ಪಕ್ಕದೂರಿಗೆ ಕೇಳುವಷ್ಟು ಜೋರಾಗಿ ನಿಟ್ಟುಸಿರು ಬಿಟ್ಟು ಮುಲುಗಿದ.
“ಅಯ್ಯೋ ದೇವರೆ! ಇದು ನಿಜಕ್ಕೂ ಸ್ಕಿನ್ನಿ ಫೇಬಿಯನ್!”
ನಾನು ಕಣ್ಣು ಕಣ್ಣು ಬಿಡುತ್ತಾ ಮಾತಾಡಲಾಗದೇ ಕೊನೆಯುಸಿರುಗಳನ್ನು ಎಳೆಯುತ್ತಿದ್ದ ಸ್ಕಿನ್ನಿಯ ಬಾಯಿಗೆ ಕೈ ಹಾಕಿ ಅವನ ಕೃತಕ ಹಲ್ಲಿನ ಸೆಟ್ ಎರಡನ್ನೂ ಹೊರಗೆಳೆದು ತೋರಿಸಿದೆ.
“ಹೌದು ಇವನೇ!. ಇದರಿಂದ ಖಚಿತವಾಯಿತು”
ಆ ಮಾಜಿ ಹಾಸ್ಯಗಾರ ಅಲ್ಲಾಡಲಾಗದೇ ಏನೋ ಉಗ್ಗುತ್ತಿದ್ದ, “ಅಯ್ಯೋ... ದರಿದ್ರ... ಪತ್ತೇದಾರ!...ನಿನ್ನಾ...”
“ಎಲ್ಲ ಬೈಗಳನ್ನೂ ಉಳಿಸಿಕೋ ಸ್ಕಿನ್ನಿ! ನರಕದಲ್ಲಿ ಯಮಭಟರಿಗೆ ಹೇಳುವೆಯಂತೆ.” ವಠರಿಸಿದೆ ನಾನು, ಒಂದು ಸಿಗರೇಟ್ ಹಚ್ಚಿ ಅವನ ಮುಖಕ್ಕೆ ಹೊಗೆ ಬಿಟ್ಟೆ, “ನೀನು ಮೊದಲು ಆ ಚೀನಿ ಸೇವಕಿಗೆ ನಿನ್ನ ಹೆಂಡತಿಯ ಮೇಲೆ ನಿಗಾ ಇಡಲು ಹೇಳಿದೆ. ಆಗ ನಿನಗೆ ಕೇರೆನ್ ಮತ್ತು ಡ್ವಿಗ್ ಬಲ್ಲಾರ್ಡ್ ಭೇಟಿಯ ಬಗ್ಗೆ ತಿಳಿಯಿತು. ನೀನು ಅವರಿಬ್ಬರನ್ನೂ ಕೊಂದೇ ಬಿಡಲು ಯೋಜನೆ ಮಾಡಿದೆ.”
ಅವನೇನೋ ಬೈಯಲು ಪ್ರಯತ್ನಿಸಿದ, ಪದಗಳು ಬರಲಿಲ್ಲ.
“ಅದೇ ಸಮಯಕ್ಕೆ , ನಿನ್ನ ಅದೃಷ್ಟಕ್ಕೆ ನಿನ್ನ ಅವಳಿ ತಮ್ಮ ದಕ್ಷಿಣ ಅಮೆರಿಕಾದಿಂದ ಇಲ್ಲಿಗೆ ಬಂದಿಳಿದ. ಇಬ್ಬರು ನೋಡಲು ಒಂದೇ ತರಹ ಇದ್ದಿರಿ. ನನಗೆ ನಿನ್ನ ಫ್ಯಾಮಿಲಿ ಆಲ್ಬಂ ಪುಸ್ತಕ ನೋಡಿ ಈ ವಿಷಯ ಗೊತ್ತಾಯಿತು. ಆದರೆ ಅವನ ಬಂದ ಕೂಡಲೇ ಅನಾರೋಗ್ಯವಾಯಿತು...”
“ಅದು... ನೀನು ಹೇಗೆ... ಪ್ರೂವ್?” ಎಂದ ನೋವು ಮಿಶ್ರಿತ ಭಯದಲ್ಲಿ ತೊದಲುತ್ತಾ.
“ಖಂಡಿತಾ ಮಾಡುತ್ತೇನೆ, ನಿನ್ನ ಬಳಿ ಬಂದವನನ್ನು ನೀನು ಈ ಆಸ್ಪತ್ರೆಗೆ ಅಡ್ಮಿಟ್ ಮಾಡಿದೆ. ಇಲ್ಲೇ ಅವನು ಪ್ರಾಣ ಬಿಟ್ಟ. ನಿನಗೆ ಅವನ ರೋಗದಲ್ಲಿ ಉತ್ತಮ ಅಪರಾಧದ ಯೋಜನೆ ಕಾಣಿಸಿತು. ನಿನ್ನ ಪತ್ನಿ ಮತ್ತು ಅವಳ ಪ್ರೇಮಿಯ ಕೊಲೆಗೆ ನೀನು ಜವಾಬ್ದಾರನಲ್ಲ ಎಂದು ತೋರಿಸುವಂತದ್ದು. ಅದಕ್ಕೆಂದೇ ನೀನು ನಿನ್ನ ತಮ್ಮನನ್ನು ನಿನ್ನ ಹೆಸರಿನಲ್ಲಿ ಇಲ್ಲಿ ರಿಜಿಸ್ಟರ್ ಮಾಡಿಸಿದೆ, ಅವನ ಹೆಸರಿನಲ್ಲಲ್ಲ. ಅವನು ಸತ್ತಾಗ ನಿನಗೆ ದಾಖಲೆ ಸಮೇತ ಆಲಿಬಿ ಸಿಕ್ಕಿತು. ಎಲ್ಲರೂ ಸ್ಕಿನ್ನಿ ಫೇಬಿಯನ್ನನ್ನು ಇಲ್ಲಿ ಹೂಳುತ್ತಿದ್ದೇವೆ ಎಂದು ಭಾವಿಸುವಂತಾ ಅವಕಾಶ ಸಿಕ್ಕಿತು....”
“ಅದಕ್ಕೇ...ನೀಗ ?”
“ನಂತರ ನೀನು ಇಂದು ಕೆರೆನ್ ಮತ್ತು ಪ್ರಿಯಕರ ಡ್ವಿಗ್ ಇಬ್ಬರನ್ನೂ ಕೊಂದು ಹಾಕಿದೆ. ಆದರೆ ನಿನ್ನ ಯೋಜನೆಯ ಒಂದು ಚಕ್ರ ಸಡಿಲವಾಗಿ ಬೀಳುವಂತಿತ್ತು. ನಿನ್ನ ಸಾವು ಪತ್ರಿಕೆಗಳಲ್ಲಿ ಹೆಚ್ಚಿನ ಪ್ರಚಾರ ಪಡೆಯುವುದೆಂದು ನೀನು ನಿರೀಕ್ಷಿಸಿದ್ದೆ. ಆದರೆ ಅವನನ್ನು ಫೇಬಿಯಾನೋ ಎಂಬ ದಕ್ಷಿಣ ಅಮೆರಿಕನ್ ಹೆಸರಿನಲ್ಲಿ ಕುಟುಂಬದವರು ದಫನ್ ಮಾಡಿದರು. ಹಾಗಾಗಿ ಇಲ್ಲಿನ ಪತ್ರಿಕಾ ವರದಿಗಾಗರು ಇದನ್ನು ಸ್ಕಿನ್ನಿ ಫೇಬಿಯನ್ ಎಂಬ ಹಾಸ್ಯನಟನದ್ದು ಎಂದು ಗುರುತಿಸಿ ಬರೆಯಲೇ ಇಲ್ಲ”.
“ಅದಕ್ಕೆ-?”
ನಾನು ಹೇಳುತ್ತಾ ಹೋದೆ,
“ಆದರೆ ನೀನು ತಪ್ಪಿಸಿಕೊಳ್ಳಬೇಕಾದರೆ ನೀನು ಸತ್ತಿದ್ದೀ ಎಂದು ಸಮಾಜ ನಂಬಬೇಕಿತ್ತು. ನೀನು ನಿನ್ನ ತಮ್ಮನ ದೇಹವನ್ನು ಅಗೆದು ಹೊರತೆಗೆದೆ., ಅದರ ತಲೆ ಕತ್ತರಿಸಿ, ಅದಕ್ಕೆ ಬುಲೆಟ್ ಹೊಡೆದು ನನ್ನ ಮನೆಗೆ ಕಳಿಸಿದೆ. ನಾನು ಖ್ಯಾತ ಪತ್ತೇದಾರನಾದ್ದರಿಂದ ಇದನ್ನು ಜಾಹೀರು ಮಾಡುವೆ, ಪೋಲೀಸರು, ಪತ್ರಿಕೆಗಳು ಎಲ್ಲ ಕಡೆಯೂ ತಿಳಿಸುವೆ ಎಂದು ನೀನು ನಂಬಿದೆ. ಆಗ ಎಲ್ಲರೂ ನಿನ್ನ ಪತ್ನಿ ಮತ್ತು ಪ್ರೇಮಿ ಕೊಲೆಯಾದ ಮೂರು ದಿನ ಮುನ್ನವೇ ನೀನೂ ತೀರಿಕೊಂಡಿದ್ದೀ ಎಂದು ತಿಳಿಯುವರು. ಅದೇ ನಿನಗೆ ವರದಾನವಾಗಬೇಕಿತ್ತು. ಸತ್ತವನು ನೀನು ಹೇಗೆ ಕೊಲೆ ಮಾಡಬಲ್ಲ್ಲೆ, ಅಲ್ಲವೆ? ಎಂದುಕೊಳ್ಳುವರು. ಇಲ್ಲಿ ಒಮ್ಮೆ ಈ ಕೊಲೆ ಸುದ್ದಿಗಳು ತಣ್ಣಗಾಯಿತೆಂದರೆ ಒಂದಿನ ನೀನು ನಿನ್ನ ಅವಳಿ ತಮ್ಮನ ಕಾಗದಪತ್ರ ಬಳಸಿ ದಕ್ಷಿಣ ಅಮೆರಿಕಾಗೆ ಹೋಗಿ ಅನಾಮಧೇಯ ಸ್ಥಳದಲ್ಲಿ ಬದುಕುವ ಸಂಚು ಮಾಡಿದ್ದಿ. ನೀನು ಅದಕ್ಕಾಗಿಯೇ ನಿನ್ನ ಬ್ಯಾಂಕ್ ಖಾತೆ ಖಾಲಿ ಮಾಡಿ ಹಣವನ್ನೆಲ್ಲ ನಿನ್ನ ಬಳಿ ಇಟ್ಟುಕೊಂಡಿದ್ದಿ....
“ನೀನು—ಅದೇಗೆ- ಊಹಿಸಿದೆ?” ಎಂದು ಕ್ಷೀಣವಾಗಿ ಉಸುರಿದ.
“ಮೊದಲಿಗೆ ಸತ್ತವನ ತಲೆಯ ಮೆಡಿಕಲ್ ರಿಪೋರ್ಟ್ಸ್ ನೋಡಿದರೆ ಅದರಲ್ಲಿ ಫಾರ್ಮಾಲ್ಡಿಹೈಡ್ ಉಪಯೋಗಿಸಿದ್ದುದು ತಿಳಿಯಿತು. ಅಂದರೆ ಯಾರೋ ಅಂಡರ್‌ಟೇಕರ್ (ಶವ ನಿರ್ವಾಹಕ) ಬಳಸಿದ್ದಿರಬೇಕು ಎನಿಸಿತು. ಎರಡನೆಯದಾಗಿ ಅದಕ್ಕೆ ಹಲ್ಲುಗಳು ಮತ್ತ್ತು ಫಿಲಿಂಗ್ಸ್ ಇದ್ದುದು. ನಿಜವಾದ ಸ್ಕಿನ್ನಿ ಫೇಬಿಯನ್, ನಿನಗೆ ಎಲ್ಲ ಹಲ್ಲು ಬಿದ್ದು ಕೃತಕ ದಂತ ಸೆಟ್ ಕಟ್ಟಿಸಿಕೊಂಡಿದ್ದೆ...ಹಾಗಾಗಿ ಅಲ್ಲಿ ಸತ್ತವನು ನೀನಲ್ಲ...
“...ನೀನು ಪ್ರೇಕ್ಷಕರಿಗೆ ಇದನ್ನು ತೆಗೆದು ತೋರಿಸಿ ವಿಚಿತ್ರ ಮುಖ ಮಾಡುತ್ತಿದ್ದ ಹಾಸ್ಯದ ಶೋ ನನಗೂ ಗೊತ್ತಿತ್ತು. ನಾನು ಆಗ ನಿನ್ನ ಚೆಕ್ ಬುಕ್ ನೋಡಿದೆ, ಅದರಲ್ಲಿ ಈ ಆಸ್ಪತ್ರೆಗೆ ಚೆಕ್ ಕೊಟ್ಟಿದ್ದೂ ಬೆಳಕಿಗೆ ಬಂತು.”
“ಬಹಳ ಚತುರ ನೀ-”
ನಾನಂದೆ, “ಈಗ ನಾನು ಮನೆಯಿಂದ ಹೊರಡುವಾಗ ನೀನೂ ಅಲ್ಲೆಲ್ಲೋ ಅವಿತುಕೊಂಡಿದ್ದಿರಬೇಕು. ನಾನು ನಿನ್ನನ್ನು ಹಿಡಿದುಬಿಡಬಹುದು ಎಂಬ ಭಯ ನಿನ್ನನ್ನು ಕಾಡುತ್ತಿತ್ತು. ನಮ್ಮ ಹಿಂದೆಯೇ ಬಂದು ಇಲ್ಲಿ ಕ್ಲೋಯಿಯನ್ನೂ ಮತ್ತು ನಮ್ಮಿಬ್ಬರನ್ನೂ ಹೊರಗೆ ಬರುತ್ತಿದ್ದಂತೆ ಕೊಂದು ಪರಾರಿಯಾಗೋಣವೆಂದಿದ್ದಿ. ಯಾವಾಗಲೂ ಅದೃಷ್ಟದೇವತೆ ನಿನ್ನ ಕೈಯೇ ಹಿಡಿಯುವುದಿಲ್ಲ ಅಲ್ಲವೆ? ಗರ ಬೇರೆ ಬಿತ್ತು!”
ಈ ಸಲ ಅವನು ಏನೂ ಸೊಲ್ಲೆತ್ತಲಿಲ್ಲ, ಅದಕ್ಕೆ ಕಾರಣವೂ ಇತ್ತು. ಮೃತ್ಯುವಿಗೇ ವಿಕಟ ಹಾಸ್ಯ ಮಾಡಲು ಹೋದ ವಿದೂಷಕ ತನ್ನ ಇಹದ ಆಟ ಮುಗಿಸಿದ್ದ.
ಮಿಕ್ಕಿದ್ದೆಲ್ಲಾ ಏರ್ಪಾಡು ಪೋಲೀಸರೇ ಮಾಡಿ ಮುಗಿಸಿದ್ದರಿಂದ ನಾನು ಕ್ಲೋಯಿ ಕ್ಯಾಲ್ವರ್ಸನ್ ಜೊತೆಗೆ ಅವಳ ಮನೆಗೆ ಹೋಗಿ ಬಿಟ್ಟು ಬಂದೆ. ಅವಳು ಶಾಕ್ ಆಗಿದ್ದರಿಂದ ಮರು ಮಾತಾಡದೇ ಮನೆ ಸೇರಿದಳು. ಒಂದೇ ರಾತ್ರಿಯಲ್ಲಿ ತನ್ನ ತಂಗಿ, ಭಾವ, ಮೈದುನ ಮೂವರ ಸಾವಿನ ಸುದ್ದಿ ಯಾರಿಗೆ ಆದರೂ ಭಾರವೇ.
ನಾನು ಮನೆಗೆ ತಲುಪಿ ಸ್ನಾನ ಮಾಡುವುದೆಂದು ನಿರ್ಧರಿಸತೊಡಗಿದ್ದಾಗ ಮನೆ ಬಾಗಿಲ ಬೆಲ್ ರಿಂಗ್ ಆಯಿತು.
ಬಾಗಿಲು ತೆರೆದಾಗ ನಗುನಗುತ್ತಾ ಚೀನಿ ಯುವತಿ ವಯೊಲೆಟ್ ಚಾಂಗ್ ಒಳಬಂದಳು, “ನಾನು ಬರುತ್ತೇನೆ ಎಂದಿದ್ದೆನಲ್ಲ? ನೋಡಿ ಬಂದೆ, ನನ್ನ ಚೆಕ್ ಬುಕ್ ಸಹ ತಂದಿದ್ದೇನೆ” ಎಂದಳು.
ಚೆಕ್ ಬುಕ್ ಕಥೆ ಈ ರಾತ್ರಿ ಇನ್ನು ಬೇಡವಾಗಿತ್ತು.
“ಮೊದಲು, ಆ ಚೆಕ್ ಬುಕ್ ಒಳಗೆ ಸೇರಿಸು, ನೀನು ಬಾ ಒಳಗೆ” ಎಂದು ಕರೆದೆ.
<ಮುಗಿಯಿತು>
Comentários